ಶಿವಮೋಗ್ಗ ಜಿಲ್ಲಾಧಿಕಾರಿ ಕಚೇರಿ ಎದುರು ಅಕ್ಷರ ದಾಸೋಹ ನೌಕರರ ಸಂಘದ ಧರಣಿ ಸತ್ಯಾಗ್ರಹ.

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಶಿವಮೊಗ್ಗ ಜಿಲ್ಲಾ ಸಮಿತಿಯ ವತಿಯಿಂದ ಶುಕ್ರವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಒಂದು ದಿನದ ಧರಣಿ ಸತ್ಯಾಗ್ರಹ ನಡೆಸಲಾಯಿತು.
ಪ್ರತಿಭಟನೆಯಲ್ಲಿ ಭಾಗವಹಿಸಿದ ಬಿಸಿಯೂಟ ನೌಕರರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಬೇಡಿಕೆಗಳನ್ನು ತಕ್ಷಣ ಈಡೇರಿಸುವಂತೆ ಆಗ್ರಹಿಸಿದರು. ಬಳಿಕ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ನೌಕರರ ಪ್ರಮುಖ ಬೇಡಿಕೆಗಳಲ್ಲಿ ಕಾಂಗ್ರೆಸ್ ಪಕ್ಷ ನೀಡಿದ್ದ ಭರವಸೆಯಂತೆ ಮಾಸಿಕ ವೇತನವನ್ನು ₹7,000ಕ್ಕೆ ಹೆಚ್ಚಿಸುವುದು, 6 ಗಂಟೆಗಳ ಕೆಲಸದ ಅವಧಿಗೆ ಅಧಿಕೃತ ಆದೇಶ ಹೊರಡಿಸುವುದು, ಅಕ್ಷರ ದಾಸೋಹ ಯೋಜನೆಯನ್ನು ಶಿಕ್ಷಣ ಇಲಾಖೆಯ ಅಧೀನದಲ್ಲಿಯೇ ಮುಂದುವರಿಸಿ ಖಾಸಗೀಕರಣ ಮಾಡದಿರುವುದು, ಕೆಪಿಎಸ್ ಶಾಲೆ ಹಾಗೂ ಇತರ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುವ ನೌಕರರಿಗೆ ಉದ್ಯೋಗ ಭದ್ರತೆ ಕಲ್ಪಿಸುವುದು ಸೇರಿವೆ.
ಇದಲ್ಲದೆ, ಆರೋಗ್ಯ ವಿಮೆ ಜಾರಿಗೊಳಿಸುವುದು, ಮಾಸಿಕ ₹10,000 ಪಿಂಚಣಿ ನೀಡುವುದು, ನಿವೃತ್ತಿ ಹೊಂದಿದ ನೌಕರರಿಗೆ ಬಾಕಿ ಇರುವ ಸೌಲಭ್ಯಗಳನ್ನು ಬಿಡುಗಡೆ ಮಾಡುವುದು, ಸುಸಜ್ಜಿತ ಅಡುಗೆ ಕೇಂದ್ರಗಳನ್ನು ನಿರ್ಮಿಸಿ ಸ್ವಚ್ಛ ಹಾಗೂ ಸುರಕ್ಷಿತ ವಾತಾವರಣ ಕಲ್ಪಿಸುವುದು, ಬೇಸಿಗೆ, ದಸರಾ ಹಾಗೂ ಚುನಾವಣಾ ಅವಧಿಯಲ್ಲಿಯೂ ವೇತನ ನೀಡುವುದು, ಕರ್ತವ್ಯದ ವೇಳೆ ಅಪಘಾತ ಅಥವಾ ಮರಣ ಸಂಭವಿಸಿದರೆ ₹25 ಲಕ್ಷ ಪರಿಹಾರ ಹಾಗೂ ಕುಟುಂಬದ ಒಬ್ಬರಿಗೆ ಉದ್ಯೋಗ ನೀಡುವಂತೆ ಒತ್ತಾಯಿಸಿದರು.
ಕಳೆದ 25 ವರ್ಷಗಳಿಂದ ಶಾಲಾ ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸಿ ಅವರ ಹಾಜರಾತಿ ಹೆಚ್ಚಿಸಲು ಸೇವೆ ಸಲ್ಲಿಸುತ್ತಿದ್ದರೂ, ಬೆಲೆ ಏರಿಕೆಯ ನಡುವೆಯೂ ತಮ್ಮ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ವರ್ಷದ 12 ತಿಂಗಳಿಗೂ ಕನಿಷ್ಠ ಕೂಲಿ ನೀಡಬೇಕೆಂದು ಅವರು ಆಗ್ರಹಿಸಿದರು.
ಶಿವಮೊಗ್ಗ, ಶಿಕಾರಿಪುರ, ಸೊರಬ, ಭದ್ರಾವತಿ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ್ದ ಅಕ್ಷರ ದಾಸೋಹ ನೌಕರರು ಪ್ರತಿಭಟನೆಯಲ್ಲಿ ಭಾಗವಹಿಸಿ ಸರ್ಕಾರವು ತಮ್ಮ ನ್ಯಾಯಯುತ ಬೇಡಿಕೆಗಳನ್ನು ಶೀಘ್ರವೇ ಈಡೇರಿಸಬೇಕು ಎಂದು ಒತ್ತಾಯಿಸಿದರು. ಕೃಪೆ ಕರ್ನಾಟಕ ವಾಣಿ.



