Uncategorized

ಸ್ವಯಂಪ್ರೇರಿತರಾಗಿ ರಕ್ತದಾನ, ದೇಶ ಸೇವೆಗೆ ಸಮಾನ. ಜಿಲ್ಲಾ ರಕ್ತನಿಧಿ ಘಟಕದ ಹಿರಿಯ ಅಧಿಕಾರಿ ಸತ್ಯಣ್ಣ.

ಸ್ವಯಂಪ್ರೇರಿತರಾಗಿ ರಕ್ತದಾನ ಮಾಡುವುದು ದೇಶ ಸೇವೆಗೆ ಸಮಾನ ಎಂದು ಜಿಲ್ಲಾ ರಕ್ತನಿಧಿ ಘಟಕದ ಹಿರಿಯ ಅಧಿಕಾರಿ ಸತ್ಯಣ್ಣ ತಿಳಿಸಿದರು.
ಕೊಳ್ಳೇಗಾಲ ಪಟ್ಟಣದ ಪತಂಜಲಿ ಯೋಗಕೇಂದ್ರದಲ್ಲಿ ಜೆ ಎಸ್ ಬಿ ಪ್ರತಿಷ್ಠಾನದ ವತಿಯಿಂದ, ಶ್ರೀ ಶಿವಕುಮಾರಸ್ವಾಮಿಗಳು ೧೧೭ನೇ ಜನ್ಮದಿನದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ‘ರಕ್ತದಾನ ಶಿಬಿರ’ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬರೂ ಪ್ರಮುಖವಾಗಿ ಯುವ ಜನಾಂಗ ವರ್ಷಕ್ಕೆ 3-4 ಬಾರಿ ರಕ್ತದಾನ ಮಾಡುವ ಮೂಲಕ ಅಮೂಲ್ಯ ಜೀವಗಳನ್ನು ಉಳಿಸಬಹುದು. ಸ್ವಯಂ ಪ್ರೇರಿತ ರಕ್ತದಾನ ಶಿಬಿರಗಳು ಹೆಚ್ಚಾಗಿ ನಡೆಯಬೇಕು ಎಂದರು.
ಮನುಷ್ಯನ ದೇಹದಲ್ಲಿ ಮಾತ್ರ ಉತ್ಪತ್ತಿ: ಜೆ ಎಸ್ ಬಿ ಪ್ರತಿಷ್ಠಾನದ ಶಶಿಕುಮಾರ ಮಾತನಾಡಿ, ವೈದ್ಯಕೀಯ ಲೋಕದಲ್ಲಿ ತಂತ್ರಜ್ಞಾನ ಬಹಳಷ್ಟು ಕೆಲಸ ಮಾಡುತ್ತಿದೆ, ಆದರೆ ತಂತ್ರಜ್ಞಾನ ಎಷ್ಟೇ ಮುಂದುವರಿದಿದ್ದರೂ ಸಹ ಇಂದಿಗೂ ರಕ್ತವನ್ನು ಸಿದ್ಧಪಡಿಸುವಂತಹ ಪ್ರಕ್ರಿಯೆಯಲ್ಲಿ ಯಶಸ್ವಿಯಾಗಲು ಸಾಧ್ಯವಾಗಿಲ್ಲ, ಹೀಗಾಗಿ ರಕ್ತವು ಒಬ್ಬರಿಂದ ಇನ್ನೊಬ್ಬರ ದೇಹಕ್ಕೆ ವರ್ಗಾವಣೆಯಾಗಲೇ ಬೇಕಾಗಿದೆ ಎಂದರು.
ರಕ್ತದಾನಕ್ಕೆ ಯುವಕರು ಮುಂದಾಗಬೇಕು: ಮನುಷ್ಯನ ವಯಸ್ಸು ರಕ್ತದ ಶುದ್ಧತೆಯ ಮಾನದಂಡವಾಗಿದ್ದು ವಯೋವೃದ್ದರ ದೇಹದಿಂದ ರಕ್ತವನ್ನು ಪಡೆದರೂ ಸಹ ಹೆಚ್ಚು ಪ್ರಯೋಜನಕ್ಕೆ ಬರುವುದಿಲ್ಲ, ಅಷ್ಟಕ್ಕೂ ವಯೋವೃದ್ಧರ ದೇಹದಲ್ಲಿ ಅದಾಗಲೇ ರಕ್ತ ಸಂಬಂಧಿ ಕಾಯಿಲೆಗಳು ಸಾಮಾನ್ಯವಾಗಿ ತಗುಲಿರುತ್ತವೆ ಹೀಗಾಗಿ ಅವರಲ್ಲಿ ರಕ್ತದ ಉತ್ಪದನಾ ಸಾಮರ್ಥ್ಯವೂ ಕೂಡ ಕಡಿಮೆಯಾಗಿರುತ್ತದೆ ಇದರಿಂದ ರೋಗಿಯ ದೇಹಕ್ಕೆ ಹಾಕಲು ಅಷ್ಟೊಂದು ಸೂಕ್ತವಾಗಿರುವುದಿಲ್ಲ ಈ ಎಲ್ಲಾ ಕಾರಣಗಳಿಂದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನಕ್ಕೆ ಮುಂದಾಗುವಂತೆ ಕರೆ ನೀಡಿದರು.
