ತೊಗರಿಗೆ ಖರೀದಿಗೆ ಕೇಂದ್ರ ಬೆಂಬಲ ಬೆಲೆಗೆ ಆಗ್ರಹಿಸಿ ಪ್ರತಿಭಟನೆ..ಕನಕಗಿರಿ.

ಬೆಂಬಲ ಬೆಲೆಗೆ ಆಗ್ರಹಿಸಿ ಪ್ರತಿಭಟನೆ
- ರಸ್ತೆ ಮೇಲೆ ತೊಗರಿಗೆ ಸುರಿದು ಪ್ರತಿಭಟನೆ
- ರಾಜ್ಯ ಸರಕಾರದಿಂದ 500 ರೂ. ಹೆಚ್ಚುವರಿ ಬೆಂಬಲ ಬೆಲೆ ನೀಡಲು ಆಗ್ರಹ
ಕನಕಗಿರಿ: ತೊಗರಿಗೆ ಖರೀದಿಗೆ ಕೇಂದ್ರ ಸರಕಾರದ 8 ಸಾವಿರ ರೂ. ಜೊತೆಗೆ ರಾಜ್ಯ ಸರಕಾರದಿಂದ 500 ರೂ. ಬೆಂಬಲ ಬೆಲೆ ನೀಡಲು ಆಗ್ರಹಿಸಿ, ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತರು ಸೋಮವಾರ ಪ್ರತಿಭಟಿಸಿದರು.
ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ಜಮಾಯಿಸಿದ ನೂರಾರು ಕಾರ್ಯಕರ್ತರು, ರಾಜ್ಯ ಸರಕಾರ ವಿರುದ್ಧ ಘೋಷಣೆ ಕೂಗಿದರು. ತಮ್ಮ ವಾಹನದಲ್ಲಿ ತಂದಿದ್ದ ತೊಗರಿಯನ್ನು ರಸ್ತೆ ಮೇಲೆ ಸುರಿದು ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಕೊಪ್ಪಳ ಜಿಲ್ಲಾಡಳಿತ ತೊಗರಿ ಬೆಳೆಗಾರರ ನೋಂದಣಿ ಸ್ಥಗಿತ ಮಾಡಬೇಕು. ರಾಜ್ಯ ಸರಕಾರ ತನ್ನ ಪಾಲಿನ 500 ರೂ. ಹೆಚ್ಚುವರಿ ಬೆಂಬಲ ಬೆಲೆ ಘೋಷಿಸಿದ ನಂತರವೇ ತೊಗರಿ ಖರೀದಿ ಆರಂಭಿಸಬೇಕು ಎಂದು ಆಗ್ರಹಿಸಿದರು. ತಹಸೀಲ್ದಾರ್ ವಿಶ್ವನಾಥ ಮುರಡಿ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದರು.
ಸಂಸ್ಥಾಪಕ ಅಧ್ಯಕ್ಷ ಶರಣಪ್ಪ ದೊಡ್ಡಮನಿ ಮಾತನಾಡಿ, ರಾಜ್ಯ ಸರಕಾರ ಬೆಂಬಲ ಬೆಲೆಯಡಿ ತೊಗರಿ ಖರೀರಿ ಕೇಂದ್ರ ಶುರು ಮಾಡಿರುವುದು ಸ್ವಾಗತಾರ್ಹ. ಆದರೆ, ಕೇಂದ್ರ ಸರಕಾರ ಘೋಷಣೆ ಮಾಡಿರುವ ಪ್ರತಿ ಕ್ವಿಂಟಾಲ್ ಗೆ ಕೇವಲ 8 ಸಾವಿರ ರೂ.ಗೆ ತೊಗರಿ ಖರೀದಿ ಮಾಡುತ್ತಿದ್ದಾರೆ. ಇದನ್ನು ಸಂಘಟನೆ ತೀವ್ರವಾಗಿ ಖಂಡಿಸುತ್ತದೆ. ಬದಲಾಗಿ ರಾಜ್ಯ ಸರಕಾರ ಕಳೆದ ಬಾರಿ ನೀಡಿದಂತೆ ತನ್ನ ಪಾಲಿನ 500 ರೂ. ಪ್ರತಿ ಕ್ವಿಂಟಾಲ್ ಗೆ ನೀಡಬೇಕು. ಅಂದರೆ ಒಟ್ಟು 8500 ರೂ.ಗೆ ಕ್ವಿಂಟಾಲ್ ನಂತೆ ತೊಗರಿ ಖರೀದಿ ಮಾಡಬೇಕು ಎಂದು ಆಗ್ರಹಿಸಿದರು.
