ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಉತ್ತಮ ಸ್ಪಂದನೆ. ಕನಕಗಿರಿ

ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಉತ್ತಮ ಸ್ಪಂದನೆ
ಕೊಪ್ಪಳ :ಕನಕಗಿರಿ ತಾಲೂಕಿನ ನವಲಿ ಹೋಬಳಿ ಯಲ್ಲಿ ಎಸ್.ಎಸ್.ಪಿ. ಲೈಫ್ ಮಿಷನ್ ಹಾಗೂ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆ ಸಹಯೋಗದಲ್ಲಿ ನವಲಿ ಗ್ರಾಮದ ದುರ್ಗಾದೇವಿ ಸಮುದಾಯ ಭವನದಲ್ಲಿ ಸೋಮವಾರ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.
ಸೋಫಿಯಾ ರಾಣಿ ಹಾಗೂ ಶ್ರೀದೇವಿ ಅವರ ಮಾರ್ಗದರ್ಶನದಲ್ಲಿ ಮತ್ತು ನವಲಿಯ ಮಾರ್ಕಂಡೇಶ್ವರ ಸ್ವಾಮೀಜಿ ಅವರ ನೇತೃತ್ವದಲ್ಲಿ ನಡೆದ ಶಿಬಿರದಲ್ಲಿ ನವಲಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ನೂರಾರು ಜನರು ಪಾಲ್ಗೊಂಡು ವಿವಿಧ ಆರೋಗ್ಯ ತಪಾಸಣೆ ಹಾಗೂ ವೈದ್ಯಕೀಯ ಸಲಹೆ ಪಡೆದುಕೊಂಡರು.
ಶಿಬಿರದಲ್ಲಿ ಹೃದಯರೋಗ, ನರರೋಗ, ಮೂತ್ರಪಿಂಡದ ಕಲ್ಲು, ಕ್ಯಾನ್ಸರ್ ಸೇರಿದಂತೆ ವಿವಿಧ ಕಾಯಿಲೆಗಳ ತಪಾಸಣೆಯ ಜೊತೆಗೆ ಸ್ತ್ರೀರೋಗ, ಮೂಳೆ-ಕೀಲು ಸಮಸ್ಯೆಗಳು ಹಾಗೂ ಸಾಮಾನ್ಯ ಆರೋಗ್ಯ ಸಮಸ್ಯೆಗಳ ಕುರಿತು ತಜ್ಞ ವೈದ್ಯರಿಂದ ತಪಾಸಣೆ ಮತ್ತು ಸಲಹೆ ನೀಡಲಾಯಿತು. ಅಗತ್ಯವಿರುವವರಿಗೆ ಮುಂದಿನ ಚಿಕಿತ್ಸೆಯ ಕುರಿತು ವೈದ್ಯರು ಮಾರ್ಗದರ್ಶನ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀದೇವಿ ಅವರು, ಗ್ರಾಮೀಣ ಭಾಗದ ಜನರಿಗೆ ಗುಣಮಟ್ಟದ ವೈದ್ಯಕೀಯ ಸೇವೆ ಸುಲಭವಾಗಿ ದೊರೆಯಬೇಕು ಎಂಬ ಉದ್ದೇಶದಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ. ಸಾರ್ವಜನಿಕರು ಶಿಬಿರಕ್ಕೆ ಉತ್ತಮವಾಗಿ ಸ್ಪಂದಿಸಿ ಆರೋಗ್ಯ ತಪಾಸಣೆ ಮಾಡಿಸಿಕೊಂಡಿರುವುದು ಸಂತಸದ ಸಂಗತಿ. ಆರೋಗ್ಯದ ಬಗ್ಗೆ ಪ್ರತಿಯೊಬ್ಬರೂ ಜಾಗೃತರಾಗಬೇಕು ಎಂದು ಹೇಳಿದರು.
ಸೋಫಿಯಾ ರಾಣಿ ಅವರು ಮಾತನಾಡಿ, ಆರೋಗ್ಯ ಸಮಸ್ಯೆಗಳನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ಪಡೆಯುವುದು ಅತ್ಯಂತ ಮುಖ್ಯ. ಗ್ರಾಮೀಣ ಜನರಿಗೆ ವೈದ್ಯಕೀಯ ಸೇವೆ ತಲುಪಿಸುವ ನಿಟ್ಟಿನಲ್ಲಿ ಇಂತಹ ಶಿಬಿರಗಳು ಸಹಕಾರಿಯಾಗಲಿವೆ. ಶಿಬಿರದ ಪ್ರಯೋಜನವನ್ನು ಹೆಚ್ಚಿನ ಸಂಖ್ಯೆಯ ಜನರು ಪಡೆದುಕೊಂಡಿರುವುದು ಸಂತಸ ತಂದಿದೆ ಎಂದು ತಿಳಿಸಿದರು.
ನವಲಿಯ ಮಾರ್ಕಂಡೇಶ್ವರ ಸ್ವಾಮೀಜಿ ಅವರು ಶಿಬಿರಕ್ಕೆ ನೇತೃತ್ವ ವಹಿಸಿ ಸಾರ್ವಜನಿಕರಿಗೆ ಆರೋಗ್ಯದ ಮಹತ್ವದ ಕುರಿತು ಜಾಗೃತಿ ಮೂಡಿಸಿದರು. ಎಸ್.ಎಸ್.ಪಿ. ಲೈಫ್ ಮಿಷನ್ ಹಾಗೂ ಸಪ್ತಗಿರಿ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ಶಿಬಿರದಲ್ಲಿ ಸೇವೆ ಸಲ್ಲಿಸಿದರು.
ಶಿಬಿರದಲ್ಲಿ ಸಾರ್ವಜನಿಕರು ಉತ್ಸಾಹದಿಂದ ಪಾಲ್ಗೊಂಡು ವಿವಿಧ ಆರೋಗ್ಯ ತಪಾಸಣೆ ಮಾಡಿಸಿಕೊಂಡು, ವೈದ್ಯರಿಂದ ಉಚಿತ ಸಲಹೆ ಹಾಗೂ ಚಿಕಿತ್ಸಾ ಮಾರ್ಗದರ್ಶನ ಪಡೆದುಕೊಂಡರು.
ವೇದಿಕೆಯ ಮೇಲೆ ಸಪ್ತಗಿರಿ ಆಸ್ಪತ್ರೆಯ ಪ್ರಮುಖರಾದ ವಿಕಾಸ್, ನಂದೀಶ್, ಗಜೇಂದ್ರ, ದರ್ಶನ್ ಹಾಗೂ ಎಸ್.ಎಸ್. ಲೈಫ್ ಮಿಷನ್ ನಿರ್ದೇಶಕರಾದ ಶ್ರೀದೇವಿ ಭಂಡಾರಿ, ಹಿರಿಯರಾದ ಯೂನಿಸ್ಮಿಯ ಖಾಜಿ ಚಕ್ರಿ ಮಹಾರಾಜ್, ಮಂಜುನಾಥ್ ನಾಯಕ್ ಮತ್ತು ಪಿ. ದಶರಥ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷರು ಶರಣಪ್ಪ ಮರಾಠಿ ವೀರೇಶ್ ತಳವಾರ್ ಸೇರಿದಂತೆ ಉಪಸ್ಥಿತರಿದ್ದು.
ಗೌತಮ್ ಯಾದವ್ ಕನಕಗಿರಿ ಪ್ರಜಾ ಶ್ರೀ ಪತ್ರಿಕೆ ಕೊಪ್ಪಳ ಜಿಲ್ಲಾ ವರದಿಗಾರ..

