ಸುದ್ಧಿ

ಮಾರ್ಗಶಿರ ಶುದ್ಧ ತ್ರಯೋದಶಿ ಹನುಮದ್ವ್ರತ (02/12/2025)

ಮಾರ್ಗಶಿರ ಶುದ್ಧ ತ್ರಯೋದಶಿ ಹನುಮದ್ವ್ರತ (02/12/2025)

ಶ್ರೀ ಹನುಮದ್ವೃತದ ಸಾಕ್ಷಾತ್ ಮೂಲ ಪ್ರತಿಮೆ ವಿಶ್ವಕರ್ಮ ನಿರ್ಮಿತವಾದ ದ್ವಾಪರ ಯುಗದ ಪಂಚಪಾಂಡವರಿಂದ ಪೂಜಿಸಲುಪಟ್ಟ ಮಧ್ಯಮಪಾಂಡವ ಅರ್ಜುನ ಕರಾರ್ಚಿತ ಹಾಗೂ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಅಂತರಂಗ ಭಕ್ತರು ಅಪರೋಕ್ಷ ಜ್ಞಾನಿಗಳಾದ ಶ್ರೀ ಇಭರಾಮಪುರ ಅಪ್ಪಾವರು ಪೂಜಿತ ಶ್ರೀ ಪಂಚಮುಖಿ ಪ್ರಾಣದೇವರು.

ಕಪಿಮುಖಮಪಿ ಪೂರ್ವೇ
ದಕ್ಷಿಣೇ ನಾರಸಿಂಹಂ |
ದ್ವಿಜಮುಖ ಮಪಿ ಪಶ್ಚಾತ್ ಉತ್ತರೇ ಸೂಕರಾಸ್ಯಂ ||
ಹಯಮುಖಮಪಿ ಚೋರ್ಧಂ ಚಿಂತಯೇದ್ವಾಯುಸೂನಂ |
ಸಕಲ ಅರಿನಿಹತ್ಯೈಚ ಬ್ರಹ್ಮಹತ್ಯೈಚಧಾಚ ||

“ಹನುಮದ್ವ್ರತ” ಕಥೆಯನ್ನು ಭವಿಷ್ಯೋತ್ತರ ಪುರಾಣದಲ್ಲಿ ವಿವರಿಸಿದ್ದಾರೆ.

