ಮಂಗಳಸೂತ್ರದಲ್ಲಿ ನಂದಿಯ ಪಾತ್ರವೇನಿದೆ?….ಬಸವರಾಜ ಬಿರಾದಾರ
ಜೋಡೆತ್ತಿನ ರೈತರ ಹಿತಚಿಂತನೆ
ಮಂಗಳಸೂತ್ರದಲ್ಲಿ ನಂದಿಯ ಪಾತ್ರವೇನಿದೆ?
ಜೀವನವು ಮಂಗಳಕರವಾಗಬೇಕಾದರೆ ನಿಸರ್ಗದ ಚಲನೆಯ ಸೂತ್ರವನ್ನು ಮನುಷ್ಯ ಅರಿತು ನಡೆಯಬೇಕಾಗುವುದು. ನಿಸರ್ಗದ ಚಲನೆಯ ಸೂತ್ರವು ನಂದಿಯಲ್ಲಿ ಅಡಕವಾಗಿದೆ. ಇದೇ ಕಾರಣಕ್ಕೆ ಬಹುತೇಕ ದೇವಸ್ಥಾನಗಳಲ್ಲಿ ನಂದಿ ವಿಗ್ರಹಗಳನ್ನು ಕಾಣುತ್ತೇವೆ. ಅನೇಕ ಮನೆಗಳ ಜಗುಲಿಯ ಮೇಲೂ ಕೂಡ ನಂದಿ ವಿಗ್ರಹಗಳನ್ನು ಕಾಣುತ್ತೇವೆ. ಏಕೆಂದರೆ, ಪ್ರಾಣಿ ಸಹಜವಾಗಿರುವ ಮನುಷ್ಯ ನಾಗರೀಕನಾಗಿ ವಿವಿಧ ರೀತಿಯ ಉತ್ತಮ ಸಾಮಾಜಿಕ ಸಂಬಂಧಗಳನ್ನು ಸೃಷ್ಟಿ ಮಾಡಿಕೊಳ್ಳಲು ನಂದಿ ಕೃಷಿ ಮೂಲ ಕಾರಣೀಭೂತವಾಗಿದೆ.
ನಂದಿ ಕೃಷಿ ಅಥವಾ ಜೋಡೆತ್ತಿನ ಕೃಷಿಯನ್ನು ಹೊಂದಿದ ಮನೆಗಳಲ್ಲಿ ಕೂಡು ಕುಟುಂಬ ವ್ಯವಸ್ಥೆ ಹಾಗೂ ಒಳ್ಳೆಯ ಬಾಂಧವ್ಯ ಇರುವುದನ್ನು ಸಾಮಾನ್ಯವಾಗಿ ಕಾಣುತ್ತೇವೆ. ಕೆಲವು ದಶಕಗಳ ಹಿಂದೆ ಹೆಚ್ಚು ಎತ್ತುಗಳನ್ನು ಹೊಂದಿದ ರೈತರು ಗ್ರಾಮಗಳನ್ನು ಆಳುತ್ತಿರುವುದನ್ನು ಕಂಡಿದ್ದೇವೆ. ಇಂದು ಗ್ರಾಮಗಳಲ್ಲಿ ಜೋಡೆತ್ತಿನ ಕೃಷಿ ನಶಿಸಿ ಹೋಗುತ್ತಿರುವ ಕಾರಣ ಸಂಸಾರಿಕ ಜೀವನವನ್ನು ರಕ್ಷಿಸಿ ಇಡುವ ಮೂಲ ಕೊಂಡಿಯನ್ನು ಕಳಚಿಕೊಂಡಂತೆ ಆಗುತ್ತಿದೆ. ಇದರ ಪರಿಣಾಮದಿಂದ ಇಂದು ಸಂಸಾರಿಕ ಜೀವನದ ಮೌಲ್ಯ ಕುಸಿಯುತ್ತಿರುವುದನ್ನು ಕಾಣುತ್ತಿದ್ದೇವೆ. ಗ್ರಾಮಗಳಲ್ಲಿಯೂ ಕೂಡ ಹಲವು ಕೌಟುಂಬಿಕ ಸಮಸ್ಯೆಗಳು ಹೆಚ್ಚಾಗುತ್ತಿವೆ. ಫ್ಯಾಮಿಲಿ ಕೋರ್ಟಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಇದಕ್ಕೆ ನೈಜ ನಿದರ್ಶನವಾಗಿದೆ. ಅಂದರೆ, ಮಂಗಳಕರ ಆಗಬೇಕಾದ ಸಂಸಾರಿಕ ಜೀವನವು ಅಮಂಗಳಕರ ಆಗುತ್ತಿದೆ ಎಂಬುದು ಇದರ ಅರ್ಥವಾಗಿದೆ. ಒಟ್ಟಾರೆಯಾಗಿ ಗ್ರಾಮಗಳು ತಮ್ಮ ಜೀವಂತಿಕೆ ಕಳೆದುಕೊಳ್ಳುತ್ತಿವೆ.
