ಪುನೀತ್ ಎಂಬ ಪುಣ್ಯವಂತನಿಗೆ ಹುಟ್ಟು ಹಬ್ಬದ ಶುಭಾಷಯಗಳು….

ಪುನೀತ್ ಎಂಬ ಪುಣ್ಯವಂತನಿಗೆ ಹುಟ್ಟು ಹಬ್ಬದ ಶುಭಾಷಯಗಳು….ದೀಪಕ ಶಿಂಧೇ
9482766018
ಮದುವೆಯಾದ ವರ್ಷ,ಮ್ಯಾರೇಜ್ ಯಾನಿವರ್ಸರಿ,ಫೀಜು ಕಟ್ಟುವ ಅಥವಾ ಇ ಎಮ್ ಐ ಕಟ್ಟಬೇಕಾದ ದಿನಾಂಕಗಳಷ್ಟೆ ಅಲ್ಲ ಕೆಲವೊಮ್ಮೆ ನನ್ನ ಹುಟ್ಟುಹಬ್ಬವನ್ನೂ ಮರೆತು ಬಿಡುವ ಮರೆಗುಳಿ ನಾನು…ಆದರೆ ಎಂದಿಗೂ ಮರೆಯಲಾಗದ ವ್ಯಕ್ತಿಯ ಹುಟ್ಟುಹಬ್ಬವನ್ನ ಅದು ಹೇಗೆ ತಾನೆ ಮರೆಯಲು ಸಾಧ್ಯ??
ಇಂದು ಕನ್ನಡ ಚಿತ್ರರಂಗ ಕಂಡ ಕನ್ನಡ ಸಾರಸ್ವತ ಲೋಕದ ವರನಟ ರಾಜಕುಮಾರ್ ಮತ್ತು ಪಾರ್ವತಮ್ಮ ರಾಜ್ ಕುಮಾರ್ ಅವರ ಕಿರಿಯ ಸುಪುತ್ರ ಅಪ್ಪು ಬಾಸ್, ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬ.
ಕನ್ನಡ ಕೋಟ್ಯಾಧಿಪತಿ ಕಾರ್ಯಕ್ರಮದಿಂದ ಹಿಡಿದು ಪ್ರತಿಯೊಬ್ಬ ಕನ್ನಡಿಗರ ಮನಸ್ಸಿನಲ್ಲಿ ಮತ್ತು ಬಹುತೇಕ ಕನ್ನಡದ ಮನೆಗಳಲ್ಲಿ ಇಂದಿಗೂ ರಾರಾಜಿಸುವ ವ್ಯಕ್ತಿ ಅಂದರೆ ಅದು ಪುನೀತ್ ರಾಜ್ ಕುಮಾರ್.
ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ ಅನ್ನುವ ಮಾತಿನಂತೆ ಮತ್ತು ಹುಲಿಯ ಹೊಟ್ಟೆಯಲ್ಲಿ ಹುಲಿಯೇ ಹುಟ್ಟುತ್ತದೆ ಅನ್ನುವದಕ್ಕೆ ಅತಿ ದೊಡ್ಡ ಉದಾಹರಣೆ ಅಂದರೆ ನಟಸಾರ್ವಭೌಮ ಡಾಕ್ಟರ್ ರಾಜ್ ಕುಮಾರ್ ಅವರ ಸುಪುತ್ರ ಪುನೀತ್ ರಾಜ್ ಕುಮಾರ್.
ಮಾರ್ಚ್ ಹದಿನೇಳು 1975 ಅವರು ಚೆನ್ನೈನಲ್ಲಿ ಜನಿಸಿದ್ದು ಮತ್ತು ನಮ್ಮನ್ನು ಅಗಲಿದ್ದು 29 ಅಕ್ಟೋಬರ್ 2021
ದೇವರು ಒಳ್ಳೆಯವರನ್ನ ಬಿಗಿದು ಅಪ್ಪುವದಕ್ಕಾಗಿಯೇ ಸ್ವಾರ್ಥ ತುಂಬಿದ ಈ ಲೋಕಕ್ಕೆ ತಾನು ಬರಲಾಗದೆ ಒಳ್ಳೆಯವರನ್ನೇ ತನ್ನ ಹತ್ತಿರ ಬರುವಂತೆ ಮಾಡುತ್ತಾನಂತೆ…
ಕನ್ನಡ ಚಿತ್ರರಂಗದಲ್ಲಿ ಉಳಿದ ಕೆಲವು ಹಿಟ್ ಸಿನೆಮಾ ಕೊಟ್ಟ ನಟರಂತೆ ಯಾವ ವಿವಾದವನ್ನೂ ಮೈ ಮೇಲೆ ಎಳೆದುಕೊಳ್ಳದೆ ಮತ್ತು ಗಾಸಿಪ್ಪುಗಳಿಗೂ ಈಡಾಗದೆ ಮನೆ ಮಂದಿಯೆಲ್ಲ ಒಟ್ಟಿಗೆ ಕುಳಿತು ನೋಡಬಹುದಾದ ಚಿತ್ರಗಳನ್ನು ಕೊಟ್ಟ ನಟ ನಮ್ಮ ಅಪ್ಪು ಬಾಸ್ ಅಂತ ಯಾರು ಬೇಕಾದರೂ ಎದೆ ತಟ್ಟಿ ಹೇಳಿಕೊಳ್ಳುವಂತೆ ಬದುಕಿದ ನಟ ಪುನೀತ್ ರಾಜ್ ಕುಮಾರ್.