ಸಂಘಟನೆ ವಿಭಾಗೀಯ ಅಧ್ಯಕ್ಷ ಪಂಪಣ್ಣ ನಾಯಕ ಮಾತನಾಡಿ, ಈ ಬಾರಿ ತೊಗರಿ ಬೆಳೆ ಹೂ ಬಿಡುವ ಸಮಯದಲ್ಲಿ ಭಾರಿ ಪ್ರಮಾಣದಲ್ಲಿ ಮಳೆ ಆಗಿದ್ದರಿಂದ ಹೂ ಉದುರಿ, ಇಳುವರಿ ಭಾರಿ ಪ್ರಮಾಣದಲ್ಲಿ ಕಡಿಮೆ ಆಗಿದೆ. ಆಗಲೂ ರಾಜ್ಯ ಸರಕಾರ ಸರಿಯಾಗಿ ಬೆಳೆ ನಷ್ಟ ಪರಿಹಾರ ನೀಡಿಲ್ಲ. ರೈತರು ಕಷ್ಟಪಟ್ಟು ಅಲ್ಪಸ್ವಲ್ಪ ಬೆಳೆ ಪಡೆದುಕೊಂಡಿದ್ದಾರೆ. ರಾಜ್ಯ ಸರಕಾರ ನೀಡುವ ಬೆಲೆಯಿಂದ ರೈತರು ಖರ್ಚು ಮಾಡಿದ ಹಣ ಕೂಡ ವಾಪಾಸ್ ಬರುವುದಿಲ್ಲ. ಇದರಿಂದ ಕೂಡಲೇ ರಾಜ್ಯ ಸರಕಾರ ತನ್ನ ಪಾಲಿನ 500 ರೂ. ಬೆಂಬಲ ಬೆಲೆ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.
ರೈತರ ಈ ನ್ಯಾಯಯುತ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕೊಪ್ಪಳ ಜಿಲ್ಲಾಡಳಿತ ಮತ್ತು ಸರಕಾರಕ್ಕೆ ಮನವಿ ಮಾಡಿದ್ದೇವೆ. ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದು ನಾಚಿಕೆಗೇಡಿನ ಸಂಗತಿ ಎಂದರು. ಡಿಎಸ್ಎಸ್ ಮುಖಂಡ ಹಂಪೇಶ ಅರಿಗೋಲ್, ರೈತ ಮುಖಂಡ ದೊಡ್ಡ ಬರ್ಮಣ್ಣ, ಸಂಘಟನೆ ವಿಜಯನಗರ ಜಿಲ್ಲಾ ಅಧ್ಯಕ್ಷ ಬಿ.ಎಂ. ಹುಲಗಪ್ಪ, ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕ ಅಧ್ಯಕ್ಷರು ಗಣೇಶ ರೆಡ್ಡಿ, ರೈತ ಮುಖಂಡರಾದ ಕರಡಿ ಕನಕಪ್ಪ, ಆದೇಶ ರಾಮತ್ನಾಳ, ಶೇಖರಪ್ಪ ದೇವಲಾಪೂರ, ಹನುಮಗೌಡ ಹಿರೇಖೇಡ, ವಿರೂಪಣ್ಣ ಕಂಬಳಿ ಸೇರಿ ಇತರರು, ಸುರೇಶ ಗುಡದೂರ ತಾವರಗೇರಾ, ವೀರೇಶ ವಕೀಲರು ತಾವರಗೇರಾ ಇದ್ದರು.
::::
ಕಳೆದ ವರ್ಷ ಕೇಂದ್ರ ಸರಕಾರ ತೊಗರಿಗೆ 7550 ರೂ. ಪ್ರತಿ ಕ್ವಿಂಟಾಲ್ ಗೆ ಬೆಂಬಲ ಬೆಲೆ ನಿಗದಿ ಮಾಡಿತ್ತು. ರಾಜ್ಯ ಸರಕಾರ ಇದಕ್ಕೆ 450 ರೂ. ಸೇರಿಸಿ ಒಟ್ಟು 8 ಸಾವಿರ ರೂ.ಗೆ ಕ್ವಿಂಟಾಲ್ ನಂತೆ ತೊಗರಿ ಖರೀದಿ ಮಾಡಿತ್ತು. ಅದರಂತೆ ಈ ಬಾರಿ ಕೇಂದ್ರ ಸರಕಾರ ನಿಗದಿ ಮಾಡಿದ 8 ಸಾವಿರ ರೂ. ಜೊತೆಗೆ ರಾಜ್ಯ ಸರಕಾರ 500 ರೂ. ಸೇರಿಸಿ ಕನಿಷ್ಠ 8500 ರೂ.ಗೆ ಕ್ವಿಂಟಾಲ್ ನಂತೆ ತೊಗರಿ ಖರೀದಿ ಮಾಡಬೇಕು. ಇಲ್ಲವಾದರೆ ಹೋರಾಟ ತೀವ್ರಗೊಳಿಸುತ್ತೇವೆ.
- ಪಂಪಣ್ಣ ನಾಯಕ, ಕಲ್ಯಾಣ ಕರ್ನಾಟಕ ವಿಭಾಗೀಯ ಅಧ್ಯಕ್ಷ
ಕನಕಗಿರಿಯ ವಾಲ್ಮೀಕಿ ವೃತ್ತದಲ್ಲಿ ತೊಗರಿ ಖರೀದಿಗೆ ಕೇಂದ್ರ ಸರಕಾರದ 8 ಸಾವಿರ ರೂ. ಜೊತೆಗೆ ರಾಜ್ಯ ಸರಕಾರದಿಂದ 500 ರೂ. ಬೆಂಬಲ ಬೆಲೆ ನೀಡಲು ಆಗ್ರಹಿಸಿ, ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತರು ಸೋಮವಾರ ಪ್ರತಿಭಟಿಸಿದರು.
ಗೌತಮ್ ಯಾದವ್ ಪ್ರಜಾ ಶ್ರೀ ಪತ್ರಿಕೆ ಕೊಪ್ಪಳ ಜಿಲ್ಲಾ ವರದಿಗಾರ 8867257737


