ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಿತ್ತೆ.ಶ್ರೀಮತಿ ಅಮರಾವತಿ ಹಿರೇಮಠ ಕಲಬುರಗಿ.

ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಿತ್ತೆ. ಶ್ರೀಮತಿ ಅಮರಾವತಿ ಹಿರೇಮಠ ಕಲಬುರಗಿ.
ಆಧ್ಯಾತ್ಮದ ನೆಲೆಗಟ್ಟಿನ ಮೇಲೆ ನಿಂತಿದೆ ನಮ್ಮ ಜಗತ್ತು . ಆದರೆ ಆಧ್ಯಾತ್ಮದತ್ತ ಒಲವು ತೋರಿಸದೆ ತಮ್ಮದೇ ಆದ ರೀತಿಯಲ್ಲಿ ಬದುಕುತ್ತಿರುವ ನಮ್ಮ ಮನುಕುಲ .ನಮ್ಮ ಸಂಸ್ಕಾರ ಸಂಸ್ಕೃತಿ ಸಂಪ್ರದಾಯ ಮರೆತು ಹತ್ತು ಹೆಜ್ಜೆ ಮುಂದಿಟ್ಟು ನಡೆಯುತ್ತಿದ್ದಾರೆ . ಏಕೆಂದರೆ ?ಹಿಂದಿನದು ಈಗ ಏನು ನಡೆಯುವುದಿಲ್ಲ . ಎಲ್ಲವೂ ಬದಲಾಗಿದೆ ಎಂದು ತಮ್ಮನ್ನು ತಾವು ಅರಿತು ಕೊಳ್ಳದೆ ಸಾಗುತ್ತಿದೆ ನಮ್ಮ ಇಂದಿನ ಮನುಕುಲ .ಈ ಅತಿರೇಕದ ಬದುಕು ಅಜ್ಞಾವೋ ಅಧಃಪತನವೋ ದೇವರೇ ಬಲ್ಲ.
ನಮ್ಮ ಸಮಾಜ ಪ್ರಬುದ್ಧವಾಗಿರಬೇಕು ಎಂದರೆ ,
ಪ್ರಬುದ್ಧ ಸಮಾಜವನ್ನು ಕಟ್ಟಲು ಪ್ರಬುದ್ಧವಾದ ಮನಸ್ಸುಗಳು ಇರಬೇಕು.ಆದರೆ ಇಂದಿನ ದಿನಗಳಲ್ಲಿ ಪ್ರಬುದ್ಧವಾದ ಮನಸ್ಸುಗಳು ಸಿಗುವುದು ತುಂಬಾ ಅಪರೂಪ. ಏಕೆಂದರೆ ? ಕಾಂಚಾಣಕ್ಕೆ ದಾಸರಾದ ಮೇಲೆ ಮನುಷ್ಯತ್ವವನ್ನು ಮಾರಿಕೊಂಡು ಬದುಕುವ ಜೀವಗಳೆ ಹೆಚ್ಚು . ಇಂತಹ ಕಾಲಮಾನದಲ್ಲಿ ಪ್ರಬುದ್ಧವಾದ ಮನಸ್ಸುಗಳು ಹುಡುಕುವುದೆಂದರೆ , ಹಿಂದೆ ” ಸಾಕ್ರೆಟಿಸ್ ” ಅವರು ಹಗಲಿನ ಸಮಯದಲ್ಲಿ ಕೈಯಲ್ಲಿ ಕಂದಿಲು ಹಿಡಿದು ನಿಧಾನವಾಗಿ ನಡೆಯುತ್ತಾ ಬರುತ್ತಿದ್ದ ವೇಳೆ ಯಾರೋ ಒಬ್ಬರು ಕೇಳಿದರಂತೆ ” ಇಷ್ಟು ಬೆಳಕಿರುವಾಗ ನೀವು ಕೈಯಲ್ಲಿ ಕಂದಿಲು ಹಿಡಿದು ಕೊಂಡು ಬರುತ್ತಿದ್ದೀರಿ ಏನು ಹುಡುಕುತ್ತಿದ್ದೀರಿ .” ಅಂತ .ಆಗ ” ಸಾಕ್ರೆಟಿಸ್ ಹೇಳಿದರಂತೆ ಏನು ಇಲ್ಲ . ಇಲ್ಲಿ ಯಾರಾದರೂ ಮನುಷ್ಯರು ಸಿಗುವರೇನು ಅಂತ ನೋಡುತ್ತಿದ್ದೇನೆ . ಎಂದು ಹೇಳಿದರು .” ಒಂದು ಕ್ಷಣ ಯೋಚಿಸಿ ಮತ್ತೆ ಪ್ರಶ್ನೆ ಮಾಡಿದನು ಆ ವ್ಯಕ್ತಿ ” ಇಷ್ಟೊಂದು ಜನ ಓಡಾಡುತ್ತಿದ್ದಾರೆ ನಿಮಗೆ ಹೇಗೆ ಕಾಣಿಸುತ್ತಿಲ್ಲ ಎಂದು ಕೇಳಿದರು.
