ಒಳಮೀಸಲಾತಿ ಜಾರಿಗಾಗಿ ಎಲ್ಲರೂ ದನಿ ಎತ್ತಬೇಕು. ನಾರಾಯಣಸ್ವಾಮಿ ಜೀ.

ಒಳಮೀಸಲಾತಿ ಜಾರಿಗಾಗಿ ಎಲ್ಲರೂ ದನಿ ಎತ್ತಬೇಕು, ಮತ್ತು ಸರ್ಕಾರದ ವಿಳಂಬ ನೀತಿಯನ್ನೂ ಪ್ರಶ್ನಿಸಬೇಕಿದೆ. ಇತ್ತೀಚೆಗೆ ಈ ವಿಷಯದಲ್ಲಿ ಒಂದಷ್ಟು ಬಾವತೀವ್ರತೆಯಿಂದ ಕೆಲಸ ಮಾಡುತ್ತಿರುವ ಇಬ್ಬರು ಸ್ನೇಹಿತರೆಂದರೆ B R Bhaskar Prasad ಮತ್ತು Hari Ram A . ಇವರಿಬ್ಬರೂ ನಮ್ಮ ಬಹುದಿನಗಳ ಒಡನಾಡಿಗಳೇ ಆಗಿದ್ದರಲ್ಲದೆ ಇತ್ತೀಚಿನ ದಿನಗಳಲ್ಲಿ ಇಬ್ಬರೂ ಸೇರಿಯೇ ಕೆಲವಾರು ವಿಷಯಗಳ ಕುರಿತು ಮಾತನಾಡಿಕೊಂಡು ಬಂದಿದ್ದಾರೆ. ಕೆಲವೊಮ್ಮೆ ಇವರು ಹೇಳುವ ವಿಷಯ ಸರಿ ಇದ್ದರೂ ವಿಧಾನ, ರಾಜಕಾರಣಿಗಳಿಗೆ ಸಾರ್ವಜನಿಕವಾಗಿ ಟೀಕಿಸುವಾಗ ಏಕವಚನದಲ್ಲಿ ನಿಂದಿಸುವಾಗ ಅಂತಹ ಮಾತುಗಳು ಅಗತ್ಯವಿರಲಿಲ್ಲ ಎನಿಸಿದ್ದಿದೆ.
ಬಾಸ್ಕರ್ ಪ್ರಸಾದ್ ಅವರು ಇಂದು ಚಿತ್ರದುರ್ಗದಲ್ಲಿ ಸಮಾನ ಮನಸ್ಕ ಗೆಳೆಯರೊಂದಿಗೆ ಸಬೆ ನಡೆಸಿದ್ದಾರೆ. ಅವರ ಈ ನಡೆ ಸ್ವಾಗತಾರ್ಹ. ಒಳ ಮೀಸಲಾತಿ ಜಾರಿಗಾಗಿ ಗಟ್ಟಿ ಜನಾಬಿಪ್ರಾಯ ರೂಪಿಸುವ ಯಾವುದೇ ಪ್ರಯತ್ನಕ್ಕೆ ನಾವೆಲ್ಲರೂ ಬೆಂಬಲಿಸುವುದು ನಮ್ಮ ಜವಾಬ್ದಾರಿ.
ಈಗ ಶಾಕಿಂಗ್ ವಿಷಯವೇನೆಂದರೆ, ಇಂದು ಹರಿರಾಮ್ ಅವರು ಒಳಮೀಸಲಾತಿ ವಿಷಯದಲ್ಲಿ ಬಿಜೆಪಿ ನಡೆಸುತ್ತಿರುವ ಹೋರಾಟಕ್ಕೆ ತಮ್ಮ ಬೆಂಬಲವಿದೆ ಎಂದು ಮಾದ್ಯಮಗಳ ಎದುರು ಹೇಳಿರುವುದು ನಿಜಕ್ಕೂ ಆಗಾತಕಾರಿಯಾಗಿದೆ. ಇದು ಇವರು ತಮಗೇ ಮಾಡಿಕೊಳ್ಳುತ್ತಿರುವ ವಂಚನೆಯಂತೆ ಕಾಣುತ್ತಿದೆ. ಹರಿರಾಂ ಅವರು ಎನ್ ಮಹೇಶ್ ಹಾಕಿದ ಶೂ ಒಳಗೆ ಕಾಲಿಡುತ್ತಿದ್ದಾರಾ ಎಂಬ ಅನುಮಾನಕ್ಕೆ ಇದು ಎಡೆಮಾಡಿದೆ.
