ಸಂಪಾದಕೀಯ

ಚಿಂತನಶೀಲ ಚಂದ್ರೇಗೌಡರು ಮಾಜಿ ಎಮ್.ಪಿ.

ಚಿಂತನಶೀಲ ಚಂದ್ರೇಗೌಡರು

ಇತ್ತೀಚಿನ ದಿನಗಳಲ್ಲಿ ರಾಜಕಾರಣ ತನ್ನೆಲ್ಲಾ ಆಯಾಮಗಳಲ್ಲೂ ಹಳಿ ತಪ್ಪಿ ಹೇಸಿಗೆ ಹುಟ್ಟಿಸುತ್ತಿರುವ ಹೊತ್ತಿನಲ್ಲಿ ಗಣ್ಯ ನಡವಳಿಕೆ ಗಂಭೀರ ವ್ಯಕ್ತಿತ್ವದಿಂದ ರಾಜಕಾರಣ ದ ಘನತೆಯನ್ನು ಜತನದಿಂದ ಕಾಪಾಡಿದ್ದ ದಾರದಹಳ್ಳಿ ಚಂದ್ರೇಗೌಡರು ದುತ್ತನೆ ನೆನಪಾಗಿಬಿಡುತ್ತಾರೆ. ಇಂದು ರಾಜಕಾರಣ ಮಾಡುತ್ತಿರುವ ಹಾಗೂ ರಾಜಕಾರಣಕ್ಕೆ ಬರಲು ಬಯಸುವ ಮಂದಿಗೆ ನಿಜ ಅರ್ಥದ ರೋಲ್ ಮಾಡಲ್ ಆಗಿದ್ದ ಶ್ರೀಯುತರು ಇನ್ನಿಲ್ಲ ಎಂಬ ಆಘಾತಕಾರಿ ಸಂಗತಿ ದಿಗಿಲು ಗೊಳಿಸುತ್ತದೆ. ಇಂದಿರಾಗಾಂಧಿ ಯವರಿಗೆ ಚಿಕ್ಕಮಗಳೂರು ಕ್ಷೇತ್ರ ತೆರವುಗೊಳಿಸಿ ಅವರ ರಾಜಕೀಯ ಪುನರ್ ಪುರೋಭಿವೃದ್ದಿಗೆ ನೆರವಾದ ಗೌಡರು ತಮ್ಮ ತ್ಯಾಗ ರಾಜಕಾರಣದಿಂದ ನಾಡಿನ ಗಮನ ಸೆಳೆದವರು , ಗೌಡರ ಜಾಗದಲ್ಲಿ ಅವಕಾಶವಾದಿ ರಾಜಕಾರಣಿಗಳಿ ದಿದ್ದರೆ ಇಂದಿರಾಗಾಂಧಿ ಯವರು ಮತ್ತೆ ಆಯಕಟ್ಟಿನ ಅಧಿಕಾರ ಪಡೆದಾಗ ಚಕ್ರಬಡ್ಡಿ ಸಮೇತ ಸಂಪಾದಿಸಿಕೊಳ್ಳುವ ಅವಕಾಶ ಅನಾಯಾಸವಾಗಿ ಪಡೆಯುತ್ತಿದ್ದರು ಆದರೆ ಡಿ ಬಿ ಸಿ ರವರು ಸಿಕ್ಕಿದಾಗ ಮುಕ್ಕುವ, ದಕ್ಕಿದಾಗ ದೋಚುವ ದೂರ್ತ ರಾಜಕಾರಣಿಯಾಗದೆ ಸಂಭಾವಿತ ಹಾಗೂ ಸಂವೇದನಾ ಶೀಲ ನಡವಳಿಕೆ ಪ್ರಕಟಿಸಿ ಪ್ರಬುದ್ದತೆ ಮೆರೆದರು ಗ್ರಾಮೀಣ ಕೃಪಾಂಕ ರದ್ದತಿಯ ಸಂಧರ್ಭದಲ್ಲಿ ಅವರು ತೋರಿದ ಕಾಳಜಿ, ಮಾಡಿದ ಪ್ರಯತ್ನ ನಿಜಕ್ಕೂ ಮಾದರಿಯಾಗಿತ್ತು. ಕಾನೂನನ್ನು ಆಳವಾಗಿ ಅದ್ಯಯನ ಮಾಡಿದ್ದ ಗೌಡರಿಗೆ ಸರ್ಕಾರದ ಆಡಳಿತ ಮತ್ತು ನ್ಯಾಯಾಂಗ ಸಮಾಜ ಮುಖಿ ಹಾಗೂ ಜನ ಸಮ್ಮುಖವಾ ಗಿರಬೇಕೆಂಬ ಬಹು ದೊಡ್ಡ ಅಪೇಕ್ಷೆ ಇತ್ತು. ನಾನು ಮಾನಸ ಗಂಗೋತ್ರಿಯಲ್ಲಿ ಸ್ನಾತಕೋತ್ತರ ಪದವಿ ಓದುವಾಗ ಅವರನ್ನು ಹತ್ತಿರದಿಂದ ನೋಡಿದ್ದೆ ನಂತರ ಸಚಿವರೊಬ್ಬರ ಬಳಿ ವಿಶೇಷಾಧಿಕಾರಿಯಾಗಿ ಕೆಲಸ ಮಾಡುವ ಹೊತ್ತಿನಲ್ಲಿ ನಮ್ಮ ಸಚಿವರ ಕಡತದ ವಿಚಾರವಾಗಿ ಕಾನೂನು ಹಾಗೂ ಸಂಸದೀಯ ಸಚಿವರಾಗಿದ್ದ ಗೌಡರನ್ನು ಬೇಟಿಯಾದಾಗ ಗಂಗೋತ್ರಿ ಸಂಧರ್ಭ ನೆನಪಿಸಿದ ತಕ್ಷಣ ತುಂಬು ಪ್ರೀತಿಯಿಂದ ಮಾತನಾಡಿಸಿ ನಡೆಸಿಕೊಂಡ ಅವರ ಸಜ್ಜನಿಕೆಗೆ ನಾನು ಕರಗಿಹೋದೆ, ಕೊನೆಗೆ ತಾವೇ ಅವರ ಕೈಬರಹದಿಂದ ಕಡತದ ಮೇಲೆ ಶಿಪಾರಸ್ಸು ಬರೆದು ನನ್ನ ಕೈಯಲ್ಲಿ ಕಡತ ನೀಡಿ ವಿಳಂಬವಾಗದಂತೆ ನೋಡಿಕೊಂಡರು ಕನ್ನಡ ಹಾಗೂ ಇಂಗ್ಲೀಷ್ ಎರಡು ಭಾಷೆಗಳ ಮೇಲೆ ಅದ್ಬುತ ಹಿಡಿತ ಶಬ್ದ ಸಂಪತ್ತನ್ನು ಹೊಂದಿದ್ದ ಗೌಡರು ಯಾವುದೇ ವಿಷಯದ ಬಗ್ಗೆ ವಿಶ್ಲೇಷಣಾ ಸಾಮರ್ಥ್ಯ, ಹಾಗೂ ಅಭಿವ್ಯಕ್ತಿಯ ಅನನ್ಯವಾಗಿತ್ತು. ಸಂಧರ್ಭಗಳನ್ನು ಚತುರತೆಯಿಂದ ನಿಭಾಯಿಸುವ ಚಾಣಾಕ್ಷತೆ ಕರಗತವಾಗಿತ್ತು
ಪ್ರಾಯಶಃ ನಮ್ಮ ಸಮುದಾಯದಲ್ಲಿ ರೂಪ, ಉಡುಪು, ವರ್ತನೆ, ಗಾಂಭೀರ್ಯ, ಗಣ್ಯ ನಡವಳಿಕೆ ,ಮಾದ್ಯಮ ನಿಭಾಯಿಸುವ ಕೌಶಲ್ಯ ಮಾತನ್ನು ಮಾಲಿನ್ಯ ಮಾಡದ ಮುತ್ಸದ್ದಿತನ ಗಳಲ್ಲಿ ಎಸ್ ಎಂ ಕೃಷ್ಣ ರವರನ್ನು ಬಿಟ್ಟರೆ ಅವರಿಗೆ ಹೋಲುತ್ತಿದ್ದ ಮತ್ತೊಬ್ಬರೆಂದರೆ ಅದು ಚಂದ್ರೇಗೌಡರೆ ಎನ್ನಬಹುದು ಎಂಬುದು ನನ್ನ ಅಭಿಪ್ರಾಯ. ಗೆಳೆಯರಿಂದ ತಿಳಿದ ಸುದ್ದಿಯ ಪ್ರಕಾರ ಇತ್ತೀಚಿನ ಒಂದೆರಡು ತಿಂಗಳಲ್ಲಿ ನಿಧನರಾದ ಅಳಿಯರೊಬ್ಬರ ಅಕಾಲಿಕ ಮರಣ ಗೌಡರನ್ನು ಜರ್ಜರಿತಗೊಳಿಸಿ ಹೆಚ್ಚು ಘಾಸಿಗೊಂಡರೆಂಬ ಸಂಗತಿ ನೋವುಂಟು ಮಾಡಿತು, ತಮ್ಮದೇ ಆದ ದೀಮಂತ ಶೈಲಿಯ ರಾಜಕಾರಣದಿಂದ ಬುದ್ದ ಪ್ರಜ್ಞೆಯ ಪ್ರಬುದ್ದ ರಾಜಕಾರಣಿಯಾಗಿದ್ದ ದಾರದಹಳ್ಲಿಯ ದೀಮಂತ ಇನ್ನಿಲ್ಲ ಎಂಬ ಬರ ಸಿಡಿಲ ಸುದ್ದಿ ಜನಪರ ರಾಜಕಾರಣ ಯುಗದ ಕೊಂಡಿಯೊಂದು ಕಳಚಿಹೋದ ಕಹಿ ಸುದ್ದಿಯಾಯಿತು. ಸಂತ ಮನದ ಸಂಸದ, ಸಚಿವ, ಇನ್ನೂ ಅನೇಕ ಎತ್ತರದ ಜಾಗದಲ್ಲಿ ತೊಡಗಿಸಿಕೊಂಡು ಪಾರದರ್ಶಕವಾಗಿ ದುಡಿದಿದ್ದ ಆ ಮಾನವಂತ ವ್ಯಕ್ತಿತ್ತಕ್ಕೆ ಅವರ ಅಗಲಿಕೆಯ ಈ ಹೊತ್ತಿನಲ್ಲಿ ನನ್ನ ವಿನಬ್ರ ನುಡಿ ಶ್ರದ್ಧಾಂಜಲಿ ಸಮರ್ಪಣೆ

ಪ್ರೊ ದೊಡ್ಡರಸಿನಕೆರೆ ಮಾಯಪ್ಪ

Related Articles

Leave a Reply

Your email address will not be published. Required fields are marked *

Back to top button