ರಾಜ್ಯ

ಕೆಲಸ ಮಾಡದೆ ಕುಳಿತು, ಮಲಗಿ ಕಾಲಹರಣ? ನರೇಗಾ ಕೂಲಿ ಕಾರ್ಮಿಕರ ವಿರುದ್ಧ ಆರೋಪ.

ಕೆಲಸ ಮಾಡದೆ ಕುಳಿತು, ಮಲಗಿ ಕಾಲಹರಣ? ನರೇಗಾ ಕೂಲಿ ಕಾರ್ಮಿಕರ ವಿರುದ್ಧ ಆರೋಪ

ಕನಕಗಿರಿ: ತಾಲೂಕಿನ ಕನ್ನರಮಡು ಕೆರೆಯಲ್ಲಿ ನರೇಗಾ ಯೋಜನೆಯಡಿ ಕಾಮಗಾರಿ ನಡೆಸಲು ಬಂದಿದ್ದ ಹಣವಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಲಿ ಕಾರ್ಮಿಕರು ಕೆಲಸ ಮಾಡದೆ ಅಲ್ಲಲ್ಲಿ ಕುಳಿತು, ಮಲಗಿ ಕಾಲಹರಣ ಮಾಡುತ್ತಿರುವ ದೃಶ್ಯ ಸ್ಥಳೀಯ ಪತ್ರಕರ್ತರ ಗಮನಕ್ಕೆ ಬಂದಿದೆ.

ನರೇಗಾ ಯೋಜನೆಯಡಿ ಕೂಲಿ ಪಡೆಯಲು ಕಾಮಗಾರಿ ಸ್ಥಳಕ್ಕೆ ಬಂದಿದ್ದ ಕಾರ್ಮಿಕರು ನಿಗದಿತ ಕೆಲಸ ನಿರ್ವಹಿಸದೆ ಸಮಯ ಕಳೆಯುತ್ತಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಪತ್ರಕರ್ತರು ಕೆಲ ಕಾರ್ಮಿಕರನ್ನು ಈ ಕುರಿತು ಪ್ರಶ್ನಿಸಿದ್ದಾರೆ.

ಆಗ ಕಾರ್ಮಿಕರು, “ಕೆಲಸ ಮಾಡಿಸಲು ಬಂದಿರುವ ಮೇಸ್ತ್ರಿ ನಮ್ಮನ್ನು ಕೇಳುವುದಿಲ್ಲ. ಯಾರೊಬ್ಬರೂ ನಮ್ಮನ್ನು ಏನೂ ಕೇಳುವುದಿಲ್ಲ. ಅಧಿಕಾರಿಗಳೇ ಕೇಳದಿದ್ದಾಗ ನೀವು ಪತ್ರಕರ್ತರು ಕೇಳಿ ಏನು ಮಾಡುತ್ತೀರಿ?” ಎಂದು ಪತ್ರಕರ್ತರನ್ನೇ ಪ್ರಶ್ನಿಸಿದ್ದಾರೆ ಎನ್ನಲಾಗಿದೆ.

ಕಾರ್ಮಿಕರ ಈ ಹೇಳಿಕೆ ಇದೀಗ ಹಲವು ಅನುಮಾನಗಳಿಗೆ ಕಾರಣವಾಗಿದೆ. ನರೇಗಾ ಯೋಜನೆಯಡಿ ಕಾರ್ಮಿಕರಿಗೆ ನಿಗದಿತ ಕೆಲಸ ನೀಡಲಾಗುತ್ತಿದೆಯೇ? ಕಾಮಗಾರಿ ಸ್ಥಳದಲ್ಲಿ ಮೇಸ್ತ್ರಿ ಹಾಗೂ ಮೇಲ್ವಿಚಾರಕರು ಸಮರ್ಪಕವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆಯೇ? ಕಾರ್ಮಿಕರ ಹಾಜರಾತಿ ಹೇಗೆ ದಾಖಲಿಸಲಾಗುತ್ತಿದೆ? ಕೆಲಸದ ಪ್ರಮಾಣವನ್ನು ಪರಿಶೀಲಿಸದೇ ಕೂಲಿ ಪಾವತಿಸಲಾಗುತ್ತಿದೆಯೇ? ಎಂಬ ಪ್ರಶ್ನೆಗಳು ಸಾರ್ವಜನಿಕರಲ್ಲಿ ಮೂಡಿವೆ.

ಸರ್ಕಾರದ ಉದ್ಯೋಗ ಖಾತ್ರಿ ಯೋಜನೆಯ ಉದ್ದೇಶ ಗ್ರಾಮೀಣ ಜನರಿಗೆ ಉದ್ಯೋಗ ನೀಡುವುದರ ಜೊತೆಗೆ ಸಾರ್ವಜನಿಕ ಆಸ್ತಿಗಳ ಅಭಿವೃದ್ಧಿ ಮಾಡುವುದು. ಆದರೆ ಕಾಮಗಾರಿ ಸ್ಥಳದಲ್ಲಿ ಕೆಲಸ ನಡೆಯದೆ ಕೇವಲ ಹಾಜರಾತಿ ಮತ್ತು ಕೂಲಿ ಪಾವತಿಯಾಗುತ್ತಿದ್ದರೆ, ಇದು ಸರ್ಕಾರದ ಯೋಜನೆಯ ಉದ್ದೇಶಕ್ಕೆ ಧಕ್ಕೆ ತರುವಂತಹ ಸಂಗತಿಯಾಗಲಿದೆ.

ಈ ಹಿನ್ನೆಲೆಯಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವ ಗಂಗಾವತಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಈ ಆರೋಪಗಳ ಬಗ್ಗೆ ಉತ್ತರ ನೀಡಬೇಕಾಗಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಅಧಿಕಾರಿಗಳು ಕೂಡಲೇ ಕನ್ನರಮಡು ಕೆರೆಯ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ, ಮಸ್ಟರ್ ರೋಲ್, ಕಾರ್ಮಿಕರ ಹಾಜರಾತಿ, ಕೆಲಸದ ಪ್ರಮಾಣ, ಮೇಸ್ತ್ರಿಯ ಕರ್ತವ್ಯ ಹಾಗೂ ಕೂಲಿ ಪಾವತಿ ದಾಖಲೆಗಳನ್ನು ಪರಿಶೀಲಿಸಬೇಕು. ಕೆಲಸ ಮಾಡದೆ ಕೂಲಿ ಪಡೆಯುತ್ತಿರುವುದು ಅಥವಾ ನಿಯಮ ಉಲ್ಲಂಘನೆಯಾಗಿರುವುದು ಕಂಡುಬಂದರೆ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬಂದಿದೆ.

“ಅಧಿಕಾರಿಗಳೇ ಪರಿಶೀಲನೆ ಮಾಡದಿದ್ದರೆ ನರೇಗಾ ಕಾಮಗಾರಿಗಳ ಗುಣಮಟ್ಟ ಹಾಗೂ ಸರ್ಕಾರದ ಹಣದ ಬಳಕೆಯನ್ನು ಯಾರು ಪ್ರಶ್ನಿಸಬೇಕು?” ಎಂಬ ಪ್ರಶ್ನೆ ಇದೀಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ.
ಗೌತಮ್ ಯಾದವ್ ಕನಕಗಿರಿ ಪ್ರಜಾ ಶ್ರೀ ಪತ್ರಿಕೆ ಕೊಪ್ಪಳ ಜಿಲ್ಲಾ ವರದಿಗಾರ.

Related Articles

Leave a Reply

Your email address will not be published. Required fields are marked *

Back to top button