ಸುದ್ಧಿ

ಮಾರ್ಚ್ 1 ರಂದು ಬೆಂಗಳೂರಿನಲ್ಲಿ ನಾರಾಯಣ ಸೇವಾ ಸಂಸ್ಥಾನದಿಂದ ಉಚಿತ ಕೃತಕ ಕಾಲು ಮತ್ತು ಕ್ಯಾಲಿಪರ್ ಅಳವಡಿಕಾ ಶಿಬಿರ ಆಯೋಜನೆ

ದಕ್ಷಿಣ ಭಾರತದ ವಿಕಲಚೇತನರಿಗೆ ನೆರವು ಒದಗಿಸಲು ಮಾರ್ಚ್ 1 ರಂದು ಬೆಂಗಳೂರಿನಲ್ಲಿ ನಾರಾಯಣ ಸೇವಾ ಸಂಸ್ಥಾನದಿಂದ ಉಚಿತ ಕೃತಕ ಕಾಲು ಮತ್ತು ಕ್ಯಾಲಿಪರ್ ಅಳವಡಿಕಾ ಶಿಬಿರ ಆಯೋಜನೆ

ಸುಮಾರು 640 ವಿಕಲಚೇತನರಿಗೆ ಕೃತಕ ಕಾಲು ಹಾಗೂ ಕ್ಯಾಲಿಪರ್‌ ಗಳ ವಿತರಣೆ

ಬೆಂಗಳೂರು – ಫೆಬ್ರವರಿ 27 2026: ದಕ್ಷಿಣ ಭಾರತದಾದ್ಯಂತ ಇರುವ ವಿಕಲಚೇತನರಿಗೆ ಅನುಕೂಲಕರ ಸೌಲಭ್ಯ ಕಲ್ಪಿಸಿ ನೆರವು ಒದಗಿಸುವ ಉದ್ದೇಶದಿಂದ ಉದಯಪುರ ಮೂಲದ ನಾರಾಯಣ ಸೇವಾ ಸಂಸ್ಥಾನವು ತನ್ನ ಸಿಎಸ್‌ಆರ್ ಪಾಲುದಾರರಾದ ಜನರಲ್ ಮೋಟಾರ್ಸ್, ಟಿಟಿಪಿ ಟೆಕ್ನಾಲಜೀಸ್ ಮತ್ತು ಎಸಿಐ ವರ್ಲ್ಡ್‌ ವೈಡ್ ಸಹಯೋಗದೊಂದಿಗೆ ಮಾರ್ಚ್ 1ರ ಭಾನುವಾರದಂದು ಬೆಂಗಳೂರಿನಲ್ಲಿ ಉಚಿತ ‘ನಾರಾಯಣ ಕೃತಕ ಕಾಲು ಮತ್ತು ಕ್ಯಾಲಿಪರ್ ಅಳವಡಿಕಾ ಶಿಬಿರ’ ಹಾಗೂ ದಾನಿಗಳಿಗೆ ಸನ್ಮಾನ ಸಮಾರಂಭವನ್ನು ಆಯೋಜಿಸಿದೆ.
ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ, ನರಾಯಣ ಸೇವಾ ಸಂಸ್ಥೆಯ ಪರವಾಗಿ, ಬೆಂಗಳೂರಿನ ಅಧ್ಯಕ್ಷರು ಹಾಗೂ ವಕ್ತಾರರಾದ ಶ್ರೀ ವಿನೋದ್ ಜೈನ್ ಅವರು, ಬೆಂಗಳೂರಿನ ಆಶ್ರಮದ ಮುಖ್ಯಸ್ಥರಾದ ಶ್ರೀ ಖುಬಿ ಲಾಲ್ ಮೆನಾರಿಯಾ ಅವರ ಸಮ್ಮುಖದಲ್ಲಿ ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದರು. ಈ ಉಚಿತ ಶಿಬಿರವು ಬಸವನಗುಡಿಯ ವಿ.