ಪಾಮನಕಲ್ಲೂರು: 15ನೇ ಹಣಕಾಸು ಯೋಜನೆಯ ಹಣ ದುರ್ಬಳಕೆ ಆರೋಪ; ಡಿಸಿ, ಸಿಇಒ, ಎಸಿ, ತಹಶಿಲ್ದಾರ್, ಇಒಗಳಿಗೆ ದೂರು

ಪಾಮನಕಲ್ಲೂರು: 15ನೇ ಹಣಕಾಸು ಯೋಜನೆಯ ಹಣ ದುರ್ಬಳಕೆ ಆರೋಪ; ಡಿಸಿ, ಸಿಇಒ, ಎಸಿ, ತಹಶಿಲ್ದಾರ್, ಇಒಗಳಿಗೆ ದೂರು
ರಾಯಚೂರು (ಸೆ.20): ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಪಾಮನಕಲ್ಲೂರು ಗ್ರಾಮ ಪಂಚಾಯತಿಯಲ್ಲಿ 15ನೇ ಹಣಕಾಸು ಯೋಜನೆಯ ಹಣ ದುರ್ಬಳಕೆಯಾಗಿದ್ದು, ಕೂಡಲೇ ಉನ್ನತ ಮಟ್ಟದ ಅಧಿಕಾರಿಗಳ ತಂಡ ರಚಿಸಿ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ ಜೈಲಿಗೆ ಕಳುಹಿಸಬೇಕೆಂದು ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಸಹಾಯಕ ಆಯುಕ್ತರು, ತಹಶಿಲ್ದಾರ್, ಇಒಗಳಿಗೆ ಪಾಮನಕಲ್ಲೂರು ಗ್ರಾಮಸ್ಥರು ದೂರು ನೀಡಿದ್ದಾರೆ.
ಜಿಲ್ಲೆಯ ಮಸ್ಕಿ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಹಾಗೂ ಅವರ ಮೂಲಕ ಡಿಸಿ, ಸಿಇಒ, ಎಸಿ, ತಹಶಿಲ್ದಾರ್ ಗಳಿಗೆ ಶುಕ್ರವಾರ ದೂರು ಸಲ್ಲಿಸಿರುವ ಗ್ರಾಮಸ್ಥರು, ಪಾಮನಕಲ್ಲೂರು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಸಿಬ್ಬಂದಿಗಳ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
“ಕಳೆದ ಕೆಲವು ವರ್ಷಗಳಿಂದ ಪಾಮನಕಲ್ಲೂರು ಗ್ರಾಮ ಪಂಚಾಯಿತಿಯಲ್ಲಿ 15ನೇ ಹಣಕಾಸಿನ ಅನುದಾನದ ಹಣವನ್ನು ಯಥೇಚ್ಛವಾಗಿ ಯಾವುದೇ ಕ್ರಿಯಾ ಯೋಜನೆ ಇಲ್ಲದೆ ಹಣ ಖರ್ಚು ಮಾಡುತ್ತಿರುವುದು ಕಂಡುಬರುತ್ತದೆ.
ಆದರೇ ಕೋಟ್ಯಾಂತರ ರೂ. ಹಣ ಖರ್ಚಾದರೂ ಕೂಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಗ್ರಾಮಗಳಲ್ಲಿ ಸಮಸ್ಯೆಗಳಿಗೆ ಪರಿಹಾರ ಸಿಗುತ್ತಿಲ್ಲ, ಬೋಗಸ್ ಬಿಲ್ ಗಳನ್ನು ಮಾಡುತ್ತಿದ್ದಾರೆ. ಹಣ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಸಾರ್ವಜನಿಕ ಉಪಯೋಗಕ್ಕೆ ಬಳಕೆಯಾಗಬೇಕಾಗಿದ್ದ ಹಣ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಅಧ್ಯಕ್ಷರು, ಸದಸ್ಯರು, ಪ್ರಭಾವಿಗಳು ಸೇರಿದಂತೆ ಕೆಲವರ ಕೈ ಸೇರುತ್ತಿದೆ ಎಂಬ ಗಂಭೀರ ಆರೋಪಗಳು ನಿರಂತರವಾಗಿ ಕೇಳಿಬರುತ್ತಿವೆ.