ಕೋಟ್ಯಾಂತರ ರೂಪಾಯಿ ಬಜೆಟ್ಟಿನ ಸಿನೆಮಾಗಳಲ್ಲಿ ನಟಿಸಿದರೂ ಕೂಡ ಒಂದಿನಿತೂ ಅಹಂಕಾರ ಇಟ್ಟುಕೊಳ್ಳದ ಮತ್ತು ಲವ ಲವಿಕೆಯ ನಟನಾಗಿ ಲೈಟ್ ಬಾಯ್ ಇಂದ ಹಿಡಿದು ಅಸಿಸ್ಟೆಂಟ್ ಕ್ಯಾಮೆರಾಮನ್ ಮತ್ತು ಮೇಕಪ್ ಮನ್,ಹಾಗೂ ಕ್ಯಾರವಾನ್ ಚಾಲಕರ ತನಕ ಸಹ ನಟರಿಂದ ಹಿಡಿದು ಆಗಷ್ಟೇ ಸಿನೆಮಾ ರಂಗಕ್ಕೆ ಕಾಲಿಟ್ಟ ಜೂನಿಯರ್ ಆರ್ಟಿಸ್ಟುಗಳ ತನಕ ಎಲ್ಲರ ಮನಸ್ಸು ಗೆದ್ದ ಏಕೈಕ ಚಿತ್ರನಟ ಅಂದರೆ ಅದು ಒನ್ ಯಾಂಡ್ ಓನ್ಲೀ ಪುನೀತ್ ರಾಜ್ ಕುಮಾರ…
ಕೇವಲ ತೆರೆಯ ಮೇಲಷ್ಟೇ ಒಳ್ಳೆಯ ನಾಯಕರಾದವರು,ತೆರೆಯ ಹಿಂದೆ ಮಾಡುವ ಭಯಂಕರ ನಟನೆಗಳ ನಡುವೆಯೂ ಅಂತಹ ಯಾವುದೇ ನಟನೆಯನ್ನು ಮಾಡದೆ ತೆರದಿಟ್ಟ ಪುಸ್ತಕದಂತೆ ಬದುಕಿದ್ದು ಅಪ್ಪು ಬಾಸ್ ಬದುಕಿದ್ದು ಈಗ ಇತಿಹಾಸ.
ಅಂದ ಹಾಗೆ ಅವರು ನಟಿಸಿದ್ದು ನೂರೋ ಇನ್ನೂರೋ ನಂದು ಐವತ್ತು,ಎಪ್ಪತ್ತು ನೂರನೆ ಸಿನೆಮಾ ಅಂತ ಡಿಜಿಟ್ ಹೇಳಿಕೊಳ್ಳುವಂತಹ ಸಾಲು ಸಾಲು ಸಿನೆಮಗಾಳಲ್ಲ… ನಾಯಕ ನಟನಾಗಿ ನಟಿಸಿದ್ದು ಕೇವಲ ಇಪ್ಪತ್ತೊಂಭತ್ತು, ಮೂವತ್ತು ಸಿನೆಮಾಗಳಾದರೂ ಎಲ್ಲವೂ ಒಂದಕ್ಕಿಂತ ಒಂದು ವಿಭಿನ್ನ ಮತ್ತು ಸೂಪರ್ ಹಿಟ್ ಸಿನೆಮಾಗಳೇ ಅನ್ನುವದು ಗಮನಾರ್ಹ.
