ಗಂಗಾವತಿ ನಗರಸಭೆ ಬೀದಿ ದೀಪ ನಿರ್ವಹಣೆಯಲ್ಲಿ ಕಾರ್ಮಿಕರ ಶೋಷಣೆ ಆರೋಪ: ಸಂಘಟನೆಯ ಮೊರೆ ಹೋದ ಸಂತ್ರಸ್ತರು.

ಗಂಗಾವತಿ ನಗರಸಭೆ ಬೀದಿದೀಪ ನಿರ್ವಹಣೆಯಲ್ಲಿ ಕಾರ್ಮಿಕರ ಶೋಷಣೆ ಆರೋಪ: ಸಂಘಟನೆಯ ಮೊರೆ ಹೋದ ಸಂತ್ರಸ್ತರು!
ಗಂಗಾವತಿ: ಇಲ್ಲಿನ ನಗರಸಭೆಯ ಬೀದಿದೀಪಗಳ ವಾರ್ಷಿಕ ನಿರ್ವಹಣಾ ಕಾಮಗಾರಿಯಲ್ಲಿ ಹಲವು ವರ್ಷಗಳಿಂದ ದುಡಿಯುತ್ತಿರುವ ಗುತ್ತಿಗೆ ಕಾರ್ಮಿಕರ ಹಕ್ಕುಗಳನ್ನು ವ್ಯವಸ್ಥಿತವಾಗಿ ಉಲ್ಲಂಘಿಸಲಾಗುತ್ತಿದೆ ಹಾಗೂ ಈ ಬಗ್ಗೆ ಧ್ವನಿ ಎತ್ತಿದ ಕಾರ್ಮಿಕರನ್ನು ಪ್ರತಿಕಾರಾತ್ಮಕವಾಗಿ ಕೆಲಸದಿಂದ ವಜಾಗೊಳಿಸಲಾಗಿದೆ ಎಂದು ಆರೋಪಿಸಿ ಕಾರ್ಮಿಕರು ‘ಉತ್ತರ ಕರ್ನಾಟಕ ಯುವ ವೇದಿಕೆ’ ಸಂಘಟನೆಯ ರಾಜ್ಯಧ್ಯಕ್ಷರಿಗೆ ದೂರು ಸಲ್ಲಿಸಿ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.
ಪ್ರಕರಣದ ಹಿನ್ನೆಲೆ:
ಗಂಗಾವತಿ ನಗರಸಭೆಯಲ್ಲಿ ಬೀದಿದೀಪ ನಿರ್ವಹಣೆ ಮಾಡುವ ಒಟ್ಟು 6 ಜನ ಗುತ್ತಿಗೆ ಕಾರ್ಮಿಕರು ತಮಗೆ ಕಾನೂನುಬದ್ಧವಾಗಿ ಸಿಗಬೇಕಾದ ಕನಿಷ್ಠ ವೇತನ, ಪಿ.ಎಫ್. (PF), ಇ.ಎಸ್.ಐ (ESI) ಸೇರಿದಂತೆ ಯಾವುದೇ ಸೌಲಭ್ಯಗಳನ್ನು ನೀಡುತ್ತಿಲ್ಲ ಎಂದು ಈ ಹಿಂದೆ ಕಾರ್ಮಿಕ ಇಲಾಖೆಗೆ ಲಿಖಿತ ದೂರು ಸಲ್ಲಿಸಿದ್ದರು. ಇದರಿಂದ ಕೆರಳಿದ ಗುತ್ತಿಗೆದಾರರು, ಕಾರ್ಮಿಕರ ಮೇಲೆ ಒತ್ತಡ ಮತ್ತು ಬೆದರಿಕೆ ಹಾಕಿ, ಓದು-ಬರಹ ಬಾರದ 5 ಜನ ಕಾರ್ಮಿಕರ ಅಜ್ಞಾನವನ್ನು ದುರುಪಯೋಗಪಡಿಸಿಕೊಂಡು ಬಲವಂತವಾಗಿ ಸಹಿ ಪಡೆದು ದೂರು ಹಿಂಪಡೆಯುವಂತೆ ಒಪ್ಪಂದ ಪತ್ರ ಸೃಷ್ಟಿಸಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಧ್ವನಿ ಎತ್ತಿದ ಕಾರ್ಮಿಕನ ಅಮಾನತು – ನ್ಯಾಯಾಲಯದ ಮೊರೆ:
ಗುತ್ತಿಗೆದಾರರು ಮತ್ತು ನಗರಸಭೆ ಅಧಿಕಾರಿಗಳ ಒತ್ತಡಕ್ಕೆ ಮಣಿಯದೆ, ದೂರು ಹಿಂಪಡೆಯಲು ನಿರಾಕರಿಸಿದ ಒಬ್ಬ ಕಾರ್ಮಿಕನನ್ನು ಪ್ರತಿಕಾರಾತ್ಮಕವಾಗಿ, ಯಾವುದೇ ಮುನ್ಸೂಚನೆ ನೀಡದೆ ವೇತನ ತಡೆಹಿಡಿದು ಕೆಲಸದಿಂದ ವಜಾಗೊಳಿಸಲಾಗಿದೆ. ಪ್ರಸ್ತುತ ಈ ಸಂತ್ರಸ್ತ ಕಾರ್ಮಿಕನು ನ್ಯಾಯಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದಾನೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಉಳಿದ ಕಾರ್ಮಿಕರು ನಿರಂತರ ಬೆದರಿಕೆ ಹಾಗೂ ಒತ್ತಡದ ಭೀತಿಯಲ್ಲಿದ್ದು, ಒಂಟಿಯಾಗಿ ಹೋರಾಟ ಮುಂದುವರಿಸಲು ಅಸಹಾಯಕರಾಗಿದ್ದಾರೆ.
