ಸುದ್ಧಿ

ಬೆಳಗಾವಿ ಜಿಲ್ಲೆಯ ಅಥಣಿ ಕಾಗವಾಡದ ಬಡ ಜನರ ಪಾಲಿಗೆ ಮರೀಚಿಕೆಯಾದ ಇಂದಿರಾ ಕ್ಯಾಂಟೀನ್

ಬೆಳಗಾವಿ ಜಿಲ್ಲೆಯ ಗಡಿ ತಾಲ್ಲೂಕುಗಳಾದ ಅಥಣಿ ಕಾಗವಾಡದ ಬಡ ಜನರ ಪಾಲಿಗೆ ಮರೀಚಿಕೆಯಾದ ಇಂದಿರಾ ಕ್ಯಾಂಟೀನ್

“ಏ ವೀರ‌್ಯಾ ಬಾರೋ ಊಟಾ ಮಾಡೂಣು” ಅಂದ ಕಲ್ಲಪ್ಪನಿಗೆ ವಿರುಪಾಕ್ಷಿ “ನನ್ನ ಊಟ ಆಗೇತ್ರೀ ಸಾವಕಾರ್ ನೀವ್ ಮಾಡ್ರಿ” ಅಂದಾಗ “ಅಲಾ ಮಗನ ಬುತ್ತಿನ ತಂದಿಲ್ಲ ಸುಳ್ಳ ಹೇಳಾತಿ ಎನ್” ಅಂದ ಕಲ್ಲಪ್ಪನಿಗೆ ವಿರುಪಾಕ್ಷಿ “ಇಲ್ರಿ ಇಲ್ಲೆ ಈಗ ಇಂದಿರಾ ಕ್ಯಾಂಟೀನ್ ದಾಗ ಉಂಡೇನ್ರಿ” ಅನ್ನುತ್ತಿದ್ದಂತೆಯೇ ಒಂದಷ್ಟು ನಿರಾಳ ಭಾವ ಇಬ್ಬರ ನಡುವೆ ತಣ್ಣಗೆ ಸುಳಿದು ಮಾಯವಾಯಿತು.

ಇದು ಹುಬ್ಬಳ್ಳಿ ಧಾರವಾಡದಂತಹ ಅವಳಿ ನಗರದಲ್ಲಿ ಇರುವ ಇಂದಿರಾ ಕ್ಯಾಂಟೀನ್ ಗಳ ಊಟದ ಉಪಕಾರದ ಕಥೆಯಾದರೆ ಇತ್ತ ಮಹಾರಾಷ್ಟ್ರದ ಗಡಿಭಾಗದ ತಾಲ್ಲೂಕುಗಳಾದ ಚಿಕ್ಕೋಡಿ, ಅಥಣಿ,
ರಾಯಭಾಗ, ಕಾಗವಾಡ,
ಸೇರಿದಂತೆ ಹಲವು ತಾಲ್ಲೂಕುಗಳಲ್ಲಿ ಇಂದಿಗೂ “ಇಂದಿರಾ ಕ್ಯಾಂಟೀನ್” ಆಸ್ಥಿತ್ವಕ್ಕೆ ಬರದೆ ಉಳಿದಿರುವ ಕಾರಣದಿಂದ ಹಳ್ಳಿಗಳಿಂದ ಪಟ್ಟಣಕ್ಕೆ ದುಡಿಯಲು ಬರುವ ಅದೆಷ್ಟೋ ಕಾರ್ಮಿಕ ವರ್ಗದ ದುಡಿಯುವ ಜನರು ಮಧ್ಯಾಹ್ನದ ಹೊತ್ತಿಗೆ ಅತ್ತ ಕೂಲಿ ಕೆಲಸವೂ ಸಿಗದೆ, ಇತ್ತ ಹೊಟ್ಟೆ ತುಂಬಿಸಿಕೊಳ್ಳಲು ಜೇಬಿನಲ್ಲಿ ದುಡ್ಡೂ ಇಲ್ಲದೆ, ಸಂಜೆಯವರೆಗೂ ಕಾಯುತ್ತ ನಿಂತು ಖಾಲಿ ಕೈಯ್ಯಲ್ಲಿ ಮನೆಗೆ ಮರಳುವ ದೃಶ್ಯಗಳು ಮಾನವೀಯತೆ ಇರುವ ಜನರ ಕರುಳು ಹಿಂಡುತ್ತವೆ.