ಕೇವಲ ನಟನೆಗೆ ಅಷ್ಟೇ ಸೀಮಿತವಾಗದ ಅಪ್ಪು ಅಪ್ಪಿಕೊಂಡದ್ದು ಇಡೀ ಕನ್ನಡ ಚಿತ್ರರಂಗವನ್ನ ಹಿನ್ನೆಲೆ ಗಾಯಕನಾಗಿ,ದೂರದರ್ಶನ ಕಾರ್ಯಕ್ರಮ ಕನ್ನಡದ ಕೋಟ್ಯಾಧಿಪತಿಯ ನಿರೂಪಕನಾಗಿ,ಕೆ ಎಮ್ ಎಪ್ ನ ಬ್ರಾಂಡ್ ಅಂಬಾಸಿಡರ್ ಆಗಿ,ಸಿನೆಮಾಗಳ ನಿರ್ಮಾಪನಾಗಿ ಮತ್ತು ಮೈಸೂರಿನ ಶಕ್ತಿಧಾಮ ಅನ್ನುವ ಅನಾಥಾಶ್ರಮಕ್ಕೆ ಅವರು ಮಾಡಿದ ಸೇವೆ ಮತ್ತು ಕೆಲಸಗಳು ಎಂದಿಗೂ ಜನಮಾನಸದಲ್ಲಿ ಅಜರಾಮರ.
ವಸಂತಗೀತ,ಭಾಗ್ಯವಂತ,ಚಲಿಸುವ ಮೋಡಗಳು,ಎರಡು ನಕ್ಷತ್ರಗಳು,ಭಕ್ತ ಪ್ರಹ್ಲಾದ,ಬೆಟ್ಟದ ಹೂವು,ಯಾರಿವನುಅಂತಹ ಸಿನೆಮಾಗಳಲ್ಲಿ ಬಾಲನಟನಾಗಿ ನಟಿಸಿದ್ದ ಪವರ್ ಸ್ಟಾರ್ ಯುವರತ್ನ,ಪುನೀತ್ ರಾಜಕುಮಾರ್ ಅವರ ಮೂಲ ಹೆಸರು ಲೋಹಿತ್…
2002 ರಲ್ಲಿ ಪೂರ್ಣ ಪ್ರಮಾಣದ ನಾಯಕ ನಟನಾಗಿ ಅಪ್ಪು ಹೆಸರಿನ ಸಿನೆಮಾದಿಂದ ತಮ್ಮ ವೃತ್ತಿ ಆರಂಭಿಸಿದ್ದು ಆ ಹೆಸರು ಅಭಿಮಾನಿಗಳ ಮನಸ್ಸಿನಲ್ಲಿ ಅಚ್ಚು ಮಾಡಿತ್ತು.
2002 ರಿಂದ 2021 ರವರೆಗಿನ ಸಿನೆಮಾ ಪಯಣದಲ್ಲಿ ಅಪ್ಪು,ಅಭಿ,ವೀರ ಕನ್ನಡಿಗ,ಮೌರ್ಯ,ಆಕಾಶ್,ಅಜಯ್,
ಅರಸು,ಮಿಲನ, ವಂಶಿ,ಜಾಕಿ,ಅಣ್ಣಾಬಾಂಡ್ ,ಗಂಧದ ಗುಡಿ,ದೊಡ್ಮನೆ ಹುಡುಗ,ಹೀಗೆ ಸುಮಾರು ಮೂವತ್ತು ಚಿತ್ರಗಳಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದಷ್ಟೇ ಅಲ್ಲದೇ ಒಂದು ಕೈಯ್ಯಿಂದ ಕೊಟ್ಟದ್ದು ಮತ್ತೊಂದು ಕೈಗೆ ತಿಳಿಯದಂತೆ ಸಹಾಯ ಕೆಳಿ ಬಂದ ಮತ್ತು ಅಸಹಾಯಕ ಸ್ಥಿತಿಯಲ್ಲಿ ಇದ್ದ ಕರ್ನಾಟಕದ ಅದೆಷ್ಟೋ ಜನರಿಗೆ ಅವರು ಸಹಾಯ ಮಾಡಿದ್ದು ಸ್ವತಃ ಅವರಿಂದ ಸಹಾಯ ಪಡೆದ ಕೆಲವರಿಗೆ ಅವರು ಅಪರಿಚಿತರಾಗಿಯೇ ಉಳಿದಿದ್ದರು ಅನ್ನುವದು ಅವರ ಅಗಲಿಕೆಯ ನಂತರವಷ್ಟೇ ಈ ಜಗತ್ತಿಗೆ ತಿಳಿದದ್ದು ವಿಪರ್ಯಾಸವೇ ಸರಿ.