ಭಾರತ ದೇಶದ ಋಷಿಮುನಿಗಳು ಪರಿಚಯಿಸಿದ ಮಂಗಳಸೂತ್ರದಲ್ಲಿ ಸಂಸಾರಿಕ ಜೀವನವು ಮಂಗಳಕರವಾಗಿ ಸಾಗುವ ಮುಕ್ತಿ ಮಾರ್ಗದ ತತ್ವ ಅಡಗಿದೆ. ಪತಿಯು ಪತ್ನಿಯ ಕೊರಳಿಗೆ ಮಂಗಳಸೂತ್ರ ತೊಡಿಸಿ ಮೂರು ಗಂಟುಗಳನ್ನು ಹಾಕುವುದು ಪತಿಯು ಮೂರು ರೀತಿಯ ಜವಾಬ್ದಾರಿಗಳನ್ನು ಹೊರುವ ಸಂಕೇತವಾಗಿದೆ. ದೈಹಿಕ, ಮಾನಸಿಕ ಹಾಗೂ ಚೈತನ್ಯ ಶಕ್ತಿಯ ಸ್ತರದ ಆನಂದದಲ್ಲಿ ಪತ್ನಿಗೆ ಕೊರತೆಯಾಗದಂತೆ ನೋಡಿಕೊಳ್ಳುವೆ ಎಂಬ ವಾಗ್ದಾನವಾಗಿದೆ. ದೈಹಿಕ ಸಂಪರ್ಕದ ಆನಂದ ಮಕ್ಕಳ ಸೃಷ್ಟಿಗೆ ಕಾರಣವಾಗುವುದು. ಮಾನಸಿಕ ಸಂಪರ್ಕದ ಆನಂದವು ಸುಂದರ ಸಂಸಾರಿಕ ಜೀವನ ಕಟ್ಟಲು ಕಾರಣವಾಗುವುದು. ಚೈತನ್ಯ ಶಕ್ತಿಯ ಆನಂದವು ಗಂಡನು ಮಾಡುವ ಪ್ರಕೃತಿ ಪ್ರೀಯ ಸತ್ಕರ್ಮದಲ್ಲಿ ಹೆಂಡತಿಯು ಪಾಲುದಾರಳಾಗುವಳು ಎಂಬ ಅರ್ಥವಾಗಿದೆ. ಗಂಡ ಮಾಡುವ ಒಳ್ಳೆಯ ಅಥವಾ ಕೆಟ್ಟ ಕೆಲಸದಿಂದ ಮೊದಲು ಆನಂದ ಅಥವಾ ನೋವಿಗೆ ಒಳಗಾಗುವವಳು ಹೆಂಡತಿಯಾಗಿರುತ್ತಾಳೆ.
