ಕನ್ನಡ ರಾಜ್ಯೋತ್ಸವವೊ ಕರ್ನಾಟಕ ರಾಜ್ಯೋತ್ಸವೊ? ಅಶೋಕ ಹಳ್ಳೂರ ವಿಜಯನಗರ.
ಕನ್ನಡ ರಾಜ್ಯೋತ್ಸವವೊ ಕರ್ನಾಟಕ ರಾಜ್ಯೋತ್ಸವೊ?
ಕೆಲವರು ಕನ್ನಡ ರಾಜ್ಯೋತ್ಸವ’ ಎಂಬ ನುಡಿಗಟ್ಟನ್ನು ಬಳಸುವುದುಂಟು. ಅದು ವಾಸ್ತವವಾಗಿಕರ್ನಾಟಕ ರಾಜ್ಯೋತ್ಸವ’. ನಿಜ, ಏಕೀಕರಣ ಪ್ರಕ್ರಿಯೆಯಲ್ಲಿ ಬುನಾದಿ ಕನ್ನಡವು ಅಂಶವಾಗಿತ್ತು. ಕನ್ನಡ ನುಡಿಯಾಡುವ ಜನರು ನೆಲೆಸಿದ್ದ ಪ್ರದೇಶಗಳು ಹಲವು ರಾಜ್ಯ ಮತ್ತು ಸಂಸ್ಥಾನಗಳಲ್ಲಿ ಹಂಚಿಹೋಗಿದ್ದವು. ಅವನ್ನೆಲ್ಲ ಒಟ್ಟುಗೂಡಿಸಿ ಭೌಗೋಳಿಕವಾಗಿ ಒಂದು ರಾಜ್ಯ ರೂಪಿಸಲಾಯಿತು. ಆದರೂ ನಮ್ಮ ಹಿರೀಕರು ಇದನ್ನು ಕರ್ನಾಟಕ ಏಕೀಕರಣ ಎಂದರು. 'ಕರ್ನಾಟಕ ರಾಜ್ಯೋತ್ಸವ’ ಎಂದು ಆಚರಿಸಿದರು. ಭಾಷಾವಾಚಕ ಕನ್ನಡಕ್ಕೆ ಬದಲಾಗಿ, ದೇಶವಾಚಕವಾದ ಕರ್ನಾಟಕವು ಹೆಚ್ಚು ಒಳಗೊಳ್ಳುವ ಪರಿಕಲ್ಪನೆ ಆಗಿದೆ ಎಂದವರು ಪರಿಭಾವಿಸಿರಬೇಕು. ಆದರೆ ಕರ್ನಾಟಕ ನಾಮಕರಣವು ತಕ್ಷಣ ಸಾಧ್ಯವಾಗಲಿಲ್ಲ. ಏಕೀಕರಣದ ಬಳಿಕವೂ, ಅರಸೊತ್ತಿಗೆಯ ಪ್ರತೀಕವಾಗಿದ್ದಮೈಸೂರು’ ಹೆಸರು ಹೊಸರಾಜ್ಯದಲ್ಲಿ ಮುಂದುವರೆದಿತ್ತು. ಇದಕ್ಕೆ ಮುಂಬೈ ಹೈದರಾಬಾದ್ ಕರಾವಳಿ ಕರ್ನಾಟಕಗಳನ್ನು ಭಾವನಾತ್ಮಕವಾಗಿ ಒಳ್ಳಗೊಳ್ಳುವ ಕಸುವಿರಲಿಲ್ಲ. ಹೀಗಾಗಿ `ಕರ್ನಾಟಕ’ ವೆಂಬ ಒಳಗೊಳ್ಳುವ ಹೆಸರಿಡಲು ಮತ್ತೆರಡು ದಶಕ ಕಾಯಬೇಕಾಯಿತು. ವಿಶೇಷವೆಂದರೆ, ಈ ನಾಮಕರಣವು ಸ್ವತಃ ಮೈಸೂರು ಅರಸೊತ್ತಿಗೆಯ ಕುಡಿಯಾದ ದೇವರಾಜ ಅರಸು ಅವರಿಂದ ಆಗಿದ್ದು. ದೇವರಾಜರು ಅರಸು ಸಮುದಾಯಕ್ಕೆ ಸೇರಿದ್ದರೂ ಅರಸೊತ್ತಿಗೆಯ ಪರವಾಗಿದ್ದವರಲ್ಲ. ಅರಸೊತ್ತಿಗೆಯಿಂದಲೂ ಆಂಗ್ಲರಾಳಿಕೆಯಿಂದಲೂ ನವಾಬರ ಹುಕೂಮತ್ತಿನಿಂದಲೂ ಬಿಡುಗಡೆಯಾಗಿ ನಾಡು ಪ್ರಜಾಪ್ರಭುತ್ವೀಕರಣದ ಚಲಿಸಲು ಕರ್ನಾಟಕ ಹೆಸರು ಅಗತ್ಯವಾಗಿತ್ತು.
ಚಾರಿತ್ರಿಕವಾಗಿ ನಾಡನ್ನು ಕನ್ನಡನಾಡು ಕರ್ನಾಟಕ ಎಂದು ಕರೆಯುತ್ತ ಬರಲಾಗಿದೆ. ಕವಿರಾಜಮಾರ್ಗ’ವು ಕಾವೇರಿಯಿಂದ ಗೋದಾವರಿವರೆಗೂ ಇದ್ದ ಪ್ರದೇಶವನ್ನುನಾಡದಾ ಕನ್ನಡದೊಳ್’ ಎನ್ನುತ್ತದೆ. ಇಲ್ಲಿರುವ ಕನ್ನಡ’ ಶಬ್ದದಲ್ಲಿ ಕರ್ನಾಟಕ ಕನ್ನಡಿಗರು ಕನ್ನಡಭಾಷೆ ಮೂರೂ ಏಕೀಭವಿಸಿದ್ದವು. ಆಮೇಲಾಮೇಲೆಕನ್ನಡ’ ಶಬ್ದವು ಕರ್ನಾಟಕದ ಸಕಲ ಪ್ರದೇಶಗಳನ್ನು, ಸಮಸ್ತ ಕನ್ನಡಿಗರನ್ನು ಅವರ ಸಂಸ್ಕೃತಿಯನ್ನು ಒಳಗೊಳ್ಳುವ ತಬ್ಬುವ ತೋಳಕಸುವನ್ನು ಕ್ಷೀಣಗೊಳಿಸಿಕೊಂಡಂತೆ ತೋರುತ್ತದೆ. ಯಾವುದೇ ದೇಶದ/ ರಾಜ್ಯದ ಅಸ್ತಿತ್ವ ಮತ್ತು ಅಸ್ಮಿತೆಗೆ ಭೂಪ್ರದೇಶ, ಜನ, ನುಡಿಗಳು ಮುಖ್ಯ ಬುನಾದಿಗಳು. ಅವನ್ನು ಸೂಚಿಸುವ ಪರಿಭಾಷೆಗಳಲ್ಲಿ, ಅವುಗಳಲ್ಲಿರುವ ಒಳಲೋಕಗಳು ಪ್ರತಿನಿಧಿತವಾಗುತ್ತಿವೆಯೇ ಎಂಬುದು ಕೇಳಿಕೊಳ್ಳಬೇಕಾದ ಪ್ರಶ್ನೆ. ಕರ್ನಾಟಕದ ಭೂಪ್ರದೇಶದಲ್ಲಿ ಬಯಲು ಘಟ್ಟ ಕಾಡು ಕರಾವಳಿ ಬರುತ್ತವೆ; ಕರ್ನಾಟಕದ ಜನರ ಭಾಗವಾಗಿರುವ ಎಲ್ಲ ಧರ್ಮಗಳು ಆರ್ಥಿಕತೆಗಳು, ಸಂಸ್ಕೃತಿ ಧರ್ಮ ನುಡಿಗಳು ಬರುತ್ತವೆ; ನುಡಿಯೆಂದಾಗ, ಕನ್ನಡವು ಪ್ರಧಾನವಾಗಿದ್ದು ಅದರ ಜತೆವಾಸಿ ನುಡಿಗಳಾದ ತುಳು ಕೊಡವ ಬ್ಯಾರಿ ಉರ್ದು ಲಂಬಾಣಿಗಳು ಬರುತ್ತವೆ. ಕನ್ನಡವಾದರೂ ಏಕರೂಪಿಯಲ್ಲ. ಅದರೊಳಗೆ ಹತ್ತಾರು ಒಳಗನ್ನಡದ ಪದರಗಳಿವೆ. ಬೆಳಗಾವಿ ಬೀದರ ಪುತ್ತೂರು ಚಾಮರಾಜನಗರ ಕೋಲಾರ ಬಿಜಾಪುರ ಕಾರವಾರ ಕನ್ನಡಗಳಲ್ಲಿ ಎಷ್ಟೊಂದು ವೈವಿಧ್ಯ. ಒಂದೆಡೆ ಆಡುವ ಮಾತು ಇನ್ನೊಂದು ಕಡೆಯವರಿಗೆ ಪೂರ್ತ ಅರ್ಥವಾಗದಷ್ಟು ಅನನ್ಯವಾಗಿದೆ. ಇಂತಹ ಸ್ತರವಿಶಿಷ್ಟತೆ ಮತ್ತು ಒಳಪದರಗಳ ಸಮೇತ ಕನ್ನಡವು ಬಹುತ್ವವುಳ್ಳ ನುಡಿಯಾಗಿದೆ. ಇದನ್ನೇ ಕವಿರಾಜಮಾರ್ಗ’ಕನ್ನಡಂಗಳ್’ ಎಂದು ಬಹುವಚನದಲ್ಲಿ ಕರೆದಿದ್ದು.
ಬೇರೆಬೇರೆ ದೊರೆಗಳು ಆಳುತ್ತಿದ್ದ ಕನ್ನಡ ಮಾತಾಡುವ ಪ್ರದೇಶಗಳನ್ನು ಲಾಗಾಯ್ತಿನಿಂದಲೂ ಕರ್ನಾಟಕ ಕರ್ಣಾಟ ಕರ್ನಾಟಕ ಎಂಬ ಹೆಸರಲ್ಲೇ ಕರೆಯಲಾಗುತ್ತಿತ್ತು. ಕುಮಾರವ್ಯಾಸನು ತನ್ನ ಕಾವ್ಯಕ್ಕೆ ಕರ್ಣಾಟ ಭಾರತ ಕಥಾಮಂಜರಿ’ ಎಂದನು. ಕನ್ನಡ ಮಾತಾಡುವ ಪ್ರದೇಶಗಳು ಏಕೀಕರಣವಾಗಬೇಕು ಎನ್ನುವ ಹಂಬಲವಿದ್ದ ಕೆಲವರು, ತಮ್ಮ ಹೆಸರಲ್ಲಿ ಕರ್ನಾಟಕ ಹೆಸರನ್ನು ಬಳಸಲು ಆರಂಭಿಸಿದ್ದರು. ಉತ್ತರ ಕರ್ನಾಟಕದಿಂದ ಮುಂಬೈ ಸಿನಿಮಾ ಕ್ಷೇತ್ರಕ್ಕೆ ಹೋದ ಗಾಯಕರು ನಟನಟಿಯರು ತಮ್ಮ ಹೆಸರಿಗೆಕರ್ನಾಟಕಿ’ ಅಡ್ಡಹೆಸರನ್ನು ಲಗತ್ತಿಸಿಕೊಂಡಿದ್ದರು. ಉದಾ: ಅಮೀರಬಾಯಿ ಕರ್ನಾಟಕಿ, ವಿನಾಯಕ ಕರ್ನಾಟಕಿ. ಗೋಹರ್ ಕರ್ನಾಟಕಿ.
