ಸಂಪಾದಕೀಯ

ಕರ್ಣಾಟಕದ ಅಸ್ಮಿತೆ : ಮಾತಂಗಿಯು ಕರ್ಣಾಟಕನನ್ನು ಕೊಂದ ಕಥೆ. ಡಾ. ಗೋವಿಂದ. ಸ. ಪ್ರಾ.

ಕರ್ಣಾಟಕದ ಅಸ್ಮಿತೆ : ಮಾತಂಗಿಯು ಕರ್ಣಾಟಕನನ್ನು ಕೊಂದ ಕಥೆ

        ಪ್ರಪಂಚದಲ್ಲಿ ಹಲವಾರು ದೇಶಗಳಿವೆ ಆ ದೇಶಗಳಲ್ಲಿ ಹಲವು ಭಾಷೆಗಳಿವೆ. ಆರಂಭದಲ್ಲಿ ಕನ್ನಡ,ತಮಿಳು,ತೆಲುಗು,ತುಳು,ಮಲಯಾಳಂ ಎಂಬ ಭಾಷೆಗಳು ಒಟ್ಟಾಗಿದ್ದವು. ಆಗ ಅವುಗಳನ್ನು ಪಂಚ ದ್ರಾವಿಡ ಭಾಷೆಗಳೆಂದು ಕರೆಯಲಾಗುತ್ತಿತ್ತು. ಆದರೆ ಒಂದಾಗಿದ್ದ ದ್ರಾವಿಡ ಭಾಷೆಗಳು ಪ್ರತ್ಯೇಕವಾದವು. ಹಲವಾರು ವರ್ಷಗಳ ಬಳಿಕ ಆ ಭಾಷೆಗಳು ಚದುರಿ ಆಯಾ ರಾಜ್ಯಗಳಲ್ಲಿ ಹಂಚಿ ಹೋದವು. ಅಂತೆಯೇ ಕನ್ನಡವು ಕರ್ನಾಟಕ ರಾಜ್ಯದಲ್ಲಿ ಉಳಿಯಿತು.

           ಇಂತಹ ಭಾಷೆಗಳು ತಟ್ಟನೆ ಬೆಳೆದು ಬಂದಂತವುಗಳಲ್ಲ. ಬೌಗೋಳಿಕವಾಗಿ ಪೂರ್ವ- ಪಶ್ಚಿಮ ಉತ್ತರ-ದಕ್ಷಿಣದ ದಿಕ್ಕುಗಳ ಭಾಷಾ ವಿಜ್ಞಾನಿಗಳು ಕನ್ನಡ ಭಾಷೆಗೆ ತನ್ನದೇ ಆದ ಮಹತ್ವ ಹಾಗೂ ಪ್ರಾಮುಖ್ಯತೆಯ ಕುರಿತಾಗಿ ತಮ್ಮದೇ ಅದ ಅಭಿಪ್ರಾಯಗಳನ್ನು ನೀಡಿದ್ದಾರೆ. ಹಾಗೇನೇ ಈ ಭಾಷೆಯ ಬಗ್ಗೆ ಹಲವಾರು ನಿಟ್ಟಿನಲ್ಲಿ ಅಧ್ಯಯನಗಳು ನಡೆದಿವೆ, ನಡೆಯುತ್ತಿವೆ ಎಂಬುದು ಗಮನಾರ್ಹ ಸಂಗತಿಯೇ ಸರಿ. ಭಾಷಾವಾರು ಪ್ರಾಂತ್ಯ ರಚನೆಯಾದಾಗ ಕನ್ನಡವು ಇತರೆ ಭಾಷೆಗಳಿಗಿಂತಲೂ ಎಷ್ಟು ಪ್ರಾಚೀನತೆಯನ್ನು ಹೊಂದಿದೆ ಎಂಬುದರ ಕುರಿತಾಗಿ ಶೋಧನೆಯಿಂದ ಬೆಳಕಿಗೆ ಬಂದಿದೆ.
             ಕರ್ನಾಟಕ ಎಂಬ ಹೆಸರಿನ ಉಗಮದ ಬಗ್ಗೆ ಏಕಾಭಿಪ್ರಾಯವಿಲ್ಲ. ಕರ್ನಾಟಕವನ್ನು ಈ ಹಿಂದೆ 'ಕರ್ಣಾಟಕ'ಎಂತಲೂ ವೇದ,ಪುರಾಣ, ಮಹಾಕಾವ್ಯ ಮುಂತಾದ ಕೃತಿಗಳಲ್ಲಿ ಉಲ್ಲೇಖಗೊಂಡಿರುವುದು ಅಧ್ಯಯನದಿಂದ ತಿಳಿದುಬಂದ ಸಂಗತಿಯಾಗಿದೆ. ಮಹಾಭಾರತದಲ್ಲಿ ಕರ್ಣಾಟಕವನ್ನು ದೇಶವಾಚಕವಾಗಿಯೂ, ಜನಾಂಗ ಸೂಚಕವಾಗಿಯೂ ಬಳಕೆಯಾಗಿದೆ. ಆದರೆ ಈಗ ಈ ಅಧ್ಯಯನದ ಹೊಳವಿನಲ್ಲಿ ಅದರಲ್ಲೂ ಮಹರ್ಷಿ ವ್ಯಾಸ ಬರೆದನೆನ್ನಾಲಾದ ಸ್ಕಂದ ಪುರಾಣದಲ್ಲಿ ವ್ಯಕ್ತಿ  ಸೂಚಕವಾಗಿಯೂ ಉಲ್ಲೇಖಗೊಂಡಿದೆ.

