ಸುದ್ಧಿ

ಕನ್ನಡ ವಿಶ್ವವಿದ್ಯಾಲಯ, ಹಂಪಿಪ್ರಸಾರಾಂಗಪುಸ್ತಕ ಬಿಡುಗಡೆ ಸಮಾರಂಭ.

ಕನ್ನಡ ವಿಶ್ವವಿದ್ಯಾಲಯ, ಹಂಪಿ
ಪ್ರಸಾರಾಂಗ
ಪುಸ್ತಕ ಬಿಡುಗಡೆ ಸಮಾರಂಭ

ಪ್ರಕಟಿತ ಪುಸ್ತಕಗಳನ್ನು ಬೆಳಕಿಗೆ ತರುವ ಕೆಲಸವಾಗಬೇಕು : ಎಚ್.ಆರ್. ಗವಿಯಪ್ಪ

ಕನ್ನಡ ವಿಶ್ವವಿದ್ಯಾಲಯ ತನ್ನ ೩೩ನೇ ನುಡಿಹಬ್ಬದ ಪ್ರಯುಕ್ತ ಕಲೆ, ಸಾಹಿತ್ಯ, ಇತಿಹಾಸ, ವಿಜ್ಞಾನ ಮತ್ತು ಆರೋಗ್ಯ ಸೇರಿದಂತೆ ವಿವಿಧ ಬಗೆಯ ೬೦ ಪುಸ್ತಕಗಳನ್ನು ಪ್ರಕಟಿಸಿರುವುದು ಉತ್ತಮವಾದ ಕಾರ್ಯ. ಪುಸ್ತಕಗಳನ್ನು ಪ್ರಕಟಿಸಿದರಷ್ಟೇ ಸಾಲದು ಅವುಗಳನ್ನು ಬೆಳಕಿಗೆ ತರುವ ಕೆಲಸವು ಆಗಬೇಕು. ವಿಶ್ವವಿದ್ಯಾಲಯವು ಇದುವರೆಗೂ ಪ್ರಕಟಿಸಿರುವ ಪುಸ್ತಕಗಳನ್ನು ಡಿಜಿಟಲೈಜೇಶನ್ ಮಾಡುವ ಕಾರ್ಯಕ್ಕೆ ಮುಂದಾಗಬೇಕು. ಇದರಿಂದ ಕನ್ನಡದ ಜ್ಞಾನವನ್ನು ಅನಾವರಣಗೊಳಿಸಲು ಸಾಧ್ಯವಾಗುತ್ತದೆ ಎಂದು ವಿಜಯನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಚ್.ಆರ್. ಗವಿಯಪ್ಪ ಅವರು ಅಭಿಪ್ರಾಯಪಟ್ಟರು.
ಕನ್ನಡ ವಿಶ್ವವಿದ್ಯಾಲಯದ ಮಂಟಪ ಸಭಾಂಗಣದಲ್ಲಿ ೩೩ನೇ ನುಡಿಹಬ್ಬ ಪ್ರಯುಕ್ತ ಪ್ರಸಾರಾಂಗ ಹಮ್ಮಿಕೊಂಡಿದ್ದ ಪುಸ್ತಕ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ, ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಮುಂದುವರೆದು ಮಾತನಾಡುತ್ತ ಕನ್ನಡ ವಿಶ್ವವಿದ್ಯಾಲಯ ಒಂದು ಐಕಾನಿಕ್ ವಿಶ್ವವಿದ್ಯಾಲಯ. ಇಂತಹ ವಿಶಿಷ್ಟವಾದ ವಿಶ್ವವಿದ್ಯಾಲಯ ನಮ್ಮಲ್ಲಿರುವುದು ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಹೆಮ್ಮೆಯ ವಿಷಯ. ವಿಶ್ವವಿದ್ಯಾಲಯಕ್ಕೆ ಬೇಕಾದ ಸಹಕಾರವನ್ನು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಕೊಡುಸುವೆ. ವಿಜಯನಗರ ಜಿಲ್ಲೆಗೆ ಇಂದು ಆದಾಯದ ಮೂಲ ಪ್ರವಾಸೋದ್ಯಮವಾಗಿದೆ. ಆದ್ದರಿಂದ ವಿಶ್ವವಿದ್ಯಾಲಯದಲ್ಲಿ ಹೋಟೆಲ್ ಮ್ಯಾನೇಜ್‌ಮೆಂಟ್ ಕೋರ್ಸ್ ಆರಂಭಿಸುವುದರ ಮೂಲಕ ದೇಶಿಯ ಆಹಾರ, ಕಲೆ, ಸಂಸ್ಕೃತಿಯನ್ನು ಪರಿಚಯಿಸುವ ಕೆಲಸ ಮಾಡಬೇಕು ಎಂದರು. ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವುದರ ಮೂಲಕ ಹಂಪಿಯ ಪ್ರವಾಸಿಗರಿಗೆ ರೆಸ್ಟೋರೆಂಟ್‌ಗಳನ್ನು ತೆರೆಯುವ ಕೆಲಸವಾಗುತ್ತಿದೆ. ಹಂಪಿಯ ಸ್ಮಾರಕಗಳು ಮತ್ತು ಪರಿಸರವನ್ನು ನೋಡಲು ಬರುವ ಪ್ರವಾಸಿಗರು ಕನ್ನಡ ವಿಶ್ವವಿದ್ಯಾಲಯಕ್ಕೆ ಆಗಮಿಸಿ ಇಲ್ಲಿನ ಪುಸ್ತಕಗಳನ್ನು ನೋಡಬೇಕು, ಓದಬೇಕು ಎಂದರು.
ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಡಿ.ವಿ.ಪರಮಶಿವಮೂರ್ತಿ ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡುತ್ತ ಭಾರತದ ಬೇರಾವ ವಿಶ್ವವಿದ್ಯಾಲಯದಲ್ಲೂ ಇಲ್ಲದ ಸಂಶೋಧನಾ ಕಳಕಳಿ ಕನ್ನಡ ವಿಶ್ವವಿದ್ಯಾಲಯದಲ್ಲಿದೆ. ಇಲ್ಲಿನ ಪ್ರತಿಯೊಬ್ಬರು, ಗಿಡಮರಗಳು ಸಹ ಸಂಶೋಧನೆಯನ್ನೇ ಧ್ಯಾನಿಸುತ್ತವೆ. ಕನ್ನಡ ವಿಶ್ವವಿದ್ಯಾಲಯ ಬೇರೆ ಹಳೆಯ ವಿಶ್ವವಿದ್ಯಾಲಯಗಳಿಗೆ ಸರಿಸಾಟಿಯಾಗಿ ೧೬೫೦ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದೆ. ಇಲ್ಲಿನ ಪುಸ್ತಕಗಳ ಗುಣಮಟ್ಟ ಉತ್ಕೃಷ್ಟವಾದುದು. ವಿಶ್ವವಿದ್ಯಾಲಯದ ಪ್ರಸಾರಾಂಗವು ಲಾಭವನ್ನು ನಗಣ್ಯವಾಗಿ ಪರಿಗಣಿಸಿ ಇಲ್ಲಿ ನಿರ್ಲಕ್ಷಕ್ಕೆ ಒಳಗಾದ ಅನೇಕ ವಿ?ಯಗಳನ್ನು ತಳಮಟ್ಟದಿಂದ ಸಂಶೋಧನೆಯನ್ನು ಮಾಡಿ ರೂಪಿಸಿದ ಉತ್ತಮ ಗುಣಮಟ್ಟದ ಪುಸ್ತಕಗಳನ್ನು ಪ್ರಕಟಿಸಿದೆ. ಸರ್ಕಾರದ ಅನುದಾನದ ಕೊರತೆಯ ನಡುವೆ ಸಂಶೋಧನೆ ನಿರಂತರವಾಗಿ ನಡೆಯುತ್ತಿದೆ. ಉತ್ತಮವಾದ ಪುಸ್ತಕಗಳು, ಚಿಂತಕರ ಆಲೋಚನೆಗಳು ಪುಸ್ತಕದ ರೂಪದಲ್ಲಿ ಓದುಗರ ಕೈ ಸೇರಬೇಕು ಎಂದು ಅತ್ಯಂತ ಕಡಿಮೆ ಬೆಲೆಗೆ ಪ್ರಸಾರಂಗ ಪುಸ್ತಕಗಳನ್ನು ಪ್ರಕಟಿಸುತ್ತದೆ ಎಂದು ಹೇಳಿದರು.