`ಕನ್ನಡಿಗರು’ ಎಂಬ ಅಧಿಕೃತ ವ್ಯಾಖ್ಯೆಯಾದರೂ ಕನ್ನಡ ಮನೆಮಾತಿನವರು ಎಂಬರ್ಥದಲ್ಲಿಲ್ಲ. ಕರ್ನಾಟಕದಲ್ಲಿ ಹುಟ್ಟಿದ ಅಥವಾ ಇಂತಿಷ್ಟು ವರ್ಷ ವಾಸಿಸಿದ ಎಲ್ಲರೂ ಕನ್ನಡಿಗರು. ಕರ್ನಾಟಕದಲ್ಲಿರುವ ಎಲ್ಲರೂ ಕನ್ನಡವನ್ನು ಬಲ್ಲವರಾಗಿರಬೇಕು. ಅದನ್ನು ಸಾರ್ವಜನಿಕ ಬದುಕಿನಲ್ಲಿ ಬಳಸಬೇಕು. ಇದಕ್ಕಾಗಿ ಅವರ ಮನೆಮಾತು ಕನ್ನಡವಾಗಿರಬೇಕಿಲ್ಲ. ಅವರು ರಾಜ್ಯಭಾಷೆ ಕನ್ನಡವನ್ನು ತಮ್ಮದಾಗಿಸಿಕೊಂಡು, ತಮ್ಮ ಮನೆಮಾತನ್ನೂ ತಮ್ಮ ವಿಶಿಷ್ಟ ಸಂಸ್ಕೃತಿ ಧರ್ಮಗಳನ್ನೂ ಉಳಿಸಿಕೊಂಡವರು. ಸಮಸ್ತ ಕನ್ನಡಿಗರಿಗೆಲ್ಲ ಒಂದು ಕನ್ನಡ ಸಂಸ್ಕೃತಿಯಿಲ್ಲ. ಹಲವು ಕರ್ನಾಟಕ ಸಂಸ್ಕೃತಿಗಳಿವೆ. ಮೈಸೂರ ಸೀಮೆಯವರಿಗೆ ಕಾವೇರಿ ಎಷ್ಟು ಪವಿತ್ರವೊ ಕೃಷ್ಣಾ ಭೀಮೆಯರು ಉತ್ತರ ಕರ್ನಾಟಕದವರಿಗೆ, ಕರಾವಳಿಗರಿಗೆ ನೇತ್ರಾವತಿ ಕಾಳಿಯರು ಅಷ್ಟೇ ಪವಿತ್ರ. ಕುಚ್ಚಿದಕ್ಕಿಯ ಗಂಜಿ, ರಾಗಿಮುದ್ದೆ, ಜೋಳದ ರೊಟ್ಟಿ, ಅಕ್ಕಿಯ ಅನ್ನ- ಆಹಾರದಲ್ಲೂ ಪ್ರಾಂತೀಯ ವೈವಿಧ್ಯವಿದೆ.
ಕನ್ನಡ ಸಾಹಿತ್ಯ ಬರೆದು ಸಮೃದ್ಧಗೊಳಿಸಿದವರಲ್ಲಿ ಉರ್ದು ತಮಿಳು ತೆಲುಗು ಮರಾಠಿ, ತುಳು, ಕೊಂಕಣಿ, ಬ್ಯಾರಿ ಮನೆಮಾತಿನವರೂ ಇದ್ದಾರೆ. ಕನ್ನಡಕ್ಕೆ ಜ್ಞಾನಪೀಠ ತಂದವರಲ್ಲಿ ನಾಲ್ವರ ಮನೆಮಾತು ಕನ್ನಡವಲ್ಲ. ಕನ್ನಡ ಸಿನಿಮಾ ಹಾಡುಗಳನ್ನು ಹಾಡಿ ನಮ್ಮ ಅಭಿರುಚಿಯನ್ನು ಪೊರೆತ ಜಾನಕಿ, ಶ್ರೀನಿವಾಸ್, ಘಂಟಸಾಲಾ, ಬಾಲಸುಬ್ರಹ್ಮಣ್ಯಂ ಸುಶೀಲಾ, ರಫಿ, ಲತಾ ಸೋನುನಿಗಂ- ಬಹುತೇಕರ ಮನೆಮಾತು ಕನ್ನಡವಲ್ಲ. ಇಂತಹ ಸಂಕೀರ್ಣವಾದ ಮಿಶ್ರವಾದ ವೈವಿಧ್ಯವನ್ನು ಕನ್ನಡ’ ಶಬ್ದಕ್ಕಿಂತಕರ್ನಾಟಕ’ವು ಸಮರ್ಥವಾಗಿ ಹಿಡಿಯಬಲ್ಲದು. ಭಾಷೆ ಧರ್ಮ ಸಂಸ್ಕೃತಿ ಜನಾಂಗದ ಕಾರಣದಿಂದ ಜನರನ್ನು ಅನ್ಯೀಕರಿಸುವ ಯಾವುದೇ ಪರಿಭಾಷೆಗಿಂತ ಸಮಾನಮನಸ್ಕತೆ ಗುರುತಿಸಿ ಒಳಗೊಳ್ಳುವ ಪರಿಭಾಷೆಗಳು ನಾಡನ್ನು ಕಟ್ಟುವುದಕ್ಕೆ ಅಗತ್ಯವಾಗಿವೆ. ಈ ತರ್ಕ-ತತ್ವ, ಭಾರತ ಕಟ್ಟುವುದಕ್ಕೂ ಅನ್ವಯವಾಗುತ್ತದೆ.
