ಸುದ್ಧಿ

“ಟಿವಿಯವರು ಮಾಡಂತಾರ, ನೀವು ಬ್ಯಾಡಂತೀರಿ, ಸುಮ್ನೆ ಕನ್ಫೂಜನ್ ಕ್ರೀಯೇಟ್ ಮಾಡತೀರಿ”

ಅಮಾವಾಸ್ಯಯ ಗ್ರಹಣ ಭಾರತಕ್ಕೆ ಇಲ್ಲ

ಎಲ್ಲೋ ಬೇರೆ ದೇಶದಲ್ಲಿ ಗ್ರಹಣ ನಡೆದಾಗ ನಮ್ಮ ಕರ್ತವ್ಯ ಏನು ?
ಧಾರ್ಮಿಕ ಆಚರಣೆ ಮಾಡಬೇಕಾ ? ನೀರು ಕುಡಿಯದೇ, ಉಪವಾಸ ಇರಬೇಕಾ ? ರಾಶಿಫಲ ಕೇಳಬೇಕಾ ?

ಮುಖ್ಯ ಪ್ರಶ್ನೆ ಇರುವದು ಗರ್ಭಿಣಿ ಮಹಿಳೆಯರದು. ಸಾಮಾನ್ಯ ಜನರೇನೋ ಕುತೂಹಲದಿಂದ ಗ್ರಹಣದ ಸುದ್ದಿ ನೋಡುತ್ತಾರೆ, ಓದುತ್ತಾರೆ, ಮರೆತುಬಿಡುತ್ತಾರೆ. ಕೆಲವರು ಉಪವಾಸ ಮಾಡುತ್ತಾರೆ ಇನ್ನೂ ಕೆಲವರು ನದಿ ಸಮುದ್ರಗಳಲ್ಲಿ ಸ್ನಾನ-ಜಪ ಇತ್ಯಾದಿ ಮಾಡುತ್ತಾರೆ.

ಆದರೆ ಗರ್ಭಿಣಿಯರಿಗೆ ಅನಾವಶ್ಯಕ ಚಿಂತೆ ಕಾಡುತ್ತದೆ. ಭಯ ಇರುತ್ತದೆ. ಆ ಗರ್ಭಿಣಿ ಸಹೋದರಿಯ ಬಂಧುಬಳಗದ ಎಲ್ಲರಿಗೂ ಒಂದೇ ಚಿಂತೆ. ಅವಳು ಏನು ಮಾಡಬೇಕು ? ಎಷ್ಟುಹೊತ್ತು ಎಚ್ಚರವಾಗಿ ಇರಬೇಕು ? ಊಟ ಮಾಡಬಾರದಾ ? ಎಂದು ತಮಗೆ ತಿಳಿದ ಜ್ಯೋತಿಷಿಗಳಲ್ಲಿ ಕೇಳುತ್ತಾರೆ. ಪ್ರತಿಬಾರಿ ನನಗೆ ಹತ್ತಾರು ಫೋನ್ ಕರೆಗಳು ಬರುತ್ತವೆ, ಬೇಸರವಿಲ್ಲದೇ ನಾನೂ ಕೂಡ ಉತ್ತರಿಸುತ್ತೇನೆ.

ಈ ಗ್ರಹಣ ನಮಗೆ ಕಾಣಿಸುವದಿಲ್ಲ, ಯಾವದೇ ನಿಯಮ ಇಲ್ಲಾ, ಆಚರಣೆ ಇಲ್ಲಾ, ನೀವು ಆರಾಮವಾಗಿ ಎಂದಿನಂತೆ ಊಟ ಮಾಡಿ, ಎಚ್ಚರ ಇರುವ ಕಾರಣ ಇಲ್ಲ. ಹೆದರಬೇಡಿ ಹೊರಗೆ ಎಲ್ಲಾದರೂ ಹೋಗುವದಿದ್ದರೆ ಹೋಗಿ ಪರವಾಇಲ್ಲಾ,

ಎಂದು ನಾನು ಏನೇ ಹೇಳಿದರೂ ಕೊನೆಗೆ “ಟಿವಿ ಒಳಗ ಹೇಳ್ಯಾರ್‍ರೀ… ಅದಕ ಕೇಳೀದೆ” ನನ್ನ ಮಾತಿನಿಂದ ಆ ಸಹೋದರಿಯ ಸಂಶಯಕ್ಕೆ ಪರಿಹಾರ ಸಿಗುವದೇ ಇಲ್ಲಾ. “ಒಪ್ಪತ್ತು ಉಪವಾಸ ಮಾಡಂದಾರ್‍ರೀ ಮತ್ತ ರಾತ್ರಿ ಎಚ್ಚರ ಇರಲಿಕ್ಕೆ ಹೇಳ್ಯಾರ್‍ರೀ..” ಎನ್ನುತ್ತಾ ತಮ್ಮ ಸಂಶಯವನ್ನು ಮತ್ತೆ ಮತ್ತೆ ಹೇಳುತ್ತಾರೆ.