            ಕರ್ಣಾಟಕ (ಕರ್ನಾಟಕ)ವು ಮಹಾಭಾರತದ ಕಾಲಾವಧಿಯಲ್ಲಿ ಪ್ರಸಿದ್ಧವಾದ ನಾಡಾಗಿತ್ತು. ಅಷ್ಟೇ ಅಲ್ಲದೇ ಭಾರತವನ್ನು 'ಖಂಡ' ಎಂತಲೂ ಕರ್ಣಾಟಕವನ್ನು 'ದೇಶ' ಸೂಚಕವಾಗಿಯೂ ಬಳಸಲಾಗಿದೆ. ಯಾವುದೇ ಪ್ರಾಚೀನ ಕಾವ್ಯಗಳು ಇಲ್ಲವೇ ವಡ್ಡಾರಾಧನೆ ಅಥವಾ ಪಂಚತಂತ್ರ ಕಥೆಗಳ ಆರಂಭದಲ್ಲಿ 'ಜಂಬೂದ್ವಿಪ ಭರತ ಖಂಡದ ಕರ್ನಾಟಕ ದೇಶದೋಳ್ 'ಎಂದು ಬಳಕೆಯಾಗಿದೆ. ಆದರೆ ಮಹಾಭಾರತದ 'ಸಭಾಪರ್ವ'ದಲ್ಲಿ 'ಕರ್ಣಾಟಾ'ಎಂತಲೂ 'ಭೀಷ್ಮಪರ್ವ'ದಲ್ಲಿ 'ಕರ್ಣಾಟಕಾ'ಎಂದೂ ಉಲ್ಲೇಖಗೊಂಡಿದೆ. ಇದರ ಕಾಲ ಕ್ರಿ. ಪೂ.ಸು.೩೦೦ ಎಂಬುದು ಹಲವು ವಿದ್ವಾಂಸರ ಅಭಿಮತವಾಗಿದೆ. 

    ಈಚೆಗೆ ಕರ್ನಾಟಕ  ರಾಜ್ಯ ಬಳಕೆಗೂ ಮುನ್ನ ಮೈಸೂರು ರಾಜ್ಯ ಎಂದು ಕರೆಯಲಾಗುತ್ತಿತ್ತು. ಆಗ ಕರ್ನಾಟಕದ ರಾಜಧಾನಿಯೂ ಮೈಸೂರು ಆಗಿತ್ತು. ಮೈಸೂರು ರಾಜ್ಯವೆಂಬ ಹೆಸರನ್ನು ನಿಯುಕ್ತಿಗೊಳಿಸಲು ವಿಜಯನಗರ ಸಾಮ್ರಾಜ್ಯದ ರಾಜಧಾನಿ ಹಂಪಿಯಲ್ಲಿ ಅಂದು ಮೈಸೂರಿನ ಶ್ರೀಕಂಠದತ್ತ ನರಸಿಂಹ ಒಡೆಯರ್ ಅವರ ನೇತೃತ್ವದಲ್ಲಿ ನವಂಬರ್ ೧, ೧೯೭೩ ರಲ್ಲಿ ಅಂದಿನ ಮುಖ್ಯಮಂತ್ರಿ ದಿವಂಗತ ದೇವರಾಜ್ ಅರಸು ಅವರು ಚಾಲನೆ ನೀಡಿದ್ದರು. ಆಗ ಕಾಂಗ್ರೇಸ್ ಸರ್ಕಾರ ಆಡಳಿತದಲ್ಲಿತ್ತು. ಇಂದು ಕರ್ನಾಟಕ (ಕರ್ಣಾಟಕ) ರಾಜ್ಯೋತ್ಸವದ ಸುವರ್ಣ ಮಹೋತ್ಸವ ಆಚರಣೆಯನ್ನು ಸಹ ಅದೇ ಹಂಪಿಯಿಂದಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದಾಗ ಅದೇ ಕಾಂಗ್ರೇಸ್ ಪಕ್ಷವು ಆಡಳಿತದಲ್ಲಿದೆ. ಈಗ ಕರ್ನಾಟಕ ರಾಜ್ಯ ಎಂದು ಘೋಷಣೆಯಾಗಿ 50 ವರ್ಷ ತುಂಬಿದೆ. ಈ ಸುಸಂದರ್ಭದಲ್ಲಿ ಘನ ಸರ್ಕಾರವು ಸಂಭ್ರಮಾಚರಣೆಯನ್ನು ವಿಜಯನಗರ ಸಾಮ್ರಾಜ್ಯದ ಹಂಪಿಯಲ್ಲಿ ಮಾನ್ಯ ಮುಖ್ಯಮಂತ್ರಿಗಳು ವಿದ್ಯುಕ್ತ ಚಾಲನೆ ನೀಡಿದರು. ಈ ಹಿನ್ನೆಲೆಯಲ್ಲಿ ಸರ್ಕಾರದ ವತಿಯಿಂದ ಸಂಭ್ರಮಾಚರಣೆ ಮಾಡುತ್ತಿದೆ. ಈ ಭಾರಿ ಘನ ಸರ್ಕಾರವು ಒಂದು ವರ್ಷಗಳ ಕಾಲ ಕನ್ನಡನಾಡು ನುಡಿಯನ್ನು ಪ್ರತಿನಿಧಿಸುವ ವಿಶೇಷ ಕಾರ್ಯಕ್ರಮಗಳನ್ನು ಅಯೋಜಿಸಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯೋತ್ಸವದ ಆಚರಣೆ ಬಳಿಕ ನವಂಬರ್ 2 ರಂದು ಹಂಪಿಯಲ್ಲಿ ಮಾನ್ಯ ಮುಖ್ಯಮಂತ್ರಿಗಳು ಕರ್ನಾಟಕ ರಾಜ್ಯೋತ್ಸವದ ನಿಮಿತ್ಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು.

