ಪತ್ರಿಕೋದ್ಯಮ

ಜೆಡಿಎಸ್‌ಗೆ ಪಿಎನ್ ಕೃಷ್ಣಮೂರ್ತಿ ಸೇರ್ಪಡೆ: ಕೊರಟಗೆರೆಯಲ್ಲಿ ಪಕ್ಷ ಸಂಘಟನೆಗೆ ಆನೆಬಲ.

ಜೆಡಿಎಸ್‌ಗೆ ಪಿಎನ್ ಕೃಷ್ಣಮೂರ್ತಿ ಸೇರ್ಪಡೆ: ಕೊರಟಗೆರೆಯಲ್ಲಿ ಪಕ್ಷ ಸಂಘಟನೆಗೆ ಆನೆಬಲ

ಬೆಂಗಳೂರು, : ಬೆಂಗಳೂರಿನ ಜೆಪಿ ನಗರದಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಕೊರಟಗೆರೆ ತಾಲೂಕಿನ ಸಮಾಜ ಸೇವಕ ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಪಿಎನ್ ಕೃಷ್ಣಮೂರ್ತಿ ಸೇರಿದಂತೆ ಹಲವು ಸಹಚರ ಮುಖಂಡರು ಅಧಿಕೃತವಾಗಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.

ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಪಿಎನ್ ಕೃಷ್ಣಮೂರ್ತಿ, ಜೆಡಿಎಸ್ ಕೇವಲ ಪ್ರಾದೇಶಿಕ ಪಕ್ಷವಲ್ಲ; ರಾಜ್ಯದಲ್ಲಿ ಹಲವು ಪ್ರಮುಖ ರಾಜಕೀಯ ಮುಖಂಡರನ್ನು ಬೆಳೆಸಿದ ಹಾಗೂ ತಳಮಟ್ಟದಲ್ಲಿ ಕಾರ್ಯಕರ್ತರನ್ನು ಸಂಘಟಿಸುವ ಕ್ರಿಯಾಶೀಲ ರಾಜಕೀಯ ಪಕ್ಷವಾಗಿದೆ ಎಂದು ಹೇಳಿದರು.

ಜೆಡಿಎಸ್ ಪಕ್ಷ ಸೇರ್ಪಡೆ ತಮ್ಮ ಬಹುಕಾಲದ ಕನಸಾಗಿದ್ದು, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಆಶೀರ್ವಾದ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಮಾರ್ಗದರ್ಶನದಲ್ಲಿ ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ತಿಳಿಸಿದರು.

“ದೇವೇಗೌಡರ ಆಶೀರ್ವಾದ ಹಾಗೂ ಕುಮಾರಸ್ವಾಮಿ ಅವರ ಮಾರ್ಗದರ್ಶನ ನಮ್ಮ ಮುಂದಿನ ಪಕ್ಷ ಸಂಘಟನೆಗೆ ಬಲ ನೀಡಲಿದೆ. ಜೆಡಿಎಸ್ ಪಕ್ಷದ ತತ್ವ-ಸಿದ್ಧಾಂತಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ” ಎಂದು ಪಿಎನ್ ಕೃಷ್ಣಮೂರ್ತಿ ಹೇಳಿದರು.

ಕೊರಟಗೆರೆ ತಾಲೂಕಿನಲ್ಲಿ ಜೆಡಿಎಸ್ ಪಕ್ಷವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಮುಖಂಡರು ಹಾಗೂ ಕಾರ್ಯಕರ್ತರನ್ನು ಒಗ್ಗೂಡಿಸಿ ಸಂಘಟನೆಯನ್ನು ತಳಮಟ್ಟದಿಂದ ಬಲಪಡಿಸುವ ಸಂಕಲ್ಪವನ್ನು ಅವರು ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್ ಕೊರಟಗೆರೆ ತಾಲೂಕು ಅಧ್ಯಕ್ಷ ಕಾಮರಾಜು, ಪಿಎನ್ ಕೃಷ್ಣಮೂರ್ತಿಯವರ ಜೆಡಿಎಸ್ ಸೇರ್ಪಡೆಯಿಂದ ಕೊರಟಗೆರೆ ತಾಲೂಕಿನಲ್ಲಿ ಪಕ್ಷಕ್ಕೆ ಆನೆಬಲ ಬಂದಂತಾಗಿದೆ ಎಂದು ಅಭಿಪ್ರಾಯಪಟ್ಟರು.

ಕೃಷ್ಣಮೂರ್ತಿಯವರು ಸಮಾಜ ಸೇವೆ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಜನರೊಂದಿಗೆ ಉತ್ತಮ ಸಂಪರ್ಕ ಹೊಂದಿದ್ದು, ಅವರ ಅನುಭವ ಮತ್ತು ಸಂಘಟನಾ ಸಾಮರ್ಥ್ಯ ಪಕ್ಷಕ್ಕೆ ಮತ್ತಷ್ಟು ಬಲ ನೀಡಲಿದೆ. ಅವರ ಪಕ್ಷ ಸಂಘಟನೆಗೆ ತಾಲೂಕು ಜೆಡಿಎಸ್‌ನ ಎಲ್ಲ ಮುಖಂಡರು ಹಾಗೂ ಕಾರ್ಯಕರ್ತರು ಸಂಪೂರ್ಣ ಸಹಕಾರ ನೀಡಲಿದ್ದಾರೆ ಎಂದು ಕಾಮರಾಜು ಭರವಸೆ ನೀಡಿದರು.

ಕೊರಟಗೆರೆ ತಾಲೂಕಿನಲ್ಲಿ ಮುಂಬರುವ ದಿನಗಳಲ್ಲಿ ಜೆಡಿಎಸ್ ಪಕ್ಷವನ್ನು ಸಂಘಟನಾತ್ಮಕವಾಗಿ ಬಲಪಡಿಸಲು ಹೊಸ ಸೇರ್ಪಡೆ ಪ್ರಮುಖ ಹೆಜ್ಜೆಯಾಗಲಿದೆ ಎಂದು ಪಕ್ಷದ ಮುಖಂಡರು ವಿಶ್ವಾಸ ವ್ಯಕ್ತಪಡಿಸಿದರು.

ಪಿಎನ್ ಕೃಷ್ಣಮೂರ್ತಿಯವರೊಂದಿಗೆ ಹಲವು ಸಹಚರ ಮುಖಂಡರು ಜೆಡಿಎಸ್ ಸೇರ್ಪಡೆಯಾಗಿರುವುದು ಕೊರಟಗೆರೆ ತಾಲೂಕಿನ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದ್ದು, ಮುಂದಿನ ದಿನಗಳಲ್ಲಿ ಪಕ್ಷದ ಸಂಘಟನೆ ಹಾಗೂ ಸ್ಥಳೀಯ ರಾಜಕೀಯದ ಮೇಲೆ ಇದರ ಪರಿಣಾಮ ಹೇಗಿರಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

ವರದಿ : ಭರತ್. ಕೆ

Related Articles

Leave a Reply

Your email address will not be published. Required fields are marked *

Back to top button