ಕನಕಗಿರಿ ಉತ್ಸವಕ್ಕೆ ವಿವಿಧ ಸಮಿತಿಗಳ ರಚನೆ: ಡಿಸಿ ನಲಿನ್ ಅತುಲ್

ಕನಕಗಿರಿ ಉತ್ಸವಕ್ಕೆ ವಿವಿಧ ಸಮಿತಿಗಳ ರಚನೆ: ಡಿಸಿ ನಲಿನ್ ಅತುಲ್
ಕೊಪ್ಪಳ : “ಕನಕಗಿರಿ ಉತ್ಸವ-2024’’ನ್ನು ಮಾರ್ಚ್ ಮಾಹೆಯಲ್ಲಿ ಆಚರಿಸಲು ತೀರ್ಮಾನಿಸಲಾಗಿದ್ದು, ಈ ಉತ್ಸವವನ್ನು ವಿಜೃಂಭಣೆಯಿಂದ ಅರ್ಥಪೂರ್ಣವಾಗಿ ಆಚರಿಸಲು ಜಿಲ್ಲಾ ಉಸ್ತುವಾರಿ ಸಚಿವರ ನಿರ್ದೇಶನದಂತೆ ವಿವಿಧ ಸಮಿತಿಗಳನ್ನು ರಚನೆ ಮಾಡಲಾಗಿದೆ ಎಂದು ಕನಕಗಿರಿ ಉತ್ಸವ ಸಮಿತಿ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಅವರು ತಿಳಿಸಿದ್ದಾರೆ.
ಕನಕಗಿರಿ ಉತ್ಸವ-2024 ಪ್ರಯುಕ್ತ ಸ್ವಾಗತ ಸಮಿತಿ ಹಾಗೂ ಸಾಂಸ್ಕೃತಿಕ, ವೇದಿಕೆ, ಆಹಾರ, ಕ್ರೀಡಾ, ವಸತಿ, ಸಾರಿಗೆ, ಮೆರವಣಿಗೆ, ಆರೋಗ್ಯ ನೈರ್ಮಲೀಕರಣ, ಭದ್ರತಾ, ಪ್ರಚಾರ ಮತ್ತು ಮಾಧ್ಯಮ, ಮೂಲಭೂತ ಸೌಕರ್ಯ, ವಸ್ತು ಪ್ರದರ್ಶನ, ಪ್ರವಾಸೋದ್ಯಮ ಇಲಾಖೆ, ವಿದ್ಯುತ್ ಸರಬರಾಜು, ಆಮಂತ್ರಣ ಪತ್ರಿಕೆ ಸರಬರಾಜು ಹಾಗೂ ಒಟ್ಟಾರಿ ಉಸ್ತುವಾರಿಗಾಗಿ ಸಂಘಟನಾ ಸಮಿತಿ ಸೇರಿದಂತೆ ಒಟ್ಟು 17 ಸಮಿತಿಗಳನ್ನು ರಚಿಸಲಾಗಿದೆ ಎಂದು ಹೇಳಿದರು.
ಕನಕಗಿರಿ ಉತ್ಸವ-2024ರ ಅಂಗವಾಗಿ ರಚಿಸಲಾದ ಸಮಿತಿಗಳು ಹಾಗೂ ಸಮಿತಿಗಳು ನಿರ್ವಹಿಸಬೇಕಾದ ಕಾರ್ಯಗಳ ವಿವರ ಇಂತಿದೆ.
ಸ್ವಾಗತ ಸಮಿತಿ: ಕೊಪ್ಪಳ ಸಹಾಯಕ ಆಯುಕ್ತರನ್ನು ಸ್ವಾಗತ ಸಮಿತಿಗೆ ಅಧ್ಯಕ್ಷರನ್ನಾಗಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿಗಳು, ತೊಟಗಾರಿಕೆ ಇಲಾಖೆ ಉಪನಿರ್ದೇಶಕರು, ಕನಕಗಿರಿ ತಾ.ಪಂ ಇ.ಓ., ಕಾರಟಗಿಯ ತಾ.ಪಂ ಇ.ಓ ಮತ್ತು ಕಾರಟಗಿ ತಹಶೀಲ್ದಾರರನ್ನು ಸದಸ್ಯರುಗಳನ್ನಾಗಿ ನೇಮಿಸಿದ್ದು, ಕನಕಗಿರಿ ತಹಶೀಲ್ದಾರರು ಈ ಸಮಿತಿಗೆ ಸದಸ್ಯ ಕಾರ್ಯದರ್ಶಿಗಳಾಗಿದ್ದಾರೆ. ಸ್ವಾಗತ ಸಮಿತಿಯು ಅತಿಥಿಗಳ ಸ್ವಾಗತ, ಅತಿಥಿಗಳಿಗೆ ವಸತಿ, ಊಟ ಮತ್ತು ಸಾರಿಗೆ ವ್ಯವಸ್ಥೆಯ ಬಗ್ಗೆ ಸಂಬಂಧಪಟ್ಟ ಸಮಿತಿಗಳಿಗೆ ಮಾಹಿತಿಯನ್ನು ನೀಡಬೇಕು. ಉತ್ಸವದ ಸಂಭ್ರಮಾಚರಣೆಗೆ ಆಗಮಿಸುವ ಗಣ್ಯರಿಗೆ, ಕಲಾವಿದರಿಗೆ ಸನ್ಮಾನ ಸಾಮಾಗ್ರಿಗಳನ್ನು ಹಾಗೂ ಅಗತ್ಯ ಶಿಷ್ಠಾಚಾರದ ವ್ಯವಸ್ಥೆ ಮಾಡಬೇಕು.