ಅದಕ್ಕೆ ಸಾಕ್ರೆಟಿಸ್ ಅವರು ಹೇಳಿದ್ದು ನೀವು ಹೇಳುವುದು ಸರಿಯಾಗಿದೆ . ಆದರೆ ಮಾನವರಲ್ಲಿ ಕೆಲವು ಜನರು ಮಾತ್ರ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಜೀವನ ನಡೆಸುತ್ತಿದ್ದಾರೆ. ಅಂತಹವರೇನಾದರೂ ಸಿಗುತ್ತಾರೆ ಎಂದು ನೋಡುತ್ತಿದ್ದೇನೆ.”
ಎಂದು ಹೇಳಿದರಂತೆ .ಅವರ ಮಾತಿಗೆ ತಬ್ಬಿಬ್ಬಾದ ವ್ಯಕ್ತಿ . ಸುಮ್ಮನೆ ಹೊರಟು ಹೋದ . ಅದರಂತೆ ಈಗ ಎಲ್ಲಿಯಾದರೂ ಮನುಷ್ಯತ್ವಕ್ಕೆ ಬೆಲೆ ಕೊಟ್ಟು ಮಾನವ ಧರ್ಮದಿಂದ ಬಾಳುವ ಮನುಜರನ್ನು ಹುಡುಕ ಬೇಕಾಗಿದೆ .ಮನುವಿನಲ್ಲಿ ಮಾನವರನ್ನು ಹುಡುಕಿದರೂ ಬೆರಳೆಣಿಕೆಯಷ್ಟು ಸಿಗಬಹುದು .
ಇಂದಿನ ಕಾಲಮಾನದಲ್ಲಿ ಎಲ್ಲಿ ಸಿಗಬೇಕು. ಸ್ವಾರ್ಥ ಎಂಬುದು ಪೆಡಂಭೂತವಾಗಿ ಬೆಳೆದಾಗ , ತನ್ನದಷ್ಟೇ ನೋಡಿಕೊಳ್ಳುವುದು . ತಾನು ಚೆನ್ನಾಗಿ ಇರಬೇಕು ಅನ್ನೋದೇ ಇಂದಿನ ಮನೋಭಾವ ಬೆಳೆದು ನಿಂತಿದೆ. ಅದಕ್ಕಾಗಿ ಮನಷ್ಯ ಯಾವ ಮಟ್ಟಿಗೆ ಇಳಿದಿದ್ದಾನೆ ಅಂದರೆ ತನ್ನೊಳಗೆ ಇರುವ ಮನುಷ್ಯತ್ವವನ್ನು ಮಾರಿಕೊಂಡು ಮೂರು ಬಿಟ್ಟು ಬದುಕುತ್ತಿದ್ದಾನೆ.
ತನ್ನ ರಕ್ತ ಸಂಬಂಧದ ಅರಿವು ತನ್ನಗಿಲ್ಲಾ ಎಂಬಂತೆ ಬಾಳುತ್ತಿದ್ದಾನೆ . ಏಕೆಂದರೆ ? ತಾನು ತಿನ್ನುವ ಆಹಾರಗಳು ವಿಷ ಪದಾರ್ಥಗಳಿಂದ ಕೂಡಿದ್ದಾಗಿದ್ದುದರಿಂದ ಮೈಯೆಲ್ಲಾ ವಿಷ ತುಂಬಿದೆ. ಹೀಗಾಗಿ ಅವನು ತನ್ನ ತನವನ್ನು ಅರ್ಥಮಾಡಿಕೊಳ್ಳದಷ್ಟು ದೂರ ಉಳಿದಿದ್ದಾನೆ.
