ಸಿನಿಮಾ

ಮಹಾನಗರದ ಐದು ಪಾಲಿಕೆಗಳಿಗೆ ಚುನಾವಣೆ ನಡೆಸಲು ಸಾಧ್ಯ !!! ರಮೇಶ್ ಎನ್. ಆರ್.

ಮಾಧ್ಯಮದ ಆತ್ಮೀಯರೇ,

“ಮಹಾನಗರ ಪಾಲಿಕೆಗಳ ಆಡಳಿತ ವ್ಯವಸ್ಥೆಗೆ ಅತ್ಯವಶ್ಯಕವಿರುವ ಎಲ್ಲ ರೀತಿಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಟ್ಟ ನಂತರವಷ್ಟೇ ಬೆಂಗಳೂರು ಮಹಾನಗರದ ಐದು ಪಾಲಿಕೆಗಳಿಗೆ ಚುನಾವಣೆ ನಡೆಸಲು ಸಾಧ್ಯ !!! ಎಂಬ ವಾಸ್ತವ ಸತ್ಯವನ್ನು ರಾಜ್ಯ ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವ ಸಂಬಂಧ ಮಾನ್ಯ ಮುಖ್ಯಮಂತ್ರಿ ಶ್ರೀ. ಸಿದ್ಧರಾಮಯ್ಯನವರಿಗೆ ಪತ್ರ.”

ಇದೇ ವರ್ಷದ ಜೂನ್ ತಿಂಗಳ 30 ರ ಒಳಗೆ ಬೆಂಗಳೂರು ಮಹಾನಗರದ 05 ನಗರ ಪಾಲಿಕೆಗಳಿಗೆ ಚುನಾವಣೆ ನಡೆಸಬೇಕೆಂದು ಈಗಾಗಲೇ ಸರ್ವೋಚ್ಛ ನ್ಯಾಯಾಲಯವು ಆದೇಶಿಸಿರುತ್ತದೆ. ಹೀಗಿದ್ದಾಗ್ಯೂ ಸಹ, ಆಯಾ ನಗರ ಪಾಲಿಕೆಗಳ ಆಡಳಿತ ವ್ಯವಸ್ಥೆಗಳಿಗೆ ಅತ್ಯಗತ್ಯವಿರುವ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಆಯಾ ನಗರ ಪಾಲಿಕೆಗಳ ವ್ಯಾಪ್ತಿಯ ಪ್ರದೇಶಗಳಲ್ಲಿ ಪ್ರತ್ಯೇಕವಾಗಿ ಒಂದೇ ಪ್ರಾಂಗಣಗಳಲ್ಲಿ ಕಲ್ಪಿಸಿಕೊಟ್ಟ ನಂತರವಷ್ಟೇ ನಗರ ಪಾಲಿಕೆಗಳ ಚುನಾವಣೆ ನಡೆಸಲು ಸಾಧ್ಯ ಎಂಬ ಮಹಾ ಸತ್ಯವನ್ನು ಶ್ರೀ. ಸಿದ್ಧರಾಮಯ್ಯನವರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವ ಪ್ರಯತ್ನ ಇದಾಗಿದೆ.

ಪ್ರಸ್ತುತ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರ ವ್ಯಾಪ್ತಿಗೆ ಒಳಪಡುವ 05 ನಗರ ಪಾಲಿಕೆಗಳ ಪೈಕಿ, “ಬೆಂಗಳೂರು ಕೇಂದ್ರ ನಗರ ಪಾಲಿಕೆ”ಯನ್ನು ಹೊರತು ಪಡಿಸಿ ಇನ್ನುಳಿದ 04 ನಗರ ಪಾಲಿಕೆಗಳಿಗೆ ಅಗತ್ಯವಿರುವ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒಳಗೊಂಡ ಕೇಂದ್ರ ಕಛೇರಿಗಳ ಕಟ್ಟಡಗಳನ್ನು ಒಂದೇ ಸ್ಥಳಗಳಲ್ಲಿ ಆಯಾ ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ನಿರ್ಮಿಸಿದ ನಂತರವಷ್ಟೇ 05 ನಗರ ಪಾಲಿಕೆಗಳ ಚುನಾವಣೆಗಳನ್ನು ನಡೆಸಲು ಸಾಧ್ಯ.