ಒಳ ಮೀಸಲಾತಿಗಾಗಿ ಕಳೆದ ಮೂರು ನಾಲ್ಕು ದಶಕಗಳಿಂದ ತೀವ್ರ ಮಟ್ಟದಲ್ಲಿ ಹೋರಾಟ ನಡೆಸಿಕೊಂಡು ಬಂದಿರುವುದು ಮಾದಿಗ ಸಮುದಾಯ. 2012ರಲ್ಲಿ ಬೆಳಗಾವಿಯಲ್ಲಿ ಮಾದಿಗ ಸಮುದಾಯದ ಹತ್ತಾರು ಸಾವಿರ ಜನರ ಒಳಮೀಸಲಾತಿ ಹೋರಾಟ ನಡೆಸಿದಾಗ ಲಾಟಿಚಾರ್ಜ್ ನಡೆಸಿ ರಕ್ತಹರಿಸಿದ್ದವರು ಬಿಜೆಪಿಯವರೇ ಆಗಿದ್ದರು. ಆಂದ್ರದಲ್ಲಿ ಸರ್ಕಾರ ನೇಮಿಸಿದ್ದ ಉಷಾ ಮೆಹ್ರ ಸಮಿತಿ ಸ್ಪಷ್ಟವಾಗಿ ಶಿಪಾರಸು ಮಾಡಿ, ಒಳಮೀಸಲಾತಿಗಾಗಿ ಸಂಸತ್ತು ಸಂವಿದಾನ ತಿದ್ದುಪಡಿ ಮಾಡಬೇಕು ಎಂದು ತಿಳಿಸಿತ್ತು. ಮೇಲ್ಜಾತಿಗಳ 10% ಮೀಸಲಾತಿಗಾಗಿ ಯಾವ ಹೋರಾಟ, ಚಳವಳಿ ಇಲ್ಲದಿದ್ದರೂ ಮೂರೇ ದಿನಗಳಲ್ಲಿ ಸಂವಿದಾನ ತಿದ್ದುಪಡಿ ಮಾಡಿದ್ದ ಬಿಜೆಪಿ ಒಳಮೀಸಲಾತಿಗಾಗಿ ಕಳೆದ 10 ವರ್ಷಗಳಲ್ಲಿ ಈ ಕೆಲಸ ಮಾಡಲಿಲ್ಲ. ಆರೆಸ್ಸೆಸ್ ನ ವಾದಿರಾಜನಂತವರು ಈ ವಿಷಯದಲ್ಲಿ ದೊಡ್ಡ ಹಿಪೊಕ್ರೈಟ್ ಗಳಾಗಿ ವರ್ತಿಸಿದರೇ ವಿನಃ ಬ್ರಾಹ್ಮಣರಿಗೆ EWS ಮಾಡಿಸಿದಂತೆ ದಲಿತರಿಗೆ ಒಳಮೀಸಲಾತಿ ಮಾಡಿಸಲಿಲ್ಲ. ಆದರೆ RSS- BJP ಗಳು ರಾಜ್ಯದಲ್ಲಿ ಇರುವ ಕಾಂಗ್ರೆಸ್ ವಿರುದ್ಧ ಮಾದಿಗರನ್ನು ಎತ್ತಿಕಟ್ಟುವ ಏಕೈಕ ಕಾರಣಕ್ಕೆ ಒಳಮೀಸಲಾತಿ ಬೆಂಬಲಿಸುವ ನಾಟಕ ಮಾಡಿಕೊಂಡು ಬಂದಿರುವುದು ಎಲ್ಲರಿಗೂ ತಿಳಿದ ಸಂಗತಿ. ತನ್ನದೇ ಸರ್ಕಾರ ಇದ್ದಾಗ ಕಡೇ ಕ್ಷಣದಲ್ಲಿ ಸಲ್ಲಿಸಿದ್ದ ಮಾದುಸ್ವಾಮಿ ವರದಿ ಎಂಬುದು ಒಂದು disaster ಅನ್ನುವುದು ಬಹಳ ಜನರಿಗೆ ತಿಳಿಯುವುದರೊಳಗೆ ಬಿಜೆಪಿ ಅದಿಕಾರ ಕಳೆದುಕೊಂಡಿತು.