ಅವಧಿ ಮುಗಿದರೂ ಹಳೇ ಗುತ್ತಿಗೆದಾರನಿಗೇ ಮಣೆ; ಹೊಸ ಟೆಂಡರ್ನಲ್ಲೂ ಭಾಗವಹಿಸುವಿಕೆ!
ಸದರಿ ಗುತ್ತಿಗೆದಾರರ ಟೆಂಡರ್ ಅವಧಿ ಮುಗಿದಿದ್ದರೂ ಸಹ ನಗರಸಭೆ ಅಧಿಕಾರಿಗಳು ಕಾನೂನುಬಾಹಿರವಾಗಿ ತಾತ್ಕಾಲಿಕವಾಗಿ ಅವರನ್ನೇ ಮುಂದುವರಿಸುತ್ತಿದ್ದಾರೆ. ಅಷ್ಟೇ ಅಲ್ಲದೆ, ಪ್ರಸ್ತುತ ಜೂನ್ ತಿಂಗಳಲ್ಲಿ ಕರೆಯಲಾಗಿರುವ ಹೊಸ ಟೆಂಡರ್ ಪ್ರಕ್ರಿಯೆಯಲ್ಲೂ ಇದೇ ವಿವಾದಿತ ಗುತ್ತಿಗೆದಾರರು ಭಾಗವಹಿಸುತ್ತಿದ್ದಾರೆ. ಕಾರ್ಮಿಕ ಕಾನೂನುಗಳನ್ನು ಗಾಳಿಗೆ ತೂರಿ, ಶೋಷಣೆ ಮಾಡುತ್ತಿರುವ ಇಂತಹ ಗುತ್ತಿಗೆದಾರರಿಗೆ ಮತ್ತೆ ಸರ್ಕಾರಿ ಕಾಮಗಾರಿ ನೀಡುವುದು ಸಾರ್ವಜನಿಕ ಹಿತಾಸಕ್ತಿಗೆ ಮತ್ತು ಕಾರ್ಮಿಕರ ಹಕ್ಕುಗಳಿಗೆ ಮಾಡುವ ದ್ರೋಹವಾಗಿದೆ ಎಂದು ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಘಟನೆಗೆ ದೂರು – ಕಾನೂನು ಕ್ರಮಕ್ಕೆ ಆಗ್ರಹ:
ಈ ಇಡೀ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕಾರ್ಮಿಕ ಇಲಾಖೆ, ನಗರಸಭೆ, ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಪಟ್ಟ ಇಲಾಖೆಗಳ ಮುಂದೆ ಪ್ರಸ್ತಾಪಿಸಬೇಕು. ಗುತ್ತಿಗೆದಾರರ ವಿರುದ್ಧ ಕಾನೂನುಬದ್ಧ ತನಿಖೆ ನಡೆಸಿ, ತನಿಖೆ ಪೂರ್ಣಗೊಳ್ಳುವವರೆಗೆ ಅವರನ್ನು ಟೆಂಡರ್ ಪ್ರಕ್ರಿಯೆಯಿಂದ ದೂರವಿಡಬೇಕು ಮತ್ತು ಕಾರ್ಮಿಕರ ಉದ್ಯೋಗ ಭದ್ರತೆಗೆ ಬೆಂಬಲ ನೀಡಬೇಕೆಂದು ಸಂತ್ರಸ್ತ ಕಾರ್ಮಿಕರಾದ ಕುಮಾರ (ತಂದೆ ಪದ್ಮನಾಭ), ದುರುಗೇಶ (ತಂದೆ ಶಿವಪ್ಪ) ಮತ್ತು ನಾಗರಾಜ (ತಂದೆ ದುರುಗಪ್ಪ) ಅವರು ಉತ್ತರ ಕರ್ನಾಟಕ ಯುವ ವೇದಿಕೆಗೆ ಲಿಖಿತ ಮನವಿ ಪತ್ರದ ಮೂಲಕ ವಿನಂತಿಸಿದ್ದಾರೆ.
ಕಾರ್ಮಿಕರ ಶೋಷಣೆ ಮಾಡುತ್ತಿರುವ ಗುತ್ತಿಗೆದಾರರು ಮತ್ತು ಅವರಿಗೆ ಸಾಥ್ ನೀಡುತ್ತಿರುವ ಅಧಿಕಾರಿಗಳ ವಿರುದ್ಧ ಜಿಲ್ಲಾಡಳಿತ ಹಾಗೂ ಕಾರ್ಮಿಕ ಇಲಾಖೆ ಯಾವ ರೀತಿಯ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಗೌತಮ್ ಯಾದವ್ ಕನಕಗಿರಿ ಪ್ರಜಾ ಶ್ರೀ ಪತ್ರಿಕೆ ಕೊಪ್ಪಳ ಜಿಲ್ಲಾ ವರದಿಗಾರ.