ಜನರಲ್ಲಿ ಅರಿವು ಮೂಡಿಸಬೇಕಿದೆ: ಬಹುತೇಕ ಜನರಲ್ಲಿ ರಕ್ತ ಕುರಿತಾಗಿ ವಿವರವಾದ ಮಾಹಿತಿ ಇಲ್ಲ, ಹೀಗಾಗಿ ಹಣ ಕೊಟ್ಟರೆ ಸಿಗುವಂತಹ ವಸ್ತು ಎಂಬ ಭಾವನೆ ಬಹುತೇಕ ಜನರ ಮನಸ್ಸಿನಲ್ಲಿದೆ, ಹಣ ಕೊಟ್ಟ ಪಡೆದ ರಕ್ತವು ಸಹ ಇನ್ನೊಬ್ಬರ ದೇಹದಿಂದ ಬಂದ ದೇಣಿಗೆ ಎಂಬ ಬಗ್ಗೆ ವಿವರವಾದ ಮಾಹಿತಿಗಳು ಸಾರ್ವಜನಿಕರಲ್ಲಿ ರವಾನೆಯಾಗಬೇಕಾಗಿದೆ ಎಂದರು.
ಸಾರ್ವಜನಿಕ ಸಹಭಾಗಿತ್ವ: ರಕ್ತದಾನ ಶಿಬಿರಗಳೆಂದರೆ ಪ್ರಚಾರ ಗಿಟ್ಟಿಸಿಕೊಳ್ಳುವಂತಹ ಕಾರ್ಯಕ್ರಮ ಎಂದು ಭಾವಿಸಿಕೊಳ್ಳಬೇಡಿ, ಮನುಷ್ಯನ ಆರೋಗ್ಯದ ಎಲ್ಲಾ ಸಮಸ್ಯೆಗಳಿಗೆ ವೈದ್ಯರಿಂದಲೇ ಪರಿಹಾರ ಸಿಗುತ್ತದೆ ಎನ್ನುವುದು ತಪ್ಪು. ಮೂತ್ರಪಿಂಡ, ರಕ್ತ, ಕಣ್ಣು ಹೃದಯ ಇನ್ನಿತರ ಭಾಗಗಳನ್ನು ಇನ್ನೊಬರ ದೇಹಕ್ಕೆ ವರ್ಗಾವಣೆ ಮಾಡಬಹುದಾಗಿದ್ದು ಅವುಗಳನ್ನು ದಾನರೂಪವಾಗಿ ನೀಡುವುದು ಪುಣ್ಯದ ಕೆಲಸ, ಈ ಕುರಿತು ಸಂಘ ಸಂಸ್ಥೆಗಳ ಸಹಕಾರ ವೈದ್ಯರಿಗೆ ಮತ್ತು ಆಸ್ಪತ್ರೆಗಳಿಗೆ ಅವಶ್ಯವಿದೆ, ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲು ಯಾರೇ ಮುಂದಾದರೂ ಸಹ ಅದಕ್ಕೆ ನಮ್ಮ ರಕ್ತನಿಧಿ ಕೇಂದ್ರದ ಸಂಪೂರ್ಣ ಸಹಕಾರ ಲಭಿಸಲಿದೆ ಎಂದು ಶುಶ್ರೂಷಕಿ ಸರಸ್ವತಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಸಿದ್ದಗಂಗಾ ಮಠದ ಲಿಂ ಡಾ| ಶ್ರೀ ಶಿವಕುಮಾರಸ್ವಾಮಿಗಳ ೧೧೭ ನೇ ಜನ್ಮದಿನದ ಅಂಗವಾಗಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪ್ರಸಾದ ವಿತರಿಸಲಾಯಿತು.
ಜೆ ಎಸ್ ಬಿ ಪ್ರತಿಷ್ಠಾನದ ಎಸ್ ಶಶಿಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಶ್ರೀ ಶಿವಕುಮಾರಸ್ವಾಮೀಜಿ ಸಂಘದ ಅಧ್ಯಕ್ಷ ಬಸವರಾಜಪ್ಪ, ಮಹೇಶ, ಮಹದೇವಸ್ವಾಮಿ, ಸೋಮಣ್ಣ, ಸತೀಶ, ನಿರಂಜನ, ಪರಶಿವಮೂರ್ತಿ, ಕುಮಾರಣ್ಣ, ಬಸವಣ್ಣ, ಗಿರಿ, ರಾಚಪ್ಪ ಹಾಗೂ ಇನ್ನಿತರರು, ಪತಂಜಲಿ ಯೋಗ ಸಮಿತಿಯ ಅಧ್ಯಕ್ಷ ಪಿ ಮಂಜುನಾಥ, ಮಾಜಿ ಸೈನಿಕ ಮಧು, ಜಿಲ್ಲಾಸ್ಪತ್ರೆ ರಕ್ತನಿಧಿ ಕೇಂದ್ರದ ಸಚ್ಚಿನ್, ಡಯಾನ, ತೇಜು, ರಾಜೇಶ, ಮಹೇಶ ಮತ್ತು ಸಿಬ್ಬಂದಿ ವರ್ಗದವರು, ಜೆ ಎಸ್ ಎಸ್ ಕಾಲೇಜು ಪ್ರಾಂಶುಪಾಲ ಹೇಮೇಶಮೂರ್ತಿ, ಪ್ರಸನ್ನ, ಮತ್ತಿತರರು, ಮಹದೇವಸ್ವಾಮಿ, ವೀರೇಶ, ಇತರೆ ಸಾರ್ವಜನಿಕರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button