ಸಾಂಸ್ಕೃತಿಕ ಸಮಿತಿ: ಜಿ.ಪಂ ಉಪಕಾರ್ಯದರ್ಶಿಗಳನ್ನು ಸಾಂಸ್ಕೃತಿಕ ಸಮಿತಿಗೆ ಅಧ್ಯಕ್ಷರನ್ನಾಗಿ ಹಾಗೂ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು, ಜಿಲ್ಲಾ ತರಬೇತಿ ಸಂಸ್ಥೆಯ ಉಪ ಪ್ರಾಂಶುಪಾಲರು, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು, ಗಂಗಾವತಿ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಸದಸ್ಯರುಗಳನ್ನಾಗಿ ನೇಮಿಸಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಈ ಸಮಿತಿಗೆ ಸದಸ್ಯ ಕಾರ್ಯದರ್ಶಿಗಳಾಗಿರುತ್ತಾರೆ.
ಸಾಂಸ್ಕೃತಿ ಸಮಿತಿಯು ಉತ್ಸವದಲ್ಲಿ ಕಾರ್ಯಕ್ರಮ ನಿಡುವ ಒಳ್ಳೆಯ ಕಲಾವಿದರು ಆಯ್ಕೆ, ಜಿಲ್ಲೆಯ ಹೊರಗಡೆಯಿಂದ ಆಹ್ವಾನಿಸಬೇಕಾದ ಕಲಾವಿದರನ್ನು ಸಂಪರ್ಕಿಸಿ ಕಾರ್ಯಕ್ರಮ ಅವಧಿಯನ್ನು ನಿಗದಿಪಡಿಸಬೇಕು. ಸ್ಥಳಿಯ ಕಲಾವಿದರ ಮತ್ತು ಹೊರಗಡೆಯಿಂದ ಬರುವ ಕಲಾವಿದರಿಗೆ ನೀಡಬೇಕಾದ ಸಂಭಾವನೆ ಬಗ್ಗೆ ಜಿಲ್ಲಾಧಿಕಾರಿಗಳ ಅನುಮೋದನೆ, ಹೊರಗಡೆಯಿಂದ ಬರುವ ಕಲಾವಿದರು ಮತ್ತು ಸ್ಥಳೀಯ ಕಲಾವಿದರಿಗೆ ಕಾರ್ಯಕ್ರಮದ ಅವಧಿಯನ್ನು ನಿಗದಿಪಡಿಸಬೇಕು. ಸಾಂಸ್ಕೃತಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಕಲಾವಿದರ ಬಗ್ಗೆ ಮಾಹಿತಿಯನ್ನು ಸ್ವಾಗತ ಸಮಿತಿ, ವಸತಿ ಸಮಿತಿ ಹಾಗೂ ಆಹಾರ ಸಮಿತಿಗಳಿಗೆ ಪೂರ್ಣ ವಿವರ ನೀಡಬೇಕು. ಬ್ಯಾನರ ಮತ್ತು ನೆನಪಿನ ಕಾಣಿಕೆಗಳ ಆಯ್ಕೆ ಹಾಗೂ ನಂತರ ಪರಿಶೀಲನೆ ಹಾಗೂ ಅಂತಿಮ ನಿರ್ಣಯವನ್ನು ಸ್ವಾಗತ ಸಮಿತಿಯ ಗಮನಕ್ಕೆ ತಂದು ತೀರ್ಮಾನಿಸಬೇಕು ಹಾಗೂ ಎಲ್ಲಾ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿ, ವಿದ್ಯಾರ್ಥೀನಿಯರಿಗೆ ವಿವಿಧ ಸ್ಫರ್ಧೆಗಳನ್ನು ಏರ್ಪಡಿಸಲು ಕ್ರಮ ಕೈಗೊಳ್ಳಬೇಕು.
ವೇದಿಕೆ ಸಮಿತಿ: ಕೊಪ್ಪಳ ಸಹಾಯಕ ಆಯುಕ್ತರನ್ನು ಸ್ವಾಗತ ಸಮಿತಿಗೆ ಅಧ್ಯಕ್ಷರನ್ನಾಗಿ ಹಾಗೂ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರು, ಕೊಪ್ಪಳ ಜೆಸ್ಕಾಂ ಕಾರ್ಯಾನಿರ್ವಾಹಕ ಅಭಿಯಂತರು, ಡಿ.ಯು.ಡಿ.ಸಿ ಸಹಾಯಕ ಕಾರ್ಯಾನಿರ್ವಾಹಕ ಅಭಿಯಂತರರು, ಕನಕಗಿರಿ ಮತ್ತು ಕಾರಟಗಿಯ ತಹಶೀಲ್ದಾರರು, ಪುರಸಭೆ ಹಾಗೂ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳು, ಮುನಿರಾಬಾದ್ ಪಂಪಾವನದ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ತೋಟಗಾರಿಕೆ ಉಪನಿರ್ದೇಶಕರ ಕಚೇರಿಯ ಕೇಂದ್ರ ಸ್ಥಾನಿಕ ಸಹಾಯಕರನ್ನು ಸದಸ್ಯರುಗಳನ್ನಾಗಿ ನೇಮಿಸಿದ್ದು, ಗಂಗಾವತಿ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಈ ಸಮಿತಿಗೆ ಸದಸ್ಯ ಕಾರ್ಯದರ್ಶಿಗಳಾಗಿರುತ್ತಾರೆ.