“ಬೆಂಗಳೂರು ದಕ್ಷಿಣ ನಗರ ಪಾಲಿಕೆ”ಗೆ ಬನಶಂಕರಿಯ ಬಳಿ, “ಬೆಂಗಳೂರು ಪಶ್ಚಿಮ ನಗರ ಪಾಲಿಕೆ”ಗೆ ಅತ್ತಿಗುಪ್ಪೆಯ ಬಳಿ. “ಬೆಂಗಳೂರು ಉತ್ತರ ನಗರ ಪಾಲಿಕೆ”ಗೆ ಬ್ಯಾಟರಾಯನಪುರದ ಬಳಿ ಮತ್ತು “ಬೆಂಗಳೂರು ಪೂರ್ವ ನಗರ ಪಾಲಿಕೆ”ಗೆ ಮಹದೇವಪುರದ ಬಳಿ ಸ್ಥಳಗಳನ್ನು ಶ್ರೀ. ಸಿದ್ಧರಾಮಯ್ಯನವರ ಸರ್ಕಾರ ಗುರುತು ಮಾಡಿದೆ. ಆದರೆ, ಈ ಸ್ಥಳಗಳನ್ನು ಸರ್ಕಾರವು “ಕಂದಾಯ ಇಲಾಖೆ”ಯ ಮೂಲಕ “ಗ್ರೇಟರ್ ಬೆಂಗಳೂರು ಪ್ರಾಧಿಕಾರ”ಕ್ಕೆ ಕಾನೂನು ರೀತ್ಯಾ ಹಸ್ತಾಂತರ ಮಾಡುವ ಪ್ರಕ್ರಿಯೆಗೆ ಇದುವರೆಗೂ ಚಾಲನೆಯನ್ನೇ ನೀಡಿರುವುದಿಲ್ಲ !!!

ರಾಜ್ಯ ಸರ್ಕಾರವು 04 ನಗರ ಪಾಲಿಕೆಗಳಿಗೆಂದು ಗುರುತಿಸಿರುವ ಸ್ಥಳಗಳನ್ನು ಕಾನೂನು ರೀತ್ಯಾ GBA ವಶಕ್ಕೆ ನೀಡಿದ ನಂತರ, ಆಯಾ ಸ್ಥಳಗಳಲ್ಲಿ ಆಯಾ ಪಾಲಿಕೆಗಳ ಕೇಂದ್ರ ಕಛೇರಿ ಕಟ್ಟಡಗಳ ನಿರ್ಮಾಣ ಕಾರ್ಯಗಳಿಗೆ KTPP ಕಾಯ್ದೆಯನ್ವಯ ಟೆಂಡರ್ ಗಳನ್ನು ಆಹ್ವಾನಿಸಿ, ಎಲ್ಲಾ ಟೆಂಡರ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ, ಯಶಸ್ವೀ ಬಿಡ್ದಾರರಿಗೆ “ಕಾರ್ಯಾದೇಶ ಪತ್ರ”ಗಳನ್ನು ನೀಡಲು ಕನಿಷ್ಠ ಮೂರು ತಿಂಗಳ ಕಾಲಾವಧಿ ಆಗಿರುತ್ತದೆ.

ಈ ರೀತಿ “ಕಾರ್ಯಾದೇಶ ಪತ್ರ”ಗಳನ್ನು ಪಡೆದ ಗುತ್ತಿಗೆದಾರರಿಗೆ, ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ಒಳಗೊಂಡ ಆಯಾ ಪಾಲಿಕೆಗಳ “ಕೇಂದ್ರ ಕಛೇರಿ ಕಟ್ಟಡ”ಗಳ ನಿರ್ಮಾಣ ಕಾರ್ಯಗಳನ್ನು ಪೂರ್ಣಗೊಳಿಸಲು ಕನಿಷ್ಠ ಎರಡು ವರ್ಷಗಳ ಕಾಲಾವಧಿ ಅತ್ಯವಶ್ಯಕವಾಗಿರುತ್ತದೆ.

