ಸುದ್ಧಿ

ರಾಯಚೂರ ಜಿಲ್ಲೆಯ ಮಸ್ಕಿ ಬಳಿ ಮೂಡಲದಿನ್ನಿ ಗ್ರಾಮದಲ್ಲಿ : ವಡ್ಡರ ಉಲ್ಲೇಖದ ಮಹತ್ವದ ದಾನ ಶಾಸನ ಪತ್ತೆ

ವಿಜಯನಗರ ತಿರುಗಾಟ ಸಂಶೋಧನ ತಂಡದಿಂದ
ಮಸ್ಕಿ ಬಳಿ ಮೂಡಲದಿನ್ನಿ ಗ್ರಾಮದಲ್ಲಿ : ವಡ್ಡರ ಉಲ್ಲೇಖದ ಮಹತ್ವದ ದಾನ ಶಾಸನ ಪತ್ತೆ

      ಮಸ್ಕಿ ಬಳಿಯ ಮೂಡಲದಿನ್ನಿ ಗ್ರಾಮದಲ್ಲಿ ವಿಜಯನಗರ ಸಾಮ್ರಾಜ್ಯದ  ಅಚ್ಚುತದೇವರಾಯನ ಕಾಲದ ಅಪ್ರಕಟಿತ ದಾನ ಶಾಸನವನ್ನು ವಿಜಯನಗರ ತಿರುಗಾಟ ಸಂಶೋಧನ ತಂಡದ ಸದಸ್ಯರಾದ ಪ್ರೊ.ಎಚ್.ತಿಪ್ಪೇಸ್ವಾಮಿ, ಡಾ. ಗೋವಿಂದ, ಡಾ. ಕೃಷ್ಣೆಗೌಡ, ಡಾ. ವೀರಾಂಜಿನೇಯ, ಮಂಜುನಾಥ ಅವರುಗಳು ಸಂಶೋಧನಾರ್ಥಿಗಳಾದ ಶರಣಪ್ಪ ಸಿಂದನೂರು,ಎಚ್. ರವಿ, ಪ್ರಭುದೇವ, ಅವರುಗಳ ಸಹಕಾರದಿಂದ ಪತ್ತೆ ಮಾಡಲಾಗಿದೆ.
           ಮೂಡಲದಿನ್ನೆಯ ಹೊಲವೊಂದರಲ್ಲಿ ಪತ್ತೆಯಾದ ಈ ಶಿಲಾಶಾಸನವು ಕಪ್ಪು ಬಣ್ಣದ(ಡೈಕ್) ಶಿಲೆಯಲ್ಲಿ ಅತ್ಯಂತ ಸುಂದರವಾಗಿ ದಪ್ಪನೆಯ ಅಕ್ಷರಗಳಲ್ಲಿ ಬರೆಸಲಾಗಿದೆ. ಕನ್ನಡ ಭಾಷೆಯ ಕನ್ನಡ ಲಿಪಿಯಲ್ಲಿರುವ ಈ ಶಾಸನದ ಮುಂಭಾಗದಲ್ಲಿ 20 ಸಾಲುಗಳಿದ್ದರೆ, ಶಾಸನದ ಬಲಬದಿಗೆಯ ಪಟ್ಟಿಕೆಗೆ 8 ಸಾಲುಗಳಿವೆ. 5 ಅಡಿ ಎತ್ತರ 3 ಅಡಿ ಅಗಲದ ಶಾಸನವು ನಾಲ್ಕು ಹಂತಗಳಲ್ಲಿದೆ. ಮೊದಲ ಹಂತದಲ್ಲಿ ಸೂರ್ಯ-ಚಂದ್ರರಿದ್ದರೆ, ಎರಡನೇ ಹಂತದಲ್ಲಿ ಒಬ್ಬ ಪುರುಷನು ಕಿರೀಟ ಧರಿಸಿ ಅರೆ ಪದ್ಮಾಸನದಲ್ಲಿ ಕುಳಿತಿದ್ದು, ಆತನ ಬಳಿಯಲ್ಲಿ ಮೂರು ಜನ ಸ್ತ್ರೀಯರು