ಸುದ್ಧಿ

ಮೊಹರಂ ಆಚರಣೆ: ಶಾಂತಿ, ತ್ಯಾಗ, ಸಾಮರಸ್ಯದ ಪ್ರತಿಬಿಂಬ -ಡಿ ನಾಗವೇಣಿ ಪಾಟೀಲ್

ಮೊಹರಂ ಆಚರಣೆ: ಶಾಂತಿ, ತ್ಯಾಗ, ಸಾಮರಸ್ಯದ ಪ್ರತಿಬಿಂಬ -ಡಿ ನಾಗವೇಣಿ ಪಾಟೀಲ್

ಸಿಂಧನೂರು :ಸ್ಲಾಮಿಕ್ ಕ್ಯಾಲೆಂಡರ್‌ನ ಪ್ರಾರಂಭದ ತಿಂಗಳಾದ ಮೊಹರಂ ಉಲ್ ಹರಾಮ್ ಈ ವರ್ಷ ಜೂನ್ 27ರಿಂದ ಆರಂಭವಾಗಿದೆ. ಚಂದ್ರ ದರ್ಶನದ ದೃಢೀಕರಣದೊಂದಿಗೆ, ಶುಕ್ರವಾರ ಹೊಸ ಹಿಜ್ರ ವರ್ಷದ ಮೊದಲ ದಿನವಾಗಿದೆ. ಕರ್ನಾಟಕದಾದ್ಯಂತ, ಮೊಹರಂ ಆಚರಣೆಯು ಧಾರ್ಮಿಕ ಭಕ್ತಿಯ ಜತೆಗೆ ಸಾಮಾಜಿಕ, ಸಾಂಸ್ಕೃತಿಕ ಸಹಬಾಳ್ವೆಯ ಸಂಕೇತವಾಗಿ ಆಚರಿಸಲ್ಪಡುತ್ತದೆ.

ಮೊಹರಂ ಇಸ್ಲಾಮಿಕ್ ಕ್ಯಾಲೆಂಡರ್‌ನ ಮೊದಲ ತಿಂಗಳಾಗಿದ್ದು, ಇದನ್ನು “ಅಲ್ಲಾಹನ ಪವಿತ್ರ ತಿಂಗಳು” ಎಂದು ಕರೆಯಲಾಗುತ್ತದೆ. ಈ ತಿಂಗಳು ಇತಿಹಾಸದ ಪುಟಗಳಲ್ಲಿ ಶಾಶ್ವತವಾಗಿ ಚಿರಸ್ಥಾಯಿಯಾಗಿರುವ ಕರ್ಬಲಾ ಯುದ್ಧದ (ಕ್ರಿ.ಶ. 680) ಘಟನೆಯೊಂದಿಗೆ ಗಾಢವಾಗಿ ಸಂಬಂಧ ಹೊಂದಿದೆ. ಪ್ರವಾದಿ ಮುಹಮ್ಮದ್ ಪೈಗಂಬರರ ಮೊಮ್ಮಗನಾದ ಇಮಾಮ್ ಹುಸೇನ್ ಇಬ್ ಅಲಿ ಅವರು, ಯಝೀದ್‌ನ ಅನ್ಯಾಯದ ಆಡಳಿತದ ವಿರುದ್ಧ ನಿಂತು, ಸತ್ಯ, ನ್ಯಾಯ ಮತ್ತು ಮಾನವೀಯತೆಗಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದರು. ಕರ್ಬಲಾದಲ್ಲಿ ಇಮಾಮ್ ಹುಸೇನ್ ಮತ್ತು ಅವರ ಕುಟುಂಬದವರ ಶೌರ್ಯ, ತ್ಯಾಗ ಮತ್ತು ಧೈರ್ಯವು ಇಂದಿಗೂ ಜಗತ್ತಿನಾದ್ಯಂತ ಮುಸ್ಲಿಮರಿಗೆ ಸೂರ್ತಿಯ ಮೂಲವಾಗಿದೆ.