ವಿ. ಪುರಂನಲ್ಲಿರುವ ನ್ಯಾಷನಲ್ ಹೈಸ್ಕೂಲ್ ರಸ್ತೆಯ ಮಹಾವೀರ ಧರ್ಮಶಾಲಾ (ಸಂಖ್ಯೆ 17) ದಲ್ಲಿ ಬೆಳಿಗ್ಗೆ 8:00 ರಿಂದ ಸಂಜೆ 6:00 ರವರೆಗೆ ನಡೆಯಲಿದೆ. ಪೂರ್ವಾಹ್ನ 11:00 ಗಂಟೆಗೆ ಕಾರ್ಯಕ್ರಮದ ಔಪಚಾರಿಕ ಉದ್ಘಾಟನೆ ನೆರವೇರಲಿದೆ. ಈ ಹಿಂದೆ ಈ ಯೋಜನೆಗೆ ಆಯ್ಕೆಯಾದ ವಿಕಲಚೇತನರು ಮಾತ್ರ ಈ ಯೋಜನೆಯ ಪ್ರಯೋಜನ ಪಡೆಯಲಿದ್ದಾರೆ.
ಈ ಶಿಬಿರದಲ್ಲಿ ಸುಮಾರು 640 ವಿಕಲಚೇತನರಿಗೆ ಉಚಿತವಾದಿ ಕೃತಕ ಕಾಲು ಮತ್ತು ಕ್ಯಾಲಿಪರ್‌ ಗಳನ್ನು ಅಳವಡಿಸಲಾಗುತ್ತಿದ್ದು, ಇದು ಈ ಭಾಗದ ಅತಿದೊಡ್ಡ ನೆರವು ಯೋಜನೆಗಳಲ್ಲಿ ಒಂದಾಗಿದೆ. ಸುಮಾರು 550 ಫಲಾನುಭವಿಗಳಿಗೆ ಸುಧಾರಿತ ಅತ್ಯಾಧುನಿಕ ‘ನಾರಾಯಣ ಕೃತಕ ಕಾಲು’ ಗಳನ್ನು ಹಾಗೂ ಸುಮಾರು 50 ಜನರಿಗೆ ಕ್ಯಾಲಿಪರ್‌ ಗಳನ್ನು ನೀಡಲಾಗುವುದು ಎಂದು ತಿಳಿಸಲಾಗಿದೆ. ಡಿಸೆಂಬರ್ 14 ರಂದು ಸಂಸ್ಥೆಯು ಆಯೋಜಿಸಲಾಗಿದ್ದ ಉಚಿತ ನಾರಾಯಣ ಕೃತಕ ಕಾಲು ಅಳತೆ ಶಿಬಿರದಲ್ಲಿ ಈ ಎಲ್ಲಾ ಫಲಾನುಭವಿಗಳನ್ನು ಈಗಾಗಲೇ ಆಯ್ಕೆ ಮಾಡಲಾಗಿತ್ತು.
ಈ ಯೋಜನೆಯ ಹಿಂದಿನ ಮಹತ್ವದ ಉದ್ದೇಶವನ್ನು ತಿಳಿಸಿರುವ ಸಂಸ್ಥೆಯ ನಿರ್ದೇಶಕಿ ಕುಮಾರಿ ಪಲಕ್ ಅಗರ್ವಾಲ್ ಅವರು, “ನಾರಾಯಣ ಸೇವಾ ಸಂಸ್ಥಾನದ ಧ್ಯೇಯವು ಕೇವಲ ಕೃತಕ ಕಾಲುಗಳನ್ನು ಒದಗಿಸುವುದಕ್ಕೆ ಮಾತ್ರವೇ ಸೀಮಿತವಾಗಿಲ್ಲ. ವಿಶೇಷವಾಗಿ ವಿಕಲಚೇತನರನ್ನು ಸ್ವಾವಲಂಬಿಗಳನ್ನಾಗಿ ಮಾಡುವುದು ಮತ್ತು ಅವರನ್ನು ಶಿಕ್ಷಣ, ಉದ್ಯೋಗ ಅವಕಾಶಗಳನ್ನು ಒದಗಿಸುವುದು ಹಾಗೂ ಸಮಾಜದ ಮುಖ್ಯವಾಹಿನಿಯೊಂದಿಗೆ ಬೆಸೆಯುವುದು ನಮ್ಮ ಮೂಲ ಉದ್ದೇಶವಾಗಿದೆ. ಇಂತಹ ಶಿಬಿರಗಳು ಅವರಿಗೆ ಅನುಕೂಲ ಒದಗಿಸುವುದಲ್ಲದೆ, ಫಲಾನುಭವಿಗಳಿಗೆ ಗೌರವಯುತ ಜೀವನ ನಡೆಸಲು ಮತ್ತು ಸಮಾಜಕ್ಕೆ ಆತ್ಮವಿಶ್ವಾಸದಿಂದ ಕೊಡುಗೆ ನೀಡಲು ಅವಕಾಶವನ್ನು ಕಲ್ಪಿಸಿಕೊಡುತ್ತವೆ” ಎಂದು ಹೇಳಿದರು.