     ಕರ್ನಾಟಕ ರಾಜ್ಯ ಎಂದು ನಾಮಕರಣವಾಗಿ 50 ವರ್ಷ ಗತಿಸಿದರೂ ಸಹ ಕರ್ನಾಟಕ ಎಂಬ ಪದದ ಬಗ್ಗೆ ಏಕಾಭಿಪ್ರಾಯವಿಲ್ಲ. ಈ ಹಿಂದೆ ರಚನೆಗೊಂಡಿರುವ ಜನಪದ ಗೀತೆಯಾದ ಗೋವಿನ ಹಾಡಿನಲ್ಲಿ 'ಧರಣಿ ಮಂಡಲ ಮಧ್ಯದೊಳಗೆ ಮೆರೆಯುತಿಹ ಕರ್ಣಾಟಕ ದೇಶದೊಳಿರುವ ಕಾಳಿಂಗನೆಂಬ ಗೊಲ್ಲ ಗೌಡನು' ಎಂದು ಉಲ್ಲೇಖವಾಗಿದೆ. ಹಾಗೇನೆ ಪಂಚತಂತ್ರ ಹಾಗೂ ವಡ್ಡಾರಾಧನೆಯ ಕಥೆಗಳಲ್ಲೂ ಸಹ ಕರ್ನಾಟಕವನ್ನು ದೇಶವಾಚಿ ಸೂಚಕವಾಗಿ ಬಳಸಲಾಗಿದೆ. ಈಗ ರಾಜ್ಯ ಸೂಚಕವಾಗಿ ಬಳಸಲಾಗುತ್ತಿದೆ. ಕರ್ನಾಟಕದ ಅಸ್ಮಿತೆಯ ಕುರಿತಾಗಿ ಹಲವು ಮಗ್ಗಲುಗಳಲ್ಲಿ ಅಧ್ಯಯನಗಳು ಸಹ ನಡೆದಿವೆ,ನಡೆಯುತ್ತಿವೆ.

       ಕರ್ನಾಟಕ ಎಂಬ ಪದವು ಚಾರಿತ್ರಿಕವಾಗಿ ಕರುನಾಡು, ಕಮ್ಮಿತ್ತು ನಾಡು ಕಪ್ಪುನಾಡು ಎಂತಲೂ ಕರೆದಿದ್ದಾರೆ. ಕರ್ನಾಟಕ ಎಂಬುದನ್ನು ಈ ಹಿಂದೆ ಕರ್ಣಾಟಕವೆಂದು ಬಳಸಲಾಗಿತ್ತೆಂದೂ ಅಧ್ಯಯನದಿಂದ ತಿಳಿದುಬಂದಿದೆ. ಈ ಹಿಂದೆ ತಿಳಿಸಿದಂತೆ ಕರ್ಣಾಟಕ ಎಂಬ ಪದವು ದೇವಿ ಪುರಾಣದಲ್ಲಿ ವ್ಯಕ್ತಿ ಸೂಚಕವಾಗಿ ಬಳಸಿರುವುದು ಈ ಅಧ್ಯಯನದಿಂದ ಬೆಳಕಿಗೆ ತರುವ ಪ್ರಯತ್ನಮಾಡಲಾಗಿದೆ.