ಕೇಂದ್ರ ಕಛೇರಿ ಕಟ್ಟಡಗಳ ಕಾಮಗಾರಿ ಪೂರ್ಣಗೊಂಡ ನಂತರ ಅವಶ್ಯಕತೆ ಇರುವ ಪೀಠೋಪಕರಣಗಳು ಮತ್ತು ನೆಲೆವಸ್ತು (Furnitures & Fixtures) ಗಳನ್ನು ಅಳವಡಿಸುವ ಕಾರ್ಯಗಳಿಗೆ ಕನಿಷ್ಠ ಒಂದು ವರ್ಷದ ಕಾಲಾವಧಿ ಅತ್ಯಗತ್ಯವಾಗಿರುತ್ತದೆ.

ಹೀಗಾಗಿ ಕೇಂದ್ರ ಕಛೇರಿ ಕಟ್ಟಡಗಳ ನಿರ್ಮಾಣ ಹಾಗೂ ಅವುಗಳಿಗೆ ಅವಶ್ಯಕತೆಯಿರುವ ಪೀಠೋಪಕರಣಗಳು ಮತ್ತು ನೆಲೆವಸ್ತುಗಳನ್ನು ಅಳವಡಿಸುವ ಕಾರ್ಯಗಳನ್ನು ಸಮರೋಪಾದಿಯಲ್ಲಿ ಮಾಡಿದರೂ ಸಹ ಕನಿಷ್ಠ ಎರಡೂವರೆ ವರ್ಷಗಳ ಕಾಲಾವಧಿಯು ಬೇಕೇ ಬೇಕಿರುತ್ತದೆ.

“ಪ್ರತಿಯೊಂದು ಪಾಲಿಕೆಯ ಕೇಂದ್ರ ಕಛೇರಿಗೆ ಅತ್ಯವಶ್ಯಕವಾದ ಸಭಾಂಗಣಗಳು / ಕೊಠಡಿಗಳು / ಮೂಲಭೂತ ಸೌಕರ್ಯಗಳು”

