ಕೊಪ್ಪಳ ಜಿಲ್ಲೆಗೆ ಸಚಿವ ಸಂಪುಟದಲ್ಲಿ ಡಬಲ್ ಪ್ರತಿನಿಧಿತ್ವ: ಕನಕಗಿರಿ, ಯಲಬುರ್ಗಾ ಕ್ಷೇತ್ರಗಳಲ್ಲಿ ಸಂಭ್ರಮ

ಕೊಪ್ಪಳ ಜಿಲ್ಲೆಗೆ ಸಚಿವ ಸಂಪುಟದಲ್ಲಿ ಡಬಲ್ ಪ್ರತಿನಿಧಿತ್ವ: ಕನಕಗಿರಿ, ಯಲಬುರ್ಗಾ ಕ್ಷೇತ್ರಗಳಲ್ಲಿ ಸಂಭ್ರಮ
ಕನಕಗಿರಿ, ಆ. 3: ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಪ್ರಕಟವಾದ ನೂತನ ಸಚಿವರ ಪಟ್ಟಿಯಲ್ಲಿ ಕೊಪ್ಪಳ ಜಿಲ್ಲೆಯಿಂದ ಶಿವರಾಜ್ ತಂಗಡಗಿ ಹಾಗೂ ಬಸವರಾಜ ರಾಯರೆಡ್ಡಿ ಅವರಿಗೆ ಸಚಿವ ಸ್ಥಾನ ದೊರೆತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ.
ಕನಕಗಿರಿ ಹಾಗೂ ಯಲಬುರ್ಗಾ ಕ್ಷೇತ್ರಗಳ ಜನರು ಸಚಿವ ಸ್ಥಾನ ದೊರೆತಿರುವುದನ್ನು ಸ್ವಾಗತಿಸಿ ಸಂತಸ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಹೊಸ ವೇಗ ದೊರೆಯಲಿದ್ದು, ರಸ್ತೆ, ನೀರಾವರಿ, ಶಿಕ್ಷಣ, ಆರೋಗ್ಯ, ಕುಡಿಯುವ ನೀರು ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಸರ್ಕಾರ ವಿಶೇಷ ಆದ್ಯತೆ ನೀಡಬೇಕು ಎಂದು ಸಾರ್ವಜನಿಕರು ಆಶಿಸಿದ್ದಾರೆ.
ನೂತನ ಸಚಿವರಿಗೆ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಸಾರ್ವಜನಿಕರು ಅಭಿನಂದನೆ ಸಲ್ಲಿಸಿದ್ದು, ಕೊಪ್ಪಳ ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಹಾಗೂ ಯೋಜನೆಗಳನ್ನು ತಂದು ಜಿಲ್ಲೆಯ ಸಮಗ್ರ ಪ್ರಗತಿಗೆ ಶ್ರಮಿಸಬೇಕು ಎಂದು ಮನವಿ ಮಾಡಿದ್ದಾರೆ.
■ ಬಾಕ್ಸ್–1
“ಡಬಲ್ ಧಮಾಕಾ ಕೊಪ್ಪಳ ಜಿಲ್ಲೆಯ ಸೌಭಾಗ್ಯ”
“ಸಚಿವ ಸಂಪುಟದಲ್ಲಿ ಕೊಪ್ಪಳ ಜಿಲ್ಲೆಗೆ ಎರಡು ಸಚಿವ ಸ್ಥಾನಗಳು ದೊರೆತಿರುವುದು ಜಿಲ್ಲೆಯ ಸೌಭಾಗ್ಯ ಹಾಗೂ ಅದೃಷ್ಟ. ರಾಜ್ಯ ಸರ್ಕಾರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ವಿಶೇಷ ಸಹಕಾರ ನೀಡಬೇಕು. ನೀರಾವರಿ, ರಸ್ತೆ, ಕೈಗಾರಿಕೆ, ಶಿಕ್ಷಣ ಹಾಗೂ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡುವ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ಹೊಸ ದಿಕ್ಕು ನೀಡಬೇಕು.”
– ದುರ್ಗಾದಾಸ್ ಯಾದವ್, ಹಿರಿಯ ಸಾಮಾಜಿಕ ಹೋರಾಟಗಾರರು, ಕನಕಗಿರಿ
■ ಬಾಕ್ಸ್–2
“ಗ್ರಾಮೀಣ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಿ”
“ಗ್ರಾಮೀಣ ಭಾಗದ ಜನರ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಸಣ್ಣ ನೀರಾವರಿ ಯೋಜನೆಗಳು, ತೋಟಗಾರಿಕೆ ಅಭಿವೃದ್ಧಿ ಹಾಗೂ ಬರಪೀಡಿತ ಕೃಷಿ ಭೂಮಿಗಳಿಗೆ ವಿಶೇಷ ಯೋಜನೆಗಳನ್ನು ಜಾರಿಗೊಳಿಸಿ ರೈತರ ಬದುಕು ಸುಧಾರಿಸುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು.”
– ಸಣ್ಣ ಕನಕಪ್ಪ, ಬಿಜೆಪಿ ಮಂಡಲ ಅಧ್ಯಕ್ಷರು
” ಗೌತಮ್ ಯಾದವ್ ಕನಕಗಿರಿ ಪ್ರಜಾ ಶ್ರೀ ಪತ್ರಿಕೆ ಕೊಪ್ಪಳ ಜಿಲ್ಲಾ ವರದಿಗಾರ”