ಕರ್ಣಾಟಕನನ್ನು ಕೊಂದ ಮಾತoಗಿ: ದೇವಿ ಪುರಾಣದ ಉಲ್ಲೇಖದಂತೆ ಇಂದು ಬಳಸುವ ಕರ್ನಾಟಕವು ಒಬ್ಬ ವ್ಯಕ್ತಿಯನ್ನು ಕುರಿತಾಗಿ ಪ್ರಸ್ತಾಪಿಸಲಾಗಿದೆ. ಕರ್ಣಾಟಕ ಎಂಬ ವ್ಯಕ್ತಿಯು ಬ್ರಾಹ್ಮಣರಿಗೆ ಉಪಟಳ ನೀಡುತ್ತಿರುತ್ತಾನೆ. ಆ ಉಪದ್ರವ ಅಂತ್ಯಗೊಳಿಸಲು ಅವರುಗಳೆಲ್ಲರೂ ಮಹಾಶಕ್ತಿಯನ್ನು ಆರಾಧಿಸುತ್ತಾರೆ. ಮಹಾಶಕ್ತಿಯ ಸೂಚನೆಯತೆ ಮಾತಂಗಿ,ಶ್ಯಾಮಲೆಯರು ದೈತ್ಯ ಕರ್ಣಾಟಕನ ಜೊತೆ ಹೋರಾಡುತ್ತಾರೆ. ಆದರೆ ಕೊನೆಗೆ ಮಾತoಗಿಯು ಕರ್ಣಾಟಕನನ್ನು ಕೊಲ್ಲುತ್ತಾಳೆ. ಆ ಬಳಿಕ ಮಾತoಗಿಯ ಆಶೀರ್ವಾದದಿಂದ ಕರ್ಣಾಟಕನು ದಕ್ಷಿಣದ ಕಡೆಗೆ ಸಾಗಿದನೆoಬುದು ಪುರಾಣಗಳಲ್ಲಿ ಉಲ್ಲೇಖಗೊಂಡಿದೆ. ಆದರ ವಿವರವು ಈ ರೀತಿಯಾಗಿದೆ.

       ಮಹರ್ಷಿ ವೇದವ್ಯಾಸರು ವಿರಚಿತ ಸ್ಕಾoದಪುರಾಣವು 81 ಸಾವಿರ ಶ್ಲೋಕಗಳಲ್ಲಿ ರಚನೆಗೊಂಡ ಪ್ರಮುಖ ಪುರಾಣವಾಗಿದೆ. ಈ ಸ್ಕಾoದಪುರಾಣದ ಮೂರನೆಯ ಬ್ರಹ್ಮಖಂಡದ ಪೂರ್ವಭಾಗದ ಧರ್ಮಾರಣ್ಯ ಮಹಾತ್ಮ್ಯದಲ್ಲಿಯ ಹದಿನೇಳನೆಯ ಅಧ್ಯಾಯವು ಶ್ರೀ ಮಾತಾ ಮಹಾತ್ಮ್ಯ ವರ್ಣನ ಒಳಗೊಂಡಿದ್ದರೆ, ಹದಿನೆಂಟನೆಯ ಅಧ್ಯಾಯವಾದ ಶ್ರೀ ಮಾತಂಗೀ ಕರ್ಣಾಟಕೋಪಾಖ್ಯಾನ ವರ್ಣನದಲ್ಲಿ "ಕರ್ಣಾಟಕ" ಎಂಬ ವ್ಯಕ್ತಿಯನ್ನು ಮಾತಂಗಿಯೂ ಕೊಂದಿರುವ ಕುರಿತಾದ ವರ್ಣನೆಯು ಪ್ರಸ್ತಾಪವಾಗಿದೆ. ಈ ಅಧ್ಯಾಯಗಳಲ್ಲಿಯ ಶ್ರೀ ಮಾತಾ ಮಹಾತ್ಮ್ಯವರ್ಣನದ ಆರಂಭ ಶ್ಲೋಕ ಇಂತಿದೆ.

ಯುದಿಷ್ಟರ ಉವಾಚ :
ಕೋಸೌ ದುಷ್ಟೋ ಮಹಾದೈತ್ಯಹಃ ಕಸ್ಮಿನ್ವoಶೇ ಸಮುದ್ಭವ:|
ಕಿಂ ಕಿಂ ತೇನ ಕೃತಂ ತಾತ ಸರ್ವಂ ಕಥಯ ಸುವೃತ|| ||೭||

        ಯುದಿಷ್ಟರನು ಹೇಳುತ್ತಾನೆ : ತಾತ ಈ ದುಷ್ಟ ದೈತ್ಯನಾರು? ಇವನು ಯಾವ ವಂಶದಲ್ಲಿ ಜನಿಸಿದವನು? ಎಲ್ಲವನ್ನು ಹೇಳಿ ಎನ್ನುತ್ತಾನೆ. ಇದಕ್ಕೆ 

ವ್ಯಾಸ ಉವಾಚ :
ಶ್ರುಣು ರಾಜನ್ಪ್ರವಕ್ಷಾಮಿ ಕರ್ಣಾಟಕ ವಿಚೇಷ್ಟಿತಂ|
ದೇವಾನಾo ದಾನವಾನo ಯೋ ದುಃಸಹೋ ವೀರ್ಯದರ್ಪಿತ: ||೮||

