ರಕ್ಷಾ ಬಂಧನ ಆಚರಣೆಯ ಹಿಂದಿನ ಒಂದು ಕಥೆ : ಶ್ರೀ ವೆಂಕಟೇಶ ಗುರುಜೀ. ಜ್ಯೋತಿಷ್ಯ ತಜ್ಞರು ಬೆಂಗಳೂರು.

ರಕ್ಷಾ ಬಂಧನ
19-08-2024. ಸೋಮವಾರ
ಶ್ರಾವಣ ಮಾಸದ ಪೂರ್ಣಿಮಾ ತಿಥಿಯಂದು ರಕ್ಷಾ ಬಂಧನ ಆಚರಿಸಲು ಶಾಸ್ತ್ರ ಹೇಳಿದೆ.
ಇದರ ಬಗ್ಗೆ ಭವಿಷ್ಯಪುರಾಣದಲ್ಲಿ, ಬ್ರಹ್ಮವೈವರ್ತದಲ್ಲಿ ಹೇಳಲಾಗಿದೆ. ಹಾಗೆಯೇ ಧರ್ಮಸಿಂಧು, ನಿರ್ಣಯಸಿಂಧು, ಹೇಮಾದ್ರಿ, ಮದನರತ್ನ ಇತ್ಯಾದಿ ಧರ್ಮಶಾಸ್ತ್ರ ಗ್ರಂಥಗಳಲ್ಲಿ ವಿವರಿಸಲಾಗಿದೆ.
ಈ ಹಬ್ಬದ ದಿನ ಸಹೋದರಿಯರು ತಮ್ಮ ಸಹೋದರನ ಮುಂಗೈಗೆ ರಾಖಿಯನ್ನು ಕಟ್ಟಿ ಆರತಿ ಮಾಡಿ, ಸೋದರನ ಆಶೀರ್ವಾದವನ್ನು ಬೇಡುತ್ತಾರೆ. ತಂಗಿಯ ರಕ್ಷಣೆ ಅಣ್ಣನಿಂದ, ಅಣ್ಣನ ರಕ್ಷಣೆ ತಂಗಿಯಿಂದ ಎಂಬ ಪರಸ್ಪರ ಭ್ರಾತೃತ್ವದ ಭಾವನೆಯನ್ನು ದಟ್ಟ ಗೊಳಿಸುವ ಹಬ್ಬ ಇದಾಗಿದೆ.. ಪ್ರತಿಯೊಬ್ಬ ಸಹೋದರಿಯು ಸಮಾಜದ ದುಷ್ಟಶಕ್ತಿಗಳಿಂದ ರಕ್ಷಿಸೆಂದು ತನ್ನ ಸಹೋದರನ ಮುಂಗೈಗೆ ರಾಖಿಯನ್ನು ಕಟ್ಟುತ್ತಾಳೆ. ಪ್ರತಿಯೊಬ್ಬ ಸಹೋದರನೂ ಈ ಸಮಯದಲ್ಲಿ ಸಹೋದರಿಯೆಡೆಗೆ ತನ್ನ ಭ್ರಾತತ್ವ ಪ್ರೇಮವನ್ನು ಉಜ್ವಲಗೊಳಿಸಬೇಕೆಂಬುದು ರಕ್ಷಾಬಂಧನ ಹಬ್ಬದ ನೀತಿಯಾಗಿದೆ.
