ಧಾರ್ಮಿಕ ವಿಷಯದಲ್ಲಿ ಸ್ಪಷ್ಟವಾದ ತಿಳುವಳಿಕೆ ಇಲ್ಲದೆ ಗೊಂದಲ ಸೃಷ್ಟಿಸುತ್ತಿರುವ ಕನೇರಿ ಶ್ರೀಗಳು.

ಗೊಂದಲ ಸೃಷ್ಟಿಸುತ್ತಿರುವ ಕನೇರಿ ಶ್ರೀ ಗಳು.
ಧಾರ್ಮಿಕ ವಿಷಯದಲ್ಲಿ ಸ್ಪಷ್ಟವಾದ ತಿಳುವಳಿಕೆ ಇಲ್ಲದೆ ಸಮಾಜದಲ್ಲಿ ಗೊಂದಲ ಸೃಷ್ಟಿಸಿ ಜನರ ಮನಸ್ಸುಗಳು ಒಡೆದು ದಿಕ್ಕು- ದೆಸೆ ತಪ್ಪಿಸುತ್ತಿರುವ, ಮತ್ತು ಸ್ವತಃ ಗೊಂದಲಕ್ಕೆ ಒಳಗಾಗುತ್ತಿರುವ ಕನೇರಿ ಶ್ರೀಗಳಿಗೆ ಒಂದು ಕಿವಿ ಮಾತು . ತಾವು ಬಸವಣ್ಣನ ನಾಡಿನಿಂದ ಬೆಳೆದು ಬಂದವರು. ನಿಮಗೆ ಬಸವಣ್ಣನವರ ಬಗ್ಗೆ ಸ್ಪಷ್ಟ ತಿಳುವಳಿಕೆ ಇಲ್ಲವೆಂದರೆ ನಂಬಲಾಗದು. ತಾವು ಉದ್ದೇಶಪೂರ್ವಕವಾಗಿ ಗೊಂದಲವನ್ನು ಸೃಷ್ಟಿಸಿ, ಸಮಾಜಕ್ಕೆ ದಿಕ್ಕು ತಪ್ಪಿಸುತ್ತಿದ್ದೀರಿ. ದಯವಿಟ್ಟು ಬಸವಣ್ಣನವರ ವಿಚಾರಗಳನ್ನು ಸನಾತನ ಹಿಂದೂ ಧರ್ಮಕ್ಕೆ ಒತ್ತೆ ಇರಿಸಿ, ಅಪಪ್ರಚಾರ ಮಾಡುತ್ತಿರುವುದು ಸರಿಯಾದ ಕ್ರಮವಲ್ಲ. ದಿನಾಂಕ 18 5 2026 ರಂದು ಶಹಾಪೂರ ನಲ್ಲಿ ಏರ್ಪಡಿಸಿರುವ ಬಸವಾದಿ ಶಿವಶರಣ ಹಿಂದೂ ಸಮಾವೇಶ ನಿಜಕ್ಕೂ ಒಂದು ಅರ್ಥವಿಲ್ಲದ ಕಾರ್ಯಕ್ರಮವಾಗಿದೆ. ಬಸವಾದಿ ಶರಣರಿಗೂ ಸನಾತನ ಹಿಂದೂ ಧರ್ಮಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ. ತಾತ್ವಿಕವಾಗಿ ಸೈದ್ಧಾಂತಿಕವಾಗಿ ಅವೆರಡು ಎಣ್ಣೆ ಸೀಗೆಕಾಯಿ ಇದ್ದ ಹಾಗೆ. ಪರಸ್ಪರ ವಿರುದ್ಧ ರೇಖೆಯಲ್ಲಿ ಸಂಚರಿಸುವ ವಿಚಾರಧಾರೆಗಳು ಅವು. ವೈದಿಕ ಸಂಪ್ರದಾಯದ ವಿರುದ್ಧ ವರ್ಣಾಶ್ರಮ ವ್ಯವಸ್ಥೆಯನ್ನು ಕಿತ್ತು ಬಿಸಾಕುವುದಕ್ಕಾಗಿ, ಹೋಮ ಹವನಗಳನ್ನು ವಿರೋಧಿಸುವುದಕ್ಕಾಗಿ, ದೇವಾಲಯ ಹಾಗೂ ಪೂಜಾರಿ ಸಂಸ್ಕೃತಿಯನ್ನು