    ಇದಕ್ಕೆ ವ್ಯಾಸನು ಅರಸ ಕೇಳು ಕರ್ಣಾಟಕಾಸುರನ ಕಾರ್ಯವನ್ನು ಹೇಳುವೆನು. ಪರಾಕ್ರಮದಿಂದ ಮತ್ತನಾಗಿ ದೇವದಾನವರಿಗೆ ಸಹಿಸಲಾಗದವನೂ, ಕೆಟ್ಟ ನಡತೆಯುಳ್ಳವನೂ, ಮಹಾ ರಾಜ್ಯವುಳ್ಳವನೂ, ದೀರ್ಘಬಾಹು ಆಗಿರುವ ಆ ಮಹಾ ದೈತ್ಯನು ಸಕಲ ಲೋಕಗಳನ್ನು ಗೆದ್ದು ಮೂರು ಲೋಕಗಳಲ್ಲಿಯೂ ಸಂಚರಿಸತೊಡಗಿದನು.
              ಹೀಗೆ ಆ ಮಹಾ ಅಸುರನು ದೇವತೆಗಳೂ, ಋಷಿಗಳೂ ಇರುವ ಸ್ಥಳಕ್ಕೆ ಹೋಗಿ ಕಪಟದಿಂದ ವಿಜ್ಞಗಳನ್ನು ಮಾಡುತ್ತಿದ್ದನು. ಆಗ ಅವರು ಆತನ ಭಯದಿಂದ ಯಾಗ ಯಜ್ಞಗಳನ್ನು ನಿಲ್ಲಿಸಿದರು. ದೈತ್ಯನು ಮಾತ್ರ ಎಲ್ಲೆಡೆ ತಿರುಗಿ ತೊಂದರೆ ಮಾಡ ತೊಡಗಿದನು. ಆದರೆ ಧರ್ಮಾರಣ್ಯವನ್ನು ಮಾತ್ರ ಶ್ರೀಮಾತೆಯ ಭಯದಿಂದ ಪ್ರವೇಶಿಸಲಿಲ್ಲ. ಆದರೂ ಅಲ್ಲಿಗೆ ಹೋಗುವ ಮಾರ್ಗದ ಕುರಿತು ಆಲೋಚಿಸತೊಡಗಿದನು. ಕೊನೆಗೆ ಆ ದಾನವನು  ವಿವಾಹವು ಜರುಗುವ ವೇಳೆ ಮಾಯಾ ಶಕ್ತಿಯಿಂದ ಅವರುಗಳ ವೇಷ ಧರಿಸಿ ಉತ್ತಮ ದಂಪತಿಯನ್ನು ಅಪಹರಿಸಿದನು. ಆ ಉಪದ್ರವಕ್ಕೆ ಹೆದರಿದ ಅವರುಗಳೆಲ್ಲ ಧರ್ಮಾರಣ್ಯ ಬಿಟ್ಟು ತೆರಳಿದ್ದಕ್ಕೆ ಆ ಸ್ಥಳವು ಶೂನ್ಯವಾಯಿತು. ಆ ದೈತ್ಯನ ಸಂಹಾರಕ್ಕಾಗಿ ಉಪದ್ರವಕ್ಕೊಳಗಾದವರು ಉಪಾಯದಿಂದ ಆಲೋಚಿಸುತ್ತಿರುವಾಗ ಅಶರೀರ ವಾಣಿಯೊಂದು ಶ್ರೀಮಾತೆಯನ್ನು ಪೂಜಿಸಿರಿ ಎಂದು ಕೇಳಿಸುತ್ತದೆ. ಆಗ ಬ್ರಾಹ್ಮಣರು ವಿವಿಧ ಧಾನ್ಯ,ಹಣ್ಣು,ಭಕ್ಷ್ಯ ಭೋಜನ ಪಂಚಾಮೃತದಿಂದ ಅಭಿಷೇಕ ಮಾಡಿ, ತಮ್ಮನ್ನು ಕಾಪಾಡಿ ರಕ್ಷಿಸುವಂತೆ ಶ್ರೀಮಾತೆಯನ್ನು ಪೂಜಿಸಿ ಪ್ರಸನ್ನಗೊಳಿಸಿದರು. ಆಗ ಶ್ರೀಮಾತೆಯೂ ಪ್ರತ್ಯಕ್ಷಳಾಗಿ ಎಲೈ ದ್ವಿಜರೆ ವರವೇನು ಕೇಳಿ ಎಂದಾಗ ದೈತ್ಯನೊಬ್ಬನು ನಮಗೆ ಉಪಟಳ ನೀಡುತ್ತಿದ್ದಾನೆ. ಆತನನ್ನು ವಧಿಸಿ ನಮಗೆ ಒಳಿತು ಮಾಡೆಂದು ಕೇಳುತ್ತಾರೆ. ಆಗ ಆ ದೈತ್ಯನ ಸಂಹಾರ ಮಾಡಲು ಆಕೆಯ ತೇಜಸ್ಸಿನಿಂದ ಕೃಷ್ಣವರ್ಣದವಳೂ, ಪ್ರಕಾಶಮಾನಳಾದ ಮಾತoಗಿಯೂ ಉದ್ಭವವಾಗುತ್ತಾಳೆ. ಆ ಮಾತoಗಿಯೂ ಹದಿನೆಂಟು ತೋಳುಗಳುಳ್ಳವಳಾಗಿ ರೂಪ ಪಡೆಯುತ್ತಾಳೆ.
       ಇದೇ ವೇಳೆ ಯುದಿಷ್ಟರನು ಮಹರ್ಷಿ ವ್ಯಾಸರನ್ನು ಮಾತoಗಿಗೂ ಆ ದೈತ್ಯನಿಗೂ ಹೇಗೆ ಯುದ್ಧ ನಡೆಯಿತು? ಹಾಗೇನೆ ಆ ಯುದ್ಧವು ಹೇಗೆ ಶಾಂತವಾಯಿತು? ಆ ಯುದ್ಧದಲ್ಲಿ ಜಯ ಯಾರಿಗೆ ದೊರೆಯಿತು ಎಂದು ಪ್ರಶ್ನೆ ಕೇಳಿದಾಗ