ವೇದಿಕೆ ಸಮಿತಿಯು ವೇದಿಕೆ ಮತ್ತು ಪೆಂಡಾಲ ನಿರ್ಮಾಣ, ವೇದಿಕೆ ಅಲಂಕಾರ ಮತ್ತು ವಿದ್ಯುತ್ ದೀಪಾಲಂಕಾರ, ವೇದಿಕೆ ಅಕ್ಕ ಪಕ್ಕ ಕಲಾವಿದರಿಗೆ ಸಿದ್ಧತೆ ಮಾಡಿಕೊಳ್ಳಲು ಗ್ರಿನ್ ರೂಮ್, ಆಸನ, ಮೈಕಸೆಟ್ ಮತ್ತು ಜನರೇಟರ್ ವ್ಯವಸ್ಥೆ, ವೇದಿಕೆಗೆ ಹೂವಿನ ಕುಂಡಗಳ ವ್ಯವಸ್ಥೆ ಮತ್ತು ಬ್ಯಾರಿಕೇಡಿಂಗ್ ವ್ಯವಸ್ಥೆ ಮಾಡಬೇಕು.
ಆಹಾರ ಸಮಿತಿ: ಆಹಾರ ಹಾಗೂ ನಾಗರೀಕರ ಸರಬರಾಜು ಇಲಾಖೆ ಉಪನಿರ್ದೇಶಕರನ್ನು ಆಹಾರ ಸಮಿತಿಗೆ ಅಧ್ಯಕ್ಷರನ್ನಾಗಿ ಹಾಗೂ ತೋಟಗಾರಿಕೆ ಇಲಾಖೆ ಉಪನಿರ್ದೇಶಕರು, ಕೊಪ್ಪಳ ಪಶು ಸಂಗೋಪನೆ ಇಲಾಖೆ ಉಪನಿರ್ದೇಶಕರು, ಗಂಗಾವತಿ ನಗರಸಭೆ ಪೌರಾಯುಕ್ತರು, ಗಂಗಾವತಿ ಅಬಕಾರಿ ನಿರೀಕ್ಷಕರು, ಸಣ್ಣ ನೀರಾವರಿ ಇಲಾಖೆ ಕಾರ್ಯ ನಿರ್ವಾಹಕ ಅಭಿಯಂತರರು,
ಹಿAದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿಗಳು, ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿಗಳನ್ನು ಸದಸ್ಯರುಗಳನ್ನಾಗಿ ನೇಮಿಸಿದ್ದು, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಕೊಪ್ಪಳ ಜಿಲ್ಲಾ ವ್ಯವಸ್ಥಾಪಕರು ಈ ಸಮಿತಿಗೆ ಸದಸ್ಯ ಕಾರ್ಯದರ್ಶಿಗಳಾಗಿರುತ್ತಾರೆ.
ಆಹಾರ ಸಮಿತಿಯು ಉತ್ಸವಕ್ಕೆ ಆಗಮಿಸುವ ಅತಿಥಿಗಳಿಗೆ ಕಲಾವಿದರಿಗೆ, ಅಧಿಕಾರಿಗಳಿಗೆ ಹಾಗೂ ಭದ್ರತಾ ಸಿಬ್ಬಂದಿಗಳಿಗೆ ಹಾಗೂ ಮಾದ್ಯಮದವರಿಗೆ ಪ್ರತ್ಯೇಕ ಊಟ, ಉಪಹಾರ ವ್ಯವಸ್ಥೆ ಮಾಡಬೇಕು. ಊಟ, ಅಲ್ಪೋಹಾರ ಟೋಕನ್‌ಗಳ ಮುದ್ರಣ ಹಾಗೂ ಅದರ ನಿಖರವಾದ ಹಂಚಿಕೆಗೆ ಸೂಕ್ತ ಕ್ರಮ ವಹಿಸಬೇಕು.
ಕ್ರೀಡಾ ಸಮಿತಿ: ಕೊಪ್ಪಳ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರನ್ನು ಕ್ರೀಡಾ ಸಮಿತಿಗೆ ಅಧ್ಯಕ್ಷರನ್ನಾಗಿ ಹಾಗೂ ಹಿಂದುಳಿದ ವರ್ಗಗಳ ಮತ್ತು ಅಲ್ಪ ಸಂಖ್ಯಾತರ ಇಲಾಖೆಗಳ ಜಿಲ್ಲಾ ಅಧಿಕಾರಿಗಳು, ಕನಕಗಿರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು, ಕೊಪ್ಪಳ ಸಾರ್ವಜನಿಕ ಶಿಕ್ಷಣ ಇಲಾಖೆ ದೈಹಿಕ ಶಿಕ್ಷಣಾಧಿಕಾರಿಗಳು, ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿಗಳು, ಗಂಗಾವತಿ ಶಿಕ್ಷಣಾಧಿಕಾರಿಗಳನ್ನು ಸದಸ್ಯರುಗಳನ್ನಾಗಿ ನೇಮಿಸಿದ್ದು, ಗಂಗಾವತಿ ತಾಲ್ಲೂಕ ಯುವಜನ ಸೇವೆ ಮತ್ತು ಕ್ರೀಡಾಧಿಕಾರಿಗಳು ಈ ಸಮಿತಿಗೆ ಸದಸ್ಯ ಕಾರ್ಯದರ್ಶಿಗಳಾಗಿರುತ್ತಾರೆ.
