ಕರಡಿ ದಾಳಿಗೆ ಯುವಕ ಗಾಯ: ಚಿಕಿತ್ಸೆ ನೀಡದೆ ಮನೆಗೆ ಕಳುಹಿಸಿದ ಆರೋಪ.ಕನಕಗಿರಿ.

ಕರಡಿ ದಾಳಿಗೆ ಯುವಕ ಗಾಯ: ಚಿಕಿತ್ಸೆ ನೀಡದೆ ಮನೆಗೆ ಕಳುಹಿಸಿದ ಆರೋಪ
ಕನಕಗಿರಿ ತಾಲೂಕಿನಲ್ಲಿ ಹೆಚ್ಚುತ್ತಿರುವ ಕಾಡುಪ್ರಾಣಿಗಳ ಹಾವಳಿ – ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ
ಕನಕಗಿರಿ: ತಾಲೂಕಿನ ಸೋಮು ಸಾಗರ ಗ್ರಾಮದ ಯುವಕನ ಮೇಲೆ ಕರಡಿ ದಾಳಿ ನಡೆಸಿ ತೀವ್ರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಗ್ರಾಮದ ಮಾರುತಿ ತಂದೆ ಬಸಪ್ಪ ಕುರುಬರ (28) ಕರಡಿ ದಾಳಿಗೆ ಒಳಗಾಗಿ ಗಾಯಗೊಂಡ ಯುವಕ ಎಂದು ತಿಳಿದುಬಂದಿದೆ.
ಕರಡಿ ದಾಳಿಯಲ್ಲಿ ಗಾಯಗೊಂಡ ಮಾರುತಿಯನ್ನು ರಾತ್ರಿ ವೇಳೆ ಚಿಕಿತ್ಸೆಗಾಗಿ ಕನಕಗಿರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆತರಲಾಗಿತ್ತು. ಆದರೆ, ಗಾಯಾಳುವಿಗೆ ಸಮರ್ಪಕ ಚಿಕಿತ್ಸೆ ನೀಡದೆ ಕೇವಲ ಇಂಜೆಕ್ಷನ್ ನೀಡಿ ಮನೆಗೆ ವಾಪಸ್ ಕಳುಹಿಸಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ತೀವ್ರವಾಗಿ ಗಾಯಗೊಂಡಿದ್ದ ಯುವಕನನ್ನು ಆಸ್ಪತ್ರೆಯಲ್ಲಿ ದಾಖಲಿಸಿಕೊಂಡು ಸೂಕ್ತ ಚಿಕಿತ್ಸೆ ನೀಡಬೇಕಾಗಿದ್ದರೂ, ಸಿಬ್ಬಂದಿ ಅಡ್ಮಿಟ್ ಮಾಡಿಕೊಳ್ಳದೆ ಗ್ರಾಮಕ್ಕೆ ಕಳುಹಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಗಳು ಹಾಗೂ ಅಗತ್ಯ ಸಿಬ್ಬಂದಿಯ ಕೊರತೆ ಮತ್ತು ಕರ್ತವ್ಯ ನಿರ್ವಹಣೆಯಲ್ಲಿನ ನಿರ್ಲಕ್ಷ್ಯದಿಂದ ಇಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಮಗಳತ್ತ ಬರುತ್ತಿರುವ ಕಾಡುಪ್ರಾಣಿಗಳು
ಇತ್ತೀಚಿನ ದಿನಗಳಲ್ಲಿ ಕನಕಗಿರಿ ತಾಲೂಕಿನ ವಿವಿಧ ಗ್ರಾಮಗಳ ಸುತ್ತಮುತ್ತ ಕರಡಿ, ಚಿರತೆ ಸೇರಿದಂತೆ ಕಾಡುಪ್ರಾಣಿಗಳ ಸಂಚಾರ ಹೆಚ್ಚುತ್ತಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಕನಕಗಿರಿ ಭಾಗದಲ್ಲಿ ಕರಡಿಗಳು ಗ್ರಾಮಕ್ಕೆ ನುಗ್ಗಿ ಆಹಾರ ಅರಸಿದ ಘಟನೆಗಳ ವರದಿಗಳೂ ಇತ್ತೀಚೆಗೆ ಪ್ರಕಟವಾಗಿವೆ.
ಅರಣ್ಯ ಪ್ರದೇಶ ಹಾಗೂ ಸುತ್ತಮುತ್ತಲಿನ ಹಳ್ಳ-ಕೊಳ್ಳಗಳಲ್ಲಿ ನೀರಿನ ಲಭ್ಯತೆ ಕಡಿಮೆಯಾಗುತ್ತಿರುವುದು, ಕಾಡಿನೊಳಗೆ ಆಹಾರ ಮತ್ತು ನೀರಿನ ಕೊರತೆ ಉಂಟಾಗುತ್ತಿರುವುದರಿಂದ ಕಾಡುಪ್ರಾಣಿಗಳು ನೀರು ಹಾಗೂ ಆಹಾರ ಅರಸಿಕೊಂಡು ಜನವಸತಿ ಪ್ರದೇಶಗಳತ್ತ ಬರುತ್ತಿವೆ ಎಂಬ ಅಭಿಪ್ರಾಯವನ್ನು ಗ್ರಾಮಸ್ಥರು ವ್ಯಕ್ತಪಡಿಸುತ್ತಿದ್ದಾರೆ.
ಶಾಶ್ವತ ಪರಿಹಾರಕ್ಕೆ ಆಗ್ರಹ
ಕಾಡುಪ್ರಾಣಿಗಳು ಗ್ರಾಮಗಳತ್ತ ಬಾರದಂತೆ ಅರಣ್ಯ ಇಲಾಖೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಅರಣ್ಯ ಪ್ರದೇಶಗಳಲ್ಲಿ ನೀರಿನ ವ್ಯವಸ್ಥೆ ಕಲ್ಪಿಸುವುದು, ಕಾಡುಪ್ರಾಣಿಗಳ ಚಲನವಲನದ ಮೇಲೆ ನಿಗಾ ಇಡುವುದು ಹಾಗೂ ಜನವಸತಿ ಪ್ರದೇಶಗಳ ಬಳಿ ತುರ್ತು ರಕ್ಷಣಾ ವ್ಯವಸ್ಥೆ ಕಲ್ಪಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಅದೇ ರೀತಿ, ಕರಡಿ ದಾಳಿಯಿಂದ ಗಾಯಗೊಂಡವರಿಗೆ ತಕ್ಷಣದ ಮತ್ತು ಸಮರ್ಪಕ ವೈದ್ಯಕೀಯ ಚಿಕಿತ್ಸೆ ದೊರೆಯುವಂತೆ ಕನಕಗಿರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸಾಕಷ್ಟು ವೈದ್ಯರು, ಸಿಬ್ಬಂದಿ ಹಾಗೂ ತುರ್ತು ಚಿಕಿತ್ಸಾ ಸೌಲಭ್ಯ ಕಲ್ಪಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಕರಡಿ ದಾಳಿಯಂತಹ ತುರ್ತು ಸಂದರ್ಭಗಳಲ್ಲಿ ಗಾಯಾಳುವನ್ನು ಮನೆಗೆ ಕಳುಹಿಸುವ ಬದಲು ಅಗತ್ಯವಿದ್ದರೆ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗೆ ಮೇಲ್ದರ್ಜೆಯ ಆಸ್ಪತ್ರೆಗೆ ಕಳುಹಿಸುವ ವ್ಯವಸ್ಥೆ ಮಾಡಬೇಕು. ಈ ಘಟನೆ ಕುರಿತು ಆರೋಗ್ಯ ಇಲಾಖೆ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.
ಗೌತಮ್ ಯಾದವ್ ಕನಕಗಿರಿ ಪ್ರಜಾ ಶ್ರೀ ಪತ್ರಿಕೆ ಕೊಪ್ಪಳ ಜಿಲ್ಲಾ ವರದಿಗಾರ.