ಪ್ರತಿಯೊಂದು ನಗರ ಪಾಲಿಕೆಗೆ 1) ವಿಶಾಲವಾದ ಮಹಾಪೌರರ ಸಭಾಂಗಣಗಳು, ಮಹಾಪೌರರ ಒಳಕೋಣೆ (Ante chamber) ಗಳು, ಮಹಾಪೌರರ ಸಿಬ್ಬಂದಿ ವರ್ಗದವರ ಕೊಠಡಿಗಳು, 2) ಉಪ ಮಹಾಪೌರರ ಸಭಾಂಗಣ, ಒಳಕೋಣೆ ಮತ್ತು ಸಿಬ್ಬಂದಿ ವರ್ಗದವರ ಕೊಠಡಿಗಳು, 3) ಆಡಳಿತ ಪಕ್ಷದ ನಾಯಕರು ಮತ್ತು ವಿರೋಧ ಪಕ್ಷದ ನಾಯಕರ ಸಭಾಂಗಣ, ಒಳಕೋಣೆ ಮತ್ತು ಅವರ ಸಿಬ್ಬಂದಿ ವರ್ಗದವರ ಕೊಠಡಿಗಳು, 4) 08 ಸ್ಥಾಯಿ ಸಮಿತಿಗಳ 08 ಸಭಾಂಗಣಗಳು, ಅವುಗಳ ಅಧ್ಯಕ್ಷರ ಒಳ ಕೋಣೆಗಳು ಮತ್ತು ಅವರ ಸಿಬ್ಬಂದಿ ವರ್ಗದವರ ಕೊಠಡಿಗಳು, 5) ಆಯಾ ಪಾಲಿಕೆಗಳ ಆಯುಕ್ತರ ವಿಶಾಲ ಕಛೇರಿಗಳು ಮತ್ತವರ ಸಿಬ್ಬಂದಿ ವರ್ಗದವರ ಬೃಹತ್ ಕೊಠಡಿಗಳು, 6) ಪಾಲಿಕೆಗಳ 17 ಇಲಾಖೆಗಳಿಗೆ ಸಂಬಂಧಿಸಿದ ವಿಶೇಷ ಆಯುಕ್ತರ ಕೊಠಡಿಗಳು ಮತ್ತವರ ಸಿಬ್ಬಂದಿ ವರ್ಗದವರ ಕೊಠಡಿಗಳು, 7) ಪಾಲಿಕೆಗಳ ಆಯುಕ್ತರ ಅಧೀನದ ಆಡಳಿತ ವಿಭಾಗದ ಸಿಬ್ಬಂದಿ ವರ್ಗದವರು ಕಾರ್ಯ ನಿರ್ವಹಿಸುವ ವಿಶಾಲ ಕಛೇರಿ ಕೊಠಡಿಗಳು, 8) ಆಯಾ ಪಾಲಿಕೆಗಳ “ಕೌನ್ಸಿಲ್ ಕಾರ್ಯದರ್ಶಿ”ಗಳ ಕಛೇರಿಗಳ ಕೊಠಡಿಗಳು ಮತ್ತವರ ಸಿಬ್ಬಂದಿ ವರ್ಗದವರಿಗೆ ಅಗತ್ಯವಿರುವ ವಿಶಾಲ ಕೊಠಡಿಗಳು, 9) ಆಯಾ ಪಾಲಿಕೆಗಳ “ಕಾನೂನು ಕೋಶ”ಗಳ ಮುಖ್ಯಸ್ಥರ ಕಛೇರಿ ಕೊಠಡಿಗಳು ಮತ್ತು “ಕಾನೂನು ಕೋಶ”ಗಳ ವಕೀಲರುಗಳಿಗೆ (ಪ್ರತಿಯೊಂದು ಪಾಲಿಕೆಗೆ ಕನಿಷ್ಠ 20 ವಕೀಲರ ತಂಡ) ವಿಶಾಲವಾದ ಕೊಠಡಿಗಳು, 10) ಆಯಾ ಪಾಲಿಕೆಗಳ “ನಿಯಂತ್ರಣ ಕೊಠಡಿ”ಗಳು, 11) “ಹಣಕಾಸು ವಿಭಾಗ”ಗಳ ಮುಖ್ಯ ಅಧಿಕಾರಿಗಳು ಮತ್ತವರ ಕಛೇರಿಗಳ ಸಿಬ್ಬಂದಿ ವರ್ಗದವರು ಕಾರ್ಯ ನಿರ್ವಹಿಸಲು ವಿಶಾಲವಾದ ಕೊಠಡಿಗಳು ಹಾಗೂ ಇವೆಲ್ಲವುಗಳಷ್ಟೇ ಮುಖ್ಯವಾಗಿ – 12) ಆಯಾ ಪಾಲಿಕೆಗಳ ಆಯುಕ್ತರು ತಮ್ಮ ಅಧೀನದ ಅಧಿಕಾರಿಗಳೊಂದಿಗೆ ಸಭೆ ನಡೆಸಲು, ಪರ ರಾಜ್ಯಗಳ / ವಿದೇಶೀ ಗಣ್ಯರು ಪ್ರತಿನಿಧಿಗಳೊಂದಿಗೆ ಸಭೆ ನಡೆಸಲು, ವಿವಿಧ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಲು ಮತ್ತು ಪತ್ರಿಕಾಗೋಷ್ಠಿಗಳನ್ನು ನಡೆಸಲು 70 – 80 ಮಂದಿ ಕೂರಬಹುದಾದ ವಿಶಾಲವಾದ ಸಭಾಂಗಣ, 13) ಪ್ರತೀ ತಿಂಗಳು ಕನಿಷ್ಠ ಎರಡು ದಿನ (ವಿಷಯ ಸಭೆ ಮತ್ತು ಮಾಸಿಕ ಸಭೆ) ಜನ ಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಮಾಧ್ಯಮದವರು ಭಾಗವಹಿಸಲು ಅವಶ್ಯಕತೆ ಇರುವ ಅತ್ಯಂತ ವಿಶಾಲವಾದ ಸಭಾಂಗಣ (Council Hall) ಮತ್ತು ಅದಕ್ಕೆ ಹೊಂದಿಕೊಂಡಂತಹ ಎರಡು ಬೃಹತ್ ಕೊಠಡಿಗಳು, 14) ವಿಷಯ ಸಭೆ / ಮಾಸಿಕ ಸಭೆ ನಡೆಯುವ ಸಂದರ್ಭಗಳಲ್ಲಿ ಜನಪ್ರತಿನಿಧಿಗಳು / ಅಧಿಕಾರಿಗಳು / ಮಾಧ್ಯಮದವರಿಗೆ ಉಪಹಾರ / ಊಟದ ವ್ಯವಸ್ಥೆ ಕಲ್ಪಿಸಲು ವಿಶಾಲವಾದ ಭೋಜನ ಕೊಠಡಿಗಳು ಹಾಗೂ 15) ಆಯಾ ಪಾಲಿಕೆಗಳ ಇಲಾಖೆಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಸಂಗ್ರಹಿಸಿ / ಸಂರಕ್ಷಿಸಿ ಇಡಲು ಅವಶ್ಯಕತೆಯಿರುವ “ದಾಖಲೆ ಕೊಠಡಿ”( Record Room) ಗಳನ್ನು ಪ್ರಥಮ ಪ್ರಾಶಸ್ತ್ಯ ನೀಡಿ ನಿರ್ಮಿಸಬೇಕಿರುವುದು ರಾಜ್ಯ ಸರ್ಕಾರದ ಮತ್ತು GBA ದ ಕರ್ತವ್ಯವಾಗಿರುತ್ತದೆ.