ಕ್ರೀಡಾ ಸಮಿತಿಯು ಗ್ರಾಮೀಣ ಮತ್ತು ಸಾಹಸ ಕ್ರೀಡೆಗಳನ್ನು ಏರ್ಪಡಿಸಬೇಕು. ವಿಜೇತರಿಗೆ ಬಹುಮಾನ ಮತ್ತು ಪ್ರಮಾಣ ಪತ್ರ ಮುದ್ರಣ, ಕ್ರೀಡೆಗಳಲ್ಲಿ ಭಾಗವಹಿಸುವವರ ಮಾಹಿತಿಯನ್ನು ಆಹಾರ ಮತ್ತು ವಸತಿ ಸಮಿತಿಗಳಿಗೆ ಒದಗಿಸಲು ಕ್ರಮ ಕೈಗೊಳ್ಳಬೇಕು.
ವಸತಿ ಸಮಿತಿ: ಕೊಪ್ಪಳ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕರನ್ನು ವಸತಿ ಸಮಿತಿಗೆ ಅಧ್ಯಕ್ಷರನ್ನಾಗಿ ಹಾಗೂ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು, ಕಾರಟಗಿ ಹಾಗೂ ಗಂಗಾವತಿ ತಹಶೀಲ್ದಾರರು, ಕೊಪ್ಪಳ ಹಾಗೂ ಗಂಗಾವತಿ ನಗರಸಭೆ ಪೌರಾಯುಕ್ತರು, ಕನಕಗಿರಿ,ಗಂಗಾವತಿ ಹಾಗೂ ಕಾರಟಗಿ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ಸದಸ್ಯರುಗಳನ್ನಾಗಿ ನೇಮಿಸಿದ್ದು, ಕನಕಗಿರಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳನ್ನು ಈ ಸಮಿತಿಗೆ ಸದಸ್ಯ ಕಾರ್ಯದರ್ಶಿಗಳಾಗಿರುತ್ತಾರೆ. ವಸತಿ ಸಮಿತಿಯು ಉತ್ಸವಕ್ಕೆ ಆಗಮಿಸುವ ಗಣ್ಯರಿಗೆ ಬೇರೆ ಕಡೆಯಿಂದ ಬರುವ ಹಾಗೂ ಸ್ಥಳೀಯ ಕಲಾವಿದರು ಮತ್ತು ತಂಡದವರಿಗೆ ಹಾಗೂ ಕ್ರೀಡಾಪಟುಗಳಿಗೆ ವಸತಿ ಕಲ್ಪಿಸಬೇಕು. ಕಲಾವಿದರು ಮತ್ತು ಕ್ರೀಡಾಪಟುಗಳ ಮಾಹಿತಿಯನ್ನು ಸಾಂಸ್ಕೃತಿ ಮತ್ತು ಕ್ರೀಡಾ ಸಮಿತಿಗಳಿಂದ ಪಡೆಯಬೇಕು. ಹೋಟಲ್ (ತಂಗುವಿಕೆ) ಹಾಗೂ ಊಟ, ಉಪಹಾರ, ಟೀ ಸಿದ್ದತೆಯ ಕುರಿತು ಕ್ರಮ ವಹಿಸಬೇಕು.
ಸಾರಿಗೆ ಸಮಿತಿ: ಕೊಪ್ಪಳ ಪ್ರಾದೇಶಿಕ ಸಾರಿಗೆ ಅಧಿಕಾರಿಗಳನ್ನು ಸಾರಿಗೆ ಸಮಿತಿಗೆ ಅಧ್ಯಕ್ಷರನ್ನಾಗಿ ಹಾಗೂ ಕೊಪ್ಪಳ ಕ.ಕ.ರ.ಸಾ.ಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿಗಳು, ಕೊಪ್ಪಳ ತಹಶೀಲ್ದಾರರು, ಕನಕಗಿರಿ,ಕಾರಟಗಿ ಹಾಗೂ ಗಂಗಾವತಿ ತಾಲ್ಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ಸದಸ್ಯರುಗಳನ್ನಾಗಿ ನೇಮಿಸಿದ್ದು, ಕೊಪ್ಪಳ ಜಿಲ್ಲಾಧಿಕಾರಿಗಳ ಕಾರ್ಯಾಲಯ ವಾಹನ ವಿಷಯ ನಿರ್ವಾಹಕರು ಈ ಸಮಿತಿಗೆ ಸದಸ್ಯ ಕಾರ್ಯದರ್ಶಿಗಳಾಗಿರುತ್ತಾರೆ. ಸಾರಿಗೆ ಸಮಿತಿಯು ಉತ್ಸವಕ್ಕೆ ಆಗಮಿಸುವ ಗಣ್ಯರಿಗೆ ಬೇರೆ ಕಡೆಯಿಂದ ಬರುವ ಹಾಗೂ ಸ್ಥಳೀಯ ಕಲಾವಿದರು ಮತ್ತು ತಂಡದವರಿಗೆ ಹಾಗೂ ಕ್ರೀಡಾಪಟುಗಳಿಗೆ ವಾಹನ ವ್ಯವಸ್ಥೆ ಮಾಡುವುದು. ವಾಹನಗಳ ಅಧಿಗೃಹಣ (Requisition) ಮತ್ತು ಇಂಧನ ವ್ಯವಸ್ಥೆ ಮಾಡಬೇಕು.
