ಶ್ರಾವಣ ಮಾಸದ ಮೂರನೇ ಶನಿವಾರ: ಕನಕಗಿರಿಯ ಆಂಜನೇಯ ಸ್ವಾಮಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ. ಕನಕಗಿರಿ.

ಶ್ರಾವಣ ಮಾಸದ ಮೂರನೇ ಶನಿವಾರ: ಕನಕಗಿರಿಯ ಆಂಜನೇಯ ಸ್ವಾಮಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ
ಕನಕಗಿರಿ: ಶ್ರಾವಣ ಮಾಸದ ಮೂರನೇ ಶನಿವಾರದ ಅಂಗವಾಗಿ ಕನಕಗಿರಿ ಪಟ್ಟಣದ ಪ್ರಸಿದ್ಧ ಶ್ರೀಕಾರ್ಯಸಿದ್ಧಿ ಕಂಠಿ ತಿಮ್ಮಣ್ಣ ಆಂಜನೇಯ ಸ್ವಾಮಿ ದೇವಸ್ಥಾನ ಹಾಗೂ ಐತಿಹಾಸಿಕ ಶ್ರೀ ಕನಕಚಲಪತಿ ದೇವಸ್ಥಾನದ ಬಲಭಾಗದಲ್ಲಿರುವ ಶ್ರೀ ಸಂಜೀವರಾಯ ಗುರು ಮುಖ್ಯಪ್ರಾಣ ಆಂಜನೇಯ ಸ್ವಾಮಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಅಭಿಷೇಕ, ಹೋಮ-ಹವನ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿಭಾವದಿಂದ ನೆರವೇರಿದವು.
ಶ್ರಾವಣ ಮಾಸದ ಪವಿತ್ರ ಹಿನ್ನೆಲೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು ಅದ್ಧೂರಿಯಾಗಿ ಆಯೋಜಿಸಲಾಗಿತ್ತು. ಬೆಳಗಿನ ಜಾವದಿಂದಲೇ ದೇವಸ್ಥಾನಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಆರಂಭಗೊಂಡವು. ನೂರಾರು ಭಕ್ತರು ದೇವಸ್ಥಾನಗಳಿಗೆ ಆಗಮಿಸಿ ಆಂಜನೇಯ ಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆಗಳಲ್ಲಿ ಭಾಗವಹಿಸಿದರು.
ಶ್ರೀ ಸಂಜೀವರಾಯ ಗುರು ಮುಖ್ಯಪ್ರಾಣ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಬೆಳಗಿನ ಜಾವ 4 ಗಂಟೆಯಿಂದಲೇ ಪಂಚಾಮೃತ ಅಭಿಷೇಕ, ಎಣ್ಣೆ ಮಜ್ಜನ, ಆಕು ಪೂಜೆ, ಎಲೆ ಪೂಜೆ ಹಾಗೂ ಹನುಮಾನ್ ಚಾಲೀಸಾ ಪಠಣೆ ಸೇರಿದಂತೆ ವಿವಿಧ ಧಾರ್ಮಿಕ ವಿಧಿ-ವಿಧಾನಗಳನ್ನು ನೆರವೇರಿಸಲಾಯಿತು. ಬಳಿಕ ಸ್ವಾಮಿಗೆ ಮಡಿ ಉಡಿಸಿ ವಿವಿಧ ಬಗೆಯ ಸುಂದರ ಹೂವುಗಳಿಂದ ವಿಶೇಷ ಅಲಂಕಾರ ಮಾಡಲಾಗಿದ್ದು, ನಂತರ ಮಹಾಮಂಗಳಾರತಿ ನೆರವೇರಿಸಲಾಯಿತು ಎಂದು ಅರ್ಚಕರಾದ ಪ್ರಾಣೇಶ್ ಪೂಜಾರಿ ಅವರು ತಿಳಿಸಿದರು.