ಕುಡಿಯುವ ನೀರು, ಚರಂಡಿ ಸ್ವಚ್ಛತೆ, ಬೀದಿ ದೀಪಗಳ ನಿರ್ವಹಣೆ ಸೇರಿದಂತೆ ಇತರೆ ಸೇವೆಗಳ ಹೆಸರಿನಲ್ಲಿ 15ನೇ ಹಣಕಾಸಿನ ಹಣವನ್ನು ಯಥೇಚ್ಛವಾಗಿ ಖರ್ಚು ಮಾಡುತ್ತಿದ್ದಾರೆ. ಆದರೇ ಇವರುಗಳು ತಿಳಿಸಿದಂತೆ, ಯಾವುದೇ ಕೆಲಸ ಕಾರ್ಯಗಳು ಆಗಿಲ್ಲದಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.
ಅಷ್ಟೇ ಅಲ್ಲದೇ 15ನೇ ಹಣಕಾಸಿನ ಅನುದಾನದ ಹಣವನ್ನು ನಿರಂತರವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಸಾಲು ಸಾಲು ಆರೋಪಗಳು ಕೇಳಿ ಬರುತ್ತೇವೆ.
ಇದಕ್ಕೆ ಸಾಕ್ಷಿ ಎಂಬಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಅಧ್ಯಕ್ಷರು, ಸಿಬ್ಬಂದಿಗಳು ನಡೆದುಕೊಳ್ಳುತ್ತಿದ್ದಾರೆ. ಉದಾಹರಣೆಗೆ: ಕೆಲ ಗ್ರಾಮ ಪಂಚಾಯತಿ ಸದಸ್ಯರು, ವಿವಿಧ ಸಂಘಟನೆಗಳ ಮುಖಂಡರು, ಸಾರ್ವಜನಿಕರು 15ನೇ ಹಣಕಾಸಿನ ಅನುದಾನದ ಖರ್ಚಿನ ಬಗ್ಗೆ ಕೇಳುತ್ತಿರುವ ಮಾಹಿತಿಯನ್ನು ಸಂಬಂಧಿಸಿದ ಅಧಿಕಾರಿಗಳು ನೀಡುತ್ತಿಲ್ಲ, ಮಾಹಿತಿ ಹಕ್ಕಿನಡಿಯಲ್ಲಿ ಕೇಳಿದರು ನೀಡುತ್ತಿಲ್ಲ. ಮನವಿ ಪತ್ರದ ಮೂಲಕ ಕೇಳಿದರು ಮಾಹಿತಿ ಕೊಡುತ್ತಿಲ್ಲ. ಮಾಹಿತಿ ಕೊಡದೇ ನೆಪ ಹೇಳಿಕೊಂಡು ಸಾಗುತ್ತಿದ್ದಾರೆ. ಮುಖ್ಯವಾಗಿ ಹದಿನೈದನೇ ಹಣಕಾಸಿನ ಅನುದಾನದ ಬಳಕೆಯ ವಿಷಯದಲ್ಲಿ ಗೌಪ್ಯತೆ ಕಾಪಾಡಿಕೊಳ್ಳುತ್ತಿದ್ದಾರೆ ಎಂಬುದು ಇಲ್ಲಿನ ಜನರ ಆರೋಪವಾಗಿದೆ. ಯಾಕೆಂದರೇ, ಹದಿನೈದು ಹಣಕಾಸಿನ ಅನುದಾನದ ಹಣವನ್ನು ಯಥೇಚ್ಛವಾಗಿ ಅಂಗಡಿಗಳಿಗೆ, ವ್ಯಕ್ತಿಗಳಿಗೆ ವರ್ಗಾವಣೆ ಮಾಡುತ್ತಿದ್ದಾರೆ. ಆದರೇ ಇವರುಗಳು ಯಾವುದಕ್ಕಾಗಿ ವರ್ಗಾವಣೆ ಮಾಡಿದ್ದೆವೆ ಎಂದು ತಿಳಿಸಿರುತ್ತಾರೋ ಆ ಕೆಲಸಗಳು ಆಗಿರುವುದಿಲ್ಲ. ಉದಾಹರಣೆಗೆ: ಒಂದು ಅಂಗಡಿಗೆ ಉಪಕರಣ ಖರೀದಿ ಹೆಸರಿನಲ್ಲಿ ಚೆಕ್ ಬರೆದಿದ್ದರೇ, ಆ ಉಪಕರಣ ಖರೀದಿ ಆಗಿರುವುದಿಲ್ಲ. ಬದಲಿಗೆ ಅವರಿಗೆ ಕಮಿಷನ್ ನೀಡಿ ಹಣವನ್ನು ಇವರುಗಳು ಪಡೆದುಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ.
ಹಾಗಾಗಿ ಕಳೆದ ಕೆಲವು ವರ್ಷಗಳಿಂದ 15ನೇ ಹಣಕಾಸಿನ ಅನುದಾನದಲ್ಲಿ ಮಾಡಲಾಗಿರುವ ಎಲ್ಲಾ ಅಭಿವೃದ್ಧಿ ಕೆಲಸ ಕಾರ್ಯಗಳ ಬಗ್ಗೆ, ಇವರುಗಳು ಖರೀದಿಸಿದ್ದಿವಿ ಎನ್ನುತ್ತಿರುವ ಉಪಕರಣಗಳ ಬಗ್ಗೆ ಕೂಡಲೇ ತನಿಖೆ ನಡೆಸಬೇಕು.
ಅನುದಾನ ದುರ್ಬಳಕೆಯಾಗಿರುವುದು ನಿಜವಾಗಿದ್ದರೆ ಮೇಲಧಿಕಾರಿಗಳು ಸಂಬಂಧಿಸಿದ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಮೇಲೆ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸಂಬಂಧಿಸಿದ ಸದಸ್ಯರು, ಸಿಬ್ಬಂದಿಗಳ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿ ಅವರುಗಳನ್ನು ಜೈಲಿಗೆ ಕಳುಹಿಸಬೇಕು. ದುರ್ಬಳಕೆಯಾಗಿರುವ ಹಣವನ್ನು ಅವರುಗಳಿಂದ ವಸೂಲಿ ಮಾಡಬೇಕು. ಅಷ್ಟೇ ಅಲ್ಲದೇ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ನಾವುಗಳು ಈ ಪತ್ರದ ಮೂಲಕ ಆಗ್ರಹಿಸುತ್ತಿದ್ದೆವೆ.
ಅಷ್ಟೇ ಅಲ್ಲದೇ ಪಾಮನಕಲ್ಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಅನೇಕ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆಗಳು ಯಥೇಚ್ಛವಾಗಿವೆ. ಚರಂಡಿ ತುಂಬಿ ದುರ್ವಾಸನೆ ಬೀರುತ್ತಿವೆ. ಬೀದಿ ದೀಪಗಳು ಕಳೆದ ಅನೇಕ ತಿಂಗಳುಗಳಿಂದ ದುರಸ್ತಿಗಾಗಿ ಕಾಯುತ್ತಿವೆ. ಗ್ರಾಮಗಳ ರಸ್ತೆ ದುರಸ್ತಿ, ರೈತರ ಜಮೀನುಗಳಿಗೆ ತೆರಳುವ ರಸ್ತೆಗಳು ಹಾಳಾಗಿವೆ. ರುದ್ರಭೂಮಿಗೆ (ಸ್ಮಶಾನ) ತೆರಳುವ ರಸ್ತೆಗಳು ಮುಳ್ಳು ಕಂಟಿ ಬೆಳೆದು ನಿಂತಿದ್ದು, ತೆರವುಗೊಳಿಸಿ ದುರಸ್ತಿ ಮಾಡಿಸಬೇಕಾಗಿದೆ.
