ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಗೌರವ ಅಧ್ಯಕ್ಷ ದುರ್ಗಾದಾಸ್ ಯಾದವ್.

ಚುಟುಕು ಸಾಹಿತ್ಯ ಪರಿಷತ್ತಿನ ಆಮಂತ್ರಣ ಪತ್ರಿಕೆ ಬಿಡುಗಡೆ
ಕನಕಗಿರಿ: ಸಾಮಾಜಿಕ ಜಾಲತಾಣಗಳ ಅಬ್ಬರದ ನಡುವೆಯೂ ಪೆನ್ನು–ಪುಸ್ತಕದ ಮೂಲಕ ಸಾಹಿತ್ಯವನ್ನು ಬೆಳೆಸುವ ಹಾಗೂ ಕನ್ನಡ ಸಾಹಿತ್ಯದ ಅಭಿರುಚಿಯನ್ನು ಜನರಲ್ಲಿ ಮೂಡಿಸುವ ಉದ್ದೇಶದಿಂದ ಕನಕಗಿರಿ ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ವತಿಯಿಂದ ಆಯೋಜಿಸಲಾಗುತ್ತಿರುವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಪಟ್ಟಣದ ಗಾಂಧಿ ಭವನದಲ್ಲಿ ಸಾಂಕೇತಿಕವಾಗಿ ಬಿಡುಗಡೆ ಮಾಡಲಾಯಿತು.
ಕನಕಗಿರಿ ಆರಕ್ಷಕ ಠಾಣೆಯ ಪಿಐ ವಿ. ನಾರಾಯಣ, ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಗೌರವ ಅಧ್ಯಕ್ಷ ದುರ್ಗಾದಾಸ್ ಯಾದವ್ ಹಾಗೂ ಹಿರಿಯ ಸಾಹಿತಿ ಶೇಖರ್ ಗೌಡ ಮಾಲಿಪಾಟೀಲ್ ಅವರು ಜಂಟಿಯಾಗಿ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪಿಐ ವಿ. ನಾರಾಯಣ ಅವರು, ಇಂದಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳು ಜನಜೀವನದ ಪ್ರಮುಖ ಭಾಗವಾಗಿವೆ. ಇಂತಹ ಡಿಜಿಟಲ್ ಯುಗದಲ್ಲಿಯೂ ಪೆನ್ನು ಮತ್ತು ಪುಸ್ತಕದ ಮೂಲಕ ಸಾಹಿತ್ಯ ಚಟುವಟಿಕೆಗಳನ್ನು ಮುಂದುವರಿಸಿಕೊಂಡು ಹೋಗಲು ಚುಟುಕು ಸಾಹಿತ್ಯ ಪರಿಷತ್ತು ಮುಂದಾಗಿರುವುದು ಸಂತಸದ ಸಂಗತಿ ಎಂದರು. ಸಾಹಿತ್ಯದ ಮೂಲಕ ಸಮಾಜಕ್ಕೆ ಉತ್ತಮ ಸಂದೇಶಗಳನ್ನು ನೀಡುವಂತಹ ಕಾರ್ಯಕ್ರಮಗಳು ಹೆಚ್ಚು ನಡೆಯಬೇಕು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಗೌರವ ಅಧ್ಯಕ್ಷ ದುರ್ಗಾದಾಸ್ ಯಾದವ್ ಮಾತನಾಡಿ, ಹಿಂದಿನ ಸ್ವಾತಂತ್ರ್ಯ ಹೋರಾಟದ ಕಾಲಘಟ್ಟದಲ್ಲಿ ಸಾಹಿತ್ಯ, ಕವನ, ಬರಹ ಹಾಗೂ ಪತ್ರಿಕೆಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿ, ಸಮಾಜಕ್ಕೆ ಸಂದೇಶಗಳನ್ನು ತಲುಪಿಸುವ ಮಹತ್ವದ ಕಾರ್ಯ ನಡೆದಿತ್ತು. ಸಾಹಿತ್ಯವು ಕೇವಲ ಮನರಂಜನೆಯ ಮಾಧ್ಯಮವಲ್ಲ; ಅದು ಸಮಾಜದ ಚಿಂತನೆಗಳನ್ನು ಬದಲಿಸುವ ಶಕ್ತಿಯನ್ನು ಹೊಂದಿದೆ. ಇಂದಿನ ಯುವಜನತೆ ಸಾಹಿತ್ಯದತ್ತ ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಹಿರಿಯ ಸಾಹಿತಿ ಶೇಖರ್ ಗೌಡ ಮಾಲಿಪಾಟೀಲ್ ಮಾತನಾಡಿ, ಚುಟುಕು ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಎಲ್ಲಾ ಪದಾಧಿಕಾರಿಗಳು, ಸಾಹಿತಿಗಳು, ಸಾಹಿತ್ಯಾಸಕ್ತರು ಹಾಗೂ ಕನ್ನಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಪ್ರತಿಯೊಬ್ಬರೂ ಕವಿತೆ, ಚುಟುಕು, ಲೇಖನ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಬರೆಯುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಪುಸ್ತಕ ಓದುವ ಹಾಗೂ ಪುಸ್ತಕ ಬರೆಯುವ ಸಂಸ್ಕೃತಿ ಮತ್ತೆ ಬಲಗೊಳ್ಳಬೇಕು ಎಂದು ಹೇಳಿದರು.
