ಸಂಪಾದಕೀಯ

ಒಡಿಶಾ ಹೈಕೋರ್ಟ್ ನ ಹಿರಿಯ ನ್ಯಾಯಮೂರ್ತಿಗಳಾಗಿದ್ದ ಶ್ರೀ ಕೃಷ್ಣ ಎಸ್ ದೀಕ್ಷಿತ್ ನಿವೃತ್ತಿ. S. Sureshkumar. Ex. Min. M. L. A. Rajajinagar

ಒಡಿಶಾ ಹೈಕೋರ್ಟ್ ನ ಹಿರಿಯ ನ್ಯಾಯಮೂರ್ತಿಗಳಾಗಿದ್ದ ಶ್ರೀ ಕೃಷ್ಣ ಎಸ್ ದೀಕ್ಷಿತ್ ಎರಡು ದಿನಗಳ ಹಿಂದೆ ನಿವೃತ್ತಿ ಹೊಂದಿದರು.

ಕರ್ನಾಟಕ ನ್ಯಾಯಾಂಗ ಕ್ಷೇತ್ರದಲ್ಲಿ ಅತ್ಯುತ್ತಮ ಹೆಸರು ಗಳಿಸಿದ್ದ ಶ್ರೀ ಕೃಷ್ಣ ಎಸ್ ದೀಕ್ಷಿತ್ ನಮ್ಮ ರಾಜಾಜಿನಗರ ಕ್ಷೇತ್ರದ ಶಾರದಾ ಕಾಲೋನಿ ನಿವಾಸಿ ಎಂಬುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ.

ತಮ್ಮ ವೃತ್ತಿಜೀವನದಲ್ಲಿ 39, 572 ತೀರ್ಪುಗಳನ್ನು ಪ್ರಕಟಿಸಿರುವ ಹೆಗ್ಗಳಿಕೆ ಶ್ರೀ ಕೃಷ್ಣ ದೀಕ್ಷಿತರದು.

ತಮಗೆ ಆಸಕ್ತಿ ಇರುವ ಎಲ್ಲಾ ವಿಷಯಗಳಲ್ಲಿಯೂ ಆಳವಾದ ಅಧ್ಯಯನ ಮಾಡುವ ಪ್ರವೃತ್ತಿ ಈ ಮಹನೀಯರು.

ಅವರ ಅನೇಕ ಭಾಷಣಗಳನ್ನು, ಲೇಖನಗಳನ್ನು ಆಲಿಸಿರುವ ಮತ್ತು ಓದಿರುವ ಅದೃಷ್ಟ ನನ್ನದು.

ಅವರೊಡನೆ ಕುಳಿತು ವಿವಿಧ ವಿಷಯಗಳ ಬಗ್ಗೆ ಸಂವಾದ ನಡೆಸಿರುವ ಸುಕೃತ ನನ್ನದು.

ಅವರೊಮ್ಮೆ ನನಗೆ ಹೇಳಿದ್ದರು “ನಿಮ್ಮದೆಲ್ಲಾ Horizontal Reading. ನನ್ನದು Vertical Reading. ಹಾಗಾಗಿ ನಾನು ಓದುವ ವೇಗ ಜಾಸ್ತಿ ” ಎಂದು.

ನಮ್ಮ ನ್ಯಾಯಾಂಗ ಕ್ಷೇತ್ರದಲ್ಲಿ ಅವರನ್ನು ನಡೆದಾಡುವ ವಿಶ್ವಕೋಶ ಎಂದೇ ಗುರುತಿಸಲಾಗುತ್ತದೆ.

ನ್ಯಾಯಾಂಗ ಕ್ಷೇತ್ರದ ಅನೇಕ ಹಿರಿಯರ ಬಗ್ಗೆ ಶ್ರೀ ಕೃಷ್ಣ ಎಸ್ ದೀಕ್ಷಿತ್ ಬರೆದಿರುವ ಲೇಖನಗಳು ಅತ್ಯಂತ ಮಹತ್ವಪೂರ್ಣ ವಾಗಿವೆ.

ಅವರ ಅಧ್ಯಯನದಿಂದ ಕೂಡಿದ ಪಾಂಡಿತ್ಯ, ಒಟ್ಟು ಸಮಾಜ ಮತ್ತು ದೇಶದ ಕುರಿತು ಅವರಿಗಿರುವ ಕಳಕಳಿ ಮತ್ತು ತುಡಿತ ನಿಜಕ್ಕೂ ಮಹಾನ್.

ಕರ್ನಾಟಕ ಲೋಕಸೇವಾ ಆಯೋಗದ ಕೆಟ್ಟ ಕಾರ್ಯವೈಖರಿ ಕುರಿತು ಅವರು ನಡೆಸಿದ ವಿಚಾರಣೆ ಸಂದರ್ಭದಲ್ಲಿ ಅವರಿಂದ ಬಂದ ಸಾತ್ವಿಕ ಆಕ್ರೋಶದಿಂದ ಕೂಡಿದ್ದ ಮಾತುಗಳು ಮತ್ತು ಹೊರಬಿದ್ದ ಮಹತ್ವಪೂರ್ಣ ಆದೇಶ ಎಂದೆಂದಿಗೂ ಮಾರ್ಗದರ್ಶಕ.

2024 ರಲ್ಲಿ ನಾನು ತೀವ್ರ ಅನಾರೋಗ್ಯಕ್ಕೆ ಸಿಲುಕಿದ್ದಾಗ, ಅವರು ಓರ್ವ ಗೆಳೆಯರ ಮೂಲಕ ತಲುಪಿಸಿದ್ದ ಚೈತನ್ಯದಾಯಿ ಮಾತುಗಳು ನನಗೆ ಸ್ಥೈರ್ಯ ತುಂಬಿದ್ದವು.

ಕ್ಷಿಪ್ರಗತಿಯ ತೀರ್ಪು ಪ್ರಕಟಣೆಯಲ್ಲಿ ದೇಶದ ಅಗ್ರೇಸರ ನ್ಯಾಯಮೂರ್ತಿ ಎಂಬ ಹೆಗ್ಗಳಿಕೆಯ ಶ್ರೀ ದೀಕ್ಷಿತ್ ಅವರ ಸಮಾಜಮುಖಿ ಚಿಂತನೆಯಿಂದ ಕೂಡಿದ ಸೇವೆಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಧನ್ಯವಾದಗಳು.

Related Articles

Leave a Reply

Your email address will not be published. Required fields are marked *

Back to top button