ಇವತ್ತಿಗೆ ಅವರು ಬದುಕಿದ್ದರೆ ಇನ್ನಷ್ಟು ಸೂಪರ್ ಹಿಟ್ ಸಿನೆಮಾಗಳು ಸಿನಿ ರಸಿಕರ ಮನರಂಜಿಸುತ್ತಿದ್ದವು ಅನ್ನುವದರ ಜೊತೆಗೆ ಇಡೀ ಕುಟುಂಬ ಸದಸ್ಯರು ಒಟ್ಟಿಗೆ ಕುಳಿತು ನೋಡುವಂತಹ ಸಿನೆಮಾಗಳಾಗಿರುತ್ತಿದ್ದವು ಅನ್ನೋದು ಕೂಡ ಅಷ್ಟೇ ನಿಜ.
ಸಿನೆಮಾ ರಂಗವನ್ನು ವೃತ್ತಿಯಾಗಿಸಿಕೊಂಡರೂ ಕೂಡ ಅದನ್ನು ಉದ್ಯಮ ಅಂದುಕೊಳ್ಳದ,ಸಂಭಾವನೆ ಎಷ್ಟು ಬೇಕಾದ್ರೂ ಕೊಡ್ತೀವಿ ಅಂತ ಬಂದವರಿಗೆ ಸಿನೆಮಾ ಕತೆ ಕೇಳಿ ಸರಿ ಅನ್ನಿಸದರೆ ಮಾತ್ರ ಕಾಲ್ ಶೀಟ್ ಕೊಡುತ್ತಿದ್ದ ಹಾಗೂ ಬಡವರು,ನಿರ್ಗತಿಕರು ಅನಾಥರ ಬಗ್ಗೆ ಮತ್ತು ನಾಡು ನುಡಿಯ ಬಗ್ಗೆ ಅಪಾರವಾದ ಕಾಳಜಿ ಎದ್ದ ಬೆರಳೆಣಿಕೆಯ ನಟರಲ್ಲಿ ಪುನಿತ್ ರಾಜ್ ಕುಮಾರ್ ಕೂಡ ಒಬ್ಬರು.
ಎನಿ ಹವ್…. 29 ಅಕ್ಟೋಬರ್ 2021 ರಲ್ಲಿ ಹೃದಯಾಘಾತದಿಂದ ಬೆಂಗಳೂರಿನ ವಿಕ್ರಮ್ ಆಸ್ಪತ್ರೆಯಲ್ಲಿ ಅವರ ಸಾವಿನ ಸುದ್ದಿ ಘೋಷಣೆ ಆದ ಬಳಿಕ ಅವರು
ಭೌತಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ಆಕಾಶದಲ್ಲಿ ಹೊಳೆಯುವ ನಕ್ಷತ್ರವಾಗಿ ತಮ್ಮ ಮಾನವೀಯ ಕಳಕಳಿಯ ಗುಣಗಳಿಂದಾಗಿ ಅಷ್ಟೇ ಯಾಕೆ ನೇತ್ರದಾನಕ್ಕೆ ಪ್ರೇರಣೆಯಾಗಿ ಯಾವಾಗಲೂ ನಮ್ಮೊಂದಿಗೆ ನಮ್ಮ ಹೃದಯದಲ್ಲಿ ಅಮರವಾಗಿ ಇರುತ್ತಾರೆ.ಯಾಕೆಂದರೆ ಕನ್ನಡ ಸಿನೆಮಾ ರಂಗಕ್ಕೆ ಮತ್ತು ಕನ್ನಡಿಗರಿಗೆ ಅವರು ಕೇವಲ ವ್ಯಕ್ತಿಯಲ್ಲ ಸಾಮಾಜಿಕ ಕಳಕಳಿ ಉಳ್ಳ ಒಳ್ಳೆಯ ಮನಸ್ಸುಗಳ ಹಿಂದಿರುವ ಪ್ರೇರಕ ಶಕ್ತಿಯೂ ಹೌದು
ವಿಷ್ ಯೂ ಹ್ಯಾಪಿ ಬರ್ತಡೇ ಪುನೀತ್.
ನೀವು ಕೇವಲ ಪುನೀತ್ ಅಲ್ಲ ನಾನು ಕಂಡ ಒಬ್ಬ ಪುಣ್ಯವಂತ
ದೀಪಕ ಶಿಂಧೇ
9482766018