ಕನ್ನಡ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ.ವಿಜಯ್ ಪೂಣ್ಣಚ್ಚ ತಂಬಂಡವರು ಪ್ರಾಸ್ತಾವಿಕವಾಗಿ ಮಾತನಾಡುತ್ತ ಸಂಶೋಧನೆ ಮತ್ತು ಪ್ರಕಟಣೆ ಎನ್ನುವುದು ವಿಶ್ವವಿದ್ಯಾಲಯದ ಜೀವಾಳ. ವಿಶ್ವವಿದ್ಯಾಲಯ ಇದುವರೆಗೂ ೧೬೫೦ ಪುಸ್ತಕಗಳನ್ನು ಪ್ರಕಟಿಸಿದೆ. ಈ ಬಾರಿ ಹೆಚ್ಚು ಪುಸ್ತಕಗಳು ಮಾರಾಟವಾಗಿವೆ. ನಾಡಿನ ಎಲ್ಲೆಡೆ ವಿಶ್ವವಿದ್ಯಾಲಯದ ಜ್ಞಾನವನ್ನು ತಲುಪಿಸುವ ಕೆಲಸ ನಡೆಯುತ್ತಿದೆ. ಪ್ರಸಾರಾಂಗವು ಸಾಮಾಜಿಕ, ರಾಜಕೀಯ, ಸಾಹಿತ್ಯ, ಚರಿತ್ರೆ, ವಿಜ್ಞಾನ ಹೀಗೆ ಎಲ್ಲ ಪ್ರಕಾರದ ಪುಸ್ತಕಗಳನ್ನು ಪ್ರಕಟಿಸಿಕೊಂಡು ಬಂದಿದೆ. ಪ್ರಸಾರಾಂಗದ ಹೊಸ ಕಟ್ಟಡ ನಿರ್ಮಾಣ ಶೇ.೮೦ ರಷ್ಟು ಪೂರ್ಣಗೊಂಡಿದ್ದು, ಶೇ.೨೦ರಷ್ಟು ಬಾಕಿ ಇದೆ. ಕೆಕೆಆರ್‌ಡಿಬಿ ಯಿಂದ ಅನುದಾನ ಬಿಡುಗಡೆಯಾದರೆ ಉಳಿದ ಕಾರ್ಯವನ್ನು ಪೂರ್ಣಗೊಳಿಸುತ್ತೇವೆ ಎಂದರು.
ಈ ಕಾರ್ಯಕ್ರಮದಲ್ಲಿ ಸಾಹಿತಿಗಳು, ಪುಸ್ತಕ ಪ್ರಕಟಿಸಿದ ಲೇಖಕರು, ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಪ್ರಾಧ್ಯಾಪಕರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು, ಸಂಶೋಧನಾರ್ಥಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸಂಗೀತ ಮತ್ತು ನೃತ್ಯ ವಿಭಾಗದ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಕಾರ್ಯಕ್ರಮದಲ್ಲಿ ಭಾಗಿಯಾದವರಿಗೆ ಇಂಪಾದ ಸಂಗೀತವನ್ನು ಉಣಬಡಿಸಿದರು.

Related Articles

Leave a Reply

Your email address will not be published. Required fields are marked *

Back to top button