ಹುಟ್ಟು ಕಿವುಡು ಮಕ್ಕಳಿಗೆ ಆಶಾಕಿರಣ: ಮೆಗ್ಗಾನ್ ಆಸ್ಪತ್ರೆಯಲ್ಲಿ 25 ಕೋಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆ ಯಶಸ್ವಿ.

ಹುಟ್ಟು ಕಿವುಡು ಮಕ್ಕಳಿಗೆ ಆಶಾಕಿರಣ: ಮೆಗ್ಗಾನ್ ಆಸ್ಪತ್ರೆಯಲ್ಲಿ 25 ಕೋಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆ ಯಶಸ್ವಿ
ರಾಜ್ಯ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ “ಶ್ರವಣ ಸಂಜೀವಿನಿ – ಕೋಕ್ಲಿಯರ್ ಇಂಪ್ಲಾಂಟ್” ಯೋಜನೆಯಡಿ ಶಿವಮೊಗ್ಗದ ಮೆಗ್ಗಾನ್ ಜಿಲ್ಲಾ ಆಸ್ಪತ್ರೆಯಲ್ಲಿ ಇದುವರೆಗೆ 25 ಕೋಕ್ಲಿಯರ್ ಇಂಪ್ಲಾಂಟ್ ಸಂಕೀರ್ಣ ಶಸ್ತ್ರಚಿಕಿತ್ಸೆಗಳು ಯಶಸ್ವಿಯಾಗಿ ನೆರವೇರಿವೆ ಎಂದು ಇಎನ್ಟಿ ವಿಭಾಗದ ಸಹ ಪ್ರಾಧ್ಯಾಪಕರು ಹಾಗೂ ವಿಭಾಗದ ಮುಖ್ಯಸ್ಥರಾದ ಡಾ. ಶ್ರೀಧರ್ ಎಸ್. ತಿಳಿಸಿದ್ದಾರೆ.
ಗುರುವಾರ ಮೆಗ್ಗಾನ್ ಆಸ್ಪತ್ರೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಟ್ಟು ಕಿವುಡು ಅಥವಾ ಗಂಭೀರ ಶ್ರವಣ ಸಮಸ್ಯೆ ಹೊಂದಿರುವ ಮಕ್ಕಳಿಗೆ ನಡೆಸುವ ಉನ್ನತ ಮಟ್ಟದ ಮತ್ತು ಸಂಕೀರ್ಣ ಶಸ್ತ್ರಚಿಕಿತ್ಸೆಯೇ ಕೋಕ್ಲಿಯರ್ ಇಂಪ್ಲಾಂಟ್ ಆಗಿದ್ದು, ಈ ಯೋಜನೆಯಡಿ ಆಸ್ಪತ್ರೆಯಲ್ಲಿ ಮಾರ್ಚ್ 1, 2023 ರಂದು ಮೊದಲ ಶಸ್ತ್ರಚಿಕಿತ್ಸೆ ಪ್ರಾರಂಭಿಸಲಾಯಿತು ಎಂದು ಹೇಳಿದರು. ಇದೀಗ 25ನೇ ಕೋಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆಯೂ ಯಶಸ್ವಿಯಾಗಿ ನೆರವೇರಿದ್ದು, ಇದು ಮಕ್ಕಳ ಭವಿಷ್ಯವನ್ನು ಬೆಳಗಿಸುವ ಮಹತ್ವದ ಹೆಜ್ಜೆಯಾಗಿದೆ ಎಂದು ಅವರು ತಿಳಿಸಿದರು.ಖಾಸಗಿ ಆಸ್ಪತ್ರೆಗಳಲ್ಲಿ ಇದೇ ಶಸ್ತ್ರಚಿಕಿತ್ಸೆಗೆ ಸಾಮಾನ್ಯವಾಗಿ ₹12 ರಿಂದ ₹15 ಲಕ್ಷದವರೆಗೆ ವೆಚ್ಚವಾಗುತ್ತದೆ. ಆದರೆ ರಾಜ್ಯ ಸರ್ಕಾರದ ಯೋಜನೆಯಡಿ ಮೆಗ್ಗಾನ್ ಜಿಲ್ಲಾ ಆಸ್ಪತ್ರೆಯಲ್ಲಿ ಈ ಶಸ್ತ್ರಚಿಕಿತ್ಸೆಯನ್ನು ಉಚಿತವಾಗಿ ನಡೆಸಲಾಗುತ್ತಿದೆ. ಇಂಪ್ಲಾಂಟ್ ಸಾಧನಕ್ಕಾಗಿ ಸುಮಾರು ₹6 ಲಕ್ಷ ಹಾಗೂ ಶಸ್ತ್ರಚಿಕಿತ್ಸೆ ಮತ್ತು ನಂತರದ ಪುನರ್ವಸತಿ ಸೇವೆಗಳಿಗಾಗಿ ಸುಮಾರು ₹1.75 ಲಕ್ಷ ಸೇರಿದಂತೆ ಒಟ್ಟು ₹7.75 ಲಕ್ಷ ವೆಚ್ಚವನ್ನು ಸರ್ಕಾರವೇ ಭರಿಸುತ್ತದೆ ಎಂದು ಅವರು ವಿವರಿಸಿದರು. ಬಿಪಿಎಲ್ ಹಾಗೂ ಎಪಿಎಲ್ ಎಂಬ ಭೇದವಿಲ್ಲದೆ ಎಲ್ಲಾ ಅರ್ಹ ಮಕ್ಕಳಿಗೂ ಈ ಸೌಲಭ್ಯ ಲಭ್ಯವಿದೆ ಎಂದು ತಿಳಿಸಿದರು.