ಬಡವರ ಬಗ್ಗೆ ವಿಶೇಷ ಕಾಳಜಿ ಉಳ್ಳ ಮುಖ್ಯಮಂತ್ರಿ ಎಂದೇ ಹೆಸರಾಗಿರುವ
ಸಿ ಎಮ್ ಸಿದ್ದರಾಮಯ್ಯ ಅವರ ಚುನಾವಣಾ ಪ್ರಚಾರದ ಸಮಯದಲ್ಲಿ “ಹೌದ್ದೋ ಹುಲಿಯಾ” ಅನ್ನುವ ಬಹಿರಂಗ ಬಿರುದು ಕೊಟ್ಟು ಅವರ ಖ್ಯಾತಿಗೆ ಕಾರಣವಾಗಿದ್ದು ಇದೆ ಗಡಿಭಾಗದ ಕಾಗವಾಡ ತಾಲೂಕಿನ ಐನಾಪೂರ ಪಟ್ಟಣದ ಒಬ್ಬ ಜನ ಸಾಮಾನ್ಯ ಅನ್ನುವದನ್ನು ಯಾರೂ ಕೂಡ ಮರೆಯುವಂತಿಲ್ಲ.

ಒಂದು ಕಡೆ
ಇಂದಿರಾ ಕ್ಯಾಂಟೀನ್ ಅಲ್ಲಿ ಜೋಳದ ರೊಟ್ಟಿ,ಅಥವಾ ಚಪಾತಿ,ರಾಗಿ ಅಂಬಲಿ, ಕೊಡುವ ಬಗ್ಗೆ ಚಿಂತನೆ ನಡೆದಿದ್ದು ಬೆಂಗಳೂರಿನಲ್ಲಿ ಈ ಬಗ್ಗೆ ಇನ್ನಷ್ಟೇ ಅನುಮೋದನೆ ಬಾಕಿ ಉಳಿದಿರುವ ವಿಚಾರ ಒಂದು ಕಡೆ ಆದರೆ ಉತ್ತರ ಕರ್ನಾಟಕದ ಗಡಿಭಾಗದ ತಾಲೂಕುಗಳಲ್ಲಿ ಈಗಲೂ ಇಂದಿರಾ ಕ್ಯಾಂಟೀನ್ ಗಳು ಇಲ್ಲ ಅನ್ನುವ ಕೊರಗು ಹಲವು ಬಡ ಮತ್ತು ಮಧ್ಯಮ ವರ್ಗಗಳದ್ದಾಗಿದೆ.

ಈಗಾಗಲೇ ಬೆಳಗಾವಿ, ಹುಬ್ಬಳ್ಳಿ ಧಾರವಾಡ,ವಿಜಯಪುರ,ಗುಲ್ಬರ್ಗ ಸೇರಿದಂತೆ ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಬರದಿಂದ ತತ್ತರಿಸಿ ಹೋಗಿರುವ ತುಂಡು ಭೂಮಿಯ ಸಾಗುವಳಿದಾರರು,
ಕೃಷಿ ಕೂಲಿ ಕೆಲಸದವರು ಮತ್ತು ಜೀವನೋಪಾಯ ಕ್ಕಾಗಿ ಸಣ್ಣ ಪುಟ್ಟ ಉದ್ಯೋಗ ಮಾಡುವ ಜನರಿಗೆ ಕಡಿಮೆ ದರದಲ್ಲಿ ಗುಣಮಟ್ಟದ ಆಹಾರ ಸಿಗುವ ನಿರೀಕ್ಷೆ ಹುಸಿಯಾಗದಿರಲಿ ಅನ್ನುವ ಆಶಯದೊಂದಿಗೆ ಪ್ರಜ್ಞಾವಂತರು ಈಗಲೂ ಎದುರು ನೋಡುತ್ತಿದ್ದಾರೆ.

ಸಿ ಎಮ್ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರವೇನೋ ಗೃಹ ಲಕ್ಷ್ಮೀ, ಗೃಹಜ್ಯೋತಿ, ಮತ್ತು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ “ಶಕ್ತಿ ಯೋಜನೆ” ಸೇರಿದಂತೆ ನಿರುದ್ಯೋಗ ಭತ್ಯೆ ಕೊಡುವ “ಯುವನಿಧಿ”,ಮತ್ತು ಅನ್ನಭಾಗ್ಯ ಯೋಜನೆಯಂತಹ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ ಆದರೂ ಮಳೆಯ ಅಭಾವದಿಂದ ಬರಪೀಡಿತ ಗ್ರಾಮಗಳಿಂದ “ಉದ್ಯೋಗಂ ಪುರುಷ ಲಕ್ಷಣಂ” ಅನ್ನುವ ನಂಬಿಕೆಯಲ್ಲಿ ಅಥಣಿ ಹಾಗೂ ಕಾಗವಾಡದಂತಹ ಪಟ್ಟಣಗಳಿಗೆ ದುಡಿಯಲು ಬರುವ ಜನರು ಕಡಿಮೆ ದರದ ಊಟವಿಲ್ಲದೆ ಉಪವಾಸವೇ ಉಳಿಯುವಂತಾಗುತ್ತಿದೆ.