ಮೆರವಣಿಗೆ ಸಮಿತಿ: ಕೊಪ್ಪಳ ಕೃಷಿ ಇಲಾಖೆ ಜಂಟಿ ನಿರ್ದೇಶಕರನ್ನು ಮೆರವಣಿಗೆ ಸಮಿತಿಗೆ ಅಧ್ಯಕ್ಷರನ್ನಾಗಿ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರನ್ನು ಉಪಾಧ್ಯಕ್ಷರಾಗಿ ಹಾಗೂ ಕೊಪ್ಪಳ ಪ್ರಾದೇಶಿಕ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಕೊಪ್ಪಳ ವಲಯ ಅರಣ್ಯ ಸಂರಕ್ಷಣಾಧಿಕಾರಿಗಳು, ಗಂಗಾವತಿ ಗ್ರಾಮೀಣ ಆರಕ್ಷ ವೃತ್ತ ನಿರೀಕ್ಷಕರು, ಗಂಗಾವತಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿಗಳನ್ನು ಸದಸ್ಯರುಗಳನ್ನಾಗಿ ನೇಮಿಸಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರು ಹಾಗೂ ಜಿಲ್ಲಾ ವಾರ್ತಾಧಿಕಾರಿಗಳನ್ನು ಈ ಸಮಿತಿಗೆ ಸದಸ್ಯ ಕಾರ್ಯದರ್ಶಿಗಳಾಗಿರುತ್ತಾರೆ. ಸಾರಿಗೆ ಸಮಿತಿಯು ಮೆರವಣಿಗೆಗೆ ಜಾನಪದ ಕಲಾ ತಂಡಗಳ ಆಯ್ಕೆ ಮತ್ತು ಮೆರವಣಿಗೆ ವ್ಯವಸ್ಥೆ, ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಕಲಾ ತಂಡಗಳ ಮಾಹಿತಿಯನ್ನು ಆಹಾರ ಮತ್ತು ವಸತಿ ಸಮಿತಿಗಳಿಗೆ ಒದಗಿಸಬೇಕು. ಮಾನ್ಯ ಸಚಿವರ ನಿರ್ದೇಶನದಂತೆ ಮೆರವಣಿಗೆಯಲ್ಲಿ ಆನೆ ಹಾಗು ಕುದುರೆ ವ್ಯವಸ್ಥೆಯನ್ನು ವಲಯ ಅರಣ್ಯಾಧಿಕಾರಿಗಳು ಗಂಗಾವತಿ ಇವರು ಮಾಡಬೇಕು.
ಆರೋಗ್ಯ ನೈರ್ಮಲೀಕರಣ ಸಮಿತಿ: ಕೊಪ್ಪಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳನ್ನು ಆರೋಗ್ಯ ನೈರ್ಮಲೀಕರಣ ಸಮಿತಿಗೆ ಅಧ್ಯಕ್ಷರನ್ನಾಗಿ ಹಾಗೂ ಕನಕಗಿರಿ ಪ್ರಾ.ಆರೋಗ್ಯ ಕೇಂದ್ರ ವೈದ್ಯಾಧಿಕಾರಿಗಳು, ಸದಸ್ಯರನ್ನಾಗಿ ನೇಮಿಸಿದ್ದು, ಗಂಗಾವತಿ ತಾಲ್ಲೂಕ ವೈದ್ಯಾಧಿಕಾರಿಗಳನ್ನು ಈ ಸಮಿತಿಗೆ ಸದಸ್ಯ ಕಾರ್ಯದರ್ಶಿಗಳಾಗಿರುತ್ತಾರೆ. ಆರೋಗ್ಯ ನೈರ್ಮಲೀಕರಣ ಸಮಿತಿಯು ವೇದಿಕೆ ವ್ಯಾಪ್ತಿಯಲ್ಲಿ ಓ,ಪಿ,ಡಿ ತೆರೆಯುವುದು, ಅವಶ್ಯಕ ಹಾಗೂ ಜೀವರಕ್ಷಕ ಔಷದಿಗಳನ್ನು ಪ್ರಾಥಮಿಕ ಆರೋಗ್ಯ ಕೇಂದ್ರ ಕನಕಗಿರಿಯಲ್ಲಿ ದಾಸ್ತಾನು ಮಾಡಿಕೊಳ್ಳಬೇಕು, ದಿನವಿಡಿ ಆರೋಗ್ಯ ಸೇವೆ ಒದಗಿಸುವುದು, ಅಂಬುಲೇನ್ಸ್ ವಾಹನ ಸಿದ್ಧವಾಗಿಟ್ಟುಕೊಳ್ಳಬೇಕು.