ವ್ಯಾಸ ಉವಾಚ :
ಏಕದಾ ಶೃಣು ರಾಜೇಂದ್ರ ಯಜ್ಞಾತಂ ದೈತ್ಯ ಸಂಗರೇ |
ತತ್ಸರ್ವ ಕಥಾಯಾಮ್ಯಾಶು ಯಥಾವೃತ್ತಂ ಹಿ ತತ್ಪುರಾ ||
||೬೬||
ಅಂದರೆ ಅರಸನೆ ಒಮ್ಮೆ ನಡೆದ ದೈತ್ಯ ಮಹಾಯುದ್ಧದಲ್ಲಿ ಏನಾಯಿತೆಂದು ಹೇಳುವೆನು ಕೇಳು ಎನ್ನುತ್ತಾನೆ. ಚೈತ್ರ ಮಾಸದಲ್ಲಿ ಬ್ರಾಹ್ಮಣರು, ವೈಶ್ಯರು ಪುನಃ ಧರ್ಮಾರಣ್ಯಕ್ಕೆ ಬಂದು ಸಂತಸದಿಂದ ಜೀವಿಸತೊಡಗಿದರು. ಎಂದಿನಂತೆ ಹೋಮ – ಹವನಾದಿಗಳನ್ನು ಮಾಡಿ ವೇದಘೋಷಗಳನ್ನು ಮೊಳಗಿಸಿದ ಧ್ವನಿಯು ಆ ದೈತ್ಯನಿಗೆ ಕೇಳಿಸಿತು. ಆಗ ದೈತ್ಯನು ಮಾಯಾಶಕ್ತಿಯಿಂದ ಧರ್ಮಾರಣ್ಯದ ದಂಪತಿಗಳನ್ನು ಅಪಹರಿಸಿದನು. ಆ ಬಳಿಕ ಬ್ರಾಹ್ಮಣರೆಲ್ಲರೂ ಸೇರಿ ಮಾತಂಗಿಯನ್ನು ಪ್ರಾರ್ಥಿಸಿದರು. ಪ್ರಾರ್ಥನೆಯ ಪರಿಣಾಮದಿಂದ ಮಾತಂಗಿಯೂ ತ್ರಿಶೂಲ ಹಿಡಿದುಕೊಂಡು ಬಂದು ದೈತ್ಯನೊಂದಿಗೆ ಭಯಂಕರ ಯುದ್ಧ ನಡೆಸಿದಳು. ಯುದ್ಧದ ವೇಳೆ ದಾನವನು ಬಾಣದಿಂದ ಮಾತಂಗಿಯ ಎದೆಗೆ ಹೊಡೆದರೆ, ಮಾತಂಗಿಯೂ ತ್ರಿಶೂಲದಿಂದ ಇರಿಯುತ್ತಾಳೆ. ಬಳಿಕ ಆತನು ಮುಷ್ಟಿಯಿಂದ ಗುದ್ದಿದಾಗ ಆಕೆ ನಾಗಪಾಶದಿಂದ ದೈತ್ಯನನ್ನು ಬಿಗಿಯುತ್ತಾಳೆ. ಆಗ ದೈತ್ಯನು ಗರುಡಾಸ್ತ್ರವನ್ನು ಪ್ರಯೋಗಿಸುತ್ತಾನೆ. ಕೊನೆಗೆ ದೇವಿಯು ನಾರಾಯಣಸ್ತ್ರ ಬಿಟ್ಟಾಗ ದೈತ್ಯoದ್ರೀಯನು ಕಬ್ಬಿಣದ ಆಯುಧದಿಂದ ಹೊಡೆದಾಗ ಮಾತಂಗಿ ಕೋಪಗೊಂಡು ಮುಷ್ಟಿಯಿಂದ ಆ ದಾನವನನ್ನು ಗುದ್ಧಿ ಪುಡಿ ಪುಡಿ ಮಾಡುತ್ತಾಳೆ. ಆ ವೇಳೆ ಆತನು ಮೂರ್ಛೆಗೊಳಗಾದರೂ ಎಚ್ಚತ್ತು ಮಾಯವಾಗಿ ಮತ್ತೆ ಎದುರುಗೊಳ್ಳುತ್ತಾನೆ. ಆಗ ದೇವಿಯು ಪಾನ ಮತ್ತಳಾಗಿ ಅಡಗಿಕೊಂಡ ದೈತ್ಯನನ್ನು ಯುದ್ಧಕ್ಕೆ ಆಹ್ವಾನಿಸುತ್ತಾಳೆ. ಮತ್ತೆ ದೇವಿಯು ಆತನನ್ನು ಬಾಯಿಯಲ್ಲಿ ಇಟ್ಟುಕೊಂಡು ಅಗಿದು ಹೆಣವಾಗಿಸಿದರೂ ಮಾಯಾವಿ ದೈತ್ಯನು ಮಾತoಗಿಯ ಕಿವಿಯ ರಂದ್ರದ ಮೂಲಕ ಹೊರಬರುತ್ತಾನೆ. ಕಿವಿಯ ರಂದ್ರದಿಂದ ಹೊರಬಂದ ಕಾರಣದಿಂದ ಆ ದೈತ್ಯನಿಗೆ “ಕರ್ಣಾಟಕ”ಎಂದು ಹೆಸರಿಟ್ಟಳು. ಆ ಬಳಿಕ ಮತ್ತೆ ಆತನೊಂದಿಗೆ ಕಾದಾಟ ಶುರುವಾಯಿತು. ಆ ವೀರ ದೈತ್ಯನನ್ನು ಹೇಗೆ ಕೊಲ್ಲುವುದೆಂದು ಚಿಂತಿಸುತ್ತಿರುವಾಗ ಆ ದೈತ್ಯನು ಮನ್ಮಥನಾಗಿ ದರ್ಶಿಸಿ ತನ್ನನ್ನು ವರಿಸೆಂದು ಮಾತಂಗಿಯನ್ನು ಕೇಳುತ್ತಾನೆ.