ಕೊಪ್ಪಳ ಅಂಚೆ ವಿಭಾಗ: ವಿವಿಧ ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ..

ಕೊಪ್ಪಳ ಅಂಚೆ ವಿಭಾಗೀಯ ವ್ಯಾಪ್ತಿಯ ವಿವಿಧ ಅಂಚೆ ಕಚೇರಿಗಳಲ್ಲಿ ಖಾಲಿ ಇರುವ ಗ್ರಾಮೀಣ ಡಾಕ್ ಸೇವಕ, ಶಾಖಾ ಅಂಚೆ ಪಾಲಕ ಮತ್ತು ಸಹಾಯಕ ಶಾಖಾ ಅಂಚೆ ಪಾಲಕ ಹುದ್ದೆಗಳಿಗೆ 10ನೇ ತರಗತಿ ಅಂಕಗಳ ಆಧಾರದ ಮೇಲೆ ಒಟ್ಟು 13 ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಹ ಅಭ್ಯರ್ಥಿಗಳು ನಿಗದಿತ ಶೈಕ್ಷಣಿಕ ಹಾಗೂ ಇತರೆ ಅರ್ಹತಾ ಮಾನದಂಡಗಳನ್ನು ಪೂರೈಸಿ, ಪ್ರಕಟಣೆಯಲ್ಲಿ ಸೂಚಿಸಿರುವ ವೇಳಾಪಟ್ಟಿಯಂತೆ ಇಲಾಖೆಯ ಅಧಿಕೃತ ಪೋರ್ಟಲ್ ಮೂಲಕ ಆಗಸ್ಟ್ 31 ರಿಂದ ಸೆಪ್ಟೆಂಬರ್ 19 ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ವಿವರಗಳಿಗಾಗಿ, ಕೊಪ್ಪಳ ವಿಭಾಗೀಯ ಅಂಚೆ ಅಧೀಕ್ಷಕರ ಕಚೇರಿ ಹಾಗೂ https://indiapostgdsonline.gov.in ಸಂಪರ್ಕಿಸುವ ಮೂಲಕ ಅಂಚೆ ಇಲಾಖೆ ಸೇರುವ ಅವಕಾಶವನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೊಪ್ಪಳ ವಿಭಾಗೀಯ ಅಂಚೆ ಅಧೀಕ್ಷಕರಾದ ನಾಗರಾಜ ಪಾಟೀಲ ಪ್ರಕಟಣೆ ಮೂಲಕ ಕೋರಿದ್ದಾರೆ.
ಗೌತಮ್ ಯಾದವ್ ಕನಕಗಿರಿ ಪ್ರಜಾ ಶ್ರೀ ಪತ್ರಿಕೆ ಕೊಪ್ಪಳ ಜಿಲ್ಲಾ ವರದಿಗಾರ



