ಪದವೀಧರ ಶಿಕ್ಷಕರ ಸಂಘಕ್ಕೆ ನಿರುಪಾದಿ ಅಧ್ಯಕ್ಷ, ಬಸವರಾಜ ಪ್ರಧಾನ ಕಾರ್ಯದರ್ಶಿ.ಕನಕಗಿರಿ.

ಪದವೀಧರ ಶಿಕ್ಷಕರ ಸಂಘಕ್ಕೆ ನಿರುಪಾದಿ ಅಧ್ಯಕ್ಷ, ಬಸವರಾಜ ಪ್ರಧಾನ ಕಾರ್ಯದರ್ಶಿ
ಕನಕಗಿರಿ: 2026–2031ನೇ ಸಾಲಿನ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕನಕಗಿರಿ ತಾಲ್ಲೂಕು ಘಟಕದ ನೂತನ ಅಧ್ಯಕ್ಷರಾಗಿ ಹಿರೇಡಂಕನಕಲ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪದವೀಧರ ಶಿಕ್ಷಕ ನಿರುಪಾದಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಹನುಮನಾಳ ಗ್ರಾಮದ ಪದವೀಧರ ಶಿಕ್ಷಕ ಬಸವರಾಜ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನವಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪದವೀಧರ ಶಿಕ್ಷಕ ಸೈನಾಜಬೇಗಂ ಅವರು ಖಜಾಂಚಿಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇಲ್ಲಿನ ಶಾಸಕರ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಮೂರು ಪ್ರಮುಖ ಹುದ್ದೆಗಳಿಗೆ ತಲಾ ಒಂದೊಂದು ನಾಮಪತ್ರ ಮಾತ್ರ ಸಲ್ಲಿಕೆಯಾಗಿತ್ತು. ಹೀಗಾಗಿ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಹಾಗೂ ಖಜಾಂಚಿ ಸ್ಥಾನಗಳಿಗೆ ಯಾವುದೇ ಸ್ಪರ್ಧೆ ನಡೆಯದೆ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾದರು. ಚುನಾವಣಾಧಿಕಾರಿ ಪರಸಪ್ಪ ಹೊರಪೇಟೆ ಅವರು ಫಲಿತಾಂಶವನ್ನು ಅಧಿಕೃತವಾಗಿ ಘೋಷಿಸಿದರು.
ನೂತನ ಪದಾಧಿಕಾರಿಗಳ ಆಯ್ಕೆಯ ಬಳಿಕ ಶಿಕ್ಷಕರು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ವಿಜೇತ ಅಭ್ಯರ್ಥಿಗಳನ್ನು ಅಭಿನಂದಿಸಿ, ಮುಂದಿನ ಅವಧಿಯಲ್ಲಿ ಸಂಘವು ಶಿಕ್ಷಕರ ಸಮಸ್ಯೆಗಳಿಗೆ ಧ್ವನಿಯಾಗಬೇಕು ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷೆ ಶಂಶಾದಬೇಗಂ, ಪ್ರಧಾನ ಕಾರ್ಯದರ್ಶಿ ಉಮೇಶ ಕಂದಕೂರು, ನಿರ್ದೇಶಕ ಶೇಖರಯ್ಯ ಕಲ್ಮಠ, ಗಂಗಾವತಿ ಶಿಕ್ಷಕರ ಪತ್ತಿನ ಸಹಕಾರಿ ಸಂಘದ ತಾಲ್ಲೂಕು ಉಪಾಧ್ಯಕ್ಷ ಪರಶುರಾಮ, ನಿಕಟಪೂರ್ವ ಕಾರ್ಯದರ್ಶಿ ನಾಗರಾಜ ಸೇರಿದಂತೆ ನೂತನ ನಿರ್ದೇಶಕರಾದ ಕನಕಪ್ಪ ಕೆ., ಸಂತೋಷಕುಮಾರ ಜೆ., ಮಾಧವಿ, ಬಸವರಾಜ ಆರ್., ಶರಣಯ್ಯ, ರಮೇಶ ಪೂಜಾರ, ಶಂಕರಗೌಡ ಪಾಟೀಲ, ಮಂಜುನಾಥ ಮಾಗಳದ ಹಾಗೂ ಪದ್ಮಾವತಿ ಉಪಸ್ಥಿತರಿದ್ದರು.
ನೂತನ ಅಧ್ಯಕ್ಷ ನಿರುಪಾದಿ ಮಾತನಾಡಿ, “ಪದವೀಧರ ಶಿಕ್ಷಕರಿಗೆ ಎದುರಾಗುವ ಶೈಕ್ಷಣಿಕ ಹಾಗೂ ಸೇವಾ ಸಂಬಂಧಿತ ಸಮಸ್ಯೆಗಳಿಗೆ ಸಂಘದ ಮೂಲಕ ಸ್ಪಂದಿಸಲಾಗುವುದು. ಪ್ರತಿಯೊಬ್ಬ ಶಿಕ್ಷಕರ ಸಹಕಾರ ಹಾಗೂ ಸಲಹೆ ಪಡೆದುಕೊಂಡು ಸಂಘವನ್ನು ಪರಿಣಾಮಕಾರಿಯಾಗಿ ಮುನ್ನಡೆಸಲಾಗುವುದು” ಎಂದು ತಿಳಿಸಿದರು.
ಶಿಕ್ಷಕರ ಶೈಕ್ಷಣಿಕ ಸಮಸ್ಯೆಗಳು, ಸೇವಾ ಸೌಲಭ್ಯಗಳು ಹಾಗೂ ವೃತ್ತಿಗೆ ಸಂಬಂಧಿಸಿದ ವಿವಿಧ ವಿಚಾರಗಳ ಕುರಿತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲು ಸಂಘ ಮುಂದಾಗಲಿದೆ ಎಂದು ಅವರು ಹೇಳಿದರು. ನೂತನ ಪದಾಧಿಕಾರಿಗಳ ಅವಿರೋಧ ಆಯ್ಕೆಗೆ ಶಿಕ್ಷಕರು ಸಂತಸ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದರು.
ಗೌತಮ್ ಯಾದವ್ ಕನಕಗಿರಿ ಪ್ರಜಾ ಶ್ರೀ ಪತ್ರಿಕೆ ಕೊಪ್ಪಳ ಜಿಲ್ಲಾ ವರದಿಗಾರ :8867257737