ಅದರೊಂದಿಗೆ:- ಮಹಾಪೌರರ ಸಭಾಂಗಣ, ಆಯುಕ್ತರ ಸಭಾಂಗಣ ಮತ್ತು ಕೌನ್ಸಿಲ್ ಸಭಾಂಗಣಗಳಲ್ಲಿ ಭಾಗವಹಿಸುವ ಪ್ರತಿಯೊಬ್ಬ ಜನಪ್ರತಿನಿಧಿ / ಅಧಿಕಾರಿ / ಪ್ರತಿನಿಧಿಗಳು ಕುಳಿತುಕೊಳ್ಳುವ ಆಸನಗಳ ಜೊತೆಗೆ ಮಾತನಾಡಲು ಧ್ವನಿವರ್ಧಕಗಳನ್ನು ಅಳವಡಿಸಿರುವ ಪೀಠೋಪಕರಣಗಳು ಮತ್ತು ನೆಲೆವಸ್ತುಗಳ ವ್ಯವಸ್ಥೆಯನ್ನು ಕಲ್ಪಿಸಬೇಕಿರುತ್ತದೆ.
ಇವೆಲ್ಲವುಗಳ ಜೊತೆಗೆ ಪ್ರತಿಯೊಂದು ಪಾಲಿಕೆಯ ಅಂಗಳದಲ್ಲಿ ಕನಿಷ್ಠ 200 ರಿಂದ 250 ವಾಹನಗಳ ನಿಲುಗಡೆಗೆ ಸ್ಥಳವನ್ನು ಮೀಸಲಿಡಬೇಕಿರುತ್ತದೆ.

“ಕೌನ್ಸಿಲ್ ಸಭಾಂಗಣ ಹೇಗಿರಬೇಕು ?”