ಆಶೂರಾದ ದಿನದಂದು, ಮುಸ್ಲಿಮರು ಉಪವಾಸ, ಪ್ರಾರ್ಥನೆ ಮತ್ತು ದಾನದ ಮೂಲಕ ಈ ತಿಂಗಳ ಮಹತ್ವವನ್ನು ಸ್ಮರಿಸುತ್ತಾರೆ. ಇದರ ಜೊತೆಗೆ, ಈ ತಿಂಗಳು ಶಾಂತಿಯ ಸಂದೇಶವನ್ನು ಸಾರುತ್ತದೆ. ಚಂದ್ರ ದರ್ಶನದ ಸಂದರ್ಭದಲ್ಲಿ, “ಅಲ್ಲಾಹುಮ್ಮ ಅಹಿಲ್ಲಹು ಅಲೈನಾ ಬಿಲ್ ಅಮ್ಮಿ ವಲ್ ಈಮಾನ್…” ಎಂಬ ಪ್ರಾರ್ಥನೆಯು ಶಾಂತಿ, ಈಮಾನ್ (ನಂಬಿಕೆ) ಮತ್ತು ಸುರಕ್ಷತೆಗಾಗಿ ಒಡಂಬಡಿಕೆಯನ್ನು ವ್ಯಕ್ತಪಡಿಸುತ್ತದೆ. ಈ ಪ್ರಾರ್ಥನೆಯು ಜಗತ್ತಿನಾದ್ಯಂತ ಶಾಂತಿಯನ್ನು ಬಯಸುವ ಒಂದು ಸಾರ್ವತ್ರಿಕ ಕರೆಯಾಗಿದೆ.

ರಾಜ್ಯದ ಉತ್ತರ. ಕರಾವಳಿ ಮತ್ತು ದಕ್ಷಿಣ ಭಾಗಗಳಲ್ಲಿ ಮೊಹರಂ ವಿಶಿಷ್ಟವಾಗಿ ಆಚರಿಸಲಾಗುತ್ತದೆ. ಉತ್ತರ ಕರ್ನಾಟಕದ ರಾಯಚೂರು, ಕಲಬುರಗಿ, ವಿಜಯಪುರ

ಮುಂತಾದ ಜಿಲ್ಲೆಗಳಲ್ಲಿ, ಈ ತಿಂಗಳ ಆಚರಣೆ ಭವ್ಯವಾಗಿ ನಡೆಯುತ್ತದೆ. ಮುದಗಲ್ ಪಟ್ಟಣದಲ್ಲಿ ಆಶೂರಾದಂದು ನಡೆಯುವ “ಮಿಲನ” ಕಾರ್ಯಕ್ರಮ ಲಕ್ಷಾಂತರ ಜನರನ್ನು ಸೆಳೆಯುತ್ತದೆ. ಇಮಾಮ್ ಹಸನ್ ಮತ್ತು ಹುಸೇನ್‌ ಅಲಂ ಮೆರವಣಿಗೆಗಳು, ಧರ್ಮ, ಜಾತಿ ಮೀರಿ ಜನತೆಯನ್ನು ಒಗ್ಗೂಡಿಸುತ್ತವೆ.

ಬೀದರ್, ಧಾರವಾಡ, ಗದಗ, ಕೊಪ್ಪಳ ಮತ್ತು ಹಾವೇರಿ ಜಿಲ್ಲೆಗಳಲ್ಲಿಯೂ ಮೊಹರಂ ಮೆರವಣಿಗೆಗಳು ಶಾಂತಿಯುತವಾಗಿ ನಡೆಯುತ್ತವೆ. ರಾಜಕೀಯ ನಾಯಕರು, ಸ್ಥಳೀಯ ಆಡಳಿತ ಈ ಆಚರಣೆಗೆ ಸಂಪೂರ್ಣ ಬೆಂಬಲ ನೀಡುತ್ತದೆ. ಇದು ಮೊಹರಂನನ್ನು ಸಮಾಜದ ಒಗ್ಗಟ್ಟಿನ ವೇದಿಕೆಯಾಗಿಸುತ್ತದೆ.