ಭದ್ರತಾ ಸಮಿತಿ: ಕೊಪ್ಪಳ ಜಿಲ್ಲಾ ಆರಕ್ಷಕ ಅಧೀಕ್ಷಕರನ್ನು ಭದ್ರತಾ ಸಮಿತಿಗೆ ಅಧ್ಯಕ್ಷರನ್ನಾಗಿ ಹಾಗೂ ಕೊಪ್ಪಳ ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಕೊಪ್ಪಳ ಪೊಲೀಸ್ ಉಪ ಅಧೀಕ್ಷಕರು, ಜಿಲ್ಲಾ ಅಗ್ನಿಶಾಮಕ ಅಧಿಕಾರಿಗಳು, ಕೊಪ್ಪಳ ಕಮಾಂಡೆಂಟ್ ಗೃಹ ರಕ್ಷಕ ದಳ, ಇವರನ್ನು ಸದಸ್ಯರನ್ನಾಗಿ ನೇಮಿಸಿದ್ದು, ಗಂಗಾವತಿ ಪೊಲೀಸ್ ಉಪ ಅಧೀಕ್ಷಕರು ಈ ಸಮಿತಿಗೆ ಸದಸ್ಯ ಕಾರ್ಯದರ್ಶಿಗಳಾಗಿರುತ್ತಾರೆ. ಭದ್ರತಾ ಸಮಿತಿಯು ಉತ್ಸವಕ್ಕೆ ಆಗಮಿಸುವ ಗಣ್ಯ ವ್ಯಕ್ತಿಗಳು ಹಾಗೂ ಕಲಾವಿದರು ಮತ್ತು ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಸೂಕ್ತ ಭದ್ರತಾ ವ್ಯವಸ್ಥೆ ಮಾಡುವುದು. ಭದ್ರತೆಗೆ ನಿಯೋಜಿಸಿದ ಸಿಬ್ಬಂದಿ ಮಾಹಿತಿಯನ್ನು ಆಹಾರ ಸಮಿತಿಗೆ ಒದಗಿಸಬೇಕು.
ಪ್ರಚಾರ ಮತ್ತು ಮಾಧ್ಯಮ ಸಮಿತಿ: ಕೊಪ್ಪಳ ಜಿಲ್ಲಾ ವಾರ್ತಾಧಿಕಾರಿಗಳನ್ನು ಪ್ರಚಾರ ಮತ್ತು ಮಾಧ್ಯಮ ಸಮಿತಿಗೆ ಅಧ್ಯಕ್ಷರನ್ನಾಗಿ ಹಾಗೂ ಕೊಪ್ಪಳ ಡಿ.ಐ.ಓ. ಎನ್.ಐ.ಸಿ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳು, ಕೊಪ್ಪಳ ಕೃಷಿ ಇಲಾಖೆ ಉಪ ನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರು, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳು ಹಾಗೂ ಜಿಲ್ಲಾ ಸಾಕ್ಷರತಾ ಸಮಿತಿ ಕಾರ್ಯದರ್ಶಿಗಳು, ಗಂಗಾವತಿ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಸದಸ್ಯರನ್ನಾಗಿ ನೇಮಿಸಿದ್ದು, ಕೊಪ್ಪಳ ಕನ್ನಡ ಮತ್ತು ಸಂಸ್ಕೃತಿಕ ಇಲಾಖೆ ಸಹಾಯಕ ನಿರ್ದೇಶಕರು ಈ ಸಮಿತಿಗೆ ಸದಸ್ಯ ಕಾರ್ಯದರ್ಶಿಗಳಾಗಿರುತ್ತಾರೆ. ಪ್ರಚಾರ ಮತ್ತು ಮಾಧ್ಯಮ ಸಮಿತಿಯು ಕನಕಗಿರಿ ಉತ್ಸವದ ಬಗ್ಗೆ ವ್ಯಾಪಕ ಪ್ರಚಾರ ನೀಡುವುದು, ಉತ್ಸವದ ಬಗ್ಗೆ ವೆಬ್ಸೈಟ್ ಮೂಲಕ ವ್ಯಾಪಕ ಪ್ರಚಾರ ನೀಡುವುದು, ವೇದಿಕೆ ವ್ಯಾಪ್ತಿಯಲ್ಲಿ ಇಂಟರನೆಟ್ ಮತ್ತು ಪ್ಯಾಕ್ಸ್ಗಳೊಂದಿಗೆ ಮಾಹಿತಿ ಕೇಂದ್ರದ ವ್ಯವಸ್ಥೆ ಮಾಡಬೇಕು.