ಹೋಟೆಲ್ ಗಳಲ್ಲಿ ಸಾಮಾನ್ಯ ಶಾಖಾಹಾರಿ ಊಟದ ದರವೂ ಎಂಭತ್ತು ತೊಂಬತ್ತರ ಆಸುಪಾಸಿನಲ್ಲಿ ಇದ್ದು ಉಪಹಾರಕ್ಕೆ ಶಿರಾ ,ಉಪ್ಪಿಟ್ಟು,ಅವಲಕ್ಕಿ,ಇಡ್ಲಿಯಂತಹ ಆಹಾರ ಪದಾರ್ಥಗಳು ಕನಿಷ್ಟವೆಂದರೂ ಮೂವತ್ತು ನಲವತ್ತು ರೂಪಾಯಿ ಹಾಗೂ ಚಹಾ ಕನಿಷ್ಠ ಐದು,ಹತ್ತು ಮತ್ತು ದೊಡ್ಡ ಹೋಟೆಲ್ ಗಳಲ್ಲಿ ಇಪ್ಪತ್ತು ರೂಪಾಯಿ ದರವಿದ್ದು ಬಡವರು ಉಪಾಹಾರ ಮಾಡುವದಕ್ಕೂ ಯೋಚಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಅಥಣಿ ತಾಲೂಕಿನ ಅಂತ್ಯೋದಯ ಪಡಿತರ ಫಲಾನುಭವಿಗಳ ಸಂಖ್ಯೆ 2 ಲಕ್ಷ 50 ಸಾವಿರದ 7 ಮತ್ತು ಹಾಲಿ ಇರುವ ಅಂತ್ಯೋದಯ ಕಾರ್ಡುಗಳ ಸಂಖ್ಯೆ 6 ಸಾವಿರದ 512 ಹಾಗೂ ಬಿಪಿಎಲ್ ಫಲಾನುಭವಿಗಳ ಸಂಖ್ಯೆ 2 ಲಕ್ಷ 82 ಸಾವಿರದ 459 ಮತ್ತು ಎಪಿ ಎಲ್ ಕಾರ್ಡದಾರರ ಸಂಖ್ಯೆ 22 ಸಾವಿರದ 900 ಆಗಿದ್ದು, ಫಲಾನುಭವಿಗಳ ಸಂಖ್ಯೆ 1 ಲಕ್ಷ 15 ಸಾವಿರದ 596 ಆಗಿದೆ.

ಇನ್ನು ಬಡತನ ರೇಖೆಯ ಕೆಳಗಿರುವ ಜನರ ಸಂಖ್ಯೆ ಒಟ್ಟು ಮತದಾರರ ಅರ್ಧದಷ್ಟು ಇದ್ದರೂ ಕೂಡ ಜನರ ಹಸಿವು ನೀಗಿಸಲು ಒಂದೂ ಇಂದಿರಾ ಕ್ಯಾಂಟಿನ್ ಆಸ್ಥಿತ್ವಕ್ಕೆ ಬರದೆ ಇರುವದು ವಿಪರ್ಯಾಸವೇ ಸರಿ.