ಕರಂಡ ಮಖಟಗಳನ್ನು ಧರಿಸಿ ತಮ್ಮ ಎಡ ಕೈಗಳನ್ನು ಇಳಿಬಿಟ್ಟು, ಬಲ ಕೈಗಳನ್ನು ಮೇಲಕ್ಕೆತ್ತಿ ಆಶೀರ್ವಾದ ಮಾಡುತ್ತಿರುವ ಅಭಯ ಭಂಗಿಯಲ್ಲಿರುವ ಉಬ್ಬುಶಿಲ್ಪಗಳನ್ನು ತುಂಬಾ ಸುಂದರವಾಗಿ ಕೆತ್ತಿದ್ದಾರೆ. ಮೂರನೆಯ ಹಂತದಲ್ಲಿ ಶಾಸನದ ಪಾಠವಿದ್ದು, ನಾಲ್ಕನೆಯ ಹಂತದಲ್ಲಿ ಶಾಸನದ ಶಾಪಾಶಯದ ಪ್ರತೀಕವಾಗಿ ಕತ್ತೆ ಆದರ ಉದ್ದನೆಯ ಶಿಶ್ನವನ್ನು ಸ್ಪಷ್ಟವಾಗಿ ಗೋಚರಿಸುವಂತೆ ಚಿತ್ರಿಸಲಾಗಿದೆ ಎಂದು ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಗೋವಿಂದ ಅವರು ತಿಳಿಸಿದ್ದಾರೆ.
            ಈ ಅಪ್ರಕಟಿತ ಶಾಸನವು ಶೈವ ಧರ್ಮದ ಪ್ರತೀಕವಾಗಿದೆ ಎನ್ನಲು ಶಿವನ ಪ್ರಾರ್ಥನೆಯ ಸಾಲುಗಳು ಆರಂಭದಲ್ಲಿವೆ. ಹಾಗೇನೆ ಜಯಾಬ್ಯುದಯ ಶಾಲಿವಾಹನ ಶಕವರುಷ ೧೪೫೯ ನೆಯ ಆಷಾಡ ಶು. ೧೦ ಸೋಮವಾರ ಎಂದಿರುವದರಿಂದ ಇದು ಕ್ರಿ. ಶ. ೧೫೨೬ ನೆಯ ಇಸ್ವಿಗೆ ಸರಿಹೊಂದುತ್ತದೆ. ಇದು ಅಚ್ಯುತ ದೇವರಾಯನಿಗೆ ಸಂಬಂಧಿಸಿದುದಾಗಿದೆ. ಶಾಸನದಲ್ಲಿ ಉಲ್ಲೇಖಿಸಿದಂತೆ ಅಚ್ಯುತ ದೇವ ಮಹಾರಾಯರು ತಮ್ಮ ಕಾರ್ಯಕರ್ತರಾದ ಶ್ರೀ ಮನ್ಮಹಾರಾಜ ಗುಜ್ಜಲ ಇಮ್ಮಡಿ ಮೇದಿನಿರಾಯ ಒಡೆಯರು ತಮ್ಮ ಅಧೀನದಲ್ಲಿದ್ದ ಭೂಮಿಯನ್ನು ಮೊಸಗಿಯ(ಮಸ್ಕಿ)ವಡ್ಡರ ನಾಗರಾಜನ ಮಕ್ಕಳಾದ ಮಲ್ಲಯ್ಯ, ಅನಂತಯ್ಯ ಹಾಗೂ ರಾಮರಾಜನ ಮಗ ಭೀಮಪ್ಪಯ್ಯ ಭೂ ದಾನ ಈ ರೀತಿ ನೀಡಲಾಗಿದೆ. ಮೊಸಗಿಯ(ಮಸ್ಕಿ)ಸೀಮೆಯೊಳಗಣ ಉದ್ದ0ಡ ಮೇದಿನಿಪುರವನ್ನು ಅಮರನಾಥ ದೇವರಿಗೆ ಪುಣ್ಯವಾಗಬೇಕೆಂದು ಅಗ್ರಹಾರವನ್ನು ನೀಡಲಾಗಿದೆ. ಅದು ಪೂರ್ವಕ್ಕೆ ಮಾರ್ಲದಿನ್ನೆ, ದಕ್ಷಿಣಕ್ಕೆ ಮೂಳಲದಿನ್ನೆ,(ಈಗಿನ ಮೂಡಲದಿನ್ನೆ)ಪಶ್ಚಿಮಕ್ಕೆ ಪಾಳಲ ಸೀಮೆ, ಉತ್ತರಕ್ಕೆ ಹೊಸ ಮಡಲು ಎಂಬ ಚಕ್ಕಬಂದಿಯನ್ನು ವಿಶೇಷವಾಗಿ ಈ ಶಾಸನದಲ್ಲಿ ನಮೂಧಿಸಲಾಗಿದೆ. ಈ ಸೀಮೆಯೊಳಗಣ ಅ0ನ್ನಾ ಪಂನಾ, ಜಲ ಪಾಷಾಣ, ಅಷ್ಟ ಭೋಗಗಳನ್ನು ಹಾಗೂ ಭೂಮಿಯ ಒಡೆತನವನ್ನು ಪುತ್ರ ಪೌತ್ರರಾದಿಯಾಗಿ ಆಚಂದ್ರಾರ್ಕವಾಗಿ ಅನುಭವಿಸಿಕೊಂಡು ಬರಬೇಕೆಂದು ಇದಕ್ಕೆ ಯಾರೊಬ್ಬರೂ ತಪ್ಪಿದರೆ ಅವರ ಬಾಯಲ್ಲಿ ಕತ್ತೆ ಶಿಶ್ನ ಮತ್ತು ಕಲ್ಲುಪ್ಪು ಎಂದು ಶಾಪಾಶಯವನ್ನು ಬರೆಸಲಾಗಿದೆ ಎಂದು ಪ್ರೊ. ಎಚ್. ತಿಪ್ಪೇಸ್ವಾಮಿ ಅವರು ತಿಳಿಸಿದ್ದಾರೆ.
      ಈ ಶಾಸನದಲ್ಲಿ ವಡ್ಡರಿಗೆ ದಾನ ನೀಡಿದ ಪ್ರಥಮ ಶಾಸನವಾಗಿದೆ. ಅಲ್ಲದೇ  ಮೊಸಗಿ(ಮಸ್ಕಿ)ಗ್ರಾಮವನ್ನು ಗುಜ್ಜಲ ಇಮ್ಮಡಿರಾಯನು ಆಳ್ವಿಕೆ ನಡೆಸುತ್ತಿದ್ದನೆಂದು ತಿಳಿದುಬರುತ್ತದೆ. ಹಾಗೇನೆ ಈ ಶಾಸನದ ಬಳಿಯಲ್ಲೇ ಇನ್ನಿತರೆ ಅಪೂರ್ಣ ಭಗ್ನ ಶಿಲಾಶಾಸನಗಳಿವೆ. ತುಂಬಾ ಮಹತ್ವವಾದ ವಿಜಯನಗರ ಆಳ್ವಿಕೆಯನ್ನು ತಿಳಿಸುವ ಈ ಶಾಸನವನ್ನು ಜಿಲ್ಲೆಯ ಆಡಳಿತಾಂಗವು ಸಂರಕ್ಷಿಸಬೇಕೆಂಬುದು ನಮ್ಮ ತಂಡದ ಆಶಯವಾಗಿದೆ

Related Articles

Leave a Reply

Your email address will not be published. Required fields are marked *

Back to top button