ಮೂಲಭೂತ ಸೌಕರ್ಯ ಸಮಿತಿ: ಕೊಪ್ಪಳ ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರರನ್ನು ಮೂಲಭೂತ ಸೌಕರ್ಯ ಸಮಿತಿಗೆ ಅಧ್ಯಕ್ಷರನ್ನಾಗಿ ಹಾಗೂ ಕೊಪ್ಪಳ ಪಂ.ರಾ.ಇಂ. ಕಾರ್ಯನಿರ್ವಾಹಕ ಅಭಿಯಂತರರು, ಗಂಗಾವತಿ ನಗರಸಭೆ ಪೌರಾಯುಕ್ತರು, ಕನಕಗಿರಿ ತಾ,ಪಂ ಕಾರ್ಯ ನಿರ್ವಾಹಕ ಅಧಿಕಾರಿಗಳು, ಕೊಪ್ಪಳ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ ಕಾರ್ಯನಿರ್ವಾಹಕ ಅಭಿಯಂತರರು, ಕೊಪ್ಪಳ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಿರಿಯ ಭೂ ವಿಜ್ಞಾನಿಗಳು, ಕೊಪ್ಪಳ ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ವಿಭಾಗ ಕಾರ್ಯ ನಿರ್ವಾಹಕ ಅಭಿಯಂತರರು ಸದಸ್ಯರನ್ನಾಗಿ ನೇಮಿಸಿದ್ದು, ಗಂಗಾವತಿ ಪಂ.ರಾ.ಇA ಉಪ ವಿಭಾಗ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಈ ಸಮಿತಿಗೆ ಸದಸ್ಯ ಕಾರ್ಯದರ್ಶಿಗಳಾಗಿರುತ್ತಾರೆ. ಮೂಲಭೂತ ಸೌಕರ್ಯ ಸಮಿತಿಯು ಕನಕಗಿರಿ ಗ್ರಾಮದಲ್ಲಿ ಸ್ವಚ್ಚತೆ ಮತ್ತು ವೇದಿಕೆ ಪ್ರದೇಶದಲ್ಲಿ ಮರಮ ಹಾಕಿಸುವುದು, ಕನಕಗಿರಿಯಿಂದ ಉತ್ಸವ ಸ್ಥಳಕ್ಕೆ ಸಂಪರ್ಕ ರಸ್ತೆ ದುರಸ್ತಿ ಮಾಡುವುದು. ವೇದಿಕೆಯ ಪ್ರದೇಶ ಮತ್ತು ಗ್ರಾಮದ ಸುತ್ತ ಮುತ್ತ ತ್ಯಾಜ್ಯ ವಸ್ತುಗಳ ವೀಲೆ ಮಾಡುವುದು, ಸಾರ್ವಜನಿಕರಿಗೆ ನೀರಿಗಾಗಿ ನಳಗಳು ಹಾಗೂ ತಾತ್ಕಾಲಿಕ ಶೌಚಾಲಯಗಳ ವ್ಯವಸ್ಥೆ ಕಲ್ಪಿಸಬೇಕು, ವೇದಿಕೆಯ ಪ್ರದೇಶವನ್ನು ಲೇವಲ್ ಮಾಡಬೇಕು.
ವಸ್ತು ಪ್ರದರ್ಶನ ಸಮಿತಿ: ಕೊಪ್ಪಳ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರನ್ನು ವಸ್ತು ಪ್ರದರ್ಶನ ಸಮಿತಿಗೆ ಅಧ್ಯಕ್ಷರನ್ನಾಗಿ ಹಾಗೂ ಕೊಪ್ಪಳ ಉದ್ಯೋಗ ವಿನಿಮಯ ಅಧಿಕಾರಿಗಳು, ಜಿ.ಪಂ ಎನ್.ಆರ್.ಎಲ್.ಎಮ್. ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರು, ಕೊಪ್ಪಳ ನಗರಯೋಜನಾ ಇಲಾಖೆ ಸಹಾಯಕ ನಿರ್ದೇಶಕರು, ಜಿಲ್ಲಾ ಗ್ರಂಥಾಲಯ ಜಿಲ್ಲಾ ಗ್ರಂಥ ಪಾಲಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು, ಜಿಲ್ಲಾ ಸಾಕ್ಷರತಾ ಸಮಿತಿ ಹೆಚ್ಚುವರಿ ಜಿಲ್ಲಾ ವಯಸ್ಕ ಶಿಕ್ಷಣಾಧಿಕಾರಿಗಳು ಹಾಗೂ ಖಜಾಂಚಿ ಸದಸ್ಯರನ್ನಾಗಿ ನೇಮಿಸಿದ್ದು, ಮುನಿರಾಬಾದ ಪಂಪಾವನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಈ ಸಮಿತಿಗೆ ಸದಸ್ಯ ಕಾರ್ಯದರ್ಶಿಗಳಾಗಿರುತ್ತಾರೆ. ವಸ್ತು ಪ್ರದರ್ಶನ ಸಮಿತಿಯು ಕೃಷಿಗೆ ಸಂಬಂಧಿಸಿದ ವಸ್ತು ಪ್ರದರ್ಶನ, ಫಲಪುಷ್ಪ ಪ್ರದರ್ಶನ, ಆಯ್ದ ಛಾಯಾಚಿತ್ರಗಾರರ ಛಾಯಾಚಿತ್ರ ಪ್ರದರ್ಶನ, ಶಾಲಾ ಮಕ್ಕಳಿಂದ ವೈಜ್ಞಾನಿಕ ವಸ್ತು ಪ್ರದರ್ಶನ, ಪುಸ್ತಕ ಮಳಿಗೆಗಳು, ಪ್ರತಿಯೊಂದು ಜಿಲ್ಲೆಯಲ್ಲಿನ ವೈಶಿಷ್ಟ್ಯಪೂರ್ಣ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮಾಡುವಂತೆ ಕ್ರಮ ವಹಿಸಬೇಕು.
ಪ್ರವಾಸೋದ್ಯಮ ಸಮಿತಿ: ಕೊಪ್ಪಳ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕರನ್ನು ಪ್ರವಾಸೋದ್ಯಮ ಸಮಿತಿಗೆ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಪ್ರವಾಸೋದ್ಯಮ ಇಲಾಖೆಯು ಕನಕಗಿರಿ ಇತರೆ ಐತಿಹಾಸಿಕ ಸ್ಥಳಗಳ ಕಿರುಹೊತ್ತಿಗೆ, ವ್ಯಾಪಕ ಪ್ರಚಾರ ಕೈಗೊಳ್ಳುವುದು, ಪೋಸ್ಟರ್, ಬ್ಯಾನರ್ ವ್ಯವಸ್ಥೆ ಮಾಡಬೇಕು.
