ಬೆಂಗಳೂರು ಮಹಾನಗರದಲ್ಲಿ ಆಟೋ ಚಾಲಕ 77 ವಯಸ್ಸಿನ ವಯೋವೃದ್ಧನ ದಣಿವರಿಯದ ದುಡಿಮೆ.
ದಿನಾಂಕ 28 ಜನವರಿ 2024 ರಂದು ಲಾಲ್ ಬಾಗ್ ಸಮೀಪ ಸಿದ್ದಯ್ಯ ರಸ್ತೆಯಲ್ಲಿರುವ ನ್ಯಾಯ ದೇಗುಲ ಫ್ಯಾಮಿಲಿ ಕೋರ್ಟ್ ನಲ್ಲಿ ಕೆಲಸ ಮುಗಿಸಿಕೊಂಡು ಎಂ. ಜಿ. ರಸ್ತೆಯಲ್ಲಿರುವ ಮೇಯೋ ಹಾಲ್ ಕೋರ್ಟಿನ ಕೆಲಸಕ್ಕೆ ಅವಸರವಸರವಾಗಿ ಆಟೋ ಹುಡುಕುತ್ತಿದ್ದೆ. ತುಂಬಾ ಟ್ರಾಫಿಕ್. ಯಾರೊಬ್ಬ ಆಟೋ ಡ್ರೈವರ್ ಎಂ.ಜಿ. ರೋಡಿಗೆ ಬರಲು ಸಿದ್ದರಿಲ್ಲ. ಆಟೋಗಳಿಗೆ ಕೈಬೀಸಿ ಸಾಕಾಯ್ತು ಕೊನೆಗೆ ಒಬ್ಬ ಯಜಮಾನ ಆಟೋ ತಂದು ನನ್ನ ಪಕ್ಕದಲ್ಲಿ ನಿಲ್ಲಿಸಿ ಎಲ್ಲಿಗೆ ಸಾರ್? ಎಂದು ಕೇಳಿದನು. ಎಂ. ಜಿ. ರೋಡ ಮೆಯೋ ಹಾಲ್ ಕೋರ್ಟಿಗೆ ಎಂದು ಬೇಜಾರಿನಿಂದ ಹೇಳಿದೆನು. ಸರ್ ನಾನು ತುಂಬಾ ಸ್ಲೋ ಆಗಬಹುದಾ? ಒಪ್ಪಿಗೆ ಇದ್ದರೆ ನನ್ನ ಆಟೋದಲ್ಲಿ ಕುಳಿತುಕೊಳ್ಳಿ ಎಂದಾಗ, ಆಯ್ತು ಎಂದು ಅವರೊಂದಿಗೆ ಆಟೋದಲ್ಲಿ ಪ್ರಯಾಣ ಬೆಳೆಸಿದನು.
ಆಟೋ ಡ್ರೈವರ್ ಜೊತೆಗೆ ಮಾತನಾಡುತ್ತಾ ನಿಮ್ಮ ವಯಸ್ಸು ಎಷ್ಟು ಎಂದು ಕೇಳಿದೇನು. ಆಗ ಆ ಆಟೋ ಡ್ರೈವರ್ ನಗುತ್ತಾ ನನಗೀಗ 77 ವರ್ಷ ಮುಗಿತಾ ಇದ್ದಾವೆ ಸರ್ ಎಂದು ಉತ್ತರಿಸಿದನು. ಜೊತೆಗೆ ಆತನ ಹಿಸ್ಟರಿ ಕೆದುಕಲಾರಂಭಿಸಿದಾಗ ಹಲವಾರು ಆಶ್ಚರ್ಯದ ಘಟನೆಗಳು ಹೇಳ್ತಾ ಬಂದನು. ಆತನ ಜೀವನದ ಕಥೆ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
1981ನೇ ಇಸ್ವಿಯಲ್ಲಿ ಹೊಟ್ಟೆಪಾಡಿಗಾಗಿ ಕುಟುಂಬದೊಂದಿಗೆ ತಮಿಳುನಾಡಿನ ತಿರುಚಿಯಿಂದ ಬಂದು, ಬೆಂಗಳೂರು ಕೆ ಆರ್ ಪೇಟೆಯಲ್ಲಿ ದುಡಿಯಲಾರಂಭಿಸಿದರು. ಅದಾಗಲೇ ಒಂದು ಹೆಣ್ಣು ಒಂದು ಗಂಡು ಮಗುವಿನ ಸಂಸಾರ ಹೊಂದಿದ ಈತನ ಹೆಸರು ಮಲೈ. ಬೆಂಗಳೂರಿನಲ್ಲಿಯೇ ಮೋಟಿ ಹೋರುವ ಕೆಲಸ ಮಾಡುತ್ತಾ
ದಂಪತಿಗಳಿಬ್ಬರೂ ಜೀವನ ಸಾಗಿಸುತ್ತಾ ಮಕ್ಕಳಿಗೆ ಸಾಮಾನ್ಯ ಶಿಕ್ಷಣ ಕೊಡಿಸಿದರು.