ಈವರೆಗೆ ಶಸ್ತ್ರಚಿಕಿತ್ಸೆಗೊಂಡ 25 ಮಕ್ಕಳನ್ನೂ ಮೈಸೂರಿನ ಎಐಐಎಸ್ಹೆಚ್ ಸಂಸ್ಥೆಗೆ ಆಡಿಟರಿ ವರ್ಬಲ್ ಥೆರಪಿಗಾಗಿ ರೆಫರ್ ಮಾಡಲಾಗಿದೆ. ಚಿಕಿತ್ಸೆ ನಂತರ ಹೆಚ್ಚಿನ ಮಕ್ಕಳಲ್ಲಿ ಕೇಳುವ ಸಾಮರ್ಥ್ಯ ಹಾಗೂ ಮಾತಿನ ಕೌಶಲ್ಯಗಳಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿದೆ ಎಂದು ಡಾ. ಶ್ರೀಧರ್ ಹೇಳಿದರು.ಮಕ್ಕಳಲ್ಲಿ ಗಂಭೀರ ಶ್ರವಣ ಸಮಸ್ಯೆಯನ್ನು ಬೇಗ ಗುರುತಿಸಿ, ಮೊದಲಿಗೆ ಹಿಯರಿಂಗ್ ಏಡ್ ಮೂಲಕ ಥೆರಪಿ ನೀಡುವುದು, ಅಗತ್ಯವಿದ್ದರೆ ಕೋಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆ ಮಾಡುವುದು ಹಾಗೂ ನಂತರ ಎರಡು ವರ್ಷಗಳ ಕಾಲ ಆಡಿಟರಿ ವರ್ಬಲ್ ಥೆರಪಿ ಮೂಲಕ ಪುನರ್ವಸತಿ ನೀಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಆರೋಗ್ಯ ಕೇಂದ್ರಗಳು, ಎನ್ಐಸಿಯು, ಎಸ್ಎನ್ಸಿಯು, ಮಕ್ಕಳ ಆಸ್ಪತ್ರೆಗಳು ಹಾಗೂ ಸಮುದಾಯ ಮಟ್ಟದಲ್ಲಿ ಆಶಾ, ಎಎನ್ಎಂ, ಆರ್ಬಿಎಸ್ಕೆ ಮತ್ತು ಎನ್ಪಿಪಿಸಿಡಿ ತಂಡಗಳು ಶ್ರವಣ ತಪಾಸಣೆ ನಡೆಸುತ್ತಿದ್ದು, ಸಮಸ್ಯೆ ಕಂಡುಬಂದ ಮಕ್ಕಳನ್ನು ಜಿಲ್ಲಾ ಮಟ್ಟದ ಕೋಕ್ಲಿಯರ್ ಇಂಪ್ಲಾಂಟ್ ಸಮಿತಿಗೆ ರೆಫರ್ ಮಾಡಲಾಗುತ್ತದೆ ಎಂದು ಅವರು ತಿಳಿಸಿದರು.
ಕೋಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆಗೆ ಎರಡೂ ಕಿವಿಗಳಲ್ಲಿ ಗಂಭೀರ ಕಿವುಡು ಇರುವ ಮಕ್ಕಳು ಅರ್ಹರಾಗಿದ್ದು, ಸಾಮಾನ್ಯವಾಗಿ 8 ತಿಂಗಳಿಂದ 2 ವರ್ಷ ವಯಸ್ಸಿನ ಮಕ್ಕಳನ್ನು ಮುಖ್ಯವಾಗಿ ಪರಿಗಣಿಸಲಾಗುತ್ತದೆ. ಕನಿಷ್ಠ ಮೂರು ತಿಂಗಳ ಕಾಲ ಹಿಯರಿಂಗ್ ಏಡ್ ಥೆರಪಿ ಪಡೆದಿರಬೇಕು. ಎವಿ ಥೆರಪಿಯಲ್ಲಿ ಕನಿಷ್ಠ 30 ಸೆಷನ್ಗಳಲ್ಲಿ ಭಾಗವಹಿಸಿರುವ ದಾಖಲೆ ಇರಬೇಕು. ಸಿಟಿ ಹಾಗೂ ಎಂಆರ್ಐ ಪರೀಕ್ಷೆಗಳಲ್ಲಿ ಕೋಕ್ಲಿಯಾ ಮತ್ತು ಶ್ರವಣ ನರಗಳು ಶಸ್ತ್ರಚಿಕಿತ್ಸೆಗೆ ಅನುಕೂಲಕರವಾಗಿರಬೇಕು ಎಂದು ಅವರು ವಿವರಿಸಿದರು.ಡಾ. ಶಂಕರ್ ಮೆಡಿಕೇರಿ ಮಾತನಾಡಿ, ಮೊದಲಿಗೆ 1 ರಿಂದ 6 ವರ್ಷದೊಳಗಿನ ಮಕ್ಕಳಿಗೆ ಈ ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿತ್ತು. ಈಗ ಎರಡು ವರ್ಷದೊಳಗೆ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಉತ್ತಮ ಫಲಿತಾಂಶ ದೊರೆಯುತ್ತಿದೆ. ಈ ಶಸ್ತ್ರಚಿಕಿತ್ಸೆ ಪಡೆದ ಮಕ್ಕಳು ಉತ್ತಮ ಶಿಕ್ಷಣ ಪಡೆದು ಯಶಸ್ವಿ ಜೀವನ ನಡೆಸುತ್ತಿರುವುದು ಸಂತಸದ ಸಂಗತಿ ಎಂದರು.
ಈ ಶಸ್ತ್ರಚಿಕಿತ್ಸೆಗಳನ್ನು ಡಾ. ಶ್ರೀಧರ್ ಎಸ್. ನೆರವೇರಿಸಿದ್ದು, ಮೆಂಟರ್ ಸರ್ಜನ್ ಆಗಿ ಡಾ. ಶಂಕರ್ ಮೆಡಿಕೇರಿ ಮಾರ್ಗದರ್ಶನ ನೀಡಿದ್ದಾರೆ. 1020 ಕೋಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆಗಳನ್ನು ನಡೆಸಿರುವ ಹಿನ್ನೆಲೆಯಲ್ಲಿ ಡಾ. ಶಂಕರ್ ಮೆಡಿಕೇರಿಯನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.ಕೋಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆ ಪಡೆದ ಐಶಾನಿ ಎಸ್. ಭಟ್ ಅವರ ತಾಯಿ ತಮ್ಮ ಮಗಳ ಕಿವುಡು ಪತ್ತೆ, ಶಸ್ತ್ರಚಿಕಿತ್ಸೆ ಹಾಗೂ ನಂತರದ ಅನುಭವಗಳನ್ನು ಹಂಚಿಕೊಂಡರು.ಪತ್ರಿಕಾಗೋಷ್ಠಿಯಲ್ಲಿ ಮೆಗ್ಗಾನ್ ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಸರ್ಜನ್ ಡಾ. ಗೀತಾ ಸುಶೀಲ್ ಕುಮಾರ್, ಇಎನ್ಟಿ ವಿಭಾಗದ ಡಾ. ಚಂಪಾ ಹಾಗೂ ಶುಶ್ರೂಷಕಾಧೀಕ್ಷಕಿ ಶೇಷಮ್ಮ ಉಪಸ್ಥಿತರಿದ್ದರು.