ಇದಕ್ಕೆಲ್ಲಾ ಮೂಲ ಕಾರಣ ” ಕಾಂಚಾಣ ” ಫಸಲು ಚೆನ್ನಾಗಿ ಬೆಳೆಯಬೇಕೆಂದು ರಾಸಾಯನಿಕ ಗೊಬ್ಬರ ಹಾಕುವುದು ಒಂದೆಡೆಯಾದರೆ , ಹಣ್ಣ ಹಂಪಲು ತರಕಾರಿಗಳನ್ನು ತಾಜಾ ಇಟ್ಟರೆ ವ್ಯಾಪಾರ ಆಗುವುದು ಎಂದು ಅವುಗಳನ್ನು ರಾಸಾಯನಿಕ ಸಿಂಪಡಿಸಿ ಇಟ್ಟು ವ್ಯಾಪಾರ ಮಾಡುವುದು . ಇಂತಹ ವಿಷಕಾರಿ ಪದಾರ್ಥಗಳು ಸದ್ದಿಲ್ಲದೆ ಮನುಷ್ಯನ ದೇಹದೊಳಗೆ ಸೇರುತ್ತಿದೆ . ಅದಕ್ಕಾಗಿ ಮನುಷ್ಯನ ಯೋಚನೆಯ ಶಕ್ತಿಯೂ ಕೂಡ ಕುಗ್ಗುತ್ತಿದೆ .ಹೀಗಾದರೆ ಹೇಗೆ ? ಮನುಷ್ಯನ ಅತಿರೇಕದ ದಾಹಕ್ಕೆ ಪ್ರಕೃತಿಯು ಕೈ ಕೊಡುತ್ತಿದೆ .
ಅತಿವೃಷ್ಟಿ ಅನಾವೃಷ್ಟಿಯಿಂದ ಮನುಷ್ಯ ತತ್ತರಿಸಿ ಹೋಗಿದ್ದಾನೆ . ಸಮಾಜ ಕೆಂಗೆಟ್ಟು ಹೋಗಿದೆ . ಬರಗಾಲದ ಛಾಯೆ ಆವರಿಸಿದೆ .
ಮೇಲಾಗಿ ಸರ್ಕಾರ ಕೊಡುವ ಭಿಕ್ಷೆಗೆ ಯುವಕರು ಸೋಮಾರಿಯಾಗಿ ಪುಂಡಾಟ ನಡೆಸುತ್ತಿದ್ದಾರೆ . ಮಾನ ಮರ್ಯಾದೆ ಬಿಟ್ಟು ಮನಬಂದಂತೆ ವರ್ತಿಸುತ್ತಿದ್ದಾರೆ . ಮನೆ ಮನೆತನ ಹೆತ್ತವರ ಬಗ್ಗೆಯೂ ಗೌರವ ಕೊಡದೆ ತಮ್ಮಿಷ್ಟದಂತೆ ಬಾಳುತ್ತಿದ್ದಾರೆ .
ಎತ್ತ ನೋಡಿದರತ್ತ ದುರ್ಜನರ ಹಾವಳಿ ಹೆಚ್ಚಾಗಿದ್ದು ಜೀವಗಳ ಜೊತೆ ಚೆಲ್ಲಾಟ ಆಡುತ್ತಿದ್ದಾರೆ . ಹಾಡು ಹಗಲೇ ಕುಡಿತ ಜೂಜು ಲಾಂಗು ಮಚ್ಚು ಹಿಡಿದು ಕೊಂಡು ಓಡಾಡುವ ಜನರೇ ಹೆಚ್ಚು. ಕಳ್ಳಭಟ್ಟಿ ಸಾರಾಯಿ ಅಡ್ಡೆ ದಂಧೆಗಳು ತಲೆ ಎತ್ತಿ ನಿಂತಿರುವ ಕಾರಣ ಜನಜೀವನ ಅಸ್ತವ್ಯಸ್ತ ಆದರೂ ಅರಿವಿಗೆ ಬಾರದ ಸಮಾಜ ಅವನತಿ ಅತ್ತ ಸಾಗುತ್ತಿದೆ .
