ವಲಸೆ ಹೋಗದೇ ಇದ್ದೂರಲ್ಲೇ ಕೆಲಸ ಮಾಡಿ : ತಾ.ಪಂ ಸಹಾಯಕ ನಿರ್ದೇಶಕಿ ಶರಪುನ್ನಿಸಾ ಬೇಗಂ ಸಲಹೆ

ವಲಸೆ ಹೋಗದೇ ಇದ್ದೂರಲ್ಲೇ ಕೆಲಸ ಮಾಡಿ : ತಾ.ಪಂ ಸಹಾಯಕ ನಿರ್ದೇಶಕಿ ಶರಪುನ್ನಿಸಾ ಬೇಗಂ ಸಲಹೆ
ನರೇಗಾ ಯೋಜನೆ ಸದುಪಯೋಗ ಪಡೆದು ಆರ್ಥಿಕವಾಗಿ ಸಬಲರಾಗಿ : ಶರಪುನ್ನಿಸಾ ಬೇಗಂ
ಕನಕಗಿರಿ: ಬೇಸಿಗೆಯಲ್ಲಿ ಕೂಲಿಕಾರರು ಗುಳೆ ಹೋಗದೇ ಇದ್ದೂರಲ್ಲೇ ನರೇಗಾ ಯೋಜನೆಯಡಿ ಕೆಲಸ ಮಾಡುವ ಮೂಲಕ ಯೋಜನೆಯ ಸದುಪಯೋಗ ಪಡೆಯುವಂತೆ ತಾ.ಪಂ ಸಹಾಯಕ ನಿರ್ದೇಶಕಿ ಶರಪುನ್ನಿಸಾ ಬೇಗಂ ಹೇಳಿದರು.
ತಾಲೂಕಿನ ಹಿರೇಖೇಡ ಗ್ರಾ.ಪಂ ವತಿಯಿಂದ ಗ್ರಾಮದ ಕೂಲಿಕಾರರಿಗೆ ಕೆರೆ ಹೂಳೆತ್ತುವ ಕೆಲಸ ನೀಡಲಾಗಿದ್ದು, ಕಾಮಗಾರಿ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು. ನರೇಗಾ ಕೂಲಿಕಾರರಿಗೆ ಬೇಸಿಗೆ ಇರುವ ಕಾರಣ ಸತತ ಮೂರು ತಿಂಗಳ ಕಾಲ ಗ್ರಾ.ಪಂ ವತಿಯಿಂದ ಕೆಲಸ ನೀಡಲಾಗುತ್ತದೆ. ಕೂಲಿಕಾರರು ಎಲ್ಲೂ ವಲಸೆ ಹೋಗದೇ ಇದ್ದೂರಲ್ಲೇ ಕೆಲಸ ಮಾಡುವ ಮೂಲಕ ನರೇಗಾ ಯೋಜನೆಯ ಸದುಪಯೋಗ ಪಡೆದುಕೊಳ್ಳಿ.
ಅಲ್ಲದೇ, ಪ್ರತಿನಿತ್ಯ ತಮಗೆ ನೀಡಿರುವ ಕೆಲಸದ ಅಳತೆಗನುಸಾರವಾಗಿ ಕೆಲಸ ಮಾಡಿದರೇ ಪೂರ್ತಿ ಕೂಲಿ ಹ,ಣ ಸಿಗಲಿದೆ ಎಂದರು. ಜೊತೆಗೆ ನರೇಗಾ ಸಹಾಯವಾಣಿ ಸಂಖ್ಯೆ, PMJJY, PMSBY ಯೋಜನೆಯ ಕುರಿತು ಮಾಹಿತಿಯನ್ನು ನೀಡಿದರು.
ನಂತರ ತಾಲೂಕು ಐಇಸಿ ಸಂಯೋಜಕ ಶಿವಕುಮಾರ್ ಕೆ ಮಾತನಾಡಿ, ಏ.01 ರಿಂದ ಪರಿಷ್ಕೃತ ನರೇಗಾ ಕೂಲಿ ಮೊತ್ತ 349 ರಿಂದ 370 ರೂ ಗೆ ಹೆಚ್ಚಳವಾಗಿದ್ದು, ಕೂಲಿಕಾರರು ಇದರ ಸದುಪಯೋಗ ಪಡೆಯಬೇಕು. ಕಾಮಗಾರಿ ಸ್ಥಳದಲ್ಲಿ ಹಾಜರಿರುವ ಕೂಲಿಕಾರರಿಗೆ ಮಾತ್ರ NMMS ಹಾಜರಾತಿ ಹಾಕುವುದು ಸೇರಿದಂತೆ, ಕೂಲಿಕಾರರು ಸಮುದಾಯ ಕಾಮಗಾರಿಯಲ್ಲದೇ, ವೈಯಕ್ತಿಕ ಕಾಮಗಾರಿಗಳ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.
ನಂತರ ತಾಂತ್ರಿಕ ಸಂಯೋಜಕ ಸಯ್ಯದ್ ತನ್ವೀರ್ ಅವರು ಮಾತನಾಡಿ, ಕೂಲಿಕಾರರು ಕಾಮಗಾರಿ ಸ್ಥಳದಲ್ಲಿ ಕೆಲಸ ಮಾಡುವ ಪ್ರಮಾಣದ ಕುರಿತು ಮಾಹಿತಿಯನ್ನು ನೀಡಿದರು.
ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯರಾದ ಬಾರಿಮರದಪ್ಪ, ಭೀಮನಗೌಡ ಸೇರಿದಂತೆ ಪ್ರಮುಖರಾದ ಹುಲುಗಪ್ಪ ದೊಡ್ಡಮನಿ, ಬಾರಿಮರದಪ್ಪ ನಡುಲಮನಿ, ಶಾಮಣ್ಣ ಸಿರಿವಾರ, ಶಿವಕುಮಾರ್ ಬಡಿಗೇರ್, ಭೀಮನಗೌಡ ಗುಡದೂರು ಸೇರಿದಂತೆ ಗ್ರಾ.ಪಂ ಸಿಬ್ಬಂದಿಗಳು, ಕಾಯಬಂಧುಗಳು, ಕೂಲಿಕಾರರು ಹಾಜರಿದ್ದರು.
ಗೌತಮ್ ಯಾದವ್ ಪ್ರಜಾ ಶ್ರೀ ಪತ್ರಿಕೆ ಕೊಪ್ಪಳ ಜಿಲ್ಲಾ ವರದಿಗಾರ