ಒಮ್ಮೆ ಪಾಂಡವರು ಕೌರವರ ದುರಾಸೆ ಮತ್ತು ವಂಚನೆಯಿಂದ ಹನ್ನೆರಡು ವರ್ಷಗಳ ವನವಾಸ ನಿಮಿತ್ತ, ದ್ವೈತವನದಲ್ಲಿದ್ದಾಗ ಅಲ್ಲಿಗೆ ವೇದವ್ಯಾಸರು ಬಂದರು. ಬಂದ ದೇವಶ್ರೇಷ್ಠನನ್ನು ಧರ್ಮರಾಜನು ಶೋಡಷೋಪಚಾರದಿಂದ ಪೂಜಿಸಿದನು. ಪಾಂಡವರ ಯೋಗಕ್ಷೇಮ ವಿಚಾರಿಸಿದ ವೇದವ್ಯಾಸರು ಅವರಿಗೆ ಹಲವು ಉತ್ತಮ ಉಪದೇಶ ನೀಡಿ ಹೇಳುತ್ತಾರೆ – ನಿಮಗೆ ಒಂದು ವಿಶಿಷ್ಟ ವ್ರತವನ್ನು ಹೇಳುತ್ತೇನೆ. ಅದು ಹನುಮದ್ವ್ರತ ಎಂಬ ಬಹಳ ಶ್ರೇಷ್ಠವೂ ಫಲದಾಯಕವೂ ಆದ ವ್ರತವೊಂದಿದೆ ಅದರ ಆಚರಣೆಯಿಂದ ನಿಮ್ಮ ಕಷ್ಟಗಳೆಲ್ಲ ಪರಿಹಾರವಾಗಿ ನಷ್ಟವಾದ ರಾಜ್ಯ ಪುನರ್ ಪ್ರಾಪ್ತಿಯಾಗುತ್ತದೆ ಎಂದರು. ಆಗ ಧರ್ಮರಾಜನು ಕೇಳುತ್ತಾನೆ – ಆ ವ್ರತವಾವುದು ? ಅದರ ಆಚರಣೆ ಹೇಗೆ ? ಯಾರು ದೇವತೆ? ಹಿಂದೆ ಯಾರು ಯಾರು ಈ ವ್ರತವನ್ನು ಮಾಡಿ ಉದ್ಧಾರವಾಗಿದ್ದಾರೆ ಎಂದನು. ಆಗ ವೇದವ್ಯಾಸರು ಹೇಳುತ್ತಾರೆ – ಈ ವ್ರತದ ಹೆಸರು – ಹನುಮದ್ವ್ರತ – ಇದನ್ನು ಮಾರ್ಗಶಿರ ಶುದ್ಧ ತ್ರಯೋದಶಿ ದಿನ ಆಚರಿಸತಕ್ಕದ್ದು. ಇದರ ದೇವತೆ ವಾಯುವಿನ ಅವತಾರವಾದ ಹನುಮಂತ ದೇವರು. ‌ಭಕ್ತಿ ಶ್ರದ್ಧೆಯಿಂದ ಹನುಮಂತ ದೇವರನ್ನು ಉಪಾಸನೆ ಮಾಡಬೇಕು, ಹಿಂದೆ ಈ ವ್ರತವನ್ನು ಶ್ರೀ ರಾಮಚಂದ್ರನೇ ಮಾಡಿ ತನ್ನ ಭಕ್ತನ ಅನುಗ್ರಹಿಸಿದ್ದ ಎಂದರು.

ಒಮ್ಮೆ ಹನುಮಂತ ದೇವರು ಸೂರ್ಯನಿಗೆ ರಾಹುಗ್ರಹಣವಾದ ಸಂದರ್ಭದಲ್ಲಿ ಮೇಲೆ ಹಾರಿದಾಗ, ಸ್ವರ್ಗಾಧಿಪತಿಯು ಸೂರ್ಯನನ್ನು ಹನುಮಂತ ಹಿಡಿಯಬಹುದೆಂದು ಭಾವಿಸಿ, ವಜ್ರಾಯುಧ ಪ್ರಹಾರ ಮಾಡಿದಾಗ, ಹನುಮಂತ ಲೋಕರೀತ್ಯ ಪೆಟ್ಟಾದವನಂತೆ ಕೆಳಗೆ ಬಿದ್ದನು. ಆಗ ವಾಯುದೇವರು ಹನುಮಂತನನ್ನು ಕರೆದುಕೊಂಡು ಒಂದು ಗುಹೆಗೆ ಪ್ರವೇಶಿಸಿದರು. ಆಗ ಪ್ರಪಂಚವೆಲ್ಲ ಉಸಿರಾಟದ ತೊಂದರೆಗೊಳಗಾಯಿತು. ಎಲ್ಲಾ ದೇವತೆಗಳು ಬ್ರಹ್ಮದೇವರನ್ನು ಪ್ರಾರ್ಥಿಸಲು, ಬ್ರಹ್ಮದೇವರು ವಾಯುವಿನ ಬಳಿಗೆ ಬಂದು ನಿನ್ನ ಮಗನಿಗೆ ಯಾವ ಆಯುಧದಿಂದಲೂ ಏನೂ ಆಗುವುದಿಲ್ಲ, ಅವನು ಚಿರಂಜೀವಿಯಾಗುತ್ತಾನೆ, ಮತ್ತು ಮಾರ್ಗಶಿರ ಶುದ್ದ ತ್ರಯೋದಶಿ ದಿನದಂದು ಹನುಮದ್ ವ್ರತ ವನ್ನು ಆಚರಿಸಿದವರಿಗೆ ಸಕಲ ಅಭೀಷ್ಟವೂ ಲಭ್ಯವಾಗುವುದು ಎಂದು ವರವನ್ನು ಕೊಟ್ಟಿರುತ್ತಾರೆ.