‘ ನಿಜ ‘ ಇಂದಿನ ಪರಿಸ್ಥಿತಿ ಹಾಗೆ ಆಗಿದೆ . ವ್ಯಾವಹಾರಿಕ ಜೀವನದಿಂದ ಎಲ್ಲವೂ ಬದಲಾಗಿದೆ.
ಆಧುನಿಕ ಬದುಕಿನ ಪಯಣದ ಹಾದಿಯಲ್ಲಿ ಎಲ್ಲರ ಜೊತೆಗೂಡಿ ಸಾಗಿದರೂ ಮನಸ್ಸು ಮಾತ್ರ ಒಂಟಿ ಸಲಗ. ಒಂದೇ ಸೂರಿನಡಿ ಇದ್ದರೂ ಯಾರಿಗೆ ಯಾರೂ ಎಂಬಂತೆ ಬದುಕುವುದು ಇಂದಿನ ಮನೋಸ್ಥಿತಿ ಉದ್ಭವಿಸಿದೆ . ಇದಕ್ಕೆ ಹಲವಾರು ಕಾರಣಗಳಿರಬಹುದು , ಆದರೆ ಎಲ್ಲಾ ಇದ್ದರೂ ಇಲ್ಲದಂತಾಗಿದೆ ಜೀವವಿದೆ ಜೀವನ ಇದೆ ಕೈ ತುಂಬಾ ಹಣ ಇದೆ ಆದರೆ ನೆಮ್ಮದಿ ಎನ್ನುವುದು ಗಗನ ಕುಸುಮವಾಗಿದೆ . ಸಂಸ್ಕಾರ ಎನ್ನುವುದು ಮೂಲೆ ಗುಂಪಾಗಿದೆ.ಹೆತ್ತವರ ಒಡಲು ಕಿಚ್ಚಿಲ್ಲದ ಬೆಂಕಿಯಲ್ಲಿ ಬೆಂದು ಹೋಗುತ್ತಿದೆ . ಮಕ್ಕಳಿಗೆ ತಮ್ಮ ಶಕ್ತಿ ಮೀರಿ ಪಾಲನೆ ಪೋಷಣೆ ಮಾಡಿದರು ; ಆರುಕ್ಕುಂಟು ಮೂರುಕ್ಕಿಲ್ಲ ಎಂಬಂತಾಗಿದೆ . ಮನೆಯಲ್ಲಿ ಒಳ್ಳೆಯ ಸಂಸ್ಕಾರ ಕೊಟ್ಟರು ಹೊರಗಿನ ಸಹವಾಸದಿಂದ ದಾರಿ ತಪ್ಪಿ ನಡೆದು ಕೊಳ್ಳುತ್ತಿದ್ದಾರೆ . ಹೀಗಾಗಿ ಬದುಕು ದಿನ ದಿನಕ್ಕೂ ನರಕ ಅನುಭವಿಸುತ್ತಿದೆ. ” ನಮ್ಮ ಪೂರ್ವಜರು ಹೇಳುತ್ತಿದ್ದರು ಸ್ವರ್ಗ – ನರಕ ಬೇರಿಲ್ಲ ಎಲ್ಲವೂ ಈ ಭೂಮಿಯ ಮೇಲೆ ಇದೆ ” ಅಂತ . ಈಗ ಇದೆಲ್ಲ ನೋಡುತ್ತಿದ್ದೇವೆ . ಯಾಕೆ ಹೀಗೆ ಎನ್ನುವುದಕ್ಕೆ ಉತ್ತರ ಯಾರ ಹತ್ತಿರವೂ ಇಲ್ಲ . ಒಂದು ಕಾಲಕ್ಕೆ ಹಣ ಜಾಸ್ತಿ ಇರುತ್ತಿರಲಿಲ್ಲ ಆದರೆ ಅವರ ಬದುಕು ತುಂಬಾ ನೆಮ್ಮದಿಯಿಂದ ಕೂಡಿತ್ತು . ಮನೆಯಲ್ಲಿ ಇದ್ದವರೆಲ್ಲರ ಜೀವ ಒಂದೇ ಆಗಿತ್ತು . ಮಾತು ಒಂದೇ ಆಗಿತ್ತು .ಅವರ ನಡೆ ನುಡಿಗಳು ಒಂದೇ ಆಗಿತ್ತು. ಒಬ್ಬರ ಮಾತಿಗೆ ಒಬ್ಬರು ಸ್ಪಂದಿಸುವ ಗುಣ ಹೊಂದಿರುತ್ತಿದ್ದರು .ಮನೆಯ ಏನೇ ತಿರ್ಮಾನ ಮಾಡಬೇಕೆಂದರು ಆ ಮನೆಯ ಹಿರಿಯರು ತೆಗೆದು ಕೊಳ್ಳುತ್ತಿದ್ದರು .ಅವರ ತಿರ್ಮಾನಕ್ಕೆ ಎಲ್ಲರೂ ಸಮ್ಮತಿಸುತ್ತಿದ್ದರು ಹೀಗಾಗಿ ಅವರ ಮನೆ ಎನ್ನುವುದು ಬೃಂದಾವನ ಆಗಿತ್ತು .
