ಪತ್ರಿಕೋದ್ಯಮ

ಗುತ್ತಿಗೆದಾರರ ವಿರುದ್ಧ ಎಫ್‌ಐಆರ್ ದಾಖಲಿಸಿ – ಅಸಂಘಟಿತ ಕಾರ್ಮಿಕ ಸಂಘ ಒತ್ತಾಯ ಬೆಂಗಳೂರು.

ಗುತ್ತಿಗೆದಾರರ ವಿರುದ್ಧ ಎಫ್‌ಐಆರ್ ದಾಖಲಿಸಿ – ಅಸಂಘಟಿತ ಕಾರ್ಮಿಕ ಸಂಘ ಒತ್ತಾಯ ಬೆಂಗಳೂರು. ಗುತ್ತಿಗೆದಾರರ ವಿರುದ್ಧ ಎಫ್‌ಐಆರ್ ದಾಖಲಿಸಿ – ಅಸಂಘಟಿತ ಕಾರ್ಮಿಕ ಸಂಘದ ರಾಜ್ಯದಕ್ಷ ನರಸಿಂಹ ನಾಯಕ ಇಂದು ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಒತ್ತಾಯ ಮಾಡಿದರು. ಕರ್ನಾಟಕ ಕೈಗಾರಿಕ ಪ್ರದೇಶಾಭಿವೃದ್ಧಿ ಮಂಡಳಿ (KIADB) ಯಲ್ಲಿ ಮೂಲಸೌಲಭ್ಯಗಳ ಅಂಗವಾಗಿ ಕೈಗೊಳ್ಳಲಾದ ವಿದ್ಯುತ್ ಇ-ಪ್ರಕ್ಯೂರ್‌ಮೆಂಟ್ ಟೆಂಡರ್ ಕಾಮಗಾರಿಗಳಲ್ಲಿ ಭಾರೀ ಅಕ್ರಮಗಳು ನಡೆದಿರುವುದಾಗಿ ಅಸಂಘಟಿತ ಕಾರ್ಮಿಕ ಸಂಘ ಆರೋಪಿಸಿದೆ. ಇಲಾಖೆಯ ಮುಖ್ಯ ಅಭಿಯಂತರರು ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಿರ್ಲಕ್ಷ್ಯ ಮತ್ತು ಅಧಿಕಾರ ದುರುಪಯೋಗದಿಂದ ಬಹುಕೋಟಿ ರೂಪಾಯಿ ಭ್ರಷ್ಟಾಚಾರ ನಡೆದಿದೆ ಎಂದು ಸಂಘ ಗಂಭೀರವಾಗಿ ಆರೋಪಿಸಿದರು.
ಸಂಘದ ಪ್ರಕಾರ, ಕೆಲ ಅಧಿಕಾರಿಗಳು ಕಮಿಷನ್ ದುರಾಸೆಯಿಂದ ಗುತ್ತಿಗೆದಾರರೊಂದಿಗೆ ಒಳಒಪ್ಪಂದ ಮಾಡಿಕೊಂಡು ಸಾರ್ವಜನಿಕರ ತೆರಿಗೆ ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. 2018–19ನೇ ಸಾಲಿನಲ್ಲಿ ಭ್ರಷ್ಟ ಗುತ್ತಿಗೆದಾರರಿಗೆ ಅಕ್ರಮವಾಗಿ ಟೆಂಡರ್ ಹಂಚಿಕೆ ಮಾಡಲಾಗಿದ್ದು, ಅಂದಾಜು ಪಟ್ಟಿಗಳನ್ನು ಉದ್ದೇಶಪೂರ್ವಕವಾಗಿ ಹೆಚ್ಚಿಸಿ ಅತಿದೊಡ್ಡ ಮೊತ್ತಗಳಿಗೆ ತರಾತುರಿಯಲ್ಲಿ ಟೆಂಡರ್ ಪ್ರಕ್ರಿಯೆ ನಡೆಸಲಾಗಿದೆ. ಈ ಕ್ರಮಗಳು ಕೆ.ಟಿ.ಟಿ.ಪಿ ಕಾಯ್ದೆಯ ಉಲ್ಲಂಘನೆಯಾಗಿವೆ ಎಂದು ಸಂಘ ತಿಳಿಸಿದೆ.

ಇದಲ್ಲದೆ, 2018–19ರಿಂದ 2024–25ರವರೆಗೆ ಕೈಗೊಳ್ಳಲಾದ ಅನೇಕ ವಿದ್ಯುತ್ ಕಾಮಗಾರಿಗಳಲ್ಲಿ ಗುಣಮಟ್ಟದ ಕೊರತೆ, ನಕಲಿ ದಾಖಲೆಗಳ ಸೃಷ್ಟಿ ಹಾಗೂ ಹಣಕಾಸು ಅವ್ಯವಹಾರಗಳ ಕುರಿತು ದಾಖಲೆಗಳು ಮತ್ತು ಛಾಯಾಚಿತ್ರಗಳು ತಮ್ಮ ಬಳಿ ಇರುವುದಾಗಿ ಸಂಘ ಹೇಳಿದೆ.
ಈ ಹಿನ್ನೆಲೆೆಯಲ್ಲಿ, ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಗ್ರ ತನಿಖಾ ಸಮಿತಿ ರಚಿಸಿ, ಎಲ್ಲ ಟೆಂಡರ್ ಕಾಮಗಾರಿಗಳ ಪರಿಶೀಲನೆ ನಡೆಸಬೇಕು ಎಂದು ಸಂಘ ಒತ್ತಾಯಿಸಿದೆ. ಅನರ್ಹ ಗುತ್ತಿಗೆದಾರರ ಇಎಂಡಿ ಮತ್ತು ಎಫ್‌ಡಿ ಮೊತ್ತಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದರೊಂದಿಗೆ, ನೀಡಲಾದ ಟೆಂಡರ್ ಆದೇಶಗಳನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿದೆ. ಸಂಬಂಧಿತ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಎಫ್‌ಐಆರ್ ದಾಖಲಿಸಿ, ತಪ್ಪಿತ್ತರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಸಂಬಂಧಪಟ್ಟ ಅಧಿಕಾರಿಗಳನ್ನು ತಕ್ಷಣ ಸೇವೆಯಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಲಾಗಿದೆ.
ರಾಜ್ಯಾಧ್ಯಕ್ಷ ನರಸಿಂಹ ನಾಯಕ ಕೆ.ಎನ್ ಅವರ ನೇತೃತ್ವದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಂಘದ ಮುಖಂಡರು ಉಪಸ್ಥಿತರಿದ್ದರು. ವರದಿ. ಮಂಜುಳಾ ರೆಡ್ಡಿ.

Related Articles

Leave a Reply

Your email address will not be published. Required fields are marked *

Back to top button