ಯಾವುದೇ ಮಹಾನಗರಗಳಲ್ಲಿನ “ಪೌರ ಸಭಾಂಗಣ”(Council Hall) ಗಳ ಒಳಾಂಗಣವು “ತ್ರಿಭುಜಾಕೃತಿ”ಯಲ್ಲಿರಬೇಕಿರುವುದು ಕಡ್ಡಾಯವಾಗಿರುತ್ತದೆ. ಚೌಕಾಕಾರದ, ಆಯತಾಕಾರದ ಅಥವಾ ದುಂಡನೆಯ ಆಕಾರದಲ್ಲಿರುವ ಒಳಾಂಗಣಗಳಲ್ಲಿ “ಮಹಾಪೌರರ ಆಡಳಿತ” ಇರುವ “ಕೌನ್ಸಿಲ್ ಸಭೆ”ಗಳು ನಡೆಯುವಂತಿಲ್ಲ. ಏಕೆಂದರೆ – ಕೌನ್ಸಿಲ್ ಸಭೆಗಳಲ್ಲಿ ಹಾಜರಿರುವ ಜನ ಪ್ರತಿನಿಧಿಗಳು, ಅಧಿಕಾರಿಗಳು, ಮಾಧ್ಯಮದವರು, ಸಾರ್ವಜನಿಕರು ಮತ್ತು ರೆಕಾರ್ಡಿಂಗ್ ಅಧಿಕಾರಿಗಳೆಲ್ಲರೂ ಮಹಾಪೌರರ ಕಣ್ಣುಗಳ ನೇರ ನೋಟಕ್ಕೆ ಕಾಣಿಸುವಂತಿರಬೇಕು. ಮಹಾಪೌರರ ಎಡ ಭಾಗದಲ್ಲಿ ಆಯುಕ್ತರು ಮತ್ತು ಬಲ ಭಾಗದಲ್ಲಿ ಉಪ ಮಹಾಪೌರರು ಕುಳಿತುಕೊಳ್ಳಬೇಕಿರುವುದನ್ನು ಹೊರತುಪಡಿಸಿ, ಮೇಲೆ ತಿಳಿಸಿರುವಂತ ಎಲ್ಲರೂ ಮಹಾಪೌರರ ಕಣ್ಣುಗಳ ನೇರ ನೋಟಕ್ಕೆ ಕಾಣಿಸುವಂತೆಯೇ ಆಸೀನರಾಗಿರಬೇಕಿರುತ್ತದೆ.

“ಅವಶ್ಯಕತೆ ಇರುವ ಆರ್ಥಿಕ ಸಂಪನ್ಮೂಲಗಳ ಕ್ರೋಢೀಕರಣಕ್ಕೆ ಶ್ರೀ. ಸಿದ್ಧರಾಮಯ್ಯನವರ ಸರ್ಕಾರವು ಯಾವ ವ್ಯವಸ್ಥೆಯನ್ನು ಮಾಡಿಕೊಂಡಿದೆ ?”

ಹಿಂದಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 198 ವಾರ್ಡ್ ಗಳು ಮತ್ತು 08 ವಲಯಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ‘A’ ಶ್ರೇಣಿಯ ಅಧಿಕಾರಿಗಳಿಂದ ಹಿಡಿದು ‘D’ಶ್ರೇಣಿಯ ನೌಕರರವರೆಗಿನ ಉದ್ಯೋಗಿಗಳ ಸಂಖ್ಯೆ ಒಟ್ಟು 2,818 ಮಂದಿ. ಈಗಿರುವ 2,818 ಮಂದಿ ಅಧಿಕಾರಿ – ನೌಕರರ ವೇತನಗಳಿಗೆಂದು ಪ್ರತೀ ತಿಂಗಳು ಸುಮಾರು ₹. 98 ಕೋಟಿಗಳಂತೆ, ವರ್ಷವೊಂದಕ್ಕೆ ಸುಮಾರು ₹. 1,200 ಕೋಟಿ ರೂ. ಗಳಷ್ಟು ಹಣವನ್ನು ವೆಚ್ಛ ಮಾಡುತ್ತಿದೆ.

ಆದರೆ, 02/09/2025 ರಿಂದ ಅಸ್ತಿತ್ವಕ್ಕೆ ಬಂದಿರುವ 05 ನಗರ ಪಾಲಿಕೆಗಳಿಗೆ ಸುಮಾರು 6,350 ಕ್ಕೂ ಹೆಚ್ಚು ಅಧಿಕಾರಿ / ನೌಕರರ ಅವಶ್ಯಕತೆ ಇದ್ದು, ಖಾಯಂ ಅಥವಾ ಗುತ್ತಿಗೆ ಆಧಾರಿತ ಅಧಿಕಾರಿ / ನೌಕರರ ನೇಮಕಾತಿ ಮಾಡಿಕೊಂಡರೆ, ಅವರುಗಳ ವೇತನಕ್ಕೆಂದು ಪ್ರತೀ ತಿಂಗಳಿಗೆ ಕನಿಷ್ಠ ₹. 250 ಕೋಟಿಗಳಂತೆ ವರ್ಷವೊಂದಕ್ಕೆ ಸುಮಾರು ₹. 3,000 ಕೋಟಿ ರೂ. ಗಳಿಗೂ ಹೆಚ್ಚು ಹಣವನ್ನು ವೆಚ್ಛ ಮಾಡಲೇಬೇಕಿರುತ್ತದೆ.