ವರ್ಷದಲ್ಲಿ ಸುಮಾರು ಐದು ಗ್ರಹಣಗಳು ಸಂಭವಿಸುತ್ತವೆ. ಒಂದು ಪ್ರದೇಶದಲ್ಲಿ ಒಂದೋ ಎರಡೋ ಕಾಣಿಸುತ್ತವೆ. ಕೆಲವು ಪ್ರದೇಶಕ್ಕೆ ಇಡೀ ವರ್ಷ ಯಾವದೇ ಗ್ರಹಣ ಕಾಣಿಸುವದಿಲ್ಲ.

(ಮುಂಬರುವ ವಿಶ್ವಾವಸು ಸಂವತ್ಸರದಲ್ಲಿಯ ಭಾದ್ರಪದ ಶುಕ್ಲ ಹುಣ್ಣಿಮೆಯ ಗ್ರಹಣ ಕಾಣಿಸಲಿದೆ)

ಗ್ರಹಣ ಕಾಣಿಸುವ ಪ್ರದೇಶದಲ್ಲಿ ಮಾತ್ರ ಆಚರಣೆ ಇರುತ್ತದೆ. ಅದೂ ಕೂಡ ಧಾರ್ಮಿಕ ಆಚರಣೆ ಹೊರತು ಭಯ ಹುಟ್ಟಿಸುವದಕ್ಕಾಗಿ ಅಲ್ಲ.

ಕೆಲವು ಟಿವಿ ಜ್ಯೋತಿಷಿಗಳು, ಯೂಟ್ಯೂಬ್ ಜ್ಯೋತಿಷಿಗಳು ಗ್ರಹಣದ ವಿಚಾರದಲ್ಲಿ ತಮ್ಮ ಅನಿಸಿಕೆಯನ್ನು, ರಾಶಿಫಲವನ್ನು ಹೇಳುತ್ತಾರೆ. ಆದರೆ ಅದು ಮುಗ್ಧ ಗರ್ಭಿಣಿ ಮಹಿಳೆಯರ ಚಿಂತೆಗೆ ಕಾರಣವಾಗುತ್ತದೆ. ಜ್ಯೋತಿಷ್ಯಶಾಸ್ತ್ರದಲ್ಲಿ ವಿಚಾರಕ್ಕೆ ಮುಕ್ತ ಅವಕಾಶವಿದೆ. ಫಲಚಿಂತನೆಗೆ ಯಾವದೇ ನಿರ್ಬಂಧವಿಲ್ಲ. ಪ್ರಶ್ನೆಗಳಿಗೂ ಅಷ್ಟೇ ಸ್ವಾತಂತ್ರವಿದೆ.

ಆಚರೆಣೆ ಹೀಗೇ ಮಾಡಬೇಕೆಂದು ಯಾರ ಒತ್ತಡವೂ ಇರುವದಿಲ್ಲ. ಎಲ್ಲ ಜ್ಯೋತಿಷಿಗಳೂ ತಮಗೆ ತೋಚಿದ ಫಲವನ್ನು ಹೇಳುತ್ತಾರೆ. ಹೇಳಬೇಕು ! ಫಲ ಹೇಳುವದೇ ಜ್ಯೋತಿಷಿಗಳ ಕೆಲಸ ! ಆದರೆ ಭಯ ಹುಟ್ಟಿಸುವಂತೆ ಹೇಳಬಾರದು ಎನಿಸುತ್ತದೆ. ಎಲ್ಲೋ ಗ್ರಹಣವಾದರೆ ಇನ್ನೆಲ್ಲೋ ಜನ ಉಪವಾಸ ಮಾಡುವದು, ಎಲ್ಲೋ ಮಳೆಯಾದರೆ ಇನ್ನೆಲ್ಲೋ ಛತ್ರಿ ಹಿಡಿಯುವದು ಅವಶ್ಯವಿಲ್ಲ.

ಇದು ನನ್ನ ಹಾಗೇ ಅನೇಕ ಜ್ಯೋತಿಷಿಗಳ ವಿಚಾರವೂ ಹೌದು. ಜನಸಾಮಾನ್ಯರಂತೂ ಸರೀನೇಸರಿ, “ಟಿವಿಯವರು ಮಾಡಂತಾರ, ನೀವು ಬ್ಯಾಡಂತೀರಿ, ಸುಮ್ನೆ ಕನ್ಫೂಜನ್ ಕ್ರೀಯೇಟ್ ಮಾಡತೀರಿ” ಎಂದು ನಮ್ಮ ಮೇಲೆ ಸಿಟ್ಟು ಮಾಡುತ್ತಾರೆ.

ಕೊನೆ ಮಾತು..
ಇದೆ ದಿನಾಂಕ 02 -10- 2024 ರಂದು ಚಿಲಿ – ಅರ್ಜೆಂಟೈನಾ ದೇಶಗಳಲ್ಲಿ ಕಾಣಿಸುವ ಸೂರ್ಯ ಗ್ರಹಣಕ್ಕೆ ಉಪವಾಸ ಇಲ್ಲಾ.. . ಶುಭವಾಗಲಿ.

Related Articles

Leave a Reply

Your email address will not be published. Required fields are marked *

Back to top button