ದೇಶವಿದೇಶ

3 ಗಂಟೆ ಕಳೆದರೂ ಸಚಿವರ ಆಗಮನ ವಿಳಂಬ: ಕನ್ನಡ ಪ್ರೇಮಿಗಳ ಆಕ್ರೋಶ

3 ಗಂಟೆ ಕಳೆದರೂ ಸಚಿವರ ಆಗಮನ ವಿಳಂಬ: ಕನ್ನಡ ಪ್ರೇಮಿಗಳ ಆಕ್ರೋಶ

ಕನಕಗಿರಿ ತಾಲೂಕು ಎರಡನೇ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆ ಕಾರ್ಯಕ್ರಮದಲ್ಲಿ ಅಸಮಾಧಾನ

ಕನಕಗಿರಿ: ಕನಕಗಿರಿ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ್ ತಂಗಡಗಿ ಅವರ ವಿಳಂಬದ ಆಗಮನಕ್ಕೆ ಕನ್ನಡಪರ ಸಂಘಟನೆಗಳು ಹಾಗೂ ಕನ್ನಡ ಪ್ರೇಮಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕನಕಗಿರಿ ತಾಲೂಕು ಎರಡನೇ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆ ಹಾಗೂ ಕಾರ್ಯಕ್ರಮಕ್ಕೆ ಸಚಿವರು ಆಗಮಿಸುವ ನಿರೀಕ್ಷೆಯಲ್ಲಿ ಕನ್ನಡಪರ ಸಂಘಟನೆಗಳ ಮುಖಂಡರು, ಸಾಹಿತ್ಯಾಸಕ್ತರು ಹಾಗೂ ಕನ್ನಡ ಪ್ರೇಮಿಗಳು ಕಾದು ಕುಳಿತಿದ್ದರು. ಆದರೆ, ಮೂರು ಗಂಟೆಗಳು ಕಳೆದರೂ ಸಚಿವರು ಸಮಯಕ್ಕೆ ಸರಿಯಾಗಿ ಆಗಮಿಸದಿರುವುದು ಸಭೆಯಲ್ಲಿ ಭಾಗವಹಿಸಿದ್ದವರ ಬೇಸರಕ್ಕೆ ಕಾರಣವಾಯಿತು. ಈ ಹಿನ್ನೆಲೆಯಲ್ಲಿ ತೆಲುಗು ಮತ್ತು ಕನ್ನಡ ಪರ ಸಂಘಟನೆಗಳ ಮುಖಂಡರು ಹಾಗೂ ಕನ್ನಡ ಪ್ರೇಮಿಗಳು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

ರಾಜಕೀಯಕ್ಕಿಂತ ಕನ್ನಡ ಹಾಗೂ ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ನೀಡಲಿ

ಸಚಿವರಿಗೆ ವಿವಿಧ ಸರ್ಕಾರಿ ಹಾಗೂ ರಾಜಕೀಯ ಕಾರ್ಯಗಳು ಇರಬಹುದು. ಆದರೆ, ತಾವು ಪ್ರತಿನಿಧಿಸುವ ಕನಕಗಿರಿ ವಿಧಾನಸಭಾ ಕ್ಷೇತ್ರಕ್ಕೆ ಮತ್ತು ಕನ್ನಡ ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂಬುದು ಕನ್ನಡ ಪ್ರೇಮಿಗಳ ಒತ್ತಾಯವಾಗಿದೆ. ಕನ್ನಡ ಸಾಹಿತ್ಯ ಸಮ್ಮೇಳನದಂತಹ ಭಾಷೆ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ಕಾರ್ಯಕ್ರಮಗಳಿಗೆ ಸಚಿವರು ಸಮಯಕ್ಕೆ ಸರಿಯಾಗಿ ಆಗಮಿಸಿ, ಕನ್ನಡದ ಕೆಲಸಗಳಿಗೆ ಪ್ರೋತ್ಸಾಹ ನೀಡಬೇಕು ಎಂದು ಅಭಿಪ್ರಾಯಪಟ್ಟರು.

ಈ ಕುರಿತು ಕರ್ನಾಟಕ ರಾಜ್ಯ ರೈತ ಹಸಿರು ಸೇನೆಯ ಅಧ್ಯಕ್ಷರು ಹಾಗೂ ಕನ್ನಡ ಪ್ರೇಮಿ ಗಣೇಶ್ ರೆಡ್ಡಿ ಅವರು ಮಾತನಾಡಿ, “ಪಕ್ಷ ಯಾವುದೇ ಇರಲಿ, ಕನ್ನಡದ ವಿಚಾರ ಹಾಗೂ ನಮ್ಮ ಕ್ಷೇತ್ರ ಮತ್ತು ತಾಲೂಕಿನ ಅಭಿವೃದ್ಧಿಯ ವಿಷಯ ಬಂದಾಗ ನಾವೆಲ್ಲರೂ ಒಂದೇ ಎಂಬ ಭಾವನೆ ಇರಬೇಕು. ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ಕಾರ್ಯಕ್ರಮಗಳಿಗೆ ಜನಪ್ರತಿನಿಧಿಗಳು ಹೆಚ್ಚಿನ ಗೌರವ ನೀಡಬೇಕು. ಕನ್ನಡ ಪ್ರೇಮಿಗಳು ಹಾಗೂ ಸಂಘಟನೆಗಳ ಮುಖಂಡರು ಸಚಿವರ ಆಗಮನಕ್ಕಾಗಿ ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಬಾರದು” ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ಕನ್ನಡ ಸಾಹಿತ್ಯ ಸಮ್ಮೇಳನದಂತಹ ಮಹತ್ವದ ಕಾರ್ಯಕ್ರಮಗಳಿಗೆ ಜನಪ್ರತಿನಿಧಿಗಳು ಸಮಯಪ್ರಜ್ಞೆ ಮತ್ತು ಬದ್ಧತೆಯೊಂದಿಗೆ ಪಾಲ್ಗೊಳ್ಳಬೇಕು. ಕನ್ನಡದ ನೆಲ, ಭಾಷೆ, ಸಂಸ್ಕೃತಿ ಹಾಗೂ ಕ್ಷೇತ್ರದ ಹಿತದೃಷ್ಟಿಯಿಂದ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು ಎಂಬುದು ಕನ್ನಡ ಪ್ರೇಮಿಗಳ ಅಭಿಪ್ರಾಯವಾಗಿದೆ.

ಕನ್ನಡದ ಕಾರ್ಯಕ್ರಮಗಳಿಗೆ ಗೌರವ ನೀಡುವುದು ಜನಪ್ರತಿನಿಧಿಗಳ ಜವಾಬ್ದಾರಿ. ಕನ್ನಡ ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆಗೆ ಪ್ರೋತ್ಸಾಹ ನೀಡಬೇಕಾದ ಸಚಿವರೇ ಇಂತಹ ಕಾರ್ಯಕ್ರಮಗಳಿಗೆ ಸಮಯಕ್ಕೆ ಸರಿಯಾಗಿ ಆಗಮಿಸದಿದ್ದರೆ ಹೇಗೆ ಎಂಬ ಪ್ರಶ್ನೆ ಇದೀಗ ಕನ್ನಡ ಪ್ರೇಮಿಗಳ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ವರದಿಗಾರ ಗೌತಮ್ ಯಾದವ್ ಕನಕಗಿರಿ ಪ್ರಜಾ ಶ್ರೀ ಪತ್ರಿಕೆ ಕೊಪ್ಪಳ ಜಿಲ್ಲಾ ವರದಿಗಾರ.

Related Articles

Leave a Reply

Your email address will not be published. Required fields are marked *

Back to top button