ಆಡಳಿತಾಧಿಕಾರಿಗಳ ಅಧಿಕಾರ ಬದಲಾಗಿ ಚುನಾಯಿತ ಪ್ರತಿನಿಧಿಗಳ ಆಡಳಿತ ವ್ಯವಸ್ಥೆ ಜಾರಿಗೆ ಬರುವ ವೇಳೆಯೊಳಗೆ 05 ನಗರ ಪಾಲಿಕೆಗಳಿಗೆ ಅತ್ಯವಶ್ಯಕತೆ ಇರುವ ಕನಿಷ್ಠ 6,350 ಅಧಿಕಾರಿ / ನೌಕರರನ್ನು ನಿಯೋಜನೆ ಮಾಡಬೇಕಾದ ಜವಾಬ್ದಾರಿ ರಾಜ್ಯ ಸರ್ಕಾರದ್ದಾಗಿರುತ್ತದೆ.

ಈ ರೀತಿ, ಅಧಿಕಾರಿ – ನೌಕರರ ವೇತನಗಳಿಗೆ ಈಗಿನ ₹. 1,200 ಕೋಟಿ ರೂ. ಗಳ ಬದಲಿಗೆ ಅವಶ್ಯಕತೆ ಇರುವ ₹. 3,000 ಕೋಟಿ ರೂ. ಗಳ ಪೈಕಿ – ಕೊರತೆಯಿರುವ ₹. 1,800 ಕೋಟಿ ರೂ. ಗಳನ್ನು 05 ಪಾಲಿಕೆಗಳು ಹೊಂದಿಸಿಕೊಳ್ಳುವುದು ಹೇಗೆ ? ಇದಕ್ಕೆ ರಾಜ್ಯ ಸರ್ಕಾರದ ನಗರಾಭಿವೃದ್ಧಿ ಇಲಾಖೆಯು ಕಂಡುಕೊಂಡಿರುವ ಮಾರ್ಗಗಳೇನು ?

  • 0 – 0 –

ಆದುದುರಿಂದ, ತಮ್ಮ ಸರ್ಕಾರದ ಸ್ವಾರ್ಥಕ್ಕಾಗಿ ನ್ಯಾಯಾಲಯದ, ಸಾರ್ವಜನಿಕರ ಮತ್ತು ಟಿಕೆಟ್ ಆಕಾಂಕ್ಷಿಗಳ ದಿಕ್ಕನ್ನು ತಪ್ಪಿಸುವ ಕಾರ್ಯಗಳನ್ನು ಮಾಡದೇ, “ವಾಸ್ತವ ಸಂಗತಿ”ಗಳನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡುವ ಸಂಬಂಧ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಸಮಸ್ತ ಬೆಂಗಳೂರಿನ ನಾಗರಿಕರ ಪರವಾಗಿ ಮತ್ತು ಎಲ್ಲಾ ರಾಜಕೀಯ ಪಕ್ಷಗಳ ಟಿಕೆಟ್ ಆಕಾಂಕ್ಷಿಗಳ ಪರವಾಗಿ ಮುಖ್ಯಮಂತ್ರಿ ಶ್ರೀ. ಸಿದ್ಧರಾಮಯ್ಯನವರನ್ನು ಆಗ್ರಹಿಸಲಾಗಿದೆ.

  • ರಮೇಶ್ ಎನ್. ಆರ್.
    ಮಾಜಿ ಅಧ್ಯಕ್ಷರು
    ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕ
    ಹಾಗೂ
    ಆಡಳಿತ ಪಕ್ಷದ ಮಾಜಿ ನಾಯಕರು, ಬಿಬಿಎಂಪಿ

Related Articles

Leave a Reply

Your email address will not be published. Required fields are marked *

Back to top button