ಕನ್ನಡ ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆಗೆ ಯುವ ಪೀಳಿಗೆಯ ಪಾಲ್ಗೊಳ್ಳುವಿಕೆ ಅತ್ಯಂತ ಅಗತ್ಯವಾಗಿದ್ದು, ಸಾಹಿತ್ಯಾಸಕ್ತರನ್ನು ಒಂದೇ ವೇದಿಕೆಯಲ್ಲಿ ಸೇರಿಸುವ ಮೂಲಕ ಚುಟುಕು ಸಾಹಿತ್ಯ ಪರಿಷತ್ತು ಉತ್ತಮ ಕಾರ್ಯಕ್ಕೆ ಮುಂದಾಗಿದೆ ಎಂದು ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಚುಟುಕು ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು, ಸಾಹಿತಿಗಳು, ಸಾಹಿತ್ಯಾಸಕ್ತರು ಹಾಗೂ ಕನ್ನಡಾಭಿಮಾನಿಗಳು ಉಪಸ್ಥಿತರಿದ್ದರು. ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಸರಳವಾಗಿ ಹಾಗೂ ಅರ್ಥಪೂರ್ಣವಾಗಿ ನಡೆಯಿತು.
ಈ ಸಂದರ್ಭದಲ್ಲಿ ಕನಕಗಿರಿ ಆರಕ್ಷಕ ಠಾಣೆಯ ಪಿ ಐ. ವಿ. ನಾರಾಯಣ, ಚುಟುಕು ಸಾಹಿತ್ಯ ಪರಿಷತ್ತಿನ ಗೌರವ ಅಧ್ಯಕ್ಷರಾದ ದುರ್ಗಾದಾಸ್ ಯಾದವ್, ಮತ್ತು ಹಿರಿಯ ಸಾಹಿತಿಗಳಾದ ಶೇಖರ್ ಗೌಡ ಮಲಿಪಾಟೀಲ್, ಶರಣಪ್ಪ ಮಹಿಪತಿ ಅಧ್ಯಕ್ಷರು ಬದುಕು ಸಾಹಿತ್ಯ ಪರಿಷತ್ತು ಹನುಮೇಶ ಮಹಿಪತಿ, ಗೌರವ ಸಲಹೆಗಾರರದ ಸೋಮಶೇಖರಯ್ಯ ಸ್ವಾಮಿ ಹಿರೇಮಠ, ಹನುಮೇಶ ಜನಾದ್ರಿ, ಪಂಪನಗೌಡ ಬನ್ನಿಮರ, ವಿರೇಶಯ್ಯ ಸ್ವಾಮಿ, ವೆಂಕಟೇಶ ರೆಡ್ಡಿ, ವೆಂಕೋಬ ಪೂಜಾರ, ಆನಂದ ರ್ಯಾವಣಕಿ, ಹಾಗೂ ಇತರರು ಉಪಸ್ಥಿತರಿದ್ದರು.
ಗೌತಮ್ ಯಾದವ್ ಕನಕಗಿರಿ ಪ್ರಜಾ ಶ್ರೀ ಪತ್ರಿಕೆ ಕೊಪ್ಪಳ ಜಿಲ್ಲಾ ವರದಿಗಾರ:8867257737.