ಶಿಬಿರದಲ್ಲಿ ನುರಿತ ವೈದ್ಯರು ಮತ್ತು ತಾಂತ್ರಿಕ ತಂಡವು ಭಾಗವಹಿಸಲಿದ್ದು, ಶಿಬಿರದಲ್ಲಿ ಆಧುನಿಕ ಹಾಗೂ ತಾಂತ್ರಿಕವಾಗಿ ಸುಧಾರಿತ ‘ನಾರಾಯಣ ಕೃತಕ ಕಾಲು’ ಗಳನ್ನು ಅಳವಡಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು. ಇದರ ಜೊತೆಗೆ, ಫಲಾನುಭವಿಗಳಿಗೆ ದೈನಂದಿನ ಜೀವನದಲ್ಲಿ ಈ ಸಹಾಯಕ ಸಾಧನಗಳನ್ನು ಬಳಸಿ ನಡೆಯುವುದು, ಸಮತೋಲನ ಕಾಯ್ದುಕೊಳ್ಳುವುದು ಮತ್ತು ಅವುಗಳನ್ನು ಸರಿಯಾಗಿ ಬಳಸುವ ಬಗ್ಗೆ ವಿಶೇಷ ತರಬೇತಿ ನೀಡಲಾಗುವುದು. ಇದು ಅವರ ಜೀವನವನ್ನು ಹೆಚ್ಚು ಸುಗಮಗೊಳಿಸಲು ಮತ್ತು ಸ್ವಾವಲಂಬಿಯಾಗಿಸಲು ನೆರವಾಗಲಿದೆ.
ಸಂಸ್ಥೆಯ ಅಧ್ಯಕ್ಷರಾದ ಶ್ರೀ ಪ್ರಶಾಂತ್ ಅಗರ್ವಾಲ್ ಈ ಕುರಿತು ಮಾತನಾಡಿ, “ದಕ್ಷಿಣ ಭಾರತದಲ್ಲಿ ವಿಕಲಚೇತನರಿಗೆ ನೆರವು ಒದಗಿಸಬೇಕಾದ ಅಗತ್ಯತೆಗಳು ಹೆಚ್ಚುತ್ತಿರುವುದನ್ನು ಪರಿಗಣಿಸಿ, ಅರ್ಹ ವ್ಯಕ್ತಿಗಳಿಗೆ ನೆರವು ಒದಗಿಸಿ ಸಬಲೀಕರಿಸಲು ಮತ್ತು ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಬೆಂಗಳೂರಿನಂತಹ ಮಹಾನಗರಗಳಲ್ಲಿ ಇಂತಹ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ಈ ಮೂಲಕ ಹೆಚ್ಚು ಮಂದಿ ವಿಕಲಚೇತನರು ನೆರವು ಪಡೆಯುವಂತೆ ನೋಡಿಕೊಳ್ಳಲಾಗುತ್ತಿದೆ” ಎಂದು ಹೇಳಿದರು.
ಕಾರ್ಯಕ್ರಮದ ಅವಧಿಯಲ್ಲಿ ಸಿಎಸ್‌ಆರ್ ಪಾಲುದಾರ ಸಂಸ್ಥೆಗಳು, ಸಮಾಜ ಸೇವಕರು ಮತ್ತು ದಾನಿಗಳನ್ನು ಸನ್ಮಾನಿಸಲಾಗುವುದು. ಈ ಯೋಜನೆಯು ಕೇವಲ ವೈದ್ಯಕೀಯ ಬೆಂಬಲ ಒದಗಿಸುವುದು ಮಾತ್ರವಲ್ಲದೆ, ವಿಕಲಚೇತನರ ಸಾಮಾಜಿಕ ಪುನರ್ಸೇರ್ಪಡೆ ಮತ್ತು ಅವರು ಘನತೆಯ ಜೀವನ ಸಾಧಿಸಲು ನೆರವಾಗುವ ನಿಟ್ಟಿನಲ್ಲಿ ಇಟ್ಟ ಮಹತ್ವದ ಹೆಜ್ಜೆಯಾಗಿದೆ. ಶಿಬಿರಕ್ಕೆ ಆಗಮಿಸುವ ಎಲ್ಲಾ ಫಲಾನುಭವಿಗಳಿಗೆ ಮತ್ತು ಅವರ ಕುಟುಂಬದ ಸದಸ್ಯರಿಗೆ ಉಚಿತ ಊಟ, ಆಸನ ವ್ಯವಸ್ಥೆ ಕಲ್ಪಿಸಲಾಗುತ್ತದೆ ಮತ್ತು ಪ್ರಾಥಮಿಕ ವೈದ್ಯಕೀಯ ಸೌಲಭ್ಯಗಳನ್ನು ಕೂಡ ನೀಡಲಾಗುತ್ತದೆ.
ನಾರಾಯಣ ಸೇವಾ ಸಂಸ್ಥಾನವು 1985 ರಿಂದ ಸಮಾಜಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದೆ ಎಂಬುದು ಗಮನಾರ್ಹ ಸಂಗತಿಯಾಗಿದೆ. ಈ ಸಂಸ್ಥೆಯ ಸಂಸ್ಥಾಪಕರಾದ ಕೈಲಾಶ್ ಮಾನವ್ ಅವರ ಅಪ್ರತಿಮ ಸೇವೆಯನ್ನು ಗುರುತಿಸಿ ಭಾರತದ ರಾಷ್ಟ್ರಪತಿಗಳು ಅವರಿಗೆ ಪ್ರತಿಷ್ಠಿತ ‘ಪದ್ಮಶ್ರೀ’ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ದಿವ್ಯಾಂಗರ ಸಬಲೀಕರಣಕ್ಕಾಗಿ ನೀಡಿದ ಮಹತ್ವದ ಕೊಡುಗೆಗಾಗಿ ಸಂಸ್ಥೆಯ ಅಧ್ಯಕ್ಷರಾದ ಪ್ರಶಾಂತ್ ಅಗರ್ವಾಲ್ ಅವರಿಗೆ 2023 ರಲ್ಲಿ ‘ದಿವ್ಯಾಂಗರ ಸಬಲೀಕರಣಕ್ಕಾಗಿ ರಾಷ್ಟ್ರೀಯ ಪ್ರಶಸ್ತಿ’ ನೀಡಿ ಗೌರವಿಸಲಾಗಿದೆ.
ಇಂದಿನವರೆಗೆ, ನಾರಾಯಣ ಸೇವಾ ಸಂಸ್ಥಾನವು ಭಾರತ ಮತ್ತು ವಿದೇಶಗಳಲ್ಲಿ ದಿವ್ಯಾಂಗರಿಗೆ 39,185 ಕ್ಕೂ ಹೆಚ್ಚು ಉಚಿತ ಕೃತಕ ಕಾಲುಗಳನ್ನು ಒದಗಿಸಿದೆ ಮತ್ತು 4,52,000 ಕ್ಕೂ ಹೆಚ್ಚು ದಿವ್ಯಾಂಗರಿಗೆ ಉಚಿತ ವೈದ್ಯಕೀಯ ಚಿಕಿತ್ಸೆ ನೀಡುವ ಮೂಲಕ ಸಮಾಜ ಸೇವೆ ಮತ್ತು ಮಾನವೀಯತೆ ಸಾರುವ ಕಡೆಗಿನ ತನ್ನ ಬದ್ಧತೆಯನ್ನು ಸಾರಿದೆ. ವರದಿ. ಮಂಜುಳಾ ರೆಡ್ಡಿ.

Related Articles

Leave a Reply

Your email address will not be published. Required fields are marked *

Back to top button