ಮಾನವ ಜೀವನದ ಉದ್ದೇಶವೇ ಮುಕ್ತಿಯಾಗಿದೆ. ಮುಕ್ತಿ ಎಂದರೆ ನಮಗೆ ವಯಸ್ಸು ಆದಂತೆ ಎಲ್ಲದರ ಕುರಿತು ಅರಿವು ಹೆಚ್ಚಾಗುತ್ತಾ ಜ್ಞಾನ ವೃದ್ಧಿಯಿಂದ ಜೀವನದಲ್ಲಿ ಆನಂದ ಹೆಚ್ಚಾಗುತ್ತಾ ಸಾಗುವುದು ಎಂದು ಅರ್ಥ. ಪತ್ನಿಯ ಕೊರಳಲ್ಲಿರುವ ಮಂಗಳಸೂತ್ರದಲ್ಲಿ ಈ ತತ್ವ ಅಡಕವಾಗಿದೆ. ಮಂಗಳಸೂತ್ರದಲ್ಲಿರುವ ಎರಡು ಅರ್ಧ ಚಂದ್ರಾಕೃತಿಯ ಬಿಲ್ಲೆಗಳು ಎರಡು ಮನಸ್ಸುಗಳ ಸಂಕೇತವಾಗಿದೆ. ಪತ್ನಿಯು ಒಮ್ಮೆ ಮಂಗಳಸೂತ್ರ ಧರಿಸಿದ ಮೇಲೆ ಅವಳು ಗಂಡ ಇರುವ ತನಕ ಯಾವಾಗಲೂ ಒಬ್ಬಳಲ್ಲ, ಅವಳು ಇಬ್ಬರ ಪೋಷಕಳು ಎಂಬ ಅರ್ಥವನ್ನು ಎರಡು ಬಿಲ್ಲೆಗಳು ಸೂಚಿಸುತ್ತವೆ. ಪೋಷಕ ತತ್ವವು ಹೆಣ್ಣಿಗೆ ನಿಸರ್ಗದತ್ತವಾಗಿ ಒಲಿದು ಬಂದ ಕೊಡುಗೆಯಾಗಿದೆ. ತನ್ನ ನಂತರ ಪತ್ನಿಯು ಗಂಡನ ಪೋಷಣೆಗೆ ಆದ್ಯತೆ ನೀಡಲಿ ಎಂಬುದು ಎರಡು ಬಿಲ್ಲೆಗಳ ಸಂಕೇತವಾಗಿದೆ. ಇದೇ ಕಾರಣಕ್ಕೆ ಹೆಣ್ಣು ಅಡುಗೆ ಮನೆಗೆ ಯಜಮಾನಿ ಆಗಿರುತ್ತಾಳೆ.
ಮಂಗಳಸೂತ್ರದಲ್ಲಿರುವ ಕರಿ ಮಣಿಗಳು ಶಿವ ತತ್ವದ ಸಂಕೇತವಾಗಿವೆ. ಶಿವ ಎಂದರೆ ‘ಏನೂ ಇಲ್ಲದ್ದು’ ಎಂದು ಅರ್ಥ. ಏನೂ ಇಲ್ಲದ್ದು ಕತ್ತಲಾಗಿದೆ ಅಥವಾ ಕಪ್ಪಾಗಿದೆ ಹಾಗಾಗಿ, ಶಿವನೆಂದರೆ ಕತ್ತಲು, ಬಯಲು, ವಿಶಾಲತೆ, ನಿರಾಕಾರ, ವಿಶ್ವರೂಪ, ಚಿದಾನಂದ ರೂಪ ಎಂದು ಹೇಳುತ್ತೇವೆ. ಹಾಗಾಗಿ, ಮಂಗಳಸೂತ್ರದಲ್ಲಿರುವ ಕರಿ ಮಣಿಗಳು ಸಂಸಾರಿಕ ಜೀವನದಲ್ಲಿ ಬಂದು ಹೋಗುವ ಕ್ಷಣಿಕ ಸುಖಗಳ ಸಂಕೇತಗಳಾಗಿವೆ.
ಮದುವೆ ಆದಾಗ, ದೈಹಿಕ ಸಂಪರ್ಕಕ್ಕೆ ಒಳಗಾದಾಗ, ಮಕ್ಕಳಾದಾಗ, ಮಕ್ಕಳು ಮದುವೆಯಾದಾಗ, ಮೊಮ್ಮಕ್ಕಳನ್ನು ಕಂಡಾಗ, ಹೀಗೆ ಅನೇಕ ರೀತಿಯ ಕ್ಷಣಿಕ ಸುಖಗಳ ಸರಮಾಲೆಯನ್ನು ಸಂಸಾರಿಕ ಜೀವನದಲ್ಲಿ ಕಾಣುತ್ತೇವೆ. ಆದರೆ, ಯಾವುದೂ ಕೂಡ ಬಹುದಿನಗಳ ವರೆಗೆ ಉಳಿಯುವುದಿಲ್ಲ. ಇವುಗಳ ಮಧ್ಯೆ ಹಲವು ರೀತಿಯ ದುಃಖವನ್ನು ಕಾಣುತ್ತೇವೆ. ಆನಂದ ಹಾಗೂ ದುಃಖದ ಸಮ್ಮಿಶ್ರಣವೇ ಸಂಸಾರಿಕ ಜೀವನವಾಗಿದೆ ಎಂಬುದನ್ನು ಮಂಗಳಸೂತ್ರದ ಕರಿ ಮಣಿಗಳು ಸದಾ ಹೇಳುತ್ತಿರುತ್ತವೆ. ಆದರೆ, ಕರಿಮಣಿಗಳನ್ನು ಬಂಧಿಸಿರುವ ದಾರವೆಂಬ ಸೂತ್ರವನ್ನು ಅವಲಂಬಿಸಿ ಪತಿ-ಪತ್ನಿಯರು ನಡೆದದ್ದೇ ಆದರೆ, ಜೀವನವನ್ನು ಅರಿಯುತ್ತಲೇ ಮುಕ್ತಿಯ ಪಥದಲ್ಲಿ ಸಾಗುವರು ಎಂಬ ಅರ್ಥವನ್ನು ಸೂಚಿಸುತ್ತದೆ.