ಭಾಷಿಕ ಧಾರ್ಮಿಕ ಸಾಂಸ್ಕೃತಿಕ ಸಾಹಿತ್ಯಕ ಪ್ರಾದೇಶಿಕ ಆಹಾರ ಉಡುಗೆ ತೊಡುಗೆಯ ವೈವಿಧ್ಯವಿರುವ ಸಮಾಜದಲ್ಲಿ ವಾಸ್ತವವನ್ನು ಸಾಧ್ಯವಾದಷ್ಟೂ ಒಳಗೊಳ್ಳುವ ಪರಿಭಾಷೆಗಳ ಮೂಲಕವೇ ಸಂಬೋಧಿಸಬೇಕು. ಕಾರಣ, ಇವು ಪ್ರಜಾಪ್ರಭುತ್ವದ ಮತ್ತು ಸಮಾನತೆಯ ಆಶಯಗಳನ್ನು ಹೆಚ್ಚು ಪ್ರತಿನಿಧಿಸುತ್ತವೆ. ಒಂದು ಧರ್ಮದ ಜನಾಂಗದ ಭಾಷೆಯ ಹೆಸರಲ್ಲಿ ಬ್ರಿಟಿಶರಿಂದ ಬಿಡುಗಡೆಗೊಂಡ ವೈವಿಧ್ಯವುಳ್ಳ ದೇಶವನ್ನು ಕಟ್ಟುವುದಕ್ಕೆ ಸಂವಿಧಾನ ಕರ್ತೃಗಳು ಎಂತಲೇ ಒಪ್ಪಲಿಲ್ಲ. ಒಂದು ಧರ್ಮದ ಜನಾಂಗದ ಭಾಷೆಯ ಹೆಸರಲ್ಲಿ ಕಟ್ಟಲಾದ ವೈವಿಧ್ಯವುಳ್ಳ ದೇಶಗಳು ಮೂಲಭೂತವಾದ ಬೆಳೆಸಿಕೊಳ್ಳುವ ಆತಂಕ ಅವರಿಗಿತ್ತು. ಆದರೂ ಸಂವಿಧಾನವು ಅಪಾರ ವೈವಿಧ್ಯವುಳ್ಳ ಪ್ರಾಂತ್ಯಗಳನ್ನು ಭಾಷೆಯ ಹೆಸರಲ್ಲಿ (ಒರಿಸ್ಸಾ ಗುಜರಾತು) ಬುಡಕಟ್ಟು ಆಧಾರದಲ್ಲಿ (ನಾಗಾಲ್ಯಾಂಡ್) ಏಕೀಕರಣಗೊಳ್ಳಲು ಅವಕಾಶ ಕಲ್ಪಿಸಿತು. ಇದೊಂದು ಒಕ್ಕೂಟತತ್ವದ ಅನುಷ್ಠಾನವಾಗಿತ್ತು. ಹೀಗೆ ಏಕೀಕರಣಗೊಂಡ ಪ್ರಾಂತ್ಯಗಳು ತಮ್ಮೊಳಗಿನ ಬಹುತ್ವವನ್ನು ಹೇಗೆ ಸಂಭಾಳಿಸಬೇಕು ಎನ್ನುವ ಪ್ರಶ್ನೆಗೆ ಉತ್ತರವನ್ನು ತಾವೇ ಹುಡುಕಿಕೊಳ್ಳ ಬೇಕಾಯಿತು. ಆಗ ನಮ್ಮ ಹಿರೀಕರಿಗೆ ಕರ್ನಾಟಕವೆಂಬ ಪ್ರದೇಶವಾಚಕ ಹೆಚ್ಚು ಸೂಕ್ತವಾಗಿ ಕಂಡಿತು.