ಹೌದು, ಸುಪ್ರೀಂ ಕೋರ್ಟಿನ ತೀರ್ಮಾನ ಒಂದು ಬರವಸೆಯನ್ನು ದಲಿತ ಸಮುದಾಯಗಳಿಗೆ ನೀಡಿದ್ದರೂ ಅದರ ಜಾರಿಗಾಗಿ ಅನುಸರಿಸಬೇಕಾದ ಸೂತ್ರವನ್ನು ರಾಜ್ಯ ಸರ್ಕಾರ ಕಂಡುಕೊಳ್ಳಲು ವಿಳಂಬನೀತಿ ಮಾಡುತ್ತಿದೆ. ಈಗ ನೇಮಿಸಿರುವ ನ್ಯಾ. ನಾಗಮೋಹನ್ ದಾಸ್ ನೇತೃತ್ವದ ಆಯೋಗದ ಕುರಿತು ಸಕಾರಣಗಳಿಗಾಗಿ ಅನುಮಾನಗಳು ಶುರುವಾಗಿವೆ.
ಇಂತಹ ಸಂದರ್ಬದಲ್ಲಿ ಒಳಮೀಸಲಾತಿ ಆಶಯವನ್ನು ಅರಿತ ಎಲ್ಲಾ ಪರಿಶಿಷ್ಟ ಜಾತಿಗಳ ಮುಂದಾಳುಗಳೊಂದಿಗೆ ಸಮಾಜದ ಪ್ರತಿಯೊಬ್ಬ ಪ್ರಜ್ಞಾವಂತರೂ ನಿಂತು ಬೆಂಬಲ ಸೂಚಿಸಬೇಕಿದೆ.
ಆದರೆ, ಇದೇ ಸಂದರ್ಬದಲ್ಲಿ ಅತ್ಯಂತ ಅವಕಾಶವಾದಿಯಾಗಿ ವರ್ತಿಸುತ್ತಿರುವ ಬಿಜೆಪಿಗೂ ಪ್ರಶ್ನೆಗಳನ್ನು ಕೇಳಬೇಕಿದೆ. ಇಂದು ಬಿಜೆಪಿ ಅದಿಕಾರದಲ್ಲಿ ಇರುವ ಯಾವ ರಾಜ್ಯದಲ್ಲಿ ಬಿಜೆಪಿ ಒಳಮೀಸಲಾತಿಯನ್ನು ಸಮರ್ಪಕವಾಗಿ ಜಾರಿ ಮಾಡಿದೆ? ಸದಾಶಿವ ವರದಿಯನ್ನು ಕನಿಷ್ಟ ಚರ್ಚೆಗೂ ಬಿಡದೇ ಸಾರಾಸಗಟಾಗಿ ತಿರಸ್ಕರಿಸಿ ಇಂದು ಸುಪ್ರೀಂ ಕೋರ್ಟ್ ತೀರ್ಪು ಬಂದ ಮೇಲೂ ಜಾರಿ ವಿಳಂಬವಾಗಲು ಇದೇ ಬಿಜೆಪಿ ಕಾರಣವಲ್ಲವೇ?
ದಲಿತ ಒಬಿಸಿಗಳ ಮೀಸಲಾತಿಯ ಕುರಿತೇ ದ್ವೇಷ ಕಾರುವ ಆರೆಸ್ಸೆಸ್ ಬಿಜೆಪಿಗೆ ಒಳಮೀಸಲಾತಿ ಕುರಿತು ನೈಜ ಕಾಳಜಿ ಇರಲು ಸಾದ್ಯವೆ?
ಈಗ ಹರಿರಾಂ ಅವರಂತಹ ಮುಂದಾಳುಗಳು ಬಿಜೆಪಿಗೆ ಬೆಂಬಲಿಸುತ್ತಿರುವುದರ ಹಿಂದೆ ಅದೇ ಕೇಶವಕೃಪಾದ ಕೊಲೆಗಡುಕ ಕೈಗಳು ಕೆಲಸ ಮಾಡಿರಬಹುದೆ? ಹೇಗೆ ಎನ್ ಮಹೇಶ್, ಪಿ ರಾಜೀವರನ್ನು ಆರೆಸ್ಸೆಸ್ ಗುಳುಂ ಮಾಡಿ ನೀರು ಕುಡಿಯಿತೋ ಹಾಗೇ ಇವರನ್ನೂ ಏನಾದರೂ?
ಒಂದೊಮ್ಮೆ ಇದು ಹಾಗೇ ಆಗಿದ್ದರೆ… ನಿಜಕ್ಕೂ ವಿಷಾದನೀಯ. ಪತಂಗವೊಂದು ಬೆಳಕು ಹಿಡಿಯುವ ಬ್ರಮೆಯಿಂದ ಬೆಂಕಿಯನ್ನು ಅಪ್ಪಿಕೊಂಡ ರೀತಿಯಲ್ಲದೇ ಬೇರೇನೂ ಆಗಲು ಸಾದ್ಯವಿಲ್ಲ.