ರಕ್ಷಾ ಬಂಧನ ಆಚರಣೆಯ ಹಿಂದಿನ ಒಂದು ಕಥೆ :-
ಒಮ್ಮೆ ರಾಕ್ಷಸರು ಹಾಗೂ ದೇವತೆಗಳ ನಡುವೆ ಯುದ್ಧವಾಗುತ್ತಿರುತ್ತದೆ. ಯುದ್ಧದ ಸಮಯದಲ್ಲಿ ದೇವತೆಗಳು ಸೋಲುವ ಘಟ್ಟ ತಲುಪುತ್ತಾರೆ. ಸೋಲುವ ಭೀತಿಯಲ್ಲಿದ್ದ ಇಂದ್ರ ದೇವನು ಬೃಹಸ್ಪತಿಯ ಮೊರೆ ಹೋಗುತ್ತಾನೆ. ಇಂದ್ರ ಮೊರೆ ಕೇಳಿದ ಬೃಹಸ್ಪತಿ ದೇವನು ಇಂದ್ರನ ಪತ್ನಿ ಇಂದ್ರಾಣಿಗೆ ಸಲಹೆ ನೀಡುತ್ತಾನೆ. ಬೃಹಸ್ಪತಿಯ ಸಲಹೆಯಂತೆ ಇಂದ್ರಾಣಿ ರೇಷ್ಮೆಯ ದಾರವನ್ನು ರಕ್ಷಣೆ ಹಾಗೂ ಯುದ್ಧದಲ್ಲಿ ಗೆದ್ದು ಬರಲು ಜಯದ ಸಂಕೇತವಾಗಿ ರೇಷ್ಮೆಯ ದಾರವೊಂದನ್ನು ಇಂದ್ರನ ಕೈಗೆ ಕಟ್ಟುತ್ತಾಳೆ. ನಂತರ ಇಂದ್ರ ಯುದ್ಧದಲ್ಲಿ ಜಯ ಸಾಧಿಸುತ್ತಾನೆ.
ಪೌರಾಣಿಕ ಕಥೆ : ಕೃಷ್ಣ ಮತ್ತು ದ್ರೌಪದಿ ಸೋದರತೆಯ ಸಂಬಂಧದ ಸಂಕೇತ ಈ ರಕ್ಷಾ ಬಂಧನ ಎಂದು ಹೇಳಲಾಗುತ್ತದೆ. ಶಿಶುಪಾಲನ ನೂರು ತಪ್ಪುಗಳು ಕ್ಷಮಿಸಿದ ಶ್ರೀಕೃಷ್ಣನು ಶಿಶುಪಾಲನನ್ನು ವಧಿಸಲು ತನ್ನ ಶ್ರೀ ಚಕ್ರವನ್ನು ಕಳುಹಿಸುತ್ತಾನೆ. ಶ್ರೀಚಕ್ರ ಕೈಯಿಂದ ಹೋಗುವ ವೇಳೆ ಶ್ರೀಕೃಷ್ಣನ ಬೆರಳು ಗಾಯವಾಗಿ ರಕ್ತ ಸುರಿಯುತ್ತಿರುತ್ತದೆ. ಇದನ್ನು ಕಂಡ ದ್ರೌಪದಿ ಹಿಂದುಮುಂದು ಯೋಚಿಸದೆ ತಾನುಟ್ಟಿದ್ದ ಸೀರೆಯ ಸೆರಗನ್ನು ಹರಿದು ಕೃಷ್ಣನ ಬೆರಳಿಗೆ ಕಟ್ಟುತ್ತಾಳೆ. ಇದನ್ನು ಕಂಡ ಶ್ರೀಕೃಷ್ಣ ತನಗೆ ಏನು ಬೇಕು ಎಂದು ಕೇಳಿಕೋ ಎಂದು ಹೇಳುತ್ತಾನೆ. ಈ ವೇಳೆ ದ್ರೌಪದಿ ಜೀವನ ಇರುವವರೆಗೂ ಒಳ್ಳೆಯ ಸಹೋದರಿಯಾಗಿತ್ತೇನೆ ಎಂದು ಹೇಳುತ್ತಾಳೆ. ದ್ರೌಪದಿಯ ಈ ಮಾತುಗಳನ್ನು ಕೇಳಿದ ಶ್ರೀಕೃಷ್ಣನು ದ್ರೌಪದಿಯ ಸಹೋದರನಾಗಿ ನಿಂತು ಸಂಕಷ್ಟದ ಸಮಯದಲ್ಲಿ ಕಾಪಾಡುವುದಾಗಿ ಹೇಳುತ್ತಾನೆ. ಇದರಂತೆ ದ್ರೌಪದಿಯ ವಸ್ತ್ರಾಪಹರಣ ಸಂದರ್ಭದಲ್ಲಿ ಸಹೋದರನಾಗಿ ನಿಂತ ಶ್ರೀಕೃಷ್ಣನು ದ್ರೌಪದಿಗೆ ಅಕ್ಷಯ ಸೀರೆಯನ್ನು ದಯಪಾಲಿಸಿ ಆಕೆಯನ್ನು ರಕ್ಷಿಸುತ್ತಾನೆ. ಅಂದಿನಿಂದ ಇಂದಿನವರೆಗೂ ಉತ್ತರ ಭಾರತದಲ್ಲಿ ವಿಶೇಷವಾಗಿ ರಕ್ಷಾಬಂಧನವನ್ನು ಹಬ್ಬವಾಗಿ ಆಚರಿಸಲಾಗುತ್ತದೆ.