ಕಿತ್ತು ಬಿಸಾಕುವುದಕ್ಕಾಗಿ ಹುಟ್ಟಿದ್ದು ಬಸವಾದಿ ಶರಣರ ವಚನ ಕ್ರಾಂತಿ. ಕಲ್ಯಾಣದಲ್ಲಿ ಅಂತರ್ ಜಾತಿಯ ವಿವಾಹ ಗೈಯ್ದು ಅದಕ್ಕಾಗಿಯೆ ಜೀವ ತೆತ್ತವರು ಶರಣರು. ವಚನ ಚಳುವಳಿಯು ಸಮ ಸಮಾಜ ನಿರ್ಮಾಣಕ್ಕಾಗಿ ನಡೆದ ವಿನೂತನ ನಡೆ ಎಂಬ ವಿಷಯ ಸ್ಪಷ್ಟವಾಗಿದ್ದರೂ ಕೂಡ ಅನಾವಶ್ಯಕವಾಗಿ ಆಳವಾದ ಅಧ್ಯಯನವಿಲ್ಲದ, ಮುಗ್ಧ ಮನಸ್ಸುಗಳ ದಿಕ್ಕು ತಪ್ಪಿಸಿ ಬಸವಾದಿ ಶರಣ ಸಾಹಿತ್ಯ ಮತ್ತು ಹಿಂದೂ ಧರ್ಮ ಒಂದೇ ಎಂದು ಹೋಲಿಕೆ ಮಾಡಿ ಈ ಕಾರ್ಯಕ್ರಮ ಮಾಡುತ್ತಿರುವುದು ನಿಜಕ್ಕೂ ಖಂಡನೀಯ. ಬಸವಣ್ಣನವರ ಪೂರ್ವಾಶ್ರಮದ ಜೀವನ ವೈದಿಕ ಸಂಪ್ರದಾಯದಿಂದ ಕೂಡಿತ್ತು. ತಾನು ಹುಟ್ಟಿದ ಸನಾತನ ಧರ್ಮದ ಎಲ್ಲಾ ಅಂಧ ಆಚರಣೆಗಳನ್ನು ಮತ್ತು ಮೂಢನಂಬಿಕೆಗಳನ್ನು ಕಿತ್ತು ಬಿಸಾಕಿ, ಅವುಗಳನ್ನು ನಿರ್ದಯವಾಗಿ ಖಂಡಿಸಿ ಅದಕ್ಕೆ ವಿರುದ್ಧವಾದ ಬಸವ ಧರ್ಮ ಅಥವಾ ಲಿಂಗಾಯಿತ ಧರ್ಮವನ್ನು ಬಸವಣ್ಣನವರು ಸ್ಥಾಪಿಸಿದರು. ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹಿಂದುವಾಗಿ ಜನಿಸಿದರು ಆದರೆ ಅವರು ಬೌದ್ಧ ಧರ್ಮವನ್ನು ಸೇರಿ ಬುದ್ಧಿಷ್ಟರಾದರು. ಹಾಗೆ ಬಸವಣ್ಣನವರು ಕೂಡ ಹಿಂದೂ ಧರ್ಮದ ವರ್ಣಾಶ್ರಮ ವ್ಯವಸ್ಥೆಯ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರೂ ಅದನ್ನು ತ್ಯಜಿಸಿ ಲಿಂಗಾಯಿತ ಧರ್ಮವನ್ನು ಸ್ಥಾಪಿಸಿದರು. ಇದರ ಮೂಲಕ ಮೌಲಿಕವಾದ, ಪ್ರಗತಿಪರ ವಿಚಾರಗಳನ್ನು ಕೊಟ್ಟರು. ಸನಾತನ ಹಿಂದೂ ಧರ್ಮಕ್ಕೂ ಲಿಂಗಾಯತ ಧರ್ಮಕ್ಕೂ ಯಾವುದೇ ಸಂಬಂಧವಿಲ್ಲ. ಅವೆರಡೂ ಪರಸ್ಪರ ವಿರೋಧ ದಿಕ್ಕಿನಲ್ಲಿ ಚಲಿಸುವಂತಹ ಸಿದ್ಧಾಂತಗಳಾಗಿವೆ. ಇದರ ಅರಿವಿದ್ದು ಇಲ್ಲದಂತೆ ವರ್ತಿಸಿ ಹಿಂದೂ ಧರ್ಮಕ್ಕೆ ಬಸವಾದಿ ಶರಣ ಸಾಹಿತ್ಯ ಧರ್ಮವನ್ನು ಸೇರಿಸಿ ಸಮಾವೇಶ ಮಾಡುವುದರಿಂದ ಇದು ಲಿಂಗಾಯತ ಧರ್ಮ ಸಿದ್ಧಾಂತದ ದಿಕ್ಕು ತಪ್ಪಿಸುವ ಹುನ್ನಾರು ಆಗಿದೆ. ಆದ್ದರಿಂದ ಕನೇರಿ ಶ್ರೀಗಳು ಇಂತಹ ಸೂಕ್ಷ್ಮವಾದ ಧರ್ಮ ವಿಚಾರವೆಂಬ ಜೇನುಗೂಡಿಗೆ ಕೈ ಹಾಕದೆ ತಮ್ಮ ಸನಾತನ ಹಿಂದೂ ಧರ್ಮದ ಪ್ರಚಾರ ತಾವು ಮಾಡಿದರೆ ನಮ್ಮಿಂದ ಯಾವ ಅಭ್ಯಂತರವೂ ಇಲ್ಲ. ಇಂತಹ ಜಾಗೃತ ಸಮಾವೇಶ ಸಾವಿರ ಮಾಡಲಿ ನಮ್ಮ ತಕರಾರಿಲ್ಲ. ಆದರೆ ಅದರ ಹಿಂದೆ ಬಸವಾದಿ ಶರಣ ಹಿಂದೂ ಸಮಾವೇಶ ಎಂದು ಸೇರಿಸಿರೋದು ಸರಿಯಾದ ಕ್ರಮವಲ್ಲ. ಕನ್ನೆರಿ ಶ್ರೀಗಳು ದಯವಿಟ್ಟು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ನೇತೃತ್ವದಲ್ಲಿ ಈ ಸಮಾವೇಶ ನಡೆಸುತ್ತಿರುವುದು ಲಿಂಗಾಯತ ಧರ್ಮಕ್ಕೆ ಬಸವ ತತ್ವಕ್ಕೆ ಅಪಚಾರ ಮಾಡಿದಂತಾಗುತ್ತದೆ. ದಯವಿಟ್ಟು ಅವರು ಈ ಧರ್ಮ ಒಡೆಯುವ ಕೆಲಸ ಮಾಡಬಾರದೆಂದು ವಿನಮ್ರವಾಗಿ ಪ್ರಾರ್ಥಿಸಿಕೊಳ್ಳುತ್ತೇನೆ. ಹಿಂದೂ ಧರ್ಮ ಆಚರಣೆ ಸಿದ್ದಾಂತಕ್ಕೆ ವಿರುದ್ಧವಾಗಿ ಹುಟ್ಟಿರುವುದು ಬಸವ ಧರ್ಮವಾಗಿದೆ. ಲಿಂಗಾಯತ ಧರ್ಮವಾಗಿದೆ. ಹಿಂದುಗಳು ಲಿಂಗಾಯತರಲ್ಲ. ಲಿಂಗಾಯಿತರು ಹಿಂದುಗಳಲ್ಲ ಎಂಬ ಅರಿವು ಸ್ಪಷ್ಟವಾಗಿರಲಿ. ಇದರ ಸ್ಪಷ್ಟ ಅರಿವಿಲ್ಲದ ವೀರಶೈವ ಮಠಾಧೀಶರು ಭಾಗವಹಿಸುತ್ತಿರುವುದು ದುರಂತದ ಸಂಗತಿಯಾಗಿದೆ.
ಬಸವಾದಿ ಶರಣರು ಸೈದ್ಧಾಂತಿಕ ದಿಕ್ಕು ತಪ್ಪಿದ ಮಠಾಧೀಶರಿಗೆ ಸದ್ಬುದ್ಧಿ ಕೊಡಲಿ ಎಂದು ಆಶಿಸುತ್ತೇನೆ.
ಪ್ರೊ ಶಿವರಾಜ ಪಾಟೀಲ, ಕುಲಾಲಿ. ಮಹಾಂತಪೂರ.