     ಆಗ ದೇವಿಯು ನಾನು ನಿನ್ನ ವರಿಸಲಾರೆ ಆದರೆ ನನ್ನ ತಂಗಿಯಾದ ಶ್ಯಾಮಲೆಯನ್ನು ವಿವಾಹವಾಗೆಂದು ತಿಳಿಸುತ್ತಾಳೆ. ಆಕೆಯ ಸೂಚನೆಯ ಮೇರೆಗೆ ಶ್ಯಾಮಲೆ ಬಳಿಗೆ ಸಾಗಿ ಬಂದ ದೈತ್ಯನು ಆಕೆಯನ್ನು ವರಿಸುವ ಮುನ್ನಾ ಆಕೆಯೊoದಿಗೆ ಸಹ (೩)ಮೂರು ತಿಂಗಳುಗಳ ಕಾಲ ಘನ ಘೋರ ಯುದ್ಧ ಮಾಡುತ್ತಾನೆ. ಇದನ್ನು ಅರಿತು ಬಂದ ಮಾತoಗಿಯೂ ಮಾಘ ಮಾಸದ ಕೃಷ್ಣ ಪಕ್ಷ ತದಿಗೆಯ ದಿನ ಮದ್ಯಾಹ್ನದ ವೇಳೆಯಲ್ಲಿ ಮಾತoಗಿಯೂ ಕರ್ಣಾಟಸುರನನ್ನು ಕೆಡವಿದಳು. ಆಗ ದೈತ್ಯನ ತಲೆಯೂ ಬೆಟ್ಟ ಉರುಳಿದಂತೆ ಉರುಳಿಹೋಗುತ್ತದೆ. ಇದರಿಂದ ದೈತ್ಯನ ಸಂಹಾರವಾಯಿತೆಂದು ಆಗ ಬ್ರಾಹ್ಮಣರು ಸಂತಸಗೊಂಡರು. ಅವರೆಲ್ಲರೂ ಶ್ರೀಮಾತೆ, ಮಾತಂಗಿ, ಶ್ಯಾಮಲೆಯರನ್ನು ಸ್ತುತಿಸಿ, ನಮ್ಮಗಳ ರಕ್ಷಣೆಗಾಗಿ ಈ ಸ್ಥಳದಲ್ಲಿ ನೆಲೆಸು ಎಂದು ಕೋರುತ್ತಾರೆ. ಆಗ ನೆಲೆಗೊಂಡ ದೇವಿಯನ್ನು ಭಕ್ತಿ ಭಾವದಿಂದ ಆರಾದಿಸತೊಡಗುತ್ತಾರೆ.

      ಇದಾದ ಬಳಿಕ ಕರ್ಣಾಟದೈತ್ಯನು ಮತ್ತೆ ಭೂಮಿಯಲ್ಲಿ ಜನಿಸುತ್ತಾನೆ. ಆಗ ವ್ಯಾಸನು ಯುದಿಷ್ಟರನಿಗೆ ಹೀಗೆ ಹೇಳುತ್ತಾನೆ.