ಅಷ್ಟೇ ಅಲ್ಲದೇ ಇನ್ನೂ ಹತ್ತಾರು ಸಮಸ್ಯೆಗಳಿಗೆ ಪರಿಹಾರವಿಲ್ಲದೇ ಜನರು ಪರದಾಡುತ್ತಿದ್ದಾರೆ. ಈ ಸಂಬಂಧ ನಾವು ಈಗಾಗಲೇ ಹಲವು ಬಾರಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಲಿಖಿತ ರೂಪದಲ್ಲಿ ನೂರಾರು ಬಾರಿ ಮೌಖಿಕವಾಗಿ ಮನವಿ ಸಲ್ಲಿಸಿದ್ದೆವೆ. ಅಷ್ಟೇ ಅಲ್ಲದೇ ಸಂಬಂಧಿಸಿದ ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಂಚಾಯತಿ ಸಿಬ್ಬಂದಿಗಳಿಗೂ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದ್ದೆವೆ. ಆದರೆ ನಮ್ಮ ಬಹುತೇಕ ಮನವಿಗಳಿಗೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಸ್ಪಂದಿಸಿರುವುದಿಲ್ಲ ಹಾಗೂ ಸಮಸ್ಯೆಗಳಿಗೆ ಪರಿಹಾರ ನೀಡಿರುವುದಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಈ ಪತ್ರದ ಮೂಲಕ ನಾವು ಸಲ್ಲಿಸಿದ ಅನೇಕ ಮನವಿ ಪತ್ರಗಳನ್ನು ಲಗತ್ತಿಸಿದ್ದೆವೆ.
ಆದಕಾರಣ ದಯಾಳುಗಳು, ಕೃಮಕೈಗೊಳ್ಳುವ ಅಧಿಕಾರ ಉಳ್ಳವರು ಆಗಿರುವ ತಾವು, ನಮ್ಮ ಈ ಪತ್ರವನ್ನು ಗಂಭೀರವಾಗಿ ಪರಿಗಣಿಸಿ, ನಮ್ಮ ಪಂಚಾಯತಿ ವ್ಯಾಪ್ತಿಯಲ್ಲಿನ ಸಮಸ್ಯೆಗಳನ್ನು ಕೂಡಲೇ ಪರಿಹರಿಸುವಂತೆ ಸಂಬಂಧಪಟ್ಟ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು.
ಇನ್ನೂ ಮುಖ್ಯವಾಗಿ 15ನೇ ಹಣಕಾಸಿನ ಅನುದಾನದ ಹಣ ದುರ್ಬಳಕೆಗೆ ಸಂಬಂಧಿಸಿದಂತೆ ಉನ್ನತ ಅಧಿಕಾರಿಗಳ ನೇತೃತ್ವದಲ್ಲಿ ತಂಡ ರಚಿಸಿ ತನಿಖೆ ನಡೆಸಬೇಕು. ಆರೋಪ ಸಾಬೀತು ಆದುದ್ದೇ ನಿಜವಾದರೇ ಸಂಬಂಧಿಸಿದ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಸಿಬ್ಬಂದಿಗಳು ಸೇರಿದಂತೆ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಬೇಕು. ದುರ್ಬಳಕೆಯಾದ ಹಣವನ್ನು ಅವರುಗಳಿಂದ ವಸೂಲಿ ಮಾಡಬೇಕು ಮತ್ತು ಕಠಿಣ ಕ್ರಮ ಕೈಗೊಳ್ಳಬೇಕೆಂದು ಈ ಪತ್ರದ ಮೂಲಕ ಮನವಿ ಮಾಡಿಕೊಳ್ಳುತ್ತಿದ್ದೆವೆ.” ಎಂದು ಪಾಮನಕಲ್ಲೂರು ಗ್ರಾಮಸ್ಥರು ತಾವು ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.
ದೂರಿನ ಪತ್ರಕ್ಕೆ ಕರ್ನಾಟಕ ಪ್ರಾಂತ್ಯ ರೈತ ಸಂಘದ ಗ್ರಾಮ ಘಟಕದ ಅಧ್ಯಕ್ಷ ಮಲ್ಲಪ್ಪ ಹಿರೇಮನಿ, ಕರುನಾಡ ವಿಜಯ ಸೇನೆಯ ಹೋಬಳಿ ಘಟಕದ ಅಧ್ಯಕ್ಷ ಅಮರೇಶ್ ಡಿ ಪೂಜಾರಿ, ಗ್ರಾಮ ಪಂಚಾಯತಿ ಸದಸ್ಯ ಶ್ರೀನಿವಾಸ್ ಸಾನಬಾಳ, ಗ್ರಾಮಸ್ಥರಾದ ಬಸವರಾಜ್, ಲಕ್ಷ್ಮೀಕಾಂತ್ ನಾಲವಾರ್, ರಮೇಶ್ ಎಂಬುವವರು ಸಹಿ ಮಾಡಿದ್ದಾರೆ.