ವಿದ್ಯುತ್ ಸರಬರಾಜು ಸಮಿತಿ: ಗಂಗಾವತಿ ಜೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರು ವಿದ್ಯುತ್ ಸರಬರಾಜು ಸಮಿತಿಗೆ ಅಧ್ಯಕ್ಷರನ್ನಾಗಿ ಹಾಗೂ ಗಂಗಾವತಿ ಜೆಸ್ಕಾಂ ಉಪವಿಭಾಗ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಸದಸ್ಯರನ್ನಾಗಿ ನೇಮಿಸಲಾಗಿದೆ
ಆಮಂತ್ರಣ ಪತ್ರಿಕೆ ಸರಬರಾಜು ಸಮಿತಿ: ಕೊಪ್ಪಳ ಸಹಾಯಕ ಆಯುಕ್ತರನ್ನು ಆಮಂತ್ರಣ ಪತ್ರಿಕೆ ಸರಬರಾಜು ಸಮಿತಿಗೆ ಅಧ್ಯಕ್ಷರನ್ನಾಗಿ ಹಾಗೂ ಗಂಗಾವತಿ, ಕೊಪ್ಪಳ, ಕುಷ್ಟಗಿ, ಕನಕಗಿರಿ, ಕಾರಟಗಿ, ಕುಕನೂರು, ಯಲಬುರ್ಗಾ ತಹಶೀಲ್ದಾರರು, ತಾ.ಪಂ ಗಂಗಾವತಿ, ಕೊಪ್ಪಳ, ಕುಷ್ಟಗಿ, ಕನಕಗಿರಿ, ಕಾರಟಗಿ, ಕುಕನೂರು, ಯಲಬುರ್ಗಾ ಕಾರ್ಯನಿರ್ವಾಹಕ ಅಧಿಕಾರಿಗಳು ಸದಸ್ಯರಗಳ್ನಾಗಿ ನೇಮಿಸಲಾಗಿದೆ. ಆಮಂತ್ರಣ ಪತ್ರಿಕೆ ಸರಬರಾಜು ಸಮಿತಿಯು ಆಮಂತ್ರಣ ಪತ್ರಿಕೆ ಮತ್ತು ಬ್ಯಾಡ್ಜ್ಗಳು ಹಾಗೂ ಕನಕಗಿರಿ ಉತ್ಸವದ ಬ್ಯಾನರ್‌ಕಟೌಟ್ ವಿತರಣೆ ವ್ಯವಸ್ಥೆ ಮಾಡಬೇಕು.
ಸಂಘಟನಾ ಸಮಿತಿ: ಕನಕಗಿರಿ ಉತ್ಸವದ ಒಟ್ಟಾರೆ ಉಸ್ತುವಾರಿಗಾಗಿ ರಚನೆಯಾದ ಸಂಘಟನಾ ಸಮಿತಿಗೆ ಕೊಪ್ಪಳ ಜಿಲ್ಲಾಧಿಕಾರಿಗಳನ್ನು ಅಧ್ಯಕ್ಷರನ್ನಾಗಿ ಹಾಗೂ ಅದೇ ರೀತಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ಸಹ ಅಧ್ಯಕ್ಷರನ್ನಾಗಿ ನೇಮಿಸಿದ್ದು, ಎಲ್ಲಾ ಸಮಿತಿಗಳ ಅಧ್ಯಕ್ಷರುಗಳು ಹಾಗೂ ಸದಸ್ಯ ಕಾರ್ಯದರ್ಶಿಗಳು ಸಂಘಟನಾ ಸಮಿತಿಯ ಸದಸ್ಯರಾಗಿರುತ್ತಾರೆ ಹಾಗೂ ಅಪರ ಜಿಲ್ಲಾಧಿಕಾರಿಗಳು ಈ ಸಮಿತಿಗೆ ಸದಸ್ಯ ಕಾರ್ಯದರ್ಶಿಗಳಾಗಿರುತ್ತಾರೆ. ಕನಕಗಿರಿ ಉತ್ಸವದ ಸಂಘಟನಾ ಸಮಿತಿಯು ಎಲ್ಲಾ ಸಮಿತಿಗಳಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ಪರಿಶೀಲಿಸಬೇಕು.
ಕನಕಗಿರಿ ಉತ್ಸವದ ನಿಮಿತ್ತ ರಚಿತ ಎಲ್ಲಾ ಸಮಿತಿಗಳ ಅಧ್ಯಕ್ಷರುಗಳು ತಮ್ಮ ಸಮಿತಿಗೆ ವಹಿಸಲಾದ ಕಾರ್ಯಗಳ ಕುರಿತು ಕೂಡಲೇ ಕಾರ್ಯಪ್ರವೃತ್ತರಾಗುವಂತೆ ಕನಕಗಿರಿ ಉತ್ಸವ ಸಮಿತಿ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗೌತಮ್ ಯಾದವ್ ಪ್ರಜಾ ಶ್ರೀ ಪತ್ರಿಕೆ ಕೊಪ್ಪಳ ಜಿಲ್ಲಾ ವರದಿಗಾರ