ಈಗಾಗಲೇ ಅಥಣಿ ಪುರಸಭೆ ವತಿಯಿಂದ ಒಂದು ಬಾರಿ ಸ್ಥಳ ಪರಿಶೀಲನೆ ನಡೆಸಿದ್ದರೂ ಕೂಡ ತಾಂತ್ರಿಕ ತೊಂದರೆ ಮತ್ತು ಅನುಮೋದನೆಯ ನೆಪ ಹೇಳಿ ಇಂದಿರಾ ಕ್ಯಾಂಟೀನ್ ಕೈ ಬಿಡಲಾಗಿದ್ದು ಕಾಂಗ್ರೆಸ್ ಸರ್ಕಾರದ ಆಳ್ವಿಕೆಯ ಬಳಿಕ ಬಸವರಾಜ ಬೊಮ್ಮಾಯಿ ಅವರ ಬಿಜೆಪಿ ಸರ್ಕಾರ ಬಂದಾಗ ನೆನೆಗುದಿಗೆ ಬಿದ್ದ ಈ ಯೋಜನೆಯ ಬಗ್ಗೆ ಹಿಂದಿನ ಜನ ಪ್ರತಿ ನಿಧಿಗಳ ಜಾಣ ಮೌನದಿಂದ ತತ್ತರಿಸಿರುವ ಬಡವರು ಐದು ರೂಪಾಯಿಯಲ್ಲಿ ಬೆಳಗಿನ ಉಪಾಹಾರ ಹಾಗೂ ಹತ್ತು ರೂಪಾಯಿಗೆ ಮಧ್ಯಾಹ್ನದ ಊಟ ಕೊಡುವ ಮೂಲಕ ಹಸಿದವರ ಹೊಟ್ಟೆ ತುಂಬಿಸುವ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಇಂದಿರಾ ಕ್ಯಾಂಟೀನಿಗಾಗಿ ಜಾತಕ ಪಕ್ಷಿಯಂತೆ ಕಾಯುವಂತಾಗಿದೆ.

ಕೋವಿಡ್ ಸಮಯದಲ್ಲಿ ಯಾವ ಅಧಿಕಾರವೂ ಇಲ್ಲದ ವೇಳೆಯಲ್ಲೂ ನಿಷ್ಪಕ್ಷಪಾತ ವಾಗಿ, ನಿಷ್ಕಲ್ಮಷ ಮನಸ್ಸಿನಿಂದ ಜಾತಿ ಮತ ಪಂಥ ನೋಡದೆ ಜನಾನುರಾಗಿಯಾಗಿ ಅಥಣಿ ಮತ್ತು ಸುತ್ತಲಿನ ಹಳ್ಳಿಗಳಿಗೆ ಉಚಿತ ಗೋಧಿ,ಜೋಳ ಹಂಚಿ, ಸರ್ಕಾರಿ ಆಸ್ಪತ್ರೆಗೆ ವೆಂಟಿಲೆಟರ್ ಹಾಗೂ ಆಕ್ಸಿಜನ್ ಘಟಕವನ್ನು ಸ್ವಂತ ವೆಚ್ಚದಲ್ಲಿ ನಿರ್ಮಿಸಿ ಹಲವು ಮನೆಗಳ ಹಸಿವು ನೀಗಿಸುವದರ ಜೊತೆಗೆ ಸಾವಿರಾರು ಕೋವಿಡ್ ಸೊಂಕಿತರ ಜೀವ ಉಳಿಸಲು ಪರೋಕ್ಷವಾಗಿ ಕಾರಣರಾಗಿದ್ದ ಅಥಣಿ ಮತಕ್ಷೇತ್ರದ ಜನಮನದ ನಾಯಕ, ಮಾಜಿ ಉಪಮುಖ್ಯಮಂತ್ರಿ ಹಾಗೂ ಹಾಲಿ ಶಾಸಕರಾದ ಲಕ್ಷ್ಮಣ ಸವದಿ ಅವರು ಮತ್ತು ಅವರ ಆಪ್ತರಾದ ಕಾಗವಾಡದ ಶಾಸಕ ರಾಜು ಕಾಗೆ ಅವರು ಈ ನಿಟ್ಟಿನಲ್ಲಿ ಬಡ ಜನರಿಗೆ ಉಪಯೋಗವಾಗುವ ಇಂದಿರಾ ಕ್ಯಾಂಟೀನ್ ಗಳ ಸ್ಥಾಪನೆಗೆ ಹೆಚ್ಚಿನ ಗಮನ ಹರಿಸಿ ಈ ಯೋಜನೆಯ ಅನುಷ್ಠಾನಕ್ಕೆ ಮುಂದಾಗುತ್ತಾರಾ ಎಂದು ಬಹಳಷ್ಟು ಜನರು ಕಾಯುತ್ತಿದ್ದು ಆದಷ್ಟು ಬೇಗ ಅಥಣಿ ಹಾಗೂ ಕಾಗವಾಡದಲ್ಲಿ ಇಂದಿರಾ ಕ್ಯಾಂಟೀನ್ ಗಳು ಆರಂಭವಾಗಲಿ ಅನ್ನುವ ಆಶಯ ಗಡಿಭಾಗದ ತಾಲೂಕುಗಳ ಜನ ಸಾಮಾನ್ಯರದ್ದಾಗಿದೆ.

ದೀಪಕ ಶಿಂಧೇ
9482766018

Related Articles

Leave a Reply

Your email address will not be published. Required fields are marked *

Back to top button