ಪ್ರಾಚೀನ ಕಾಲದಲ್ಲಿ ಎಲ್ಲರಿಗೂ ರಕ್ಷಾಸೂತ್ರವನ್ನು ಕಟ್ಟುವ ಪದ್ಧತಿ ಇದ್ದಿತು. ಹೆಂಡತಿಯು ಗಂಡನಿಗೆ, ಗುರುಗಳು ಶಿಷ್ಯರಿಗೆ, ಪುರೋಹಿತರು ರಾಜರಿಗೆ, ಅಜ್ಜಿ-ತಾಯಂದಿರು ಮಕ್ಕಳಿಗೆ-ಮೊಮ್ಮಕ್ಕಳಿಗೆ ಇತ್ಯಾದಿ. ಇಷ್ಟೇ ಏಕೆ, ಮನೆಯ ಗೋಮಾತೆಗೂ ಕೂಡ ರಕ್ಷಾ ಕಟ್ಟಲಾಗುತ್ತಿತ್ತು! ಯಾರ ರಕ್ಷಣೆಯನ್ನು ನಾವು ಬಯಸುವೆವೋ ಅವರಿಗೆ ಮಂತ್ರಪೂರಿತವಾದ ರಕ್ಷೆಯನ್ನು ಕಟ್ಟುವುದು. ಕಟ್ಟಿಸಿಕೊಳ್ಳುವವರ ರಕ್ಷಣೆಯೇ ವಿನಹ ಕಟ್ಟುವವರ ರಕ್ಷಣೆಯ ಉದ್ದೇಶ ಅಲ್ಲ! ಇದೆ ರಕ್ಷಾ ಬಂಧನ. ಪುರಾಣಗಳಲ್ಲಿ. ಬಲಿ ಚಕ್ರವರ್ತಿಗೆ ಆತನ ರಾಣಿಯಾದ ವಿಂಧ್ಯಾವಳಿಯು ರಕ್ಷೆ ಕಟ್ಟಿದ್ದುಂಟು.
ರಕ್ಷಾ ಸೂತ್ರ ಕಟ್ಟುವಾಗ ಹೇಳುವ ಮಂತ್ರ ಹೀಗಿದೆ –
येन बद्धो बलि राजा दानवेन्द्रो महाबल: |
तेन त्वां प्रतिबध्नामी रक्षे माचल माचल ||
ಅರ್ಥ – ಯಾವುದರಿಂದ ದಾನವೇಂದ್ರನಾದ ಮಹಾಬಲಿಯು ಬದ್ಧನಾಗಿದ್ದನೋ, ಅದರಿಂದಲೇ ನಿನ್ನನ್ನು ಬಂಧನ ಮಾಡುತ್ತೇನೆ. ಹೇ ರಕ್ಷೆ, ನೀನು ಅಚಲವಾಗಿರು, ಸ್ಥಿರವಾಗಿರು.
ಈ ರೀತಿ ರಕ್ಷಾ-ಸೂತ್ರವನ್ನು ಕಟ್ಟಿಸಿಕೊಂಡವರು ವರ್ಷವಿಡೀ ಸುರಕ್ಷಿತರಾಗಿ, ಸುಖಿಯಾಗಿ, ಯಶಸ್ವಿಗಳಾಗಿ ಇರುತ್ತಾರೆ.
ರಕ್ಷಾಬಂಧನ ಇದು ಮಧುರವಾದ ಭಾವಾನುಬಂಧ,
ಸಹೋದರ ಸಹೋದರಿಯರ ನವೀರಾದ ಭಾವನೆಗಳನ್ನು ರಕ್ಷಾಬಂಧನದ ಮೂಲಕ ಗಟ್ಟಿಗೊಳಿಸುವ ದಿನ. “ಸಹೋದರತ್ವದ ಪ್ರತೀಕ ರಕ್ಷಾಬಂಧನ”~~{🌼🌸🌼}~~
🙏🙏🙏🙏🙏🙏🙏