ಆದರೆ ಈಗ ಎಲ್ಲಾ ತಿರ್ಮಾನ ಅವರವರೇ ತೆಗೆದು ಕೊಳ್ಳುವುದು . ಹೆಚ್ಚಿನ ವಿಷಯಗಳು ಮನೆಯ ಹಿರಿಯ ಜೀವಕ್ಕೆ ಗೊತ್ತಾಗುವುದಿಲ್ಲ .
ಎಲ್ಲರೂ ಜ್ಞಾನಿಗಳೇ ನಾ ಹೆಚ್ಚು ನೀ ಹೆಚ್ಚು ಎನ್ನುವ ಹುಚ್ಚುತನ.
ಇಲ್ಲಿ ಯಾರಿಗೂ ಕುಳಿತು ಕೇಳುವ ತಾಳ್ಮೆ ಇಲ್ಲ . ಏಕೆಂದರೆ ಮೊಬೈಲ್ ಎಂಬ ಸಂಗಾತಿಯೊಡನೆ ಸಮಯ ಕಳೆಯುವುದರಿಂದ ಮನುಜನ ಭಾವನೆಗಳಿಗೆ ಎಲ್ಲಿದೆ ಬೆಲೆ .
ಜೀವ ಇದ್ದರು ಸತ್ತ ಹಾಗೆ ಬದುಕುವುದು ಅನಿವಾರ್ಯತೆ ಎದುರಾಗಿದೆ.
ಹೀಗಿರುವಾಗ ಪ್ರಬುದ್ಧವಾದ ಮನಸ್ಸುಗಳು ಎಲ್ಲಿ ಸಿಗಬೇಕು.
ಮನೆ ಮನೆಯೊಳಗೆ ಒಂದಾಗಿರದ ಮನಸ್ಸುಗಳು ಸಮಾಜದಲ್ಲಿ ಒಂದಾಗಿರಲು ಸಾಧ್ಯವೇ ?
ಎಲ್ಲವೂ ಕೈ ಮೀರಿ ಹೋಗುತ್ತಿದೆ
ಮುಂದಿನ ದಿನಗಳಲ್ಲಿ ಇನ್ನೂ ಏನೇನೋ ಕಾದಿದೆಯೋ ಬ ತಿಳಿಯದು .
ಹೀಗೆ ಮುಂದುವರೆದರೆ ಮನುಕುಲ ವಿನಾಶ ಆಗುವುದರಲ್ಲಿ ಸಂದೇಹವಿಲ್ಲ.
ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಿತ್ತೆ .
🙏🙏🙏🙏🙏🙏🙏🙏
ಶ್ರೀಮತಿ ಅಮರಾವತಿ ಹಿರೇಮಠ
ಜ್ಞಾನ ದೀವಿಗೆ ಅಭಿವೃದ್ಧಿ ಸಂಸ್ಥೆ
ಸಂಸ್ಥಾಪಕರು.ಕಲಬುರಗಿ .
9108259250