ಸಂಸಾರಿಕ ಜೀವನದಲ್ಲಿ ಯಾವುದೇ ರೀತಿಯ ಆನಂದ ಅಥವಾ ದುಃಖವು ಶಾಶ್ವತವಲ್ಲ, ಶಾಶ್ವತ ಸುಖವು ಗುರುವಿನ ಪಾದದಲ್ಲಿದೆ ಎಂಬುದನ್ನು ತೋರಿಸಲು ದೇವಸ್ಥಾನಗಳಲ್ಲಿರುವ ಶಿವಲಿಂಗಗಳ ಮುಂದೆ ನಂದಿ ಕಾಯುತ್ತಾ ಕುಳಿತಿರುತ್ತಾನೆ. ಜೋಡೆತ್ತುಗಳಿರುವ ಕುಟುಂಬದಲ್ಲಿ ಪತಿ-ಪತ್ನಿಯರು ತಮ್ಮ ಸುಖ-ದುಃಖಗಳನ್ನು ಮರೆತು ತಮ್ಮ ಕೆಲಸದಲ್ಲಿ ತೊಡಗುವಂತೆ ಜೋಡೆತ್ತುಗಳು ಮಾಡುತ್ತವೆ. ಇದೇ ಕಾರಣಕ್ಕೆ, ಜೋಡೆತ್ತಿನ ಕೃಷಿಕರು ಸುಂದರ ಸಂಸಾರಿಕ ಜೀವನದ ಜನ್ಮದಾತರಾಗಿದ್ದಾರೆ. ಜೋಡೆತ್ತಿನ ಕೃಷಿಕರಿಂದಲೇ ನಾಗರೀಕತೆಗಳು ಜನ್ಮ ತಾಳಿವೆ.
ಸಮಾಜದಲ್ಲಿ ಜೋಡೆತ್ತಿನ ಕೃಷಿ ಕುಟುಂಬಗಳ ಸಂಖ್ಯೆ ಎಷ್ಟು ಹೆಚ್ಚಾಗುವವೋ ಅಷ್ಟು ಸಮಾಜವು ಮಂಗಳಕರ ಆಗುವುದು. ಬಹು ಸಮಾಜಗಳು ಮಂಗಳಕರವಾದರೆ, ದೇಶವು ಮಂಗಳಕರ ಆಗುವುದು. ಅಂದರೆ, ದೇಶದಲ್ಲಿ ಶಾಂತಿ ಹಾಗೂ ಸಹಬಾಳ್ವೆಯಿಂದ ಬದುಕುವವರ ಸಂಖ್ಯೆ ಹೆಚ್ಚಾಗುವುದು. ಇಂದು ಸಂಸಾರಿಕ ಜೀವನ ಸುಭದ್ರಗೊಂಡು ನಮ್ಮ ನಾಗರೀಕತೆ ಉಳಿಯಬೇಕಾದರೆ, ಜೋಡೆತ್ತಿನ ಕೃಷಿಗೆ ಸೂಕ್ತ ಪ್ರೋತ್ಸಾಹ ನೀಡಿ ಪೋಷಿಸಬೆಕಾಗಿದೆ. ಇಂದು ಜೋಡೆತ್ತಿನ ಕೃಷಿ ಪೋಷಿಸಲು ಮುಂದಾಗುವ ಜನರೇ ಮುಂದಿನ ಸಮಾಜದ ನಾಯಕರಾಗುವರು. ಏಕೆಂದರೆ, ಧರ್ಮವು ನಂದಿ ಕೃಷಿಯ ಮೇಲೆ ನಿಂತಿದೆ…ಯೋಚಿಸಿ.
……………………………………
ಬಸವರಾಜ ಬಿರಾದಾರ
ಅಭೀಃ ಫೌಂಡೇಶನ್
(ಋಷಿ-ಕೃಷಿ ಸಂಸ್ಕೃತಿ ಪುನಶ್ಚೇತನ)
9449303880
missionsavesoil.com