ಗತೋ ಸೌ ಯಾಮ್ಯದಿಗ್ಭಾಗ ಉಡಧೇಸ್ತೀರ ಉತ್ತಮೇ |
ವಿಪುಲಂ ದೇಹಮಸಾಧ್ಯ ಕರ್ಣಾಟ: ಸ ನರಾಧಿಪ ||

    ಮಹಾರಾಜನೆ ಆ ಕರ್ಣಾಟನು ಸತ್ಯಮಂದಿರವನ್ನು ಬಿಟ್ಟು ದಕ್ಷಿಣ ದಿಕ್ಕಿಗೆ ಹೋಗಿ ಸಮುದ್ರದ ದಡದಲ್ಲಿ ದೊಡ್ಡ ದೇಹವನ್ನು ಹೊಂದಿ ತನ್ನ ಹೆಸರಿನಿಂದ ಆ ದೇಶವನ್ನು ಸ್ಥಾಪಿಸಿದನು.
       ಹೀಗೆ ಕರ್ಣಾಟಕ ಎಂಬ ವ್ಯಕ್ತಿಯು ನರನಾಗಿ ಜನಿಸಿದನು. ಇದರಿಂದ ಕರ್ಣಾಟಕ ಎಂಬುದು ವ್ಯಕ್ತಿ ಸೂಚಕವಾಗಿಯೇ ಬಂತೆoಬುದು ಈ ಪುರಾಣದಿಂದ ತಿಳಿದುಬರುತ್ತದೆ. ಆದರೆ ಈಗ ನಾವುಗಳು ದೇಶವಾಚಿಯಾಗಿಯೂ,ಜನಾಂಗ ಸೂಚಿಯಾಗಿಯೂ ಬಳಸುತ್ತಿರುವುದು ಗಮನಾರ್ಹ ಸಂಗತಿಯೇ ಸರಿ. ಆದರೆ ಪುರಾಣದ ಹಿನ್ನೆಲೆಯಲ್ಲಿ ವ್ಯಕ್ತವಾದ ಸಂಗತಿಯು ಬ್ರಾಹ್ಮಣರು ದೈತ್ಯರ ಉಪಟಳದಿಂದ ತಮ್ಮಗಳ ಉಳಿವಿಕೆಗಾಗಿ ಮಾಡಿಕೊಂಡದ್ದೆoದು ತೋಚುತ್ತದೆ. ಏಕೆಂದರೆ ಕೆಳಜಾತಿಯ ಸ್ತ್ರೀ ಎಂದು ಉಲ್ಲೇಖಿತಳಾದ ಮಾತಂಗಿಯಿಂದ ಮಹಾರಾಜ ಶಕ್ತಿವಂತ,ಮಹಾನ್ ದೈತ್ಯ ಕರ್ಣಾಟನನ್ನು ಕೊಂದು ಒಂದು ಸಮುದಾಯಕ್ಕೆ ಒಳಿತು ಮಾಡಿರುವುದು ಕಂಡುಬರುತ್ತದೆ. ಇದೇ ರೀತಿಯಾಗಿ ಮಹಿಷನನ್ನು ಸಂಹಾರ ಮಾಡಿರಬೇಕೆಂದು ತಿಳಿದುಬರುತ್ತದೆ. ಆದರೆ ದಶಮಹಾ ವಿದ್ಯೆಯಲ್ಲಿ ಒಬ್ಬಳಾದ ಶ್ಯಾಮಲೆಯೂ(ಮಾತಂಗಿ), ಮತoಗ ಮುನಿಯ ಮಗಳು ಮಾತಂಗಿಯೂ,ಕರ್ಣಾಟಕನನ್ನು ಕೊಂದ ಈ ಮಾತಂಗಿಯೂ ಒಬ್ಬರೇ ಎಂದು ಪರಿಗಣಿಸಲು ಆಗುವುದಿಲ್ಲ. ಆದರೆ ಹಲವು ಸಂದೇಹಗಳಿಗೆ ಎಡೆ ಮಾಡಿಕೊಡುತ್ತದೆ. ಈ ಕುರಿತಾಗಿ ಹೆಚ್ಚಿನ ಸಂಶೋಧನೆ ಆಗ ಬೇಕಾದ ಜರೂರು ಇದೇ ಎಂಬುದು ಅಧ್ಯಯನದಿಂದ ಹೊಳೆದು ಬಂದ ಅಂಶವಾಗಿದೆ ಎಂಬುದರಲ್ಲಿ ಸಂಶಯವಿಲ್ಲ. 

                                    ಡಾ. ಗೋವಿಂದ 
                                  ಸಹಾಯಕ ಪ್ರಾಧ್ಯಾಪಕರು 
                              ಕನ್ನಡ ಸಾಹಿತ್ಯ ಅಧ್ಯಯನ ವಿಭಾಗ 
                               ಕನ್ನಡ ವಿಶ್ವವಿದ್ಯಾಲಯ

Related Articles

Leave a Reply

Your email address will not be published. Required fields are marked *

Back to top button