ಇಕ್ಬಾಲ್ ಅನ್ಸಾರಿ ವಿರುದ್ಧ ಏಕವಚನ ಬಳಕೆ: ಕಾಂಗ್ರೆಸ್ ಮುಖಂಡರಿಂದ ಆಕ್ರೋಶ, ಉಗ್ರ ಹೋರಾಟದ ಎಚ್ಚರಿಕೆ

ಗಂಗಾವತಿ: ಮಾಜಿ ಸಚಿವ ಹಾಗೂ ಗಂಗಾವತಿ ವಿಧಾನಸಭಾ ಕ್ಷೇತ್ರದ
ಇಕ್ಬಾಲ್ ಅನ್ಸಾರಿ ವಿರುದ್ಧ ಏಕವಚನ ಬಳಕೆ: ಕಾಂಗ್ರೆಸ್ ಮುಖಂಡರಿಂದ ಆಕ್ರೋಶ, ಉಗ್ರ ಹೋರಾಟದ ಎಚ್ಚರಿಕೆ
ಗಂಗಾವತಿ: ಮಾಜಿ ಸಚಿವ ಹಾಗೂ ಗಂಗಾವತಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಅವರ ವಿರುದ್ಧ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು ಏಕವಚನದಲ್ಲಿ ಮಾತನಾಡುವುದನ್ನು ಮುಂದುವರಿಸಿದರೆ,
ಮುಂದಿನ ದಿನಗಳಲ್ಲಿ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಗಂಗಾವತಿ ಕಾಂಗ್ರೆಸ್ ಮುಖಂಡರು ಹಾಗೂ ಇಕ್ಬಾಲ್ ಅನ್ಸಾರಿ ಅಭಿಮಾನಿಗಳ ಬಳಗ ಎಚ್ಚರಿಕೆ ನೀಡಿದೆ.
ಮಂಗಳವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖಂಡರು, ಬಳ್ಳಾರಿ ಪಾದಯಾತ್ರೆಯ ಸಂದರ್ಭದಲ್ಲಿ ಶಾಸಕ ಜನಾರ್ದನ ರೆಡ್ಡಿ ಅವರು ಇಕ್ಬಾಲ್ ಅನ್ಸಾರಿ ಅವರ ಕುರಿತು ಹಗುರವಾಗಿ ಹಾಗೂ ಏಕವಚನದಲ್ಲಿ ಮಾತನಾಡಿರುವುದನ್ನು ತೀವ್ರವಾಗಿ ಖಂಡಿಸಿದರು.
“ಮಾಜಿ ಸಚಿವರ ಬಗ್ಗೆ ಆಡಿಯೋ, ವಿಡಿಯೋ ಮಾಡಿದರೆ ನಿಮಗೇನು ತೊಂದರೆ? ಮೊದಲು ನಿಮ್ಮ ಆತ್ಮಸ್ಥೈರ್ಯವನ್ನು ನೀವೇ ಪರಿಶೀಲಿಸಿಕೊಳ್ಳಿ” ಎಂದು ಶಾಸಕರ ಹೇಳಿಕೆಗೆ ಮುಖಂಡರು ತಿರುಗೇಟು ನೀಡಿದರು.
ಗಂಗಾವತಿ ಕ್ಷೇತ್ರದಲ್ಲಿ ಶಾಸಕರ ಅನುದಾನ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ ಹಾಗೂ ಕ್ಷೇತ್ರದ ಅಭಿವೃದ್ಧಿ ಕುಂಠಿತಗೊಂಡಿದೆ ಎಂದು ಮುಖಂಡರು.ಆರೋಪಿಸಿದರು.
ಬಳ್ಳಾರಿ ಶಾಸಕ ನಾಗೇಂದ್ರ ಅವರ ವಿರುದ್ಧ ಪಾದಯಾತ್ರೆ ಕೈಗೊಳ್ಳಲು ಮುಂದಾಗಿರುವ ಶಾಸಕ ಜನಾರ್ದನ ರೆಡ್ಡಿ ಅವರ ನಡೆಯನ್ನೂ ಅವರು ಟೀಕಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ನಗರಸಭಾ ಸದಸ್ಯ ಮನೋಹರ ಸ್ವಾಮಿ ಹಿರೇಮಠ, “ಗಂಗಾವತಿ ಕ್ಷೇತ್ರದಲ್ಲಿ ದೇವಸ್ಥಾನದ ಹಣ ದುರ್ಬಳಕೆಯಾಗಿದೆ ಎಂಬ ಆರೋಪಗಳಿದ್ದು, ಈ ಕುರಿತು ಸಮಗ್ರ ಹಾಗೂ ಸೂಕ್ತ ತನಿಖೆ ನಡೆಸಬೇಕು.
ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ.ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು” ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಇಲಿಯಾಸ್ ಖಾದ್ರಿ, ಪ್ರಮುಖರಾದ ಜುಬೇರ್, ಹುಸೇನಪ್ಪ ಹಂಚಿನಾಳ, ಅಜಯ್ ಕಮ್ಲಿ ಬಾಬಾ, ಮಂಜು ಹಂಚಿನಾಳ, ಬಾಬರ್, ರಿಯಾಜ್ ಮೊಹಮ್ಮದ್, ಅನ್ವರ್, ಮಂಜು ಕಲಾಲ್, ಮುಕ್ತಿಯಾರ್, ಸಜಿದ್ ವಲಿ ಸೇರಿದಂತೆ ಕಾಂಗ್ರೆಸ್ ಮುಖಂಡರು ಹಾಗೂ ಇಕ್ಬಾಲ್ ಅನ್ಸಾರಿ ಅಭಿಮಾನಿಗಳು ಉಪಸ್ಥಿತರಿದ್ದರು.
ಗೌತಮ್ ಯಾದವ್ ಕನಕಗಿರಿ ಪ್ರಜಾ ಶ್ರೀ ಪತ್ರಿಕೆ ಕೊಪ್ಪಳ ಜಿಲ್ಲಾ ವರದಿಗಾರ