ಈಗ, ಮಗ ಆಧಾರ್ ಕಾರ್ಡ್ ಸೆಂಟರ್ ಇಟ್ಟುಕೊಂಡು ಸ್ವಉದ್ಯೋಗಿಯಾಗಿದ್ದಾನೆ. ಮಗಳು ಚೆನ್ನಾಗಿ ಓದಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಾಸಾಗಿ ಕೆನರಾ ಬ್ಯಾಂಕಿನ ಉದ್ಯೋಗಿ ಆಗಿದ್ದಾಳೆ.
ಇನ್ನು ದುಡಿಯೋದು ಬಿಟ್ಟು ಬಿಡು. ಆಟೋ ಮಾರಾಟ ಮಾಡಿ ಬಂದ ದುಡ್ಡು ನಿನ್ನ ಹತ್ತಿರ ಇಟ್ಟುಕೊಂಡು ಮನೆಯಲ್ಲಿಯೇ ನೆಮ್ಮದಿಯಾಗಿರು ಎಂದು ಮಗಳು, ಮಗ, ಅಳಿಯ, ಸೊಸೆ, ಹೆಂಡತಿ, ದಿನಾಲು ಒತ್ತಾಯಿಸುತ್ತಾರೆ ಬೈಯುತ್ತಾರೆ. ಆದರೆ ದುಡಿಯುತ್ತಲೇ ಜೀವನ ಸಾಗಿಸಿದ ಈ ಜೀವ ಮನೆಯಲ್ಲಿಯೇ ಕುಳಿತುಕೊಳ್ಳಲು ಮನಸ್ಸು ಒಪ್ಪದು ಆದ ಕಾರಣ ದಿನಾಲು ಬೆಳಗ್ಗೆ ಒಂಬತ್ತು ಗಂಟೆಗೆ ಊಟ ಮಾಡಿಕೊಂಡು ಆಟೋ ಸ್ಟಾರ್ಟ್ ಮಾಡುತ್ತೇನೆ. ಮಧ್ಯಾಹ್ನ ಒಂದುವರೆ ಗಂಟೆಗೆ ಆಡುಗೋಡು ಪ್ರದೇಶದಲ್ಲಿರುವ ಮನೆಗೆ ಹೋಗಿ ಊಟ ಮಾಡಿಕೊಂಡು ಪುನಹ ಎರಡುವರೆ ಗಂಟೆಗೆ ಆಟೋ ಸ್ಟಾರ್ಟ್ ಮಾಡುತ್ತೇನೆ ರಾತ್ರಿ 8 ಗಂಟೆಗೆ ಮನೆ ಸೇರುತ್ತೇನೆ. ಇದು ನನ್ನ ಕಾಯಕ ಎಂದು ತನ್ನ ಜೀವನದ ಕಥೆ ವಿವರಿಸಿದಾಗ ತುಂಬಾ ಆಶ್ಚರ್ಯ ಆಯಿತು.
ಇಳಿಯುವ ವಯಸ್ಸಿನಲ್ಲಿಯೂ ಶ್ರಮಾವರಿಯದೆ ದುಡಿಯುತ್ತಿರುವ ಆಟೋ ಡ್ರೈವರ್ ನ ಕಾರ್ಯ ಶ್ಲಾಘನೀಯ ಕಾರ್ಯ
.