ಗ್ರಾಮೀಣ ಕರ್ನಾಟಕದಲ್ಲಿ ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ಪರಸ್ಪರ ಸಹಭಾಗಿತ್ವ ವಿಶೇಷ. ಕೆಲವು ಗ್ರಾಮಗಳಲ್ಲಿ ಇಮಾಮ್ ಹುಸೇನ್‌ರನ್ನೆ “ಹುಸೇನಪ್ಪ”, “ಹಸನಪ್ಪ” ಎಂದು ಕರೆಯುವುದು, ಮಕ್ಕಳಿಗೆ ಆ ಹೆಸರುಗಳನ್ನು ಇಡುವುದು ಸಾಮಾನ್ಯ ಇದು ಕರ್ನಾಟಕದ ಗಂಗಾ-ಜಮುನಾ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ.

ವಿಜಯಪುರದಲ್ಲಿ ಮೊಹರಂ ಗೀತೆಗಳು ವಚನ ಸಾಹಿತ್ಯದ ಶೈಲಿಯಲ್ಲಿ ಹಾಡಲಾಗುತ್ತವೆ. ಇದು ಇಸ್ಲಾಮಿಕ್ ಆಚರಣೆಯ ಸ್ಥಳೀಯ ರೂಪಾಂತರಕ್ಕೆ ಅನನ್ಯ ಉದಾಹರಣೆ. ಮೊಹರಂ ರಾಜ್ಯದ ವೈವಿಧ್ಯಮಯ ಸಂಸ್ಕೃತಿಯಲ್ಲಿ ಬೆರೆತು. ಧರ್ಮ ಮತ್ತು ಜಾತಿ ಮೀರಿದ ಮಾನವೀಯ ಸಂದೇಶವನ್ನು ಸಾರುತ್ತದೆ.

ಮೊಹರಂ ಸ್ಮರಣೆಯು ಶೋಕದ ಆಚರಣೆಯಷ್ಟಲ್ಲ. ತ್ಯಾಗದ ಮೂಲಕ ಧರ್ಮಕ್ಕೆ ನಿಷ್ಠಾವಂತಿಕೆ ಇಟ್ಟುಕೊಳ್ಳುವ ಪಾಠ. ಶಿಯಾ ಸಮುದಾಯದಲ್ಲಿ ಈ ದಿನ ಶೋಕಾಚರಣೆ ಮೂಲಕ ಇಮಾಮ್ ಹುಸೇನ್‌ರ ಬಲಿದಾನವನ್ನು ಸ್ಮರಿಸಲಾಗುತ್ತದೆ. ಸುನ್ನಿ ಸಮುದಾಯದಲ್ಲಿ ಉಪವಾಸ, ದಾನ ಮತ್ತು ಪ್ರಾರ್ಥನೆಯ ಮೂಲಕ ಆಶೂರಾ ದಿನವನ್ನಾಚರಿಸಲಾಗುತ್ತದೆ.

ಈ ಸಂದರ್ಭದಲ್ಲಿ, ನಾವು ಕೇವಲ ಧಾರ್ಮಿಕ ಆಚರಣೆಗಷ್ಟೇ ಸೀಮಿತವಾಗದೆ, ಸಾಮರಸ್ಯ ಮತ್ತು ಪರಸ್ಪರ ಗೌರವದ ಸಂಕಲ್ಪವನ್ನೂ ತೆಗೆದುಕೊಳ್ಳಬೇಕು. ಇಂದಿನ ಭಿನ್ನಾಭಿಪ್ರಾಯಗಳ ಯುಗದಲ್ಲಿ ಇಮಾಮ್ ಹುಸೇನ್‌ರ ಸತ್ಯದ ಹೋರಾಟ ಎಲ್ಲರಿಗೂ ಪಾಠವಾಗಲಿ.

Related Articles

Leave a Reply

Your email address will not be published. Required fields are marked *

Back to top button