ಅದೇ ರೀತಿ ಶ್ರೀಕಾರ್ಯಸಿದ್ಧಿ ಕಂಠಿ ತಿಮ್ಮಣ್ಣ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿಯೂ ವಿಶೇಷ ಅಭಿಷೇಕ, ಹೋಮ-ಹವನ ಹಾಗೂ ವಿವಿಧ ಪೂಜಾ ಕಾರ್ಯಕ್ರಮಗಳು ಭಕ್ತಿಪೂರ್ವಕವಾಗಿ ನಡೆದವು. ಸ್ವಾಮಿಯನ್ನು ವಿವಿಧ ಪುಷ್ಪಗಳು ಹಾಗೂ ವಿಶೇಷ ಅಲಂಕಾರಗಳಿಂದ ಸಿಂಗಾರ ಮಾಡಲಾಗಿತ್ತು.
ಕನಕಗಿರಿ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತಾದಿಗಳು ಶ್ರೀ ಆಂಜನೇಯ ಸ್ವಾಮಿಯ ದರ್ಶನ ಪಡೆದು ಕಾಯಿ-ಕರ್ಪೂರ ಸಮರ್ಪಿಸಿ ತಮ್ಮ ಇಷ್ಟಾರ್ಥಗಳ ಈಡೇರಿಕೆಗೆ ಪ್ರಾರ್ಥಿಸಿದರು. ವಿಶೇಷ ಪೂಜಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಭಕ್ತರು ಭಕ್ತಿಯ ಪರವಶತೆಯಲ್ಲಿ ಸ್ವಾಮಿಯ ಕೃಪೆಗೆ ಪಾತ್ರರಾದರು.
ವಿಶೇಷ ಪೂಜೆಯ ನಂತರ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಹಾಗೂ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಶ್ರೀ ಸಂಜೀವರಾಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶೇಕಪ್ಪ ಪೂಜಾರ್ ಅವರ ಕುಟುಂಬದ ವತಿಯಿಂದ ಉಗ್ಗಿ, ಪಾಯಸ ಹಾಗೂ ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿದ್ದು, ನೂರಾರು ಭಕ್ತರು ಪ್ರಸಾದ ಸ್ವೀಕರಿಸಿದರು. ಶ್ರೀಕಾರ್ಯಸಿದ್ಧಿ ಕಂಠಿ ತಿಮ್ಮಣ್ಣ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿಯೂ ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಸಂಜೀವ ಪೂಜಾರಿ, ಶ್ರೀನಿವಾಸ್ ಪೂಜಾರ್, ವೆಂಕಟೇಶ್ ಪೂಜಾರಿ, ನಾಗರಾಜ್ ಓಲೆಕಾರ್, ಶರಣಪ್ಪ ಮಾಟೂರು, ವೆಂಕಟೇಶ್ ಉಪ್ಪಾರ್, ಪರಸಪ್ಪ ಚಿಟಿಗ್ಗಿ, ಮಂಜುನಾಥ್ ಬೂಟಿಗಾರ್, ಹನುಮಂತಪ್ಪ ಸೇರಿದಂತೆ ಅನೇಕ ಭಕ್ತರು ಹಾಗೂ ದೇವಸ್ಥಾನದ ಸೇವಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ಶ್ರಾವಣ ಮಾಸದ ಮೂರನೇ ಶನಿವಾರದ ಅಂಗವಾಗಿ ಕನಕಗಿರಿಯ ಎರಡು ಪ್ರಮುಖ ಆಂಜನೇಯ ಸ್ವಾಮಿ ದೇವಸ್ಥಾನಗಳಲ್ಲಿ ನಡೆದ ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಭಕ್ತರ ಮನದಲ್ಲಿ ಭಕ್ತಿ ಮತ್ತು ಆಧ್ಯಾತ್ಮಿಕತೆಯ ವಾತಾವರಣವನ್ನು ಮೂಡಿಸಿತು.
ಗೌತಮ್ ಯಾದವ್ ಕನಕಗಿರಿ ಪ್ರಜಾ ಶ್ರೀ ಪತ್ರಿಕೆ ಕೊಪ್ಪಳ ಜಿಲ್ಲಾ ವರದಿಗಾರ.