ಪಾಂಡವರಿಗೆ ವನವಾಸವಾಗಲು ಹನುಮಂತನ ಅವಕೃಪೆ ಕಾರಣ :

ಹಿಂದೆ ಒಮ್ಮೆ ದ್ರೌಪದಿಯು ಕೃಷ್ಣ ಪರಮಾತ್ಮನ ಅನುಜ್ಜೆಯಂತೆ ಹನುಮದ್ವ್ರತವನ್ನು ಆಚರಿಸಿದ್ದಳು. ವ್ರತವನ್ನಾಚರಿಸಿದ ನಂತರ ತನ್ನ ಕೈಗೆ ದೋರವನ್ನು ಧರಿಸಿದ್ದಳು. ಈ ದೋರವನ್ನು ಗಮನಿಸಿದ ಅರ್ಜುನನು (ಕಲಿಯ ಆವೇಶದಿಂದ) , ನಾನು ಆ ಹನುಮಂತನನ್ನು ನನ್ನ ರಥದ ದ್ವಜಕ್ಕೆ ಕಟ್ಟಿರುವೆ. “ಅವನೊಬ್ಬ ಸಾಮಾನ್ಯ ಮಂಗ ” ಎಂದು ಹೇಳಿ ಆ ದೋರವನ್ನು ಬಿಸಾಡಲು ಹೇಳಿದನು. ಹನುಮಂತ ದೇವರನ್ನು ನೆನೆದರೇ ಬುದ್ಧಿ, ಬಲ, ಯಶಸ್ಸು, ಧೈರ್ಯ, ಎಲ್ಲವೂ ಪ್ರಾಪ್ತವಾಗುತ್ತದೆಂದಾಗ, ಅರ್ಜುನ ಕಲಿ ಪ್ರಭಾವಕ್ಕೊಳಗಾಗಿಯೇ ಅದನ್ನು ಬಿಸಾಡಲು ಹೇಳಿದನು. ಇದೇ ಕಾರಣದಿಂದ ಪಾಂಡವರು ವನವಾಸಕ್ಕೆ ದ್ಯೂತ ನಿಮಿತ್ತ ಹೋಗಬೇಕಾಯಿತು, ಎಂದು ವೇದವ್ಯಾಸರು ಹೇಳಿದಾಗ ದ್ರೌಪದಿಯೂ ಕೂಡ ಆ ಘಟನೆಯನ್ನು ನೆನಪಿಸಿದಳು.

ಈ ವ್ರತವನ್ನು ಹಿಂದೆ ಯಾರು ಮಾಡಿರುತ್ತಾರೆ ?

ಹಿಂದೆ ಶ್ರೀ ರಾಮಚಂದ್ರನು, ಹನುಮಂತನಿಗೆ ಅನುಗ್ರಹಿಸಲು, ಹನುಮನ ಪ್ರಾರ್ಥನೆಯಂತೆ ಮಾಡಿದನು. ದ್ರೌಪದಾದೇವಿ ಮಾಡಿದ್ದಳು. ಸುಗ್ರೀವ ತನ್ನ ಇಷ್ಟಾರ್ಥ ಸಿದ್ಧಿಗಾಗಿ ಮಾಡಿದ್ದನು. ವಿಭೀಷಣನು ಈ ವ್ರತವನ್ನು ಮಾಡಿ ಲಂಕಾಧಿಪನಾದನು.

Related Articles

Leave a Reply

Your email address will not be published. Required fields